
ಬೆಂಗಳೂರು, ನವೆಂಬರ್ 18: ಕರ್ನಾಟಕ ಸರ್ಕಾರದ ವತಿಯಿಂದ ಅಗ್ಗದ ಬೆಲೆಗೆ ಎಐ ಶಕ್ತ ಕಂಪ್ಯೂಟರ್ವೊಂದನ್ನು (AI ready computer) ಅಭಿವೃದ್ಧಿಪಡಿಸಲಾಗಿದೆ. ಇವತ್ತು ಚಾಲನೆಗೊಂಡ ಬೆಂಗಳೂರು ಟೆಕ್ ಸಮಿಟ್ 2025ನಲ್ಲಿ (Bengaluru Tech Summit- 2025) ಈ ವಿಶೇಷ ಪಿಸಿಯನ್ನು ಅನಾವರಣಗೊಳಿಸಲಾಗಿದೆ. ಕರ್ನಾಟಕ ಸರ್ಕಾರೀ ಸ್ವಾಮ್ಯದ ಕಿಯೋನಿಕ್ಸ್ ಸಂಸ್ಥೆ ಹಾಗೂ ಐಟಿ ಬಿಟಿ ಇಲಾಖೆ ಜಂಟಿಯಾಗಿ ಸೇರಿ ಈ ಪರ್ಸನಲ್ ಕಂಪ್ಯೂಟರ್ (Micro PC) ಅನ್ನು ಅಭಿವೃದ್ದಿಪಡಿಸಿವೆ. ಈ 28ನೇ ಆವೃತ್ತಿಯ ಟೆಕ್ ಸಮಿಟ್ನಲ್ಲಿ ಈ ಕಿಯೋ ಕಂಪ್ಯೂಟರ್ (KEO computer) ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.
ಕಿಯೋ (KEO) ಎಂಬುದು ಒಂದು ಸಣ್ಣ ಪರ್ಸನಲ್ ಕಂಪ್ಯೂಟರ್ ಅಥವಾ ಪಿಸಿ. ಇದು ಜ್ಞಾನ ಆಧಾರಿತವಾದ, ಅಗ್ಗವಾಗಿರುವ ಮತ್ತು ಮುಕ್ತ ಕಂಪ್ಯೂಟಿಂಗ್ ಇರುವ ಕಂಪ್ಯೂಟರ್ (KEO- Knowledge based, Economical and Open computing). ದುಬಾರಿ ಬೆಲೆಯ ಕಂಪ್ಯೂಟರ್, ಲ್ಯಾಪ್ಟಾಪ್ ಖರೀದಿಸಲು ಶಕ್ತರಲ್ಲದ ಕೆಳ ಮಧ್ಯಮ ವರ್ಗದ ಜನರ ಕೈಗೆ ಕಡಿಮೆ ಬೆಲೆ ಪ್ರಬಲ ಕಂಪ್ಯೂಟರ್ ಒದಗಿಸುವ ಉದ್ದೇಶದಿಂದ ರೂಪಿಸಲಾದ ಪಿಸಿ ಇದು.
ಇದನ್ನೂ ಓದಿ: ಬೆಂಗಳೂರು ಟೆಕ್ ಸಮಿಟ್ 2025ಗೆ ಚಾಲನೆ; ಸ್ಟಾರ್ಟಪ್ ನಗರಿಯಲ್ಲಿ 3 ದಿನ ತಂತ್ರಜ್ಞಾನ ಶಕ್ತಿ ಅನಾವರಣ
ಇದು ಎಐ ಶಕ್ತ ಪಿಸಿಯಾಗಿದೆ. 4ಜಿ, ವೈಫೈ, ಈತರ್ನೆಟ್, ಯುಎಸ್ಬಿ ಎ, ಯುಎಸ್ಬಿ ಸಿ ಪೋರ್ಟ್ಗಳು, ಎಚ್ಡಿಎಂಐ, ಆಡಿಯೋ ಜ್ಯಾಕ್ಗಳನ್ನು ಇದು ಹೊಂದಿದೆ. ಇಂಟರ್ನೆಟ್ ಇಲ್ಲದಿದ್ದರೂ ಕೆಲಸ ಮಾಡಬಲ್ಲಂತೆ ಎಐ ಅನ್ನು ಶಕ್ತಗೊಳಿಸಲಾಗಿದೆ. ಕಲಿಕೆ, ಪ್ರೋಗ್ರಾಮಿಂಗ್ ಮತ್ತು ಪ್ರೊಡಕ್ಟಿವಿಟಿ ಸಾಧನಗಳನ್ನು ಪ್ರೀ ಇನ್ಸ್ಟಾಲ್ ಮಾಡಲಾಗಿರುತ್ತದೆ.
ಈ ಕಂಪ್ಯೂಟರ್ನಲ್ಲಿ ಮತ್ತೊಂದು ವಿಶೇಷತೆ ಎಂದರೆ ಬುದ್ಧ್ (BUDDH) ಎನ್ನುವ ಎಐ ಏಜೆಂಟ್. ಕರ್ನಾಟಕ ರಾಜ್ಯದ ಡಿಎಸ್ಇಆರ್ಟಿ ಸಿಲಾಬಸ್ನಲ್ಲಿ ಟ್ರೈನ್ ಆಗಿರುವ ಎಐ ಏಜೆಂಟ್ ಇದು. ಕಿಯೋ ಕಂಪ್ಯೂಟರ್ನಲ್ಲಿ ಈ ಎಐ ಏಜೆಂಟ್ ಪ್ರೀಲೋಡೆಡ್ ಆಗಿ ಬಂದಿರುತ್ತದೆ. ಇಂಟರ್ನೆಟ್ ಇಲ್ಲದೆಯೂ ಆಫ್ಲೈನ್ನಲ್ಲೇ ಈ ಎಐ ಏಜೆಂಟ್ ಕೆಲಸ ಮಾಡಬಲ್ಲುದು.
ಇದನ್ನೂ ಓದಿ: ವಾರಕ್ಕೆ 72 ಗಂಟೆ ಕೆಲಸ: ಚೀನಾದ ನಿದರ್ಶನ ನೀಡಿದ ನಾರಾಯಣಮೂರ್ತಿ
ಶಾಸಕ ಶರತ್ ಬಚ್ಚೇಗೌಡ ಅಧ್ಯಕ್ಷರಾಗಿರುವ ಕಿಯೋನಿಕ್ಸ್ ಸಂಸ್ಥೆ (Keonics) ಅಭಿವೃದ್ದಿಪಡಿಸಿರುವ ಕಿಯೋ ಪಿಸಿಗೆ ಓಪನ್ ಸೋರ್ಸ್ ಆರ್ಐಎಸ್ಸಿ-ವಿ ಪ್ರೋಸಸರ್ (RISC-V Processor) ಅಳವಡಿಸಲಾಗಿದೆ. ವಿಂಡೋಸ್ ಬದಲು ಲೈನಕ್ಸ್ ಆಧಾರಿತವಾದ ಆಪರೇಟಿಂಗ್ ಸಿಸ್ಟಂ ಸ್ಥಾಪಿಸಲಾಗಿದೆ. ಮೊನ್ನೆ ಬೆಂಗಳೂರು ಟೆಕ್ ಸಮಿಟ್ನ ಕರ್ಟನ್ ರೈಸರ್ ಕಾರ್ಯಕ್ರಮದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಕಿಯೋ ಕಂಪ್ಯೂಟರ್ ಅಭಿವೃದ್ಧಿಯನ್ನು ಬಹಳ ಮಹತ್ವದ ಬೆಳವಣಿಗೆ ಎಂದು ಬಣ್ಣಿಸಿದ್ದಾರೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:57 pm, Tue, 18 November 25