GDP, Inflation Projection: 2025-26ರಲ್ಲಿ ಜಿಡಿಪಿ ದರ ಶೇ. 6.5; ಹಣದುಬ್ಬರ ಶೇ 4: ಆರ್ಬಿಐ ಅಂದಾಜು
RBI MPC meeting points: ಆರ್ಬಿಐ ಮಾನಿಟರಿ ಪಾಲಿಸಿ ಸಭೆಯಲ್ಲಿ ಮಾಡಲಾದ ಅಂದಾಜು ಪ್ರಕಾರ 2024-25ರಲ್ಲಿ ಜಿಡಿಪಿ ಶೇ. 6.5ರಷ್ಟು ಬೆಳೆಯಬಹುದು. 2025-26ರ ಆರ್ಥಿಕ ವರ್ಷದಲ್ಲೂ ಜಿಡಿಪಿ ಶೇ. 6.5ರಷ್ಟು ಬೆಳೆಯಲಿದೆ ಎಂದು ಆರ್ಬಿಐ ಅಂದಾಜಿಸಿದೆ. ಹಣದುಬ್ಬರವು ಆರ್ಬಿಐನ ಗುರಿಯಾದ ಶೇ. 4ಕ್ಕೆ ಬಂದು ಇಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

ನವದೆಹಲಿ, ಏಪ್ರಿಲ್ 9: ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಮತ್ತು ಹಣದುಬ್ಬರ ಎಷ್ಟಿರಬಹುದು ಎಂದು ಆರ್ಬಿಐ ಅಂದಾಜಿಸಿದ್ದು, ತನ್ನ ಹಿಂದಿನ ನಿಲುವಿನಲ್ಲಿ ತುಸು ಬದಲಾವಣೆ ಮಾಡಿದೆ. ಆರ್ಬಿಐ ಎಂಪಿಸಿ ಸಭೆ (RBI MPC meeting) ಬಳಿಕ ಸುದ್ದಿಗೋಷ್ಠಿ ನಡೆಸಿದ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು, 2025-26ರ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 6.5ರಷ್ಟು ಬೆಳೆಯಬಹುದು ಎಂದಿದ್ದಾರೆ. ಹಿಂದಿನ ಹಣಕಾಸು ವರ್ಷದಲ್ಲಿ (2024-25) ಜಿಡಿಪಿ ಶೇ. 6.5ರಷ್ಟು ಬೆಳೆದಿರಬಹುದು ಎಂದೂ ಅವರು ಹೇಳಿದ್ದಾರೆ. ಫೆಬ್ರುವರಿಯಲ್ಲಿ ನಡೆದ ಸಭೆಯಲ್ಲಿ ಆ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 6.7ರಷ್ಟಿರಬಹುದು ಎಂದು ಅಂದಾಜಿಸಲಾಗಿತ್ತು. ಈಗ ವೃದ್ಧಿ ಪ್ರಮಾಣದ ಅಂದಾಜನ್ನು ಆರ್ಬಿಐ ತಗ್ಗಿಸಿದೆ.
ಈ ವರ್ಷದ ವಿವಿಧ ಕ್ವಾರ್ಟರ್ಗಳಲ್ಲಿ ಜಿಡಿಪಿ ದರ
2025-26ರ ಹಣಕಾಸು ವರ್ಷದಲ್ಲಿ ಆರ್ಥಿಕ ಬೆಳವಣಿಗೆ ದರ ಶೇ. 6.5ರಷ್ಟಿರಬಹುದು ಎಂದು ಎಂಪಿಸಿ ಅಂದಾಜು ಮಾಡಿದೆ. ಮೊದಲ ಕ್ವಾರ್ಟರ್ನಲ್ಲಿ ಶೇ 6.5, ಎರಡನೇ ಕ್ವಾರ್ಟರ್ನಲ್ಲಿ ಶೇ 7, ಮೂರನೇ ಕ್ವಾರ್ಟರ್ನಲ್ಲಿ ಶೇ 6.6, ಮತ್ತು ನಾಲ್ಕನೇ ಕ್ವಾರ್ಟರ್ನಲ್ಲಿ ಶೇ 6.3ನಷ್ಟು ಜಿಡಿಪಿ ಹೆಚ್ಚುವ ಸಾಧ್ಯತೆ ಇದೆ ಎಂದು ಆರ್ಬಿಐ ಗವರ್ನರ್ ಅವರು ತಿಳಿಸಿದರು.
ಇದನ್ನೂ ಓದಿ: ಬಡ್ಡಿದರ 25 ಅಂಕ ಇಳಿಸಿದ ಆರ್ಬಿಐ; ರಿಪೋ ದರ ಶೇ. 6ಕ್ಕೆ ಇಳಿಕೆ
ಹಣದುಬ್ಬರ ಶೇ. 4ರಷ್ಟಾಗಬಹುದು: ಆರ್ಬಿಐ ಅಂದಾಜು
ಪ್ರಸಕ್ತ ಹಣಕಾಸು ವರ್ಷದಲ್ಲಿ (2025-26) ಹಣದುಬ್ಬರ ದರ ಶೇ 4ರಷ್ಟಿರಬಹುದು ಎನ್ನುವ ಅಂದಾಜಿಗೆ ಬರಲಾಗಿದೆ ಎಂದು ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದರು. ಹಿಂದಿನ ಎಂಪಿಸಿ ಸಭೆಯಲ್ಲಿ ಮಾಡಲಾದ ಅಂದಾಜು ಪ್ರಕಾರ ಹಣದುಬ್ಬರ ಶೇ. 4.4ರಷ್ಟಾಗಬಹುದು ಎನ್ನಲಾಗಿತ್ತು. ಆದರೆ, ಉತ್ತಮ ಮಳೆಯಿಂದ ಫಸಲು ಚೆನ್ನಾಗಿ ಆಗುವುದರಿಂದ ಹಣದುಬ್ಬರವು ತುಸು ಕೆಳಮಟ್ಟದಲ್ಲಿ ಇರಬಹುದು ಎಂದು ಮಲ್ಹೋತ್ರಾ ಹೇಳಿದರು.
ಶೇ. 4ರ ಹಣದುಬ್ಬರವು ಆರ್ಬಿಐ ನಿಗದಿ ಮಾಡಿಕೊಂಡ ಗುರಿಯೇ ಆಗಿರುವುದು ಕುತೂಹಲ. ಶೇ. 2ರಿಂದ 6ರವರೆಗೆ ಹಣದುಬ್ಬರ ದರದ ತಾಳಿಕೆ ಮಿತಿಯಾಗಿ ಆರ್ಬಿಐ ನಿಗದಿ ಮಾಡಿದೆ. ಕಳೆದ ಎರಡು ವರ್ಷದಿಂದಲೂ ಬಹುತೇಕ ಇದೇ ತಾಳಿಕೆ ಮಿತಿಯಲ್ಲಿ ಹಣದುಬ್ಬರ ಇರುವುದು ಗಮನಾರ್ಹ.
ಇದನ್ನೂ ಓದಿ: ಟ್ರಂಪ್ ಟ್ಯಾರಿಫ್ನಿಂದ ಭಾರತದ ಆರ್ಥಿಕತೆಗೆ, ವಿವಿಧ ಸೆಕ್ಟರ್ಗಳಿಗೆ ಎಷ್ಟು ಹಾನಿ? ಇಲ್ಲಿದೆ ಡೀಟೇಲ್ಸ್
ಪ್ರಸಕ್ತ ಹಣಕಾಸು ವರ್ಷದ ವಿವಿಧ ಕ್ವಾರ್ಟರ್ಗಳಲ್ಲಿ ಹಣದುಬ್ಬರ ಎಷ್ಟಿರಬಹುದು ಎನ್ನುವ ಅಂದಾಜು ಮಾಹಿತಿಯನ್ನೂ ಆರ್ಬಿಐ ಗವರ್ನರ್ ಬಿಚ್ಚಿಟ್ಟರು. ಅವರ ಪ್ರಕಾರ, 2025-26ರ ಮೊದಲ ಕ್ವಾರ್ಟರ್ನಲ್ಲಿ ಶೇ. 3.6, ಎರಡನೇ ಕ್ವಾರ್ಟರ್ನಲ್ಲಿ ಶೇ. 3.9, ಮೂರನೇ ಕ್ವಾರ್ಟರ್ನಲ್ಲಿ ಶೇ. 3.8 ಮತ್ತು ನಾಲ್ಕನೇ ಕ್ವಾರ್ಟರ್ನಲ್ಲಿ ಶೇ. 4.4ರಷ್ಟು ಹಣದುಬ್ಬರ ಇರಬಹುದು.
ಎಂಪಿಸಿ ಸಭೆ: ರಿಪೋ ದರ ಶೇ 6ಕ್ಕೆ ಇಳಿಕೆ
ಇದೇ ವೇಳೆ, ಏಪ್ರಿಲ್ 7ರಿಂದ ಸಭೆ ಸೇರಿದ್ದ ಆರ್ಬಿಐ ಹಣಕಾಸು ನೀತಿ ಸಮಿತಿಯು ರಿಪೋ ದರ ಅಥವಾ ಬಡ್ಡಿದರವನ್ನು ಶೇ. 6.25ರಿಂದ ಶೇ. 6ಕ್ಕೆ ಇಳಿಸಲು ನಿರ್ಧರಿಸಿದೆ. ಹಿಂದಿನ ಸಭೆಯಲ್ಲಿ 25 ಮೂಲಾಂಕಗಳಷ್ಟು ಬಡ್ಡಿದರ ಇಳಿಸಲಾಗಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ