ಡಿಪಿಡಿಪಿ ಕಾಯ್ದೆಯೊಂದಿಗೆ ತಾಳೆಯಾಗುವ ಹೊಸ ಆಧಾರ್ ಕಾನೂನು ತಯಾರಿಯಲ್ಲಿ ಸರ್ಕಾರ
Harmonising new Aadhaar law with DPDP act: ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಕಾಯ್ದೆಗೆ ತಾಳೆಯಾಗುವ ರೀತಿಯಲ್ಲಿ ಹೊಸ ಆಧಾರ್ ಕಾನೂನು ರೂಪಿಸಲಸು ಸರ್ಕಾರ ಮುಂದಾಗಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಆಧಾರ್ ದತ್ತಾಂಶ ದುರುಪಯೋಗವಾಗುತ್ತಿದೆ ಎನ್ನುವ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಈ ಕಾನೂನು ರೂಪಿಸಲು ಸರ್ಕಾರ ಮುಂದಾಗಿದೆ.

ನವದೆಹಲಿ, ಏಪ್ರಿಲ್ 9: ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಡಾ. ಅಶ್ವಿನಿ ವೈಷ್ಣವ್ ಅವರು ಹೊಸ ಆಧಾರ್ ಕಾನೂನು (New Aadhaar Law) ರೂಪಿಸಲಾಗುವ ವಿಚಾರವನ್ನು ಹೊರಗೆಡವಿದ್ದಾರೆ. ‘ಇನ್ನೋವೇಶನ್, ಇನ್ಕ್ಲೂಶನ್, ಇಂಟಿಗ್ರೇಶನ್’ ವಿಚಾರದ ಮೇಲೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೇಂದ್ರ ಸಚಿವರು, ಸಾಮಾನ್ಯ ನಾಗರಿಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊಸ ಆಧಾರ್ ಕಾನೂನು ರೂಪಿಸುವಂತೆ ಯುಐಡಿಎಐಗೆ ಕರೆ ನೀಡಿದರು. ಡಿಪಿಡಿಪಿ ಕಾಯ್ದೆ ಎಂದರೆ ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಆ್ಯಕ್ಟ್. ಇದು 2023ರಲ್ಲಿ ಜಾರಿಗೆ ಬಂದಿದೆ. ವ್ಯಕ್ತಿಗತ ಡಿಜಿಟಲ್ ಡಾಟಾಗೆ ರಕ್ಷಣೆ ನೀಡುತ್ತದೆ ಈ ಕಾನೂನು. ಈ ಕಾಯ್ದೆಯ ಆಶಯದಂತೆ ಆಧಾರ್ ಕಾನೂನು ರೂಪಿಸುವುದು ಸರ್ಕಾರದ ಉದ್ದೇಶ.
ಡಿಪಿಡಿಪಿ ಕಾಯ್ದೆಯು ವೈಯಕ್ತಿಕ ದತ್ತಾಂಶಗಳ ಗೌಪ್ಯತೆ ಕಾಪಾಡಲು ಸಹಾಯವಾಗುತ್ತದೆ. ಉದಾಹರಣೆಗೆ, ಕಾಯ್ದೆಯ ಸೆಕ್ಷನ್ 9ರ ಪ್ರಕಾರ ವ್ಯಕ್ತಿಗಳ ಸಮ್ಮತಿ ಪಡೆದೇ ಅವರ ಡಿಜಿಟಲ್ ಡಾಟಾ ಪಡೆಯಬೇಕಾಗುತ್ತದೆ. ಮಕ್ಕಳ ಡಿಜಿಟಲ್ ಡಾಟಾ ಮಾಹಿತಿ ಪಡೆಯಬೇಕಾದರೆ ಮಗುವಿನ ಪೋಷಕರ ಅನುಮತಿ ಪಡೆಯುವುದು ಕಡ್ಡಾಯ ಮಾಡುತ್ತದೆ ಈ ಕಾಯ್ದೆ.
ಇದನ್ನೂ ಓದಿ: ಭಾರತ ಹೊಸ ಮೈಲಿಗಲ್ಲು; ಒಂದು ವರ್ಷದಲ್ಲಿ 2 ಲಕ್ಷ ಕೋಟಿ ರೂ ಮೌಲ್ಯದ ಸ್ಮಾರ್ಟ್ಫೋನ್ ರಫ್ತು
‘ಆಧಾರ್ ಕಾನೂನು ಮಾಡಿದಾಗ ಅದಕ್ಕೆ ತಕ್ಕುದಾದ ಡಾಟಾ ರಕ್ಷಣೆ ಮತ್ತು ಗೌಪ್ಯತೆ ರಕ್ಷಣೆಯ ಕಾನೂನು ಇರಲಿಲ್ಲ. ಈಗ ನಮ್ಮ ಬಳಿ ಡಿಜಿಟಪ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಕಾಯ್ದೆ ಇದೆ. ಸಾಕಷ್ಟು ಸಮಾಲೋಚನೆ ಮತ್ತು ಚರ್ಚೆಗಳ ಬಳಿಕ ನಿಯಮಗಳನ್ನು ರೂಪಿಸಿ ಸಿದ್ಧಪಡಿಸಲಾಗಿದೆ. ಈಗ ಆಧಾರ್ ಕಾನೂನನ್ನು ಈ ಡಿಪಿಡಿಪಿ ಕಾಯ್ದೆಗೆ ತಾಳೆಯಾಗುವಂತೆ ರೂಪಿಸುವ ಕೆಲಸ ಆಗಬೇಕಿದೆ. ಈ ಬೃಹತ್ ಜವಾಬ್ದಾರಿಯನ್ನು ಯುಐಡಿಎಐ ತೆಗೆದುಕೊಳ್ಳಬೇಕೆಂದು ಕೇಳುತ್ತೇನೆ’ ಎಂದು ಅಶ್ವಿನಿ ವೈಷ್ಣವ್ ತಿಳಿಸಿದರು.
The new Aadhaar law will be harmonised vis-a-vis the DPDP Act 2023, keeping user interest at the center. pic.twitter.com/phyZ2FrxsZ
— Ashwini Vaishnaw (@AshwiniVaishnaw) April 9, 2025
ಆಧಾರ್ ಫೇಸ್ ಐಡಿ ಆ್ಯಪ್ ಬಿಡುಗಡೆ
ಇದೇ ವೇಳೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಹೊಸ ಆಧಾರ್ ಆ್ಯಪ್ ಅನ್ನು ಬಿಡುಗಡೆ ಮಾಡಿದ್ದಾರೆ. ಈ ಹೊಸ ಆ್ಯಪ್ನಲ್ಲಿ ಫೇಸ್ ಐಡಿ ದೃಢೀಕರಣ ಮಾಡಲು ಸಾದ್ಯವಾಗುತ್ತದೆ.
ಇದನ್ನೂ ಓದಿ: ವ್ಯಾಪಾರಿಗಳಿಗೆ ಹೆಚ್ಚು ಯುಪಿಐ ವಹಿವಾಟು ಅವಕಾಶ? ಎನ್ಪಿಸಿಐಗೆ ನಿರ್ಧಾರದ ಅಧಿಕಾರ ಕೊಟ್ಟ ಆರ್ಬಿಐ
ಜನರು ಯಾವುದೇ ಸೇವೆ ಪಡೆಯಲು ಆಧಾರ್ ಕಾರ್ಡ್ ಕೈಯಲ್ಲಿಡಿದುಕೊಂಡು ಹೋಗುವ ಪ್ರಮೇಯ ತಪ್ಪುತ್ತದೆ. ಹೊಸ ಆಧಾರ್ ಆ್ಯಪ್ನಲ್ಲಿರುವ ಫೇಸ್ ಐಡಿ ಅಥೆಂಟಿಕೇಶನ್ ಫೀಚರ್ ಬಳಸಿ ಆಧಾರ್ ಮಾಹಿತಿಯನ್ನು ಹಂಚಿಕೊಳ್ಳಬಹುದು. ಯುಪಿಐ ಹಣ ಪಾವತಿ ರೀತಿಯಲ್ಲಿ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುವಷ್ಟೇ ಸಲೀಸಾಗಿ ಆಧಾರ್ ಫೇಸ್ ಅಥೆಂಟಿಕೇಶನ್ ಸಾಧ್ಯ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:09 pm, Wed, 9 April 25