ಭೂತಾನ್‌ನಲ್ಲಿ ಅದಾನಿ ಪವರ್‌ನಿಂದ 570 ಮೆಗಾವ್ಯಾಟ್ ಜಲವಿದ್ಯುತ್ ಯೋಜನೆ: ಡ್ರಕ್ ಗ್ರೀನ್ ಜತೆ ಒಪ್ಪಂದಕ್ಕೆ ಸಹಿ
570 ಮೆಗಾವ್ಯಾಟ್ ಸಾಮರ್ಥ್ಯದ ವಾಂಗ್ಚು ಜಲವಿದ್ಯುತ್ ಘಟಕ ನಿರ್ಮಾಣ ಯೋಜನೆಗೆ ಭಾರತದ ಅತಿದೊಡ್ಡ ಖಾಸಗಿ ವಿದ್ಯುತ್ ಉತ್ಪಾದಕ ಸಂಸ್ಥೆ ಅದಾನಿ ಪವರ್ ಲಿಮಿಟೆಡ್ ಮತ್ತು ಭೂತಾನ್‌ನ ಸರ್ಕಾರಿ ಸ್ವಾಮ್ಯದ ಡ್ರಕ್ ಗ್ರೀನ್ ಪವರ್ ಕಾರ್ಪೋರೇಷನ್ (ಡಿಜಿಪಿಸಿ) ಸೆಪ್ಟೆಂಬರ್ 06 ರಂದು ಸಹಿ ಹಾಕಿವೆ. ವಿಸ್ತೃತ ಯೋಜನಾ ವರದಿ ಪೂರ್ಣಗೊಂಡಿದ್ದು, 2026 ರ ಆರಂಭದಲ್ಲಿ ಈ ಯೋಜನೆಯ ಕಾಮಗಾರಿ ಆರಂಭವಾಗಲಿದೆ.

ಭಾರತದ ಕೈಗಾರಿಕೋದ್ಯಮಿ ಗೌತಮ್ ಅದಾನಿಯವರ ಅದಾನಿ ಪವರ್ ಲಿಮಿಟೆಡ್ (Adani Power) ಮತ್ತು ಭೂತಾನ್‌ನ ಸರ್ಕಾರಿ ಸ್ವಾಮ್ಯದ ಡ್ರಕ್ ಗ್ರೀನ್ ಪವರ್ ಕಾರ್ಪೋರೇಷನ್ (ಡಿಜಿಪಿಸಿ) 570 ಮೆಗಾವ್ಯಾಟ್ ವಾಂಗ್ಚು ಜಲವಿದ್ಯುತ್ (Wangchu hydroelectric Project) ಯೋಜನೆ ಕುರಿತ ಒಪ್ಪಂದಕ್ಕೆ ಸೆಪ್ಟೆಂಬರ್ 06 ರಂದು ಸಹಿ ಹಾಕಿದವು. ಭೂತಾನ್‌ನ ಪ್ರಧಾನಿ ದಾಶೋ ತ್ಶೆರಿಂಗ್ ಟೋಬ್ಗೋ ಮತ್ತು ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ವಿಸ್ತೃತ ಯೋಜನಾ ವರದಿ ಈಗಾಗಲೇ ಪೂರ್ಣಗೊಂಡಿದ್ದು, 2026 ರ ಮೊದಲಾರ್ಧದಲ್ಲಿ ಈ ಯೋಜನೆಯ ನಿರ್ಮಾಣ ಕಾರ್ಯ ಪ್ರಾರಂಭವಾಗುವ ಸಾಧ್ಯತೆಯಿದೆ.
ವಾಂಗ್ಚು ಜಲವಿದ್ಯುತ್ ಯೋಜನೆ:
ವಾಂಗ್ಚು ಜಲ ವಿದ್ಯುತ್ ಯೋಜನೆಯು ಸುಮಾರು 6,000 ಕೋಟಿ ರೂ. ವೆಚ್ಚದ ಯೋಜನೆಯಾಗಿದ್ದು, ಇದು ನವೀಕರಿಸಬಹುದಾದ ಇಂಧನ ಸ್ಥಾವರ ಮತ್ತು ಸಂಬಂಧಿತ ಮೂಲಸೌಕರ್ಯಗಳ ನಿರ್ಮಾಣ ಕಾರ್ಯವನ್ನು ಒಳಗೊಂಡಿದೆ. ವಿವರವಾದ ಯೋಜನಾ ವರದಿ ಈಗಾಗಲೇ ಪೂರ್ಣಗೊಂಡಿದ್ದು, 2026 ರ ಮಧ್ಯಭಾಗದಲ್ಲಿ ನಿರ್ಮಾಣ ಕಾರ್ಯ ಪ್ರಾರಂಭವಾಗುವ ನಿರೀಕ್ಷೆಯಿದೆ. ಶಿಲಾನ್ಯಾಸ ಮಾಡಿದ ಐದು ವರ್ಷಗಳ ಒಳಗಾಗಿ ಯೋಜನೆ ಪೂರ್ಣಗೊಳ್ಳುವ ಗುರಿಯನ್ನು ಹೊಂದಿದೆ.
“ಸುಸ್ಥಿರ ಅಭಿವೃದ್ಧಿಯಲ್ಲಿ ಭೂತಾನ್ ಜಗತ್ತಿಗೆ ಮಾದರಿಯಾಗಿದೆ ಮತ್ತು ಈ ನವೀಕರಿಸಬಹುದಾದ ಇಂಧನ ಯೋಜನೆಯ ಮೂಲಕ ದೇಶದ ನೈಸರ್ಗಿಕ ಸಂಪನ್ಮೂಲಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲು ನಾವು ಉತ್ಸುಕರಾಗಿದ್ದೇವೆ. ವಾಂಗ್ಚು ಜಲವಿದ್ಯುತ್ ಯೋಜನೆಯು ಜಲ ವಿದ್ಯುತ್ ಉತ್ಪಾದನೆ ಕಡಿಮೆ ಇರುವಾಗ ಅಂದರೆ ಚಳಿಗಾಲದ ಸಮಯದಲ್ಲಿ ಭೂತಾನ್‌ನ ವಿದ್ಯುತ್ ಬೇಡಿಕೆಯನ್ನು ನಿರ್ಣಾಯಕವಾಗಿ ಪೂರೈಸಲಿದೆ. ಇನ್ನೂ ಬೇಸಿಗೆಯ ತಿಂಗಳುಗಳಲ್ಲಿ ಇದು ಭಾರತಕ್ಕೆ ವಿದ್ಯುತ್ ರಫ್ತು ಮಾಡಲಿದೆ” ಎಂದು ಅದಾನಿ ಪವರ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಬಿ ಖಯಾಲಿಯಾ ಹೇಳಿದ್ದಾರೆ.
“1960 ರ ದಶಕದಿಂದಲೂ ಭೂತಾನ್ ಮತ್ತು ಭಾರತದ ನಡುವಿನ ಇಂಧನ ಸಹಕಾರ ಆಳವಾಗಿ ಬೇರೂರಿದೆ. ಭೂತಾನ್ ಹೊಂದಿರುವ ಬೃಹತ್ ಜಲ ವಿದ್ಯುತ್ ಸಾಮರ್ಥ್ಯವನ್ನು ಬಳಸಿಕೊಳ್ಳಲು ಭೂತಾನ್ ಮತ್ತು ಭಾರತ 1960 ರಿಂದಲೂ ನಿಕಟವಾಗಿ ಒಟ್ಟಾಗಿ ಕೆಲಸ ಮಾಡುತ್ತಿವೆ. ಜಲವಿದ್ಯುತ್ ಕ್ಷೇತ್ರದಲ್ಲಿ ಈ ಸಹಕಾರವು ಎರಡೂ ದೇಶಗಳಿಗೆ ಅಪಾರ ಪ್ರಯೋಜನವನ್ನು ನೀಡಿದೆ. ಮತ್ತು ಇದು ಈ ಎರಡೂ ದೇಶಗಳ ಸ್ನೇಹಪರ ಸಂಬಂಧಕ್ಕೆ ಮೂಲಾಧಾರವಾಗಿದೆ” ಎಂದು ಡಿಜಿಪಿಸಿಯ ವ್ಯವಸ್ಥಾಪಕ ನಿರ್ದೇಶಕ ದಾಶೋ ಚೆವಾಂಗ್ ರಿಂಜಿನ್ ಹೇಳಿದರು.
ಇನ್ನೂ ದೀರ್ಘಕಾಲದ ಇಂಧನ ಯೋಜನೆಗಳ ಬಗ್ಗೆ ಮಾತನಾಡುತ್ತಾ ರಿಂಜಿನ್ “ಮುಂದಿನ ದಶಕದೊಳಗೆ ಭೂತಾನ್ ಹೆಚ್ಚಿನ ಆದಾಯದ ಜಿಎನ್‌ಎಚ್ (ಗ್ರಾಸ್ ನ್ಯಾಷನಲ್ ಹ್ಯಾಪಿನೆಸ್) ದೇಶವಾಗಲು ಪ್ರಯತ್ನಿಸುತ್ತಿರುವ ಈ ಸಂದರ್ಭದಲ್ಲಿ ಜಲವಿದ್ಯುತ್ ಮತ್ತು ಸೌರಶಕ್ತಿಯಂತಹ ನವೀಕರಿಸಬಹುದಾದ ವಿಶ್ವಾಸಾರ್ಹ ಮತ್ತು ಕೈಗೆಟಕುವು ವಿದ್ಯುತ್ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು, ಇತರ ಹೂಡಿಕೆಗಳನ್ನು ಸಕ್ರಿಯಗೊಳಿಸಲು ನಿರ್ಣಾಯಕವಾಗಿದೆ. ಆದ್ದರಿಂದ, ಭೂತಾನ್ 2040 ರ ವೇಳೆಗೆ 15,000 ಮೆಗಾವ್ಯಾಟ್ ಜಲವಿದ್ಯುತ್ ಮತ್ತು ಹೆಚ್ಚುವರಿ 5,000 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಸೇರಿಸಲು ಯೋಜಿಸಿದೆ. ಹಾಗಾಗಿ, 570 ಮೆಗಾವ್ಯಾಟ್ ವಾಂಗ್ಚು ಜಲವಿದ್ಯುತ್ ಯೋಜನೆಯನ್ನು ಸ್ಥಾಪಿಸಲು ಡಿಜಿಪಿಸಿ ಅದಾನಿ ಗ್ರೂಪ್‌ನೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಲು ಉತ್ಸುಕವಾಗಿದೆ” ಎಂದು ಹೇಳಿದರು.
ಇದನ್ನೂ ಓದಿ: ದಂತಕಾಂತಿಯಿಂದ ಹಿಡಿದು ಅಲೂವೆರಾ ಜೆಲ್ವರೆಗೆ, ಪತಂಜಲಿ ಬ್ಯುಸಿನೆಸ್ ಸಾಧಾರಣ ಅಲ್ಲ
ಅದಾನಿ ಗ್ರೂಪ್‌ನ ತಾಂತ್ರಿಕ ಮತ್ತು ಆರ್ಥಿಕ ಸಾಮರ್ಥ್ಯ ಹಾಗೂ ವಿದ್ಯುತ್ ಅಭಿವೃದ್ಧಿಯಲ್ಲಿ ಇದರ ಅಪಾರ ಅನುಭವ ಮತ್ತು ಪರಿಣತಿಯನ್ನು ಗಮನದಲ್ಲಿಟ್ಟುಕೊಂಡು ಡಿಜಿಪಿಸಿ ಅದಾನಿ ಪವರ್ ಲಿಮಿಟೆಡ್‌ನೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಳ್ಳಲು ಮುಂದಾಗಿದ್ದು, ಈ ಯೋಜನೆಯು ಭೂತಾನ್‌ನ ಇಂಧನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಮಾತ್ರವಲ್ಲದೆ ಇದು ಭೂತಾನ್ ಮತ್ತು ಭಾರತದ ನಡುವಿನ ಗ್ರಿಡ್ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲು ಸಹಾಯ ಮಾಡಲಿದೆ.
ಭೂತಾನ್‌ನಲ್ಲಿ 5,000 ಮೆಗಾವ್ಯಾಟ್ ಜಲವಿದ್ಯುತ್ ಉತ್ಪಾದನೆಯ ಅಭಿವೃದ್ಧಿಗಾಗಿ ಅದಾನಿ ಗ್ರೂಪ್ ಮತ್ತು ಡಿಜಿಪಿಸಿ ಮೇ 2025 ರಲ್ಲಿ ಜಂಟಿಯಾಗಿ ಸಹಿ ಹಾಕಲಾದ ತಿಳುವಳಿಕೆ ಒಪ್ಪಂದದಡಿಯಲ್ಲಿ ಕಾರ್ಯಾರಂಭಗೊಳ್ಳುತ್ತಿರುವ ಮೊದಲ ಜಲವಿದ್ಯುತ್ ಯೋಜನೆ ಈ ವಾಂಗ್ಚು ಯೋಜನೆಯಾಗಿದೆ. ಈ ಕಾರ್ಯತಂತ್ರದ ಪಾಲುದಾರಿಕೆಯಡಿಯಲ್ಲಿ ಭವಿಷ್ಯದ ಯೋಜನೆಗಳಿಗಾಗಿ ಅದಾನಿ ಗ್ರೂಪ್ ಮತ್ತು ಡಿಜಿಪಿಸಿ ಹೆಚ್ಚಿನ ಚರ್ಚೆಗಳಲ್ಲಿ ತೊಡಗಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:05 pm, Sat, 6 September 25








