ಲಕ್ಷಾಂತರ ಮಂದಿ ಸಂಘಟಿತ ವಲಯದ ಕೆಲಸಗಾರರಿಗೆ ನಿರಾಳ ಆಗುವಂಥ ಸುದ್ದಿ ಹೊರಬಿದ್ದಿದೆ. ಕಾರ್ಮಿಕರ ಭವಿಷ್ಯ ನಿಧಿ ಒಕ್ಕೂಟವು (ಇಪಿಎಫ್ಒ) ಮಂಗಳವಾರದಂದು ಮಹತ್ತರ ಘೋಷಣೆ ಮಾಡಿ, ಸಿಬ್ಬಂದಿಯ ದಾಖಲೆಯ ಜತೆಗೆ ಕಡ್ಡಾಯವಾಗಿ ಆಧಾರ್ ತಾಳೆಯಾಗಬೇಕು ಎಂಬ ನಿಯಮವನ್ನು ಮುಂದೂಡಿದೆ. ಈ ಹೊಸ ನಿಯಮ ಜಾರಿ ಬಗ್ಗೆ ಮತ್ತೊಮ್ಮೆ ಅವಲೋಕಿಸುವಂತೆ ಕೋರಿ, ಆರೆಸ್ಸೆಸ್ ಜತೆಗೆ ಗುರುತಿಸಿಕೊಂಡಿರುವ ಸಂಸ್ಥೆಯು ಕಾರ್ಮಿಕ ಸಚಿವಾಲಯಕ್ಕೆ ಪತ್ರ ಬರೆದಿತ್ತು. ಈ ಹಿಂದೆ ನೀಡಿದ್ದ ನಿರ್ದೇಶನದ ಅನುಸಾರ, ಇಪಿಎಫ್ಒದಿಂದ ಆಧಾರ್ ವ್ಯಾಲಿಡೇಟ್ ಮಾಡಲು ತಿಳಿಸಲಾಗಿತ್ತು. ಇದರರ್ಥ ಏನೆಂದರೆ, ಹೆಸರು, ಜನ್ಮದಿನಾಂಕ, ಲಿಂಗ ಎಲ್ಲವೂ ಸರಿಯಾಗಿ ತಾಳೆ ಆಗಬೇಕು. ಆಗಷ್ಟೇ ಕಾರ್ಮಿಕ ಭವಿಷ್ಯ ನಿಧಿ ತಿಂಗಳ ಕೊಡುಗೆ ನೀಡಲು ಅವಕಾಶ ಮಾಡಿಕೊಡುತ್ತಿತ್ತು. ಈ ನಡೆಯಿಂದಾಗಿ ಲಕ್ಷಾಂತರ ಸಂಖ್ಯೆಯಲ್ಲಿ ಇರುವ, ಕಡಿಮೆ ಆದಾಯದ ಸಂಘಟಿತ ವಲಯದ ಸಿಬ್ಬಂದಿಗೆ ದಾಖಲೆಗಳು ಹೊಂದಾಣಿಕೆ ಆಗದೆ ಪಿಎಫ್ ಪಾವತಿ ಮಾಡಲು ಆಗಲಿಲ್ಲ.
ಇಪಿಎಫ್ಒದಿಂದ ಸುತ್ತೋಲೆ ಮೂಲಕ ನಿರ್ದೇಶನ ನೀಡಿ, ಈ ಹಿಂದೆ ತಿಳಿಸಿದಂತೆ ಆಧಾರ್ ತಾಳೆ ಜೂನ್ 1ರಿಂದ ಕಡ್ಡಾಯ ಅಲ್ಲ. ಇದು ಸೆಪ್ಟೆಂಬರ್ 1ರಿಂದ ಅನ್ವಯ ಆಗಲಿದೆ. ಸೆಪ್ಟೆಂಬರ್ 1ರಿಂದ ಎಲ್ಲ ಉದ್ಯೋಗದಾತರು ಈ ತೀರ್ಮಾನ ಜಾರಿಗೆ ಸಿದ್ಧವಿದ್ದಾರೆ ಎಂಬುದನ್ನು ಖಾತ್ರಿ ಪಡಿಸಬೇಕು ಎಂದು ಎಲ್ಲ ಕ್ಷೇತ್ರೀಯ ಕಚೇರಿಗಳಿಗೆ ತಿಳಿಸಿದೆ. ಉದ್ಯೋಗಿಯ ಮಾಹಿತಿಯೊಂದಿಗೆ ಆಧಾರ್ ಕಡ್ಡಾಯವಾಗಿ ತಾಳೆಯಾಗಬೇಕು ಎನ್ನಲಾಗಿತ್ತು. ಇದರಿಂದಾಗಿ ಲಕ್ಷಾಂತರ ಮಂದಿ ಇಪಿಎಫ್ಒ ಬಾಕಿ ಪಾವತಿಸಲು ಆಗಿರಲಿಲ್ಲ ಎಂದು ಬಿಎಂಎಸ್ ಶನಿವಾರ ತಿಳಿಸಿತ್ತು. ಆ ನಂತರ ಸಂಘಟನೆಯಿಂದ ಕೇಂದ್ರ ಕಾರ್ಮಿಕ ಸಚಿವರಿಗೆ ಪತ್ರ ಬರೆಯಲಾಗಿತ್ತು. ಹೊಸದಾಗಿ ಹೊರಡಿಸಲಾದ ಆಧಾರ್ ವ್ಯಾಲಿಡೇಷನ್ ನಿಯಮ ಮತ್ತೊಮ್ಮೆ ಪರಿಶೀಲಿಸಿ, ಇಪಿಎಫ್ಒ ಪಾವತಿಸಲು ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿತ್ತು.
ಆಧಾರ್ ಸಂಖ್ಯೆಯೊಂದಿಗೆ ಇಪಿಎಫ್ ಪಾವತಿಸಲು ಉದ್ಯೋಗದಾತರಿಗೆ ಅವಕಾಶ ನೀಡಬೇಕು. ಇತರ ಮಾಹಿತಿಗಳು ಆಧಾರ್ ಜತೆ ತಾಳೆ ಆಗಬೇಕು ಎಂದು ಕಡ್ಡಾಯ ಮಾಡಬಾರದು. ಜೂನ್ 1ರಿಂದ ಜಾರಿಗೆ ಬಂದಿರುವ ನಿಯಮದಿಂದಾಗಿ, ಉದ್ಯೋಗಿಗಳಿಂದ ಕಡಿತವಾದ ನಿಧಿಯ ದುರುಪಯೋಗ ಆಗುವ ಸಾಧ್ಯತೆ ಇದೆ ಮತ್ತು ಕೊಡುಗೆಯಲ್ಲಿ ಮಧ್ಯೆ ತಡೆ ಬಂದರೆ ಇದರಿಂದ ಪೆನ್ಷನ್ ಹಾಗೂ ಇನ್ಷೂರೆನ್ಸ್ ಅರ್ಹತೆಗೆ ಸಮಸ್ಯೆ ಆಗುತ್ತದೆ ಎನ್ನಲಾಗಿತ್ತು. ಇಪಿಎಫ್ಒಗೆ ಹತ್ತಿರಹತ್ತಿರ 6 ಕೋಟಿ ಸಕ್ರಿಯ ಚಂದಾದಾರರಿದ್ದಾರೆ. ನಿವೃತ್ತಿ ಫಂಡ್ ಮೊತ್ತ 14 ಲಕ್ಷ ಕೋಟಿ ರೂಪಾಯಿಯನ್ನು ಇದು ನಿರ್ವಹಿಸುತ್ತದೆ.
ಇದನ್ನೂ ಓದಿ: Personal finance: ವ್ಯಕ್ತಿಯು ಮೃತಪಟ್ಟ ನಂತರ ಆಧಾರ್, ಪ್ಯಾನ್ ಕಾರ್ಡ್, ಪಾಸ್ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಏನು ಮಾಡಬೇಕು?
(EPFO deferred employees details mandatory matching with Aadhaar to September 1st, 2021. Here is the latest updates)
Published On - 11:09 pm, Tue, 15 June 21