ಷೇರುಮಾರುಕಟ್ಟೆ ಮೇಲೆ ಬಾಂಬ್ ಬೆದರಿಕೆ; ‘ಕಾಮ್ರೇಡ್ ಪಿಣರಾಯಿ ವಿಜಯನ್’ ಹೆಸರಿಂದ ಬಂದ ಇಮೇಲ್

Hoax bomb threat on Bombay Stock Exchange: ದೇಶದಲ್ಲಿ ಹುಸಿ ಬಾಂಬ್ ಬೆದರಿಕೆಗಳ ಹೆಚ್ಚುತ್ತಿವೆ. ಅಮೃತಸರದ ಗೋಲ್ಡನ್ ಟೆಂಪಲ್, ದೆಹಲಿ ಶಾಲೆಗಳ ಬಳಿಕ ಮುಂಬೈನ ಬಿಎಸ್​​ಇಗೆ ಬಾಂಬ್ ಬೆದರಿಕೆ ಬಂದಿದೆ. ಪೊಲೀಸರು ತಪಾಸಣೆ ನಡೆಸಿದ ಬಳಿಕ ಅದು ಹುಸಿ ಬೆದರಿಕೆ ಎಂಬುದು ಗೊತ್ತಾಗಿದೆ. ಕಾಮ್ರೇಡ್ ಪಿಣರಾಯಿ ವಿಜಯನ್ ಹೆಸರಿನ ಐಡಿಯಿಂದ ಆ ಇಮೇಲ್ ಬಂದಿದೆ.

ಷೇರುಮಾರುಕಟ್ಟೆ ಮೇಲೆ ಬಾಂಬ್ ಬೆದರಿಕೆ; ‘ಕಾಮ್ರೇಡ್ ಪಿಣರಾಯಿ ವಿಜಯನ್’ ಹೆಸರಿಂದ ಬಂದ ಇಮೇಲ್
ಬಾಂಬೆ ಸ್ಟಾಕ್ ಎಕ್ಸ್​ಚೇಂಜ್

Updated on: Jul 15, 2025 | 12:39 PM

ಮುಂಬೈ, ಜುಲೈ 15: ದೇಶದ ವಿವಿಧೆಡೆ ಹುಸಿ ಬಾಂಬ್ ಬೆದರಿಕೆ ಕರೆಗಳು (Hoax bomb threat) ಹೆಚ್ಚುತ್ತಿವೆ. ವಾಣಿಜ್ಯ ನಗರಿಯಾದ ಮುಂಬೈನಲ್ಲಿ ಇರುವ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ (Bombay Stock Exchange) ಕಟ್ಟಡದಲ್ಲಿ 4 ಆರ್​ಡಿಎಕ್ಸ್ ಬಾಂಬ್ (RDX IED) ಇಡಲಾಗಿದೆ. ಮಧ್ಯಾಹ್ನ 3 ಗಂಟೆಗೆ ಸ್ಫೋಟಿಸಲಾಗುತ್ತದೆ ಎಂದು ಎಚ್ಚರಿಕೆ ನೀಡುವ ಇಮೇಲ್​ವೊಂದು ಬಂದಿದೆ. ಕಾಮ್ರೇಡ್ ಪಿಣರಾಯಿ ವಿಜಯನ್ (Comrade Pinarayi Vijayan) ಎನ್ನುವ ಹೆಸರಿನ ಐಡಿಯಿಂದ ಈ ಇಮೇಲ್ ಬಂದಿದೆ. ಆದರೆ, ಈ ಬಾಂಬ್ ಬೆದರಿಕೆ ಹುಸಿ ಎಂಬುದು ಅಂತಿಮವಾಗಿ ತಿಳಿದುಬಂದಿದೆ. ಈ ಅಪರಿಚಿತ ವ್ಯಕ್ತಿಯ ವಿರುದ್ಧ ಮಾತಾ ರಾಮಬಾಯಿ ಅಂಬೇಡ್ಕರ್ ಮಾರ್ಗ್ ಪೊಲೀಸ್ ಸ್ಟೇಷನ್​ನಲ್ಲಿ ವಿವಿಧ ಬಿಎನ್​​ಎಸ್ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನಿನ್ನೆ ಸೋಮವಾರ (ಜುಲೈ 14) ಅಮೃತಸರ್​ನ ಗೋಲ್ಡನ್ ಟೆಂಪಲ್ ಮೇಲೆ ಬಾಂಬ್ ಹಾಕಿರುವುದಾಗಿ ಇದೇ ರೀತಿ ಇಮೇಲ್​ವೊಂದು ಬಂದಿತ್ತು. ಆದರೆ, ಪೊಲೀಸ್ ತಪಾಸಣೆ ವೇಳೆ ಅಂಥ ಬಾಂಬ್ ಯಾವುದೂ ಇಲ್ಲ ಎಂದು ಗೊತ್ತಾಗಿತ್ತು. ದೆಹಲಿಯಲ್ಲಿನ ಪ್ರಶಾಂತ್ ವಿಹಾರ್, ದ್ವಾರಕಾ ಸೆಕ್ಟರ್ 16 ಮತ್ತು ಚಾಣಕ್ಯಪುರಿ ಮೊದಲಾದ ಸ್ಥಳಗಳಲ್ಲಿನ ಶಾಲೆಗಳಿಗೆ ಬಾಂಬ್ ಇಟ್ಟಿರುವುದಾಗಿಯೂ ಹುಸಿ ಬೆದರಿಕೆ ಬಂದಿತ್ತು. ಕೂಡಲೇ ದೆಹಲಿ ಪೊಲೀಸರು ಕಾರ್ಯತತ್ಪರಗೊಂಡು ಶಾಲೆಗಳಿಂದ ಎಲ್ಲರನ್ನೂ ತೆರವುಗೊಳಿಸಿ ಪೂರ್ಣ ತಪಾಸಣೆ ಮಾಡಿದ್ದರು. ಯಾವ ಬಾಂಬ್ ಪತ್ತೆಯಾಗಿರಲಿಲ್ಲ.

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಕಚೇರಿಗೆ ಬಾಂಬ್ ಬೆದರಿಕೆಯ ಇಮೇಲ್ ಬಂದ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಪೊಲೀಸರೂ ಕೂಡಲೇ ಸ್ಥಳಕ್ಕೆ ಆಗಮಿಸಿ ಇಡೀ ಕಟ್ಟಡದಲ್ಲಿ ಬಾಂಬ್​ಗೆ ಶೋಧಿಸಿದ್ದರು. ಕೊನೆಗೆ, ಇದು ಹುಸಿ ಬಾಂಬ್ ಬೆದರಿಕೆ ಎಂಬುದು ಗೊತ್ತಾಗಿದೆ.

ಇದನ್ನೂ ಓದಿ: ಭಾರತದ ಷೇರು ಮಾರುಕಟ್ಟೆ ಸ್ವಚ್ಛಗೊಳಿಸಲು ಶಾರ್ಟ್ ಸೆಲ್ಲರ್​ಗಳು ಬೇಕೆಂದ ನಿತಿನ್ ಕಾಮತ್; ಏನಿದು ಶಾರ್ಟ್ ಸೆಲ್ಲಿಂಗ್?

ಹುಸಿ ಬೆದರಿಕೆಯಾದರೂ ಆತಂಕದ ಕ್ಷಣಗಳು…

ಪೊಲೀಸರಿಗೆ ಸಾಕಷ್ಟು ಹುಸಿ ಬೆದರಿಕೆಯ ಕರೆಗಳು ಮತ್ತು ಇಮೇಲ್​ಗಳು ಬರುತ್ತಿರುತ್ತವೆ. ಪೂರ್ಣವಾಗಿ ತಪಾಸಣೆ ಮಾಡದೇ ಅವನ್ನು ಹುಸಿ ಬೆದರಿಕೆ ಎಂದು ಪರಿಗಣಿಸಲು ಆಗುವುದಿಲ್ಲ. ಸಾರ್ವಜನಿಕ ಭದ್ರತೆ ದೃಷ್ಟಿಯಿಂದ ಪೊಲೀಸರು ಪ್ರತಿಯೊಂದು ಬೆದರಿಕೆಯನ್ನೂ ಗಂಭೀರವಾಗಿ ಪರಿಶೀಲಿಸಿ ತಪಾಸಣೆ ಮಾಡುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ