ಭಾರತದ ಷೇರು ಮಾರುಕಟ್ಟೆ ಸ್ವಚ್ಛಗೊಳಿಸಲು ಶಾರ್ಟ್ ಸೆಲ್ಲರ್ಗಳು ಬೇಕೆಂದ ನಿತಿನ್ ಕಾಮತ್; ಏನಿದು ಶಾರ್ಟ್ ಸೆಲ್ಲಿಂಗ್?
Nithin Kamath wants the presence of short sellers in Indian markets: ಅಸಹಜವಾಗಿ ಷೇರುಬೆಲೆ ಏರಿರುವ ಸ್ಟಾಕ್ಗಳು ನೈಜ ಬೆಲೆಗೆ ಇಳಿಯಲು ಶಾರ್ಟ್ ಸೆಲ್ಲಿಂಗ್ ತಂತ್ರಗಳನ್ನು ಬಳಸಲಾಗುತ್ತದೆ. ಝೀರೋಧ ಸಿಇಒ ನಿತಿನ್ ಕಾಮತ್ ಪ್ರಕಾರ ಭಾರತದ ಷೇರು ಮಾರುಕಟ್ಟೆಯಲ್ಲಿ ಶಾರ್ಟ್ ಸೆಲ್ಲರ್ಗಳ ಕೊರತೆ ಇದೆ. ಶಾರ್ಟ್ ಸೆಲ್ಲಿಂಗ್ ಮಾಡುವ ಕೆಲಸ ಬಹಳ ಕಷ್ಟ. ಇದನ್ನು ಸುಲಭಗೊಳಿಸುವುದು ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ನವದೆಹಲಿ, ಜುಲೈ 14: ಭಾರತದ ಷೇರು ಮಾರುಕಟ್ಟೆಗೆ (stock market) ಶಾರ್ಟ್ ಸೆಲ್ಲಿಂಗ್ ಕಾರ್ಯಗಳ ಅವಶ್ಯಕತೆ ಇದೆ. ಆದರೆ, ಇಲ್ಲಿ ಶಾರ್ಟ್ ಸೆಲ್ಲರ್ಗಳ ಕೊರತೆ ಇದೆ. ಶಾರ್ಟ್ ಮಾಡುವ ದಾರಿಯೂ ಕಠಿಣ ಇದೆ ಎಂದು ಝೀರೋಧ ಸಂಸ್ಥಾಪಕ ಮತ್ತು ಸಿಇಒ ನಿತಿನ್ ಕಾಮತ್ (Nithin Kamath) ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಅಧಿಕೃತ ಎಕ್ಸ್ ಅಕೌಂಟ್ನನಲ್ಲಿ ಪೋಸ್ಟ್ ಹಾಕಿದ ಅವರು, ಭಾರತದಲ್ಲಿ ಶಾರ್ಟ್ ಸೆಲ್ಲಿಂಗ್ ಕೊರತೆಯಿಂದಾಗಿ ಮಾರುಕಟ್ಟೆ ವಿರೂಪಗೊಳ್ಳುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಶಾರ್ಟ್ ಸೆಲ್ಲಿಂಗ್ ಇಲ್ಲವಾದರೆ ಷೇರುಗಳ ನೈಜ ಬೆಲೆ ಸರಿಯಾಗಿ ಗೊತ್ತಾಗುವುದಿಲ್ಲ ಎಂದು ಹೇಳಿದ ಅವರು, ಭಾರತದಲ್ಲಿ ಸ್ಟಾಕ್ಗಳನ್ನು ಶಾರ್ಟ್ ಮಾಡುವ ಕೆಲಸ ಅಷ್ಟು ಸುಲಭವಲ್ಲ ಎಂದಿದ್ದಾರೆ.
ಇದನ್ನೂ ಓದಿ: ಪ್ರಿಯಾ ನಾಯರ್ ಸಿಇಒ ಆದ ಬಳಿಕ ಹಿಂದೂಸ್ತಾನ್ ಯುನಿಲಿವರ್ ಷೇರುಬೆಲೆ ಭರ್ಜರಿ ಹೆಚ್ಚಳ; ಏನು ಕಾರಣ?
ನಿತಿನ್ ಕಾಮತ್ ಪ್ರಕಾರ ಭಾರತದಲ್ಲಿ ಯಾವುದೇ ಶಾರ್ಟಿಂಗ್ ಚಟುವಟಿಕೆ ನಡೆಯುತ್ತಿಲ್ಲ. ಶಾರ್ಟ್ಗಗಾಗಿ ಸ್ಟಾಕ್ಗಳನ್ನು ಖರೀದಿಸುವುದು ಬಹಳ ಕಷ್ಟ. ಆಫ್ಲೈನ್ನಲ್ಲೇ ಮಾಡಬೇಕು. ಹೀಗಾಗಿ, ಭಾರತದಲ್ಲಿ ಶಾರ್ಟಿಂಗ್ ಕಷ್ಟ. ಇಲ್ಲಿ ಶಾರ್ಟ್ ಮಾಡಲು ಉಳಿದಿರುವ ಮಾರ್ಗ ಎಂದರೆ ಫ್ಯೂಚರ್ಸ್ ಮತ್ತು ಆಪ್ಷನ್ಸ್. ಆದರೆ, ಇಲ್ಲೂ ಕೂಡ ಕೇವಲ 224 ಎಫ್ ಅಂಡ್ ಒ ಸ್ಟಾಕ್ಗಳು ಮಾತ್ರವೇ ಇರುವುದು. ಕೆಟ್ಟದಾಗಿರುವ ಹೆಚ್ಚಿನ ಸ್ಟಾಕ್ಗಳನ್ನು ಶಾರ್ಟ್ ಮಾಡಲು ಅವಕಾಶ ಇರುವುದಿಲ್ಲ ಎಂದು ತಮ್ಮ ಎಕ್ಸ್ ಪೋಸ್ಟ್ನಲ್ಲಿ ನಿತಿನ್ ಕಾಮತ್ ಅಭಿಪ್ರಾಯಪಟ್ಟಿದ್ದಾರೆ.
ಏನಿದು ಶಾರ್ಟ್ ಸೆಲ್ಲಿಂಗ್?
ಶಾರ್ಟ್ ಸೆಲ್ಲಿಂಗ್ ಎಂದರೆ ಭಾರತೀಯರಿಗೆ ಅಮೆರಿಕದ ಹಿಂಡನ್ಬರ್ಗ್ ಸಂಸ್ಥೆ ನೆನಪಿಗೆ ಬರಬಹುದು. ಅದಾನಿ ಗ್ರೂಪ್ ವಿರುದ್ಧ ಆರೋಪಗಳನ್ನು ಮಾಡಿದ ವರದಿಯೊಂದನ್ನು ಬಿಡುಗಡೆ ಮಾಡಿತ್ತು. ಅದರ ವಿವಿಧ ಸ್ಟಾಕ್ಗಳ ಬೆಲೆ ಪಾತಾಳಕ್ಕೆ ಇಳಿಯುವಂತೆ ಮಾಡಿತ್ತು. ಇದು ಶಾರ್ಟ್ ಸೆಲ್ಲರ್ಗಳ ತಂತ್ರಗಳಲ್ಲಿ ಒಂದು.
ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ಜೇನ್ ಸ್ಟ್ರೀಟ್ನಂತಹ ವಂಚಕರ ಮಧ್ಯೆ ಟ್ರೇಡಿಂಗ್ ಮತ್ತು ಹೂಡಿಕೆ ಮಾಡುವ ತಂತ್ರ ತಿಳಿದಿರಿ…
ಸಾಮಾನ್ಯವಾಗಿ ಶಾರ್ಟ್ ಸೆಲ್ಲರ್ಗಳು ಅಸ್ವಾಭಾವಿಕವಾಗಿ ಷೇರುಬೆಲೆ ಏರಿರುವ ಸ್ಟಾಕ್ಗಳನ್ನು ಗುರುತಿಸಿ, ಅದಕ್ಕೆ ಕಾರಣಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುತ್ತಾರೆ. ಬಳಿಕ ಷೇರುಗಳನ್ನು ದೊಡ್ಡ ಪ್ರಮಾಣದಲ್ಲಿ ಮಾರಿ ಅವುಗಳ ಬೆಲೆ ಕುಸಿಯುವಂತೆ ಮಾಡುತ್ತಾರೆ. ಬೆಲೆ ಕುಸಿದ ಷೇರುಗಳನ್ನು ಖರೀದಿಸಿ ಲಾಭ ಮಾಡಿಕೊಳ್ಳುತ್ತಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




