ಗೋಲ್ಡ್ ಲೋನ್ಗೆ ಸಮಗ್ರ ಮಾರ್ಗಸೂಚಿ ಹೊರಡಿಸಲಿದೆ ಆರ್ಬಿಐ; ನಿಯಮ ಬಿಗಿಗೊಳ್ಳುತ್ತದಾ? ಗವರ್ನರ್ ಸ್ಪಷ್ಟನೆ ಇದು
RBI MPC meet decision: ಗೋಲ್ಡ್ ಲೋನ್ ವಿಚಾರದಲ್ಲಿ ಸಮಗ್ರ ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಹೊರಡಿಸುವುದಾಗಿ ಆರ್ಬಿಐ ಗವರ್ನರ್ ಇಂದು ಬುಧವಾರ ತಿಳಿಸಿದರು. ಇದರ ಬೆನ್ನಲ್ಲೇ ಗೋಲ್ಡ್ ಲೋನ್ ಕಂಪನಿಗಳ ಷೇರುಗಳು ಕುಸಿದವು. ಗೋಲ್ಡ್ ಲೋನ್ ನಿಯಮ ಬಿಗಿಗೊಳ್ಳಬಹುದು ಎನ್ನುವ ಅನಿಸಿಕೆಗಳಿದ್ದುವು. ಆದರೆ, ತಾನು ನಿಯಮ ಬಿಗಿಗೊಳಿಸುವುದಿಲ್ಲ, ಬದಲಾಗಿ ನಿಯಮಗಳ ಸರಳೀಕರಣ ಮಾಡುವ ಯೋಚನೆ ಇದೆ ಎಂದಿದ್ದಾರೆ ಮಲ್ಹೋತ್ರಾ.

ನವದೆಹಲಿ, ಏಪ್ರಿಲ್ 9: ಒಡವೆ ಸಾಲಗಳ ವಿಚಾರದಲ್ಲಿ ಶೀಘ್ರದಲ್ಲೇ ಆರ್ಬಿಐ ಸಮಗ್ರ ಮಾರ್ಗಸೂಚಿಗಳನ್ನು (Comprehensive guidelines on gold loans) ಹೊರಡಿಸಲಿದೆ ಎಂದು ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದರು. ಇದರ ಬೆನ್ನಲ್ಲೇ ಮುತ್ತೂಟ್ ಫೈನಾನ್ಸ್, ಮಣಪ್ಪುರಂ ಫೈನಾನ್ಸ್, ಐಐಎಫ್ಎಲ್ ಫೈನಾನ್ಸ್ ಇತ್ಯಾದಿ ಗೋಲ್ಡ್ ಲೋನ್ ಕಂಪನಿಗಳ ಷೇರುಗಳು ಮಕಾಡೆ ಮಲಗಿದವು. ಒಂದೇ ಗಂಟೆ ಅಂತರದಲ್ಲಿ ಶೇ. 10ರವರೆಗೆ ಷೇರುಬೆಲೆ ಕುಸಿತವಾಗಿದೆ. ಬೆಳಗ್ಗೆ 10 ಗಂಟೆಯ ಸುದ್ದಿಗೋಷ್ಠಿಯಲ್ಲಿ ಆರ್ಬಿಐ ಗವರ್ನರ್ ಈ ವಿಚಾರವನ್ನು ತಿಳಿಸಿದರು. ಬೆಳಗ್ಗೆ 11:30ಕ್ಕೆಲ್ಲಾ ಗೋಲ್ಡ್ ಲೋನ್ ಕಂಪನಿಗಳ ಷೇರುಗಳಿಗೆ ತೀವ್ರ ಹಿನ್ನಡೆಯಾಗಿತ್ತು. ಅದಾದ ಬಳಿಕ ಮಾಧ್ಯಮಗಳೊಂದಿಗೆ ನಡೆದ ಸಂವಾದದಲ್ಲಿ ಸಂಜಯ್ ಮಲ್ಹೋತ್ರಾ ಈ ಗೋಲ್ಡ್ ಲೋನ್ ವಿಚಾರದಲ್ಲಿ ಸ್ಪಷ್ಟನೆ ನೀಡಿದ ಬಳಿಕ ಷೇರುಗಳು ಚೇತರಿಕೆ ಕಂಡವು.
ಗೋಲ್ಡ್ ಲೋನ್ ಕಂಪನಿಗಳಿಗೆ ಹಿನ್ನಡೆ ಆಗುವಂಥದ್ದೇನಿತ್ತು?
ಸಂಜಯ್ ಮಲ್ಹೋತ್ರಾ ಅವರು ಶೀಘ್ರದಲ್ಲೇ ಆರ್ಬಿನಿಂದ ಗೋಲ್ಡ್ ಲೋನ್ ವಿಚಾರದಲ್ಲಿ ಮಾರ್ಗಸೂಚಿ ಬರುತ್ತೆ ಎಂದು ಮಾತ್ರ ಹೇಳಿದ್ದರು. ಇದು ಈ ಕ್ಷೇತ್ರವನ್ನು ಬೆಚ್ಚಿಬೀಳಿಸಲು ಕಾರಣ ಇದೆ. ಇತ್ತೀಚಿನ ದಿನಗಳಿಂದ ಆರ್ಬಿಐ ಗೋಲ್ಡ್ ಲೋನ್ಗಳ ಮೇಲೆ ಬಹಳ ನಿಗಾ ಇರಿಸಿದೆ. ಚಿನ್ನವನ್ನು ಅಡವಾಗಿ ಇಟ್ಟು ಸಾಲ ನೀಡುವಾಗ ಸಾಕಷ್ಟು ನಿಯಮಗಳನ್ನು ಮೀರಲಾಗುತ್ತಿದೆ ಎಂಬುದು ಆರ್ಬಿಐನ ಆತಂಕ. ಹೀಗಾಗಿ, ಆರ್ಬಿಐ ಗೋಲ್ಡ್ ಲೋನ್ ವಿಚಾರದಲ್ಲಿ ಬಿಗಿಯಾದ ನಿರ್ಬಂಧಗಳನ್ನು ಹೇರಬಹುದು ಎನ್ನುವ ಅನಿಸಿಕೆ ಕೇಳಿ ಬರುತ್ತಲೇ ಇದೆ. ಹೀಗಾಗಿ, ಇವತ್ತು ಆರ್ಬಿಐ ಗವರ್ನರ್ ಅವರು ಗೋಲ್ಡ್ ಲೋನ್ಗಳಿಗೆ ಸಮಗ್ರ ಮಾರ್ಗಸೂಚಿ ಹೊರಡಿಸುವ ಮಾತುಗಳನ್ನಾಡಿದ್ದು ಗೋಲ್ಡ್ ಲೋನ್ ಕಂಪನಿಗಳ ಷೇರು ಕುಸಿಯಲು ಎಡೆ ಮಾಡಿಕೊಟ್ಟಿತು.
ಇದನ್ನೂ ಓದಿ: ವ್ಯಾಪಾರಿಗಳಿಗೆ ಹೆಚ್ಚು ಯುಪಿಐ ವಹಿವಾಟು ಅವಕಾಶ? ಎನ್ಪಿಸಿಐಗೆ ನಿರ್ಧಾರದ ಅಧಿಕಾರ ಕೊಟ್ಟ ಆರ್ಬಿಐ
ಆರ್ಬಿಐ ಗವರ್ನರ್ ನೀಡಿದ ಸ್ಪಷ್ಟನೆ ಏನು?
ಮಧ್ಯಾಹ್ನ 11:30ರ ಬಳಿಕ ನಡೆದ ಮಾಧ್ಯಮ ಸಂವಾದದಲ್ಲಿ ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರಿಗೆ ಈ ವಿಚಾರವನ್ನು ಪ್ರಸ್ತಾಪಿಸಿದಾಗ ಅವರು ಒಂದು ಸ್ಪಷ್ಟನೆ ನೀಡಿದರು. ತಾನು ಮಾರ್ಗಸೂಚಿ ಹೊರಡಿಸುತ್ತೇನೆ ಎಂದಷ್ಟೇ ಹೇಳಿದ್ದೇ ವಿನಃ ನಿಯಮ ಬಿಗಿಗೊಳಿಸುತ್ತೇನೆಂದು ಹೇಳಲಿಲ್ಲ ಎಂದರು.
‘ಗೋಲ್ಡ್ ಲೋನ್ ನಿಯಮಗಳನ್ನು ಬಿಗಿಗೊಳಿಸುತ್ತೇವೆ ಎಂದು ನಾನು ಹೇಳಲೇ ಇಲ್ಲ. ನಿಯಮಗಳನ್ನು ತಿಳಿಗೊಳಿಸುವುದಷ್ಟೇ ನಮ್ಮ ಉದ್ದೇಶ’ ಎಂದು ಸಂಜಯ್ ಮಲ್ಹೋತ್ರಾ ತಿಳಿಸಿದರು.
ಇದನ್ನೂ ಓದಿ: ಬಡ್ಡಿದರ 25 ಅಂಕ ಇಳಿಸಿದ ಆರ್ಬಿಐ; ರಿಪೋ ದರ ಶೇ. 6ಕ್ಕೆ ಇಳಿಕೆ
ಏಪ್ರಿಲ್ 7ರಿಂದ ನಡೆದ ಆರ್ಬಿಐ ಮಾನಿಟರಿ ಪಾಲಿಸಿ ಕಮಿಟಿಯ ಸಭೆಯಲ್ಲಿ ರಿಪೋ ದರ ಇಳಿಸುವ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶೇ. 6.25 ಇದ್ದ ರಿಪೋ ದರ ಶೇ. 6ಕ್ಕೆ ಇಳಿದಿದೆ. ಆರ್ಬಿಐನ ನೀತಿ ನಿಲುವನ್ನು ನ್ಯೂಟ್ರಲ್ನಿಂದ ಅಕಾಮೊಡೇಟಿವ್ಗೆ ಬದಲಾಯಿಸಲಾಗಿದೆ. ಅಂದರೆ, ಮುಂದಿನ ದಿನಗಳಲ್ಲಿ ಆರ್ಬಿಐಗೆ ದರ ಏರಿಕೆಯು ಆದ್ಯತೆ ಇರುವುದಿಲ್ಲ. ದರ ಕಡಿತ ಅಥವಾ ಯಥಾಸ್ಥಿತಿ ಕಾಯ್ದುಕೊಳ್ಳುವುದು, ಇವು ಎರಡು ಆಯ್ಕೆಗಳನ್ನು ಮಾತ್ರವೇ ಆರ್ಬಿಐ ಇಟ್ಟುಕೊಂಡಿರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ