ನವದೆಹಲಿ, ಸೆಪ್ಟೆಂಬರ್ 9: ವಿದ್ಯುತ್ ಸರಬರಾಜು ಹಣ ನೀಡದೇ ಸಾಕಷ್ಟು ಬಾಕಿ ಉಳಿಸಿಕೊಂಡಿರುವ ಬಾಂಗ್ಲಾದೇಶ ಸರ್ಕಾರಕ್ಕೆ ಅದಾನಿ ಗ್ರೂಪ್ ಎಚ್ಚರಿಕೆ ನೀಡಿದೆ. ಫೈನಾನ್ಷಿಯಲ್ ಟೈಮ್ಸ್ ವರದಿ ಪ್ರಕಾರ ಅದಾನಿ ಗ್ರೂಪ್ಗೆ ಬಾಂಗ್ಲಾದೇಶ ಕೊಡಬೇಕಿರುವ ಬಾಕಿ ಹಣ 500 ಮಿಲಿಯನ್ ಡಾಲರ್ ಎನ್ನಲಾಗಿದೆ. ಅಂದರೆ ಸುಮಾರು 4,200 ಕೋಟಿ ರೂನಷ್ಟು ಹಣವನ್ನು ಬಾಕಿ ಉಳಿಸಿಕೊಂಡಿದೆ. ಜಾರ್ಖಂಡ್ನ ಗೋಡ್ಡಾದಲ್ಲಿರುವ ವಿದ್ಯುತ್ ಘಟಕದಿಂದ ಬಾಂಗ್ಲಾದೇಶಕ್ಕೆ ಸರಬರಾಜು ಮಾಡಲಾದ ವಿದ್ಯುತ್ಗೆ ಬಾಂಗ್ಲಾದೇಶ ಬಾಕಿ ಉಳಿಸಿಕೊಂಡಿರುವ ಪಾವತಿ ಮೊತ್ತ ಇಷ್ಟು.
ಶೇಖ್ ಹಸೀನಾ ಸರ್ಕಾರ ಪತನಗೊಂಡು ಈಗ ಹಂಗಾಮಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ನೊಬೆಲ್ ವಿಜೇತ ಆರ್ಥಿಕ ತಜ್ಞ ಮೊಹಮ್ಮದ್ ಯೂನುಸ್ ನೇತೃತ್ವದ ಹಂಗಾಮಿ ಸರ್ಕಾರ ಅದಾನಿ ಗ್ರೂಪ್ ಜೊತೆಗೆ ಹಿಂದಿನ ಸರ್ಕಾರ ಮಾಡಿಕೊಂಡ ವಿದ್ಯುತ್ ಸರಬರಾಜು ಒಪ್ಪಂದ ತೀರಾ ದುಬಾರಿಯಾಗಿತ್ತು ಎಂದು ವಾದಿಸುತ್ತಿದೆ. ಆದರೆ, ಹಣಕಾಸು ಒತ್ತಡದ ಮಧ್ಯೆಯೂ ಬಾಂಗ್ಲಾದೇಶಕ್ಕೆ ವಿದ್ಯುತ್ ಸರಬರಾಜು ಮಾಡಿದ್ದೇವೆ ಎಂದು ಅದಾನಿ ಪವರ್ ಸಂಸ್ಥೆ ಹೇಳುತ್ತಿದೆ.
‘ಬಾಂಗ್ಲಾದೇಶ ಸರ್ಕಾರದ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ನಮಗೆ ಬಾಕಿ ಹಣ ಬರಬೇಕಿದ್ದರೂ ನಮ್ಮ ಸರಬರಾಜುದಾರರು, ಹೂಡಿಕೆದಾರರಿಗೆ ಪಾವತಿ ನಿಲ್ಲಿಸಿಲ್ಲ. ಇದೇ ವೇಳೆ ಬಾಂಗ್ಲಾದೇಶಕ್ಕೆ ವಿದ್ಯುತ್ ಸರಬರಾಜು ಮಾಡುವ ಬದ್ಧತೆಯನ್ನೂ ಬಿಟ್ಟಿಲ್ಲ. ಇಂಥ ಒಂದು ಇಕ್ಕಟ್ಟಿನ ಪರಿಸ್ಥಿತಿ ಬಗ್ಗೆ ಬಾಂಗ್ಲಾ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುತ್ತಲೇ ಇದ್ದೇವೆ’ ಎಂದು ಅದಾನಿ ಗ್ರೂಪ್ನ ಈ ಸಂಸ್ಥೆ ತಿಳಿಸಿದೆ.
ಬಾಂಗ್ಲಾದೇಶ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ವೇಗವಾಗಿ ಬೆಳವಣಿಗೆ ಹೊಂದಿದೆ. ಆದರೆ, ವಿದ್ಯುತ್ ಮತ್ತು ಇಂಧನ ಕೊರತೆ ಮಾತ್ರ ಬಾಂಗ್ಲಾಗೆ ಮಗ್ಗುಲ ಮುಳ್ಳಾಗಿ ಮುಂದುವರಿದಿದೆ. ವಿದ್ಯುತ್ ಸಂಬಂಧ ಬಾಂಗ್ಲಾದೇಶ ಬಾಕಿ ಉಳಿಸಿಕೊಂಡಿರುವ ಪಾವತಿ ಹಣ 3.7 ಬಿಲಿಯನ್ ಡಾಲರ್. ಸುಮಾರು 31,000 ಕೋಟಿ ರೂನಷ್ಟು ಬಾಕಿ ಇದೆ. ಇದರಲ್ಲಿ 6,700 ಕೋಟಿ ರೂನಷ್ಟು ಹಣ ಅದಾನಿ ಪವರ್ಗೆ ಕೊಡಬೇಕಿದೆ. ಈ ಪೈಕಿ ಸದ್ಯಕ್ಕೆ ಪಾವತಿಸಲು ಗಡುವು ಮುಗಿದಿರುವ ಹಣ 4,130 ಕೋಟಿ ರೂ ಎನ್ನಲಾಗಿದೆ.
ಇದನ್ನೂ ಓದಿ: ಹೆಲ್ತ್ ಇನ್ಷೂರೆನ್ಸ್ ಪಾಲಿಸಿ: ನಿಮ್ಮ ಕ್ಲೇಮ್ ರಿಜೆಕ್ಟ್ ಆಗುತ್ತಿದೆಯಾ? ಇಲ್ಲಿವೆ 5 ಕಾರಣಗಳು
ಶೇಖ್ ಹಸೀನಾ ಸರ್ಕಾರ ಇದ್ದಾಗ ಸರಿಯಾದ ರೀತಿಯಲ್ಲಿ ಬಿಡ್ಡಿಂಗ್ ಪ್ರಕ್ರಿಯೆ ನಡೆದಿಲ್ಲ. ಸಾಕಷ್ಟು ಭ್ರಷ್ಟಾಚಾರ, ಅವ್ಯವಹಾರ ನಡೆದಿದೆ. ಹೀಗಾಗಿ, ದುಬಾರಿ ಬೆಲೆಗೆ ವಿದ್ಯುತ್ ಪೂರೈಕೆ ಒಪ್ಪಂದ ಆಗಿದೆ ಎಂದು ಈಗಿನ ಹಂಗಾಮಿ ಸರ್ಕಾರ ಹೇಳುತ್ತಿದೆ. ಅಷ್ಟೇ ಅಲ್ಲ, ಹಿಂದಿನ ವಿದ್ಯುತ್ ಒಪ್ಪಂದಗಳನ್ನು ಮತ್ತೆ ಮರು ಅವಲೋಕಿಸಿ, ಹೊಸ ಬೆಲೆ ನಿಗದಿ ಮಾಡುವ ಕುರಿತು ಸರ್ಕಾರ ಆಲೋಚಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ