UPI payment: ವ್ಯಾಪಾರಿಗಳಿಗೆ ಹೆಚ್ಚು ಯುಪಿಐ ವಹಿವಾಟು ಅವಕಾಶ? ಎನ್ಪಿಸಿಐಗೆ ನಿರ್ಧಾರದ ಅಧಿಕಾರ ಕೊಟ್ಟ ಆರ್ಬಿಐ
RBI MPC decision highlight: ಗ್ರಾಹಕರಿಂದ ವರ್ತಕರಿಗೆ ಮಾಡಲಾಗುವ ಯುಪಿಐ ಹಣ ಪಾವತಿ ಮಿತಿಯನ್ನು ಪರಿಷ್ಕರಿಸುವ ಅಧಿಕಾರವನ್ನು ಎನ್ಪಿಸಿಐಗೆ ನೀಡಲಾಗಿದೆ. ಆರ್ಬಿಐ ಎಂಪಿಸಿ ಸಭೆ ಬಳಿಕ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸದ್ಯ, ವರ್ತಕರಿಗೆ ಗ್ರಾಹಕರಿಂದ ಆಗುವ ಯುಪಿಐ ವಹಿವಾಟು ಮಿತಿ 2 ಲಕ್ಷ ರೂ ಇದೆ. ಬ್ಯಾಂಕು ಹಾಗು ಇತರ ಭಾಗಿದಾರರೊಂದಿಗೆ ಸಮಾಲೋಚಿಸಿ ಎನ್ಪಿಸಿಐ ಈ ಮಿತಿ ಏರಿಸಬಹುದು.

ನವದೆಹಲಿ, ಏಪ್ರಿಲ್ 9: ವ್ಯಾಪಾರಿಗಳಿಗೆ ಗ್ರಾಹಕರು ಯುಪಿಐ ಮೂಲಕ ಹಣ ಪಾವತಿಸಲು ಎಷ್ಟು ಮಿತಿ ಇರಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಎನ್ಪಿಸಿಐಗೆ ನೀಡಲಾಗಿದೆ. ಆರ್ಬಿಐನ ಮಾನಿಟರಿ ಪಾಲಿಸಿ ಸಮಿತಿ ಸಭೆಯಲ್ಲಿ (RBI Monetary Policy Committee meeting) ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ವ್ಯಾಪಾರಿಗಳಿಗೆ ಗ್ರಾಹಕರಿಂದ ಯುಪಿಐ ಮೂಲಕ ಆಗುವ ಹಣ ವಹಿವಾಟು ಮಿತಿಯನ್ನು (Person to Merchant UPI transaction limit) ಎನ್ಪಿಸಿಐ ಪರಿಷ್ಕರಿಸಬಹುದು ಎಂದು ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸದ್ಯ, ಗ್ರಾಹಕರಿಂದ ವರ್ತಕರಿಗೆ ಹಣ ಪಾವತಿಗೆ ಎರಡು ಲಕ್ಷ ರೂ ಮಿತಿ ನಿಗದಿ ಮಾಡಲಾಗಿದೆ. ಈ ಮಿತಿಯನ್ನು ಬದಲಿಸಲು, ಅಂದರೆ ಏರಿಸಲೋ ಅಥವಾ ಇರಿಸಲೋ ನಿರ್ಧರಿಸುವ ಅಧಿಕಾರ ಎನ್ಪಿಸಿಐಗೆ ನೀಡಲಾಗಿದೆ. ಯುಪಿಐ ಅನ್ನು ಅಭಿವೃದ್ಧಿಪಡಿಸಿದ್ದು ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ (ಎನ್ಪಿಸಿಐ). ಬ್ಯಾಂಕು ಹಾಗೂ ಯುಪಿಐ ಪಾವತಿ ವ್ಯವಸ್ಥೆಯಲ್ಲಿನ ಇತರ ಎಲ್ಲಾ ಭಾಗಿದಾರರೊಂದಿಗೆ ಸಮಾಲೋಚಿಸಿ, ಯುಪಿಐ ಟ್ರಾನ್ಸಾಕ್ಷನ್ ಮಿತಿಯನ್ನು ಎನ್ಪಿಸಿಐ ನಿರ್ಧರಿಸಬಹುದು ಎಂದು ಆರ್ಬಿಐ ಹೇಳಿದೆ.
ಇದನ್ನೂ ಓದಿ: ಆರ್ಬಿಐ ನಿಲುವಿನಲ್ಲಿ ಪರಿಷ್ಕರಣೆ; ನ್ಯೂಟ್ರಲ್ನಿಂದ Accommodativeಗೆ ಬದಲಾವಣೆ; ಜೂನ್ನಲ್ಲೂ ಬಡ್ಡಿ ದರ ಇಳಿಕೆಯಾಗುತ್ತಾ?
ಇಲ್ಲಿ ಗ್ರಾಹಕರಿಂದ ವ್ಯಾಪಾರಿಗೆ ಯುಪಿಐ ಮೂಲಕ ಮಾಡಲಾಗುವ ಹಣ ಪಾವತಿಯ ವಹಿವಾಟು ಮಿತಿ ಇದಾಗಿದೆ. ಸದ್ಯ ಇದು ಎರಡು ಲಕ್ಷ ರೂಗೆ ನಿಗದಿ ಮಾಡಲಾಗಿದೆ. ಬ್ಯಾಂಕ್ ಮತ್ತಿತರ ಸಂಸ್ಥೆಗಳೊಂದಿಗೆ ಸಮಾಲೋಚಿಸಿ ಎನ್ಪಿಸಿಐ ಈ ಮಿತಿಯನ್ನು ಹೆಚ್ಚಿಸಲು ಸ್ವತಂತ್ರವಾಗಿರುತ್ತದೆ.
ಇನ್ನು, ವ್ಯಕ್ತಿಯಿಂದ ವ್ಯಕ್ತಿಗೆ ಯುಪಿಐ ಪಾವತಿ ಮಿತಿ ಒಂದು ಲಕ್ಷ ರೂ ಇದೆ. ಇದರಲ್ಲಿ ಸದ್ಯ ಯಾವ ಬದಲಾವಣೆ ಇರುವುದಿಲ್ಲ. ವರ್ತಕರಿಗೆ ಮಾಡಲಾಗುವ ಯುಪಿಐ ವಹಿವಾಟು ಮಿತಿ ಹೆಚ್ಚಳ ಸಾಧ್ಯತೆ ಸದ್ಯಕ್ಕೆ ಕಂಡುಬರುತ್ತಿದೆ.
ಇದನ್ನೂ ಓದಿ: ಬಡ್ಡಿದರ 25 ಅಂಕ ಇಳಿಸಿದ ಆರ್ಬಿಐ; ರಿಪೋ ದರ ಶೇ. 6ಕ್ಕೆ ಇಳಿಕೆ
ಆರ್ಬಿಐನ ಈ ನಿರ್ಧಾರವನ್ನು ಹಣಕಾಸು ಕ್ಷೇತ್ರದವರು ಸ್ವಾಗತಿಸಿದ್ದಾರೆ. ವ್ಯಾಪಾರಿಗಳಿಗೆ ಹೆಚ್ಚಿನ ಮೊತ್ತದ ಹಣವನ್ನು ಯುಪಿಐ ಮೂಲಕ ಪಾವತಿಸಲು ಸಾಧ್ಯವಾಗುತ್ತದೆ ಎಂದಾದಲ್ಲಿ ಅದರಿಂದ ರೀಟೇಲ್ ಕ್ಷೇತ್ರಕ್ಕೆ ಅನುಕೂಲವಾಗುತ್ತದೆ. ಪ್ರವಾಸ, ಆರೋಗ್ಯ, ಶಿಕ್ಷಣ ಮತ್ತಿತರ ಸೆಕ್ಟರ್ಗಳಿಗೆ ಇದರಿಂದ ಅನುಕೂಲವಾಗಬಹುದು ಎಂದು ಮುಫಿನ್ಪೇ (MufinPay) ಸಂಸ್ಥೆಯ ಸಿಇಒ ಅಂಕುಶ್ ಜುಲ್ಕಾ ಹೇಳುತ್ತಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ