ಶ್ರೀಮಂತಿಕೆಯಲ್ಲಿ ಅಂಬಾನಿ ಫ್ಯಾಮಿಲಿ ಹಿಂದಿಕ್ಕಿದ ಅದಾನಿ ಫ್ಯಾಮಿಲಿ; ಸಂಪತ್ತು ಹೆಚ್ಚಳಕ್ಕೆ ಸುಪ್ರೀಂ ತೀರ್ಪು ಪುಷ್ಟಿ

|

Updated on: Jan 04, 2024 | 10:43 AM

Adani wealth increase: ಅದಾನಿ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಪರಿಣಾಮ ಅದಾನಿ ಗ್ರೂಪ್ ಸಂಸ್ಥೆಗಳ ಷೇರುಗಳ ಬೆಲೆ ಹೆಚ್ಚಾಗತೊಡಗಿವೆ. ಶ್ರೀಮಂತಿಕೆಯಲ್ಲಿ ಅಂಬಾನಿ ಫ್ಯಾಮಿಲಿಗಿಂತ ಅದಾನಿ ಕುಟುಂಬದವರ ಕೈ ಮೇಲಾಗಿದೆ. ಅದಾನಿ ಫ್ಯಾಮಿಲಿ ಭಾರತದ ಅತಿಶ್ರೀಮಂತ ಪ್ರೊಮೋಟರ್ ಎನಿಸಿದೆ. ಫೋರ್ಬ್ಸ್​ನ ಶ್ರೀಮಂತರ ಪಟ್ಟಿಯಲ್ಲಿ ಗೌತಮ್ ಅದಾನಿ 16ನೇ ಸ್ಥಾನಕ್ಕೆ ಜಿಗಿದರೆ, ಬ್ಲೂಮ್​ಬರ್ಗ್ ಪಟ್ಟಿಯಲ್ಲಿ 14ನೇ ಸ್ಥಾನದಲ್ಲಿದ್ದಾರೆ.

ಶ್ರೀಮಂತಿಕೆಯಲ್ಲಿ ಅಂಬಾನಿ ಫ್ಯಾಮಿಲಿ ಹಿಂದಿಕ್ಕಿದ ಅದಾನಿ ಫ್ಯಾಮಿಲಿ; ಸಂಪತ್ತು ಹೆಚ್ಚಳಕ್ಕೆ ಸುಪ್ರೀಂ ತೀರ್ಪು ಪುಷ್ಟಿ
ಅದಾನಿ ಗ್ರೂಪ್
Follow us on

ನವದೆಹಲಿ, ಜನವರಿ 4: ಅದಾನಿ-ಹಿಂಡನ್ಬರ್ಗ್ ಪ್ರಕರಣ ಸಂಬಂಧ ನಿನ್ನೆ ಸರ್ವೋಚ್ಚ ನ್ಯಾಯಾಲಯ ವ್ಯಕ್ತಪಡಿಸಿದ ಅಭಿಪ್ರಾಯಗಳು ಅದಾನಿ ಗ್ರೂಪ್ ಮೇಲೆ ಹೂಡಿಕೆದಾರರ ವಿಶ್ವಾಸ ಮರಳುವಂತೆ ಮಾಡಿವೆ. ನಿನ್ನೆ ಕೋರ್ಟ್ ಬೆಳವಣಿಗೆ ಬಳಿಕ ಷೇರು ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್ ಸಂಸ್ಥೆಗಳ ಷೇರುಗಳಿಗೆ (Adani group companies shares) ಬೇಡಿಕೆ ಶುರುವಾಗಿದೆ. ಒಟ್ಟಾರೆ ನಿನ್ನೆ ಒಂದೇ ದಿನ ಶೇ. 12ರಷ್ಟು ಷೇರುಬೆಲೆ ಹೆಚ್ಚಾಗಿದೆ. ಪರಿಣಾಮವಾಗಿ ಗೌತಮ್ ಅದಾನಿ ಹಾಗೂ ಅವರ ಇತರ ಕುಟುಂಬ ಸದಸ್ಯರ ಷೇರುಸಂಪತ್ತು ಗಣನೀಯವಾಗಿ ಹೆಚ್ಚಾಗಿದೆ. ಮುಕೇಶ್ ಅಂಬಾನಿ ಅವರ ಕುಟುಂಬದ ಸಂಪತ್ತನ್ನು ಅದಾನಿ ಫ್ಯಾಮಿಲಿ ಮೀರಿಸಿದೆ.

ಬಿಸಿನೆಸ್ ಸ್ಟಾಂಡರ್ಡ್ ಪತ್ರಿಕೆಯ ವರದಿ ಪ್ರಕಾರ ಗೌತಮ್ ಅದಾನಿ ಕುಟುಂಬದವರ ಷೇರು ಸಂಪತ್ತು 8.98 ಲಕ್ಷ ಕೋಟಿ ರೂ ಇದ್ದದ್ದು ನಿನ್ನೆ ಒಂದೇ ದಿನಕ್ಕೆ 9.37 ಲಕ್ಷ ಕೋಟಿ ರೂಗೆ ಏರಿದೆ. ಅದೇ ವೇಳೆ, ಮುಕೇಶ್ ಅಂಬಾನಿ ಕುಟುಂಬದ ಷೇರುಸಂಪತ್ತು 9.38 ಲಕ್ಷ ಕೋಟಿ ರೂ ಇದ್ದದ್ದು 9.28 ಲಕ್ಷ ಕೋಟಿ ರೂಗೆ ಇಳಿದಿದೆ. ಈ ಮೂಲಕ ಅದಾನಿ ಫ್ಯಾಮಿಲಿ ಭಾರತದ ಅತಿಶ್ರೀಮಂತ ಪ್ರೊಮೋಟರ್ ಎನಿಸಿದೆ. ಪ್ರೊಮೋಟರ್ ಎಂದರೆ ಸಂಸ್ಥೆಯ ಮಾಲೀಕರು.

ಇದನ್ನೂ ಓದಿ: GDP Growth: 2023-24ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಸಾಧ್ಯತೆ ಶೇ. 6.2 ಅಲ್ಲ ಶೇ. 6.7; ಇಂಡಿಯಾ ರೇಟಿಂಗ್ಸ್ ನಿರೀಕ್ಷೆ ಹೆಚ್ಚಳ

ಅದಾನಿ ಎನರ್ಜಿ ಸಲ್ಯೂಷನ್ಸ್ ಅತಿ ಹೆಚ್ಚಳ

ಅದಾನಿ ಗ್ರೂಪ್​ನ 10 ಸಂಸ್ಥೆಗಳು ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿವೆ. ಈ ಪೈಕಿ ಅದಾನಿ ಎನರ್ಜಿ ಸಲ್ಯೂಷನ್ಸ್, ಟೋಟಲ್ ಗ್ಯಾಸ್, ಗ್ರೀನ್ ಎನರ್ಜಿ, ಅದಾನಿ ಪವರ್​ನ ಷೇರುಗಳ ಬೆಲೆ ಗಣನೀಯವಾಗಿ ಹೆಚ್ಚಾಗಿದೆ. ಅದಾನಿ ಎನರ್ಜಿ ಸಲ್ಯೂಷನ್ಸ್​ನ ಷೇರು ಬೆಲೆ ಒಂದೇ ದಿನದಲ್ಲಿ ಶೇ. 11.60ರಷ್ಟು ಹೆಚ್ಚಾಗಿದೆ.

ಅದಾನಿ ಟೋಟಲ್ ಗ್ಯಾಸ್ ಕೂಡ ಶೇ. 10ರ ಸಮೀಪದಷ್ಟು ಹೆಚ್ಚಾಗಿದೆ. ಆದರೆ, ಅದಾನಿ ಗ್ರೂಪ್​ನ ಪ್ರಮುಖ ಸಂಸ್ಥೆಯಾದ ಅದಾನಿ ಎಂಟರ್​ಪ್ರೈಸಸ್​ನ ಷೇರುಬೆಲೆ ಶೇ. 2.45ರಷ್ಟು ಮಾತ್ರ ನಿನ್ನೆ ಹೆಚ್ಚಾಗಿದೆ. ಅದಾನಿ ವಿಲ್ಮರ್, ಪೋರ್ಟ್ಸ್​ನ ಷೇರುಗಳೂ ಕೂಡ ಸಾಧಾರಣ ಬೇಡಿಕೆ ಪಡೆದಿವೆ. ಎನ್​ಡಿಟಿವಿ, ಅಂಬುಜಾ ಸಿಮೆಂಟ್ಸ್, ಎಸಿಸಿ ಸಿಮೆಂಟ್ಸ್ ಕಂಪನಿಗಳ ಷೇರುಗಳಲ್ಲೂ ತುಸು ಬೆಲೆ ಹೆಚ್ಚಳವಾಗಿದೆ.

ಇದನ್ನೂ ಓದಿ: Super App: ಭಾರತೀಯ ರೈಲ್ವೆಯಿಂದ ಶೀಘ್ರದಲ್ಲೇ ಬಿಡುಗಡೆ ಆಗಲಿದೆ ಸೂಪರ್ ಆ್ಯಪ್; ಏನಿದರ ವಿಶೇಷತೆ ಗೊತ್ತಾ?

16ನೇ ಸ್ಥಾನಕ್ಕೆ ಜಿಗಿದ ಗೌತಮ್ ಅದಾನಿ

ಫೋರ್ಬ್ಸ್ ಪಟ್ಟಿ ಪ್ರಕಾರ ವಿಶ್ವ ಶ್ರೀಮಂತರ ಪೈಕಿ ಗೌತಮ್ ಅದಾನಿ 16ನೇ ಸ್ಥಾನಕ್ಕೆ ಏರಿದ್ದಾರೆ. ವೈಯಕ್ತಿಕವಾಗಿ ಮುಕೇಶ್ ಅಂಬಾನಿಗಿಂತ ಹಿಂದಿದ್ದಾರೆ. ಮುಕೇಶ್ ಅಂಬಾನಿಯ ಒಟ್ಟು ಸಂಪತ್ತು 100.3 ಬಿಲಿಯನ್ ಡಾಲರ್​ನಷ್ಟಿದೆ. ಗೌತಮ್ ಅದಾನಿ ಷೇರುಸಂಪತ್ತು 77.8 ಬಿಲಿಯನ್ ಡಾಲರ್​ನಷ್ಟಿದೆ. ಇಲಾನ್ ಮಸ್ಕ್ 244.1 ಬಿಲಿಯನ್ ಡಾಲರ್​ನೊಂದಿಗೆ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಬ್ಲೂಮ್​ಬರ್ಗ್ ಪಟ್ಟಿ ಪ್ರಕಾರ ಗೌತಮ್ ಅದಾನಿ ಅವರ ಷೇರುಸಂಪತ್ತು 89.9 ಬಿಲಿಯನ್ ಡಾಲರ್​ನಷ್ಟಿದ್ದು 14ನೇ ಸ್ಥಾನದಲ್ಲಿದ್ದಾರೆ. ಅಂಬಾನಿ ಷೇರುಸಂಪತ್ತು 96.2 ಬಿಲಿಯನ್ ಡಾಲರ್​ನಷ್ಟಿದೆ. ಅಂಬಾನಿ 12ನೇ ಸ್ಥಾನದಲ್ಲಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:40 am, Thu, 4 January 24