ಷೇರುಮಾರುಕಟ್ಟೆಯಲ್ಲಿ ಜೇನ್ ಸ್ಟ್ರೀಟ್ನಂತಹ ವಂಚಕರ ಮಧ್ಯೆ ಟ್ರೇಡಿಂಗ್ ಮತ್ತು ಹೂಡಿಕೆ ಮಾಡುವ ತಂತ್ರ ತಿಳಿದಿರಿ…
Tips for retail investors: ಜೇನ್ ಸ್ಟ್ರೀಟ್ ಸಂಸ್ಥೆ ಷೇರುಪೇಟೆಯಲ್ಲಿ ಷೇರುಬೆಲೆ ಕೃತಕವಾಗಿ ಏರಿಳಿತವಾಗುವಂತೆ ಮಾಡಿ ಭಾರೀ ಲಾಭ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಈ ರೀತಿಯ ಅಕ್ರಮ ಚಟುವಟಿಕೆಗಳು, ಅವ್ಯವಹಾರಗಳು ಮಾರುಕಟ್ಟೆಯಲ್ಲಿ ನಡೆಯುತ್ತಿರುತ್ತವೆ. ಇಂಥವುಗಳ ಮಧ್ಯೆ ವಂಚನೆಗೆ ಒಳಗಾಗದಂತೆ ಸರಿಯಾದ ಮಾರುಕಟ್ಟೆ ಗತಿ ಮತ್ತು ಷೇರುಗಳ ನೈಜ ಮೌಲ್ಯ ಗ್ರಹಿಸಿ ಹೂಡಿಕೆ ಮಾಡುವ ತಂತ್ರ ತಿಳಿದಿರಿ.

ನವದೆಹಲಿ, ಜುಲೈ 6: ಅಮೆರಿಕದ ಟ್ರೇಡಿಂಗ್ ಕಂಪನಿಯಾದ ಜೇನ್ ಸ್ಟ್ರೀಟ್ ಹಾಗೂ ಅದರ ಅಂಗಸಂಸ್ಥೆಗಳು ಭಾರತದಲ್ಲ ಟ್ರೇಡಿಂಗ್ (stock trading) ಮಾಡದಂತೆ ಸೆಬಿ ನಿಷೇಧ ಹಾಕಿದೆ. ಅದರ 4,000 ಕೋಟಿಗೂ ಅಧಿಕ ಹಣವನ್ನು ಮುಟ್ಟುಗೋಲು ಹಾಕಿದೆ. ದೊಡ್ಡ ಮಟ್ಟದಲ್ಲಿ ಖರೀದಿಸುವ ಮತ್ತು ಮಾರುವ ಪಂಪ್ ಅಂಡ್ ಡಂಪ್ ತಂತ್ರದ ಮೂಲಕ ಷೇರುಬೆಲೆಯನ್ನು ಕೃತಕವಾಗಿ ಉಬ್ಬಿಸಿ ಆ ಮೂಲಕ ಆಪ್ಷನ್ಸ್ ಟ್ರೇಡಿಂಗ್ನಲ್ಲಿ ಜೇನ್ ಸ್ಟ್ರೀಟ್ ಒಂದು ವರ್ಷದಲ್ಲಿ 36,502 ಕೋಟಿ ರೂ ಲಾಭ ಮಾಡಿತು ಎನ್ನುವುದು ಸೆಬಿ ಮಾಡಿರುವ ಆರೋಪ.
ಜೇನ್ ಸ್ಟ್ರೀಟ್ ಮೇಲಿರುವ ಆರೋಪ ನಿಜವೋ ಸುಳ್ಳೋ ಎಂಬುದು ತನಿಖೆ ವೇಳೆ ಗೊತ್ತಾಗುತ್ತದೆ. ಆದರೆ, ಷೇರುಬೆಲೆಯನ್ನು ಉದ್ದೇಶಪೂರ್ವಕವಾಗಿ ದಿಢೀರ್ ಏರಿಸುವ ಮತ್ತು ಇಳಿಸುವಂತಹ ವಂಚಕರು ಮಾರುಕಟ್ಟೆಯಲ್ಲಿ ಇರುವುದು ಹೌದು. ಹಾಗಂತ, ಷೇರುಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದನ್ನು ನಿಲ್ಲಿಸುತ್ತೇನೆನ್ನುವುದು ತಪ್ಪು ನಿರ್ಧಾರವಾಗುತ್ತದೆ. ವಂಚಕರ ಗಾಳಕ್ಕೆ ಬೀಳದ ರೀತಿಯಲ್ಲಿ ಎಚ್ಚರ ವಹಿಸಿ ಹೂಡಿಕೆ ಮಾಡುವ ತಂತ್ರಗಳನ್ನು ತಿಳಿದಿದ್ದರೆ ಒಳ್ಳೆಯದು.
ಇದನ್ನೂ ಓದಿ: ಕೆರಿಬಿಯನ್ ನಾಡಿಗೂ ಹರಡಿದ ಭಾರತದ ಯುಪಿಐ; ಟ್ರಿನಿಡಾಡ್ ಟೊಬಾಗೊದಲ್ಲಿ ಭೀಮ್ ಆ್ಯಪ್ ಅಳವಡಿಕೆ
ಇಂಡೆಕ್ಸ್ಗಳ ದಿಢೀರ್ ಏರಿಳಿತಗಳಿಂದ ಪ್ರಭಾವಿತರಾಗದಿರಿ…
ಮ್ಯೂಚುವಲ್ ಫಂಡ್ನಂತಹ ಸಾಂಸ್ಥಿಕ ಹೂಡಿಕೆದಾರರು ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡುತ್ತವೆ. ಇದರಿಂದ ಷೇರುಬೆಲೆ ಹಾಗು ಇಂಡೆಕ್ಸ್ಗಳ ಬೆಲೆ ಏರಿಕೆ ಆಗಬಹುದು. ಇದು ಒಟ್ಟಾರೆ ಮಾರುಕಟ್ಟೆಯ ನೈಜ ಚಲನೆಯನ್ನು ತೋರಿಸುವುದಿಲ್ಲ. ಆಪ್ಷನ್ಸ್ ಟ್ರೇಡಿಂಗ್ ವೇಳೆ ಬಹಳ ಜನರು ಯಾಮಾರಾವುದು ಇಂಥ ವೊಲಾಟಿಲಿಟಿ ಸಂದರ್ಭಗಳಲ್ಲೇ.
ಹೂಡಿಕೆದಾರರು ಮತ್ತು ಟ್ರೇಡರ್ಗಳು ಇಂಡೆಕ್ಸ್ ಏರಿಳಿತದ ಸೂಚಕಗಳನ್ನು ಗಮನಿಸುವ ಬದಲು ಟೆಕ್ನಿಕಲ್ ಇಂಡಿಕೇಟರ್ಗಳನ್ನು ಬಳಸಬಹುದು. ಮಾರುಕಟ್ಟೆಯ ಟ್ರೆಂಡ್ ಅನ್ನು ಹೆಚ್ಚು ನಿಖರವಾಗಿ ಸೂಚಿಸುವ ವಾಲ್ಯೂಮ್ ಡಾಟಾವನ್ನೂ ಅವಲೋಕಿಸಬಹುದು ಎನ್ನುತ್ತಾರೆ ತಜ್ಞರು.
ಆಪ್ಷನ್ಸ್ ಟ್ರೇಡಿಂಗ್ ವೇಳೆ ಎಕ್ಸ್ಪಿರಿ ಬಗ್ಗೆ ಜಾಗೃತರಾಗಿರಿ…
ನೀವು ಎಫ್ ಅಂಡ್ ಒ ಟ್ರೇಡಿಂಗ್ನಲ್ಲಿ ಭಾಗಿಯಾಗಿದ್ದರೆ, ಆಪ್ಷನ್ಸ್ ಟ್ರೇಡ್ ವೇಳೆ ಜಾಗ್ರತೆ ಇರಬೇಕು. ಸಾಂಸ್ಥಿಕ ಹೂಡಿಕೆದಾರರು ಅಥವಾ ದೊಡ್ಡದೊಡ್ಡ ಹೂಡಿಕೆದಾರರು ತಮಗೆ ಬೇಕಾದ ರೀತಿಯಲ್ಲಿ ಖರೀದಿಸುವ, ಮಾರಾಟ ಮಾಡುವ ತಂತ್ರ ಅನುಸರಿಸಬಹುದು. ಎಕ್ಸ್ಪಿರಿ ದಿನಗಳಲ್ಲಿ, ಅಂದರೆ, ಆಪ್ಷನ್ಸ್ ಖರೀದಿಗೆ ಗಡುವು ಇರುವ ದಿನಗಳಲ್ಲಿ ಅಸಹಜ ರೀತಿಯಲ್ಲಿ ಇಂಡೆಕ್ಸ್ ಮಟ್ಟ ಏರಿಳಿತವಾಗುವಂತೆ ಮಾಡಬಹುದು. ಹೀಗಾಗಿ, ಎಕ್ಸ್ಪಿರಿ ದಿನದಲ್ಲಿ ಇಂತಹ ವಿಚಲನೆಯನ್ನು ಗಮನಿಸಿ, ಜಾಗ್ರತೆಯಿಂದ ಇರಬೇಕಾಗುತ್ತದೆ.
ಇದನ್ನೂ ಓದಿ: Forex Reserves: ಎರಡನೇ ಬಾರಿ 700 ಬಿಲಿಯನ್ ಡಾಲರ್ ಗಡಿ ದಾಟಿದ ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ
ಸೆಬಿ ಎಚ್ಚರಿಕೆಗಳನ್ನು ಗಮನಿಸುತ್ತಿರಬೇಕು
ಸೆಬಿ ತನಗೆ ಅನುಮಾನ ಬಂದಂತಹ ಸಂದರ್ಭಗಳಲ್ಲಿ ಸಂಬಂಧಿತ ಸಂಸ್ಥೆಗಳು, ವ್ಯಕ್ತಿಗಳಿಗೆ ನೋಟೀಸ್ ನೀಡಬಹುದು, ತನಿಖೆ ನಡೆಸಬಹುದು. 2025ರ ಫೆಬ್ರುವರಿಯಲ್ಲಿ ಜೇನ್ ಸ್ಟ್ರೀಟ್ ಸಂಸ್ಥೆಗೆ ಸೆಬಿ ಎಚ್ಚರಿಕೆ ನೀಡಿತ್ತು. ಇದು ರೆಡ್ ಫ್ಲ್ಯಾಗ್ ಎನಿಸುತ್ತದೆ. ಅಂದರೆ, ಇಂಥ ಸಂಸ್ಥೆ ಹಾಗು ಅದರ ಚಟುವಟಿಕೆ ಬಗ್ಗೆ ನಿಗಾ ವಹಿಸಿ, ವಂಚನೆಯಾಗದ ರೀತಿಯಲ್ಲಿ ಹೂಡಿಕೆದಾರರು ಎಚ್ಚರದಿಂದ ಇರಬೇಕಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ