ಆಧಾರ್ ಅಪ್ಡೇಟ್ ಹಾಗೂ ನೋಂದಣಿಯನ್ನು ಇನ್ನಷ್ಟು ಸಲೀಸು ಮಾಡುವ ಉದ್ದೇಶದಿಂದ ಯೂನಿಕ್ ಐಡೆಂಟಿಫಿಕೇಷನ್ ಅಥಾರಿಟಿ ಆಫ್ ಇಂಡಿಯಾದಿಂದ (UIDAI) ಇನ್ನಷ್ಟು ಸಂಖ್ಯೆಯಲ್ಲಿ ಆಧಾರ್ಗಷ್ಟೇ ಮೀಸಲಾದ ಕೇಂದ್ರಗಳನ್ನು ಭಾರತದಲ್ಲಿ ಆರಂಭಿಸಲು ತೀರ್ಮಾನಿಸಲಾಗಿದೆ. ಇಲ್ಲಿ ಆಧಾರ್ ನೋಂದಣಿ ಹಾಗೂ ಅಪ್ಡೇಟ್ಗಂತಲೇ ಮೀಸಲಾಗಿ ಇಡಲಾಗುತ್ತದೆ. ಭಾರತದ 122 ನಗರಗಳಲ್ಲಿ ಇಂಥ 166 ಕೇಂದ್ರಗಳನ್ನು ಆರಂಭಿಸುವುದಾಗಿ UIDAI ಘೋಷಿಸಿದೆ. ಇದರಿಂದಾಗಿ ಭಾರತೀಯ ನಾಗರಿಕರು ಹೊಸದಾಗಿ ಆಧಾರ್ ಕಾರ್ಡ್ಗೆ ಅಪ್ಲೈ ಮಾಡುವುದಕ್ಕೆ ಮತ್ತು ಈಗಾಗಲೇ ಇರುವ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದಕ್ಕೆ ಸುಲಭ ಆಗುತ್ತದೆ. UIDAIನಿಂದ 55 ಸೇವಾ ಕೇಂದ್ರಗಳನ್ನು ಈಗಾಗಲೇ ಆರಂಭಿಸಲಾಗಿದೆ. ಇದು 166 ಕೇಂದ್ರಗಳ ಆರಂಭದ ಭಾಗವಾಗಿ ಶುರು ಮಾಡಲಾಗಿದೆ. ಈಗಾಗಲೇ ಬ್ಯಾಂಕ್ಗಳು, ಪೋಸ್ಟ್ ಆಫೀಸ್ಗಳು ಮತ್ತು ರಾಜ್ಯ ಸರ್ಕಾರಗಳಿಂದ 52,000 ಆಧಾರ್ ನೋಂದಣಿ ಕೇಂದ್ರಗಳನ್ನು ನಡೆಸಲಾಗುತ್ತದೆ. ಈ ಆಧಾರ್ ಸೇವಾ ಕೇಂದ್ರಗಳನ್ನು (ASK) ವಾರದ ಎಲ್ಲ ದಿನಗಳಲ್ಲೂ ತೆರೆದಿರುತ್ತದೆ. ಈವರೆಗೆ ದಿವ್ಯಾಂಗ ವ್ಯಕ್ತಿಗಳೂ ಸೇರಿ 70 ಲಕ್ಷ ನಿವಾಸಿಗಳಿಗೆ ಸೇವೆ ನೀಡಲಾಗಿದೆ.
ಈ ಕೇಂದ್ರಗಳಲ್ಲಿ 1000 ಮಂದಿ ನೋಂದಣಿ ಮತ್ತು ಅಪ್ಡೇಟ್ ಮಾಡುವಷ್ಟು ಸಾಮರ್ಥ್ಯ ಇರುವುದಕ್ಕೆ ಮಾಡೆಲ್-ಎ ಆಧಾರ್ ಸೇವಾ ಕೇಂದ್ರಗಳು, 500ರ ತನಕ ಇರುವುದಕ್ಕೆ ಮಾಡೆಲ್ ಬಿ ಆಧಾರ್ ಸೇವಾ ಕೇಂದ್ರ ಮತ್ತು 250 ನೋಂದಣಿ ಮತ್ತು ಅಪ್ಡೇಟ್ ಮನವಿ ಮಾಡುವುದಕ್ಕೆ ಮಾಡೆಲ್-ಸಿ ಆಧಾರ್ ಸೇವಾ ಕೇಂದ್ರಗಳೆಂದು ವಿಭಜಿಸಲಾಗಿದೆ. ಈ ಸೇವಾ ಕೇಂದ್ರಗಳನ್ನು ಪ್ರತಿ ದಿನ ಬೆಳಗ್ಗೆ 9 ಗಂಟೆಯಿಂದ ಸಂಜೆ 5.30ರ ತನಕ ಕಾರ್ಯ ನಿರ್ವಹಿಸುತ್ತದೆ. ಸಾರ್ವಜನಿಕ ರಜಾ ದಿನಗಳಲ್ಲಿ ಕಾರ್ಯ ನಿರ್ವಹಿಸುವುದಿಲ್ಲ.
ಆಧಾರ್ ನೋಂದಣಿ ಉಚಿತವಾಗಿದ್ದು, ಉಳಿದಂತೆ ಹೆಸರು ಮತ್ತಿತರ ಬದಲಾವಣೆಗೆ 50 ರೂಪಾಯಿ ಬಯೋಮೆಟ್ರಿಕ್ ಅಪ್ಡೇಟ್ ಹಾಗೂ/ಅಥವಾ ಹೆಸರು ಮತ್ತಿತರ ಬದಲಾವಣೆಗಳಿಗೆ 100 ರೂಪಾಯಿ ವಿಧಿಸಲಾಗುತ್ತದೆ. ಆಧಾರ್ ಸೇವಾ ಕೇಂದ್ರಗಳಿಗೆ ಆನ್ಲೈನ್ ಅಪಾಯಿಂಟ್ಮೆಂಟ್ ವ್ಯವಸ್ಥೆ ಇದ್ದು, ಟೋಕನ್ ಮ್ಯಾನೇಜ್ಮೆಂಟ್ ಸಿಸ್ಟಮ್ ಇದೆ. ಇದು ನಿವಾಸಿಗಳಿಗೆ ಅಡೆ-ತಡೆ ಇಲ್ಲದ ನೋಂದಣಿ ಮಾಡುವುದಕ್ಕೆ ವಿವಿಧ ಹಂತಗಳಿಗೆ ಮಾರ್ಗದರ್ಶನ ನೀಡುತ್ತದೆ.
ಇದನ್ನೂ ಓದಿ: Aadhaar Authentication: ಆಧಾರ್ ದೃಢೀಕರಣದ ದರ ಇಳಿಕೆ ಮಾಡಿದ ಸರ್ಕಾರ; ಇಲ್ಲಿದೆ ಸಂಪೂರ್ಣ ವಿವರ