ಕೆರಿಬಿಯನ್ ನಾಡಿಗೂ ಹರಡಿದ ಭಾರತದ ಯುಪಿಐ; ಟ್ರಿನಿಡಾಡ್ ಟೊಬಾಗೊದಲ್ಲಿ ಭೀಮ್ ಆ್ಯಪ್ ಅಳವಡಿಕೆ
Trinidad and Tobago first Caribbean country to implement UPI ಭಾರತದ ಅತ್ಯಂತ ಜನಪ್ರಿಯ ಪೇಮೆಂಟ್ ಸಿಸ್ಟಂ ಎನಿಸಿದ ಯುಪಿಐ ಈಗ ಜಾಗತಿಕವಾಗಿ ಹೆಚ್ಚು ಮನ್ನಣೆ ಪಡೆಯುತ್ತಿದೆ. ಕೆರಿಬಿಯನ್ ಪ್ರದೇಶದ ರಾಷ್ಟ್ರವಾದ ಟ್ರಿನಿಡಾಡ್ ಅಂಡ್ ಟೊಬಾಗೊದಲ್ಲಿ ಯುಪಿಐ ಸಿಸ್ಟಂ ಜಾರಿಗೆ ತರಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿದೆ. ಯುಪಿಐ ಸಿಸ್ಟಂ ಸ್ವೀಕರಿಸಿದ ಎಂಟನೇ ದೇಶ ಟ್ರಿನಿಡಾಡ್ ಆಗಿದೆ.

ನವದೆಹಲಿ, ಜುಲೈ 6: ಭಾರತದ ಯುಪಿಐ ಪೇಮೆಂಟ್ ಸಿಸ್ಟಂ (UPI payment system) ಎಲ್ಲೆಡೆ ಜನಪ್ರಿಯವಾಗತೊಡಗಿದೆ. ಹಲವು ದೇಶಗಳು ಇದನ್ನು ಅಳವಡಿಸುತ್ತಿವೆ. ಟ್ರಿನಿಡಾಡ್ ಅಂಡ್ ಟೊಬಾಗೊದಲ್ಲೂ (Trinidad and Tobago) ಭೀಮ್ ಆ್ಯಪ್ ಪರಿಚಯವಾಗಿದೆ. ಯುಪಿಐ ಸಿಸ್ಟಂ ಅಳವಡಿಸಿದ ಮೊದಲ ಕೆರೆಬಿಯನ್ ದೇಶ ಎನಿಸಿದೆ ಟ್ರಿನಿಡಾಡ್. ಜಾಗತಿಕವಾಗಿ ಯುಪಿಐ ಸ್ವೀಕರಿಸಿದ ಎಂಟನೇ ದೇಶ ಅದು. ಭೀಮ್ ಆ್ಯಪ್ ಮೂಲಕ ಡಿಜಿಟಲ್ ಟ್ರಾನ್ಸಾಕ್ಷನ್ ಸಿಸ್ಟಂ ಅಳವಡಿಸಿದ ಆ ದೇಶಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಮೊನ್ನೆ ಮೊನ್ನೆಯಷ್ಟೇ (ಜುಲೈ 3-4) ನರೇಂದ್ರ ಮೋದಿ ಅವರು ಈ ಪುಟ್ಟ ಕೆರಿಬಿಯನ್ ರಾಷ್ಟ್ರಕ್ಕೆ ಹೋಗಿದ್ದರು. ಅಲ್ಲಿನ ಪ್ರಧಾನಿ ಕಮ್ಲಾ ಪ್ರಸಾದ್ ವಿಶ್ಶೇಶರ್ (Kamla Presad Vissesser) ಅವರು ಭಾರತದ ಪ್ರಧಾನಿಗಳನ್ನು ಬರಮಾಡಿಕೊಂಡಿದ್ದರು. ಈ ವೇಳೆ ಡಿಜಿಟಲ್ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ಹೆಚ್ಚಿಸಲು ಎರಡೂ ದೇಶಗಳು ಆಸಕ್ತಿ ತೋರಿದ್ದವು. ಇದರ ಮುಂದುವರಿದ ಭಾಗವಾಗಿ ಯುಪಿಐ ಅಳವಡಿಕೆ ಆಗಿದೆ.
ಇದನ್ನೂ ಓದಿ: ಎನ್ಆರ್ಐಗಳು ತಮ್ಮ ದೇಶದ ಮೊಬೈಲ್ ನಂಬರ್ನಿಂದಲೇ ಯುಪಿಐ ಬಳಕೆ ಸಾಧ್ಯ; ಐಡಿಎಫ್ಸಿ ಫಸ್ಟ್ ಬ್ಯಾಂಕ್ನಿಂದ ಸೌಲಭ್ಯ
ಭಾರತದಲ್ಲಿ ಅಳವಡಿಸಲಾಗಿರುವ ಡಿಜಿಲಾಕರ್, ಇ-ಸೈನ್ ಮತ್ತು ಗವರ್ನ್ಮೆಂಟ್ ಇ-ಮಾರ್ಕೆಟ್ಪ್ಲೇಸ್ (GeM) ಇತ್ಯಾದಿ ಒಳಗೊಂಡಿರುವ ಇಂಡಿಯಾ ಸ್ಟ್ಯಾಕ್ ಡಿಜಿಟಲ್ ಉತ್ಪನ್ನಗಳನ್ನು (India Stack solutions) ಟ್ರಿನಿಡಾಡ್ ಅಂಡ್ ಟೊಬಾಗೊ ದೇಶದಲ್ಲಿ ಜಾರಿ ಮಾಡಲು ಭಾರತ ಸಹಕಾರ ನೀಡಲಿದೆ. ಈ ಸಂಬಂಧ ಎರಡೂ ದೇಶಗಳ ಮಧ್ಯೆ ಸಹಮತ ವ್ಯಕ್ತವಾಗಿದೆ.
ಕಳೆದ ಒಂದು ಒಂದೂವರೆ ವರ್ಷದಿಂದ ಟ್ರಿನಿಡಾಡ್ ಅಂಡ್ ಟೊಬಾಗೋ ಸೇರಿ ಎಂಟು ದೇಶಗಳು ಭಾರತದ ಯುಪಿಐ ಸಿಸ್ಟಂ ಅನ್ನು ಅಳವಡಿಸಿವೆ. ಈ ದೇಶಗಳಲ್ಲಿರುವ ಜನರು ಭಾರತದಲ್ಲಿರುವ ಜನರಿಗೆ ಯುಪಿಐ ಹಣ ಪಾವತಿ ಮಾಡಲು ಸಾಧ್ಯವಾಗುತ್ತದೆ. ಈ ದೇಶಗಳಲ್ಲಿ ಬ್ಯುಸಿನೆಸ್ ಸ್ಥಳಗಳಲ್ಲಿ ಕ್ಯುಆರ್ ಕೋಡ್ ಬಳಸಿ ಯುಪಿಐ ಟ್ರಾನ್ಸಾಕ್ಷನ್ಸ್ ಮಾಡಬಹುದು.
ಇದನ್ನೂ ಓದಿ: ಸಾಲಗಳಿಗೆ ಇರಲ್ಲ ಪ್ರೀಪೇಮೆಂಟ್ ಚಾರ್ಜ್; ಜನವರಿ 1ರಿಂದ ಆರ್ಬಿಐ ಹೊಸ ನಿಯಮ
ಫ್ರಾನ್ಸ್, ಯುಎಇ, ಭೂತಾನ್, ನೇಪಾಳ್, ಮಾರಿಷಸ್, ಶ್ರೀಲಂಕಾ, ಸಿಂಗಾಪುರ, ಮತ್ತು ಈಗ ಟ್ರಿನಿಡಾಡ್ ಅಂಡ್ ಟೊಬಾಗೊ ದೇಶ ಯುಪಿಐ ಪೇಮೆಂಟ್ ಸಿಸ್ಟಂ ಜಾರಿಗೆ ತಂದಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ