ಸೆಬಿ (SEBI) ಮುಖ್ಯಸ್ಥೆ ಮಾಧಬಿ ಪುರಿ ಬುಚ್ ಅವರಿಗೆ ಇತ್ತೀಚೆಗೆ ವಿವಾದಗಳ ಮೇಲೆ ವಿವಾದಗಳು ಮುತ್ತಿಕೊಳ್ಳುತ್ತಿವೆ. ಅದಾನಿ ಪ್ರಕರಣಗಳಲ್ಲಿ ಅವರ ಹೆಸರು ಥಳಕು ಹಾಕಿಕೊಂಡಿರುವುದು, ಸೆಬಿ ಸೇರಿದರೂ ಐಸಿಐಸಿಐನಿಂದ ಸಂಬಳ ಪಡೆಯುತ್ತಿರುವುದು ಮೊದಲಾದ ಗುರುತರ ಆರೋಪಗಳು ಅವರನ್ನು ಮೆತ್ತಿವೆ. ಸೆಬಿ ಉದ್ಯೋಗಿಗಳು ಬಹಳ ಹಿಂಸೆಯ ಕೆಲಸದ ವಾತಾವರಣ ಇದೆ ಎಂದು ಆರೋಪಿಸಿರುವ ಸಂಗತಿ ಮೊನ್ನೆ ಬೆಳಕಿಗೆ ಬಂದಿದೆ. ಸೆಬಿಯ ಉನ್ನತ ಹಂತದಲ್ಲಿ ಟಾಕ್ಸಿಕ್ ವರ್ಕ್ ಕಲ್ಚರ್ ಇದೆ ಎಂದು ಆರೋಪಿಸಿ 500 ಉದ್ಯೋಗಿಗಳು ಸಹಿ ಹಾಕಿರುವ ಪತ್ರವನ್ನು ಹಣಕಾಸು ಸಚಿವಾಲಯಕ್ಕೆ ಕಳೆದ ತಿಂಗಳು ಕಳುಹಿಸಲಾಗಿತ್ತು ಎನ್ನಲಾಗಿದೆ. ಈ ವಿಚಾರದ ಬಗ್ಗೆ ಸೆಬಿ ಸಂಸ್ಥೆ ಪ್ರತಿಕ್ರಿಯಿಸಿದೆ.
ಸೆಬಿ ಮುಖ್ಯಸ್ಥೆಯಾಗಿ ಮಾಧಬಿ ಪುರಿ ಬುಚ್ ಅವರು ಕೆಲಸದ ವಾತಾವರಣವನ್ನು ವಿಷಕಾರಿ ಮಾಡಿದ್ದಾರೆ. ಉನ್ನತ ಸ್ತರದಲ್ಲಿ ಆಫೀಸರ್ಗಳನ್ನು ಅವಾಚ್ಯವಾಗಿ ನಿಂದಿಸಲಾಗುತ್ತಿದೆ. ಉದ್ಯೋಗಿಯ ಪ್ರತೀ ಕ್ಷಣದ ಕೆಲಸವನ್ನೂ ಪರಿಶೀಲಿಸಲಾಗುತ್ತಿರುತ್ತದೆ. ಕಾರ್ಯಸಾಧುವಲ್ಲದ ಕೆಲಸದ ಗುರಿ ಕೊಡಲಾಗುತ್ತಿದೆ. ಕಳೆದ 2-3 ವರ್ಷಗಳಿಂದ ಸೆಬಿಯಲ್ಲಿ ಕೆಲಸ ಮಾಡುವವರಿಗೆ ಭಯದ ವಾತಾವರಣವೇ ನಿರ್ಮಾಣವಾಗಿದೆ ಎಂಬುದು ಸೆಬಿ ಉದ್ಯೋಗಿಗಳು ಕಳೆದ ತಿಂಗಳು ಹಣಕಾಸು ಸಚಿವಾಲಯಕ್ಕೆ ಬರೆದ ಪತ್ರದಲ್ಲಿ ಇರುವ ಸಾರಾಂಶ. ಸುಮಾರು 500 ಉದ್ಯೋಗಿಗಳು ಈ ಪತ್ರಕ್ಕೆ ಸಹಿಹಾಕಿದ್ದಾರೆ.
ಇದನ್ನೂ ಓದಿ: ಎಸ್ಐಪಿಯತ್ತ ಜನ ಮುಗಿಬೀಳಲು ಏನು ಕಾರಣ? ಈ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ ಹೊಂದುವ ಮುನ್ನ ನೀವು ತಿಳಿಯಬೇಕಾದ್ದೇನು?
ಸೆಬಿಯಲ್ಲಿ ಗ್ರೇಡ್ ಎ ಆಫೀಸರ್ ಹುದ್ದೆಗೆ ಆರಂಭಿಕ ಸಂಬಳವೇ (ಸಿಟುಸಿ) ವರ್ಷಕ್ಕೆ 34 ಲಕ್ಷ ರೂ ಇದೆ. ಕಾರ್ಪೊರೇಟ್ ವಲಯದಲ್ಲಿ ಇದೇ ಸ್ತರದ ಹುದ್ದೆಗೆ ಇರುವಷ್ಟೇ ವೇತನ ನೀಡಲಾಗುತ್ತಿದೆ ಎಂದು ಸೆಬಿ ಸಂಸ್ಥೆ ಹೇಳಿದೆ.
ಸೆಬಿ ಉದ್ಯೋಗಿಗಳಿಂದ ಬರೆದ ಪತ್ರದ ಹಿಂದೆ ಹೊರಗಿನವರ ಚಿತಾವಣೆ ಇದೆ ಎನ್ನುವುದು ಸೆಬಿ ಮ್ಯಾನೇಜ್ಮೆಂಟ್ ವಾದ. 2023ರಲ್ಲಿ ಉದ್ಯೋಗಿಗಳಿಗೆ ಎಚ್ಆರ್ಎ ಸೆಟ್ ಮಾಡಲಾಗಿತ್ತು. ಅದರ ಮೇಲೆ ಶೇ. 55ರಷ್ಟು ಹೆಚ್ಚುವರಿ ಎಚ್ಆರ್ಎ ಹೆಚ್ಚಿಸಬೇಕೆಂದು ಒತ್ತಾಯಿಸಲಾಗಿತ್ತು. ಇದರಿಂದ ಒಬ್ಬ ಉದ್ಯೋಗಿಗಾಗಿ ಸೆಬಿ ಮಾಡುವ ವೆಚ್ಚ ವರ್ಷಕ್ಕೆ 6 ಲಕ್ಷ ರೂನಷ್ಟು ಹೆಚ್ಚಾಗುತ್ತದೆ. ಇದಕ್ಕೆ ಒಪ್ಪಲಿಲ್ಲ. ಈ ಬಗ್ಗೆ ಸೆಬಿ ಉದ್ಯೋಗಿಗಳು ಪ್ರತಿಭಟನೆ ನಡೆಸಿದ್ದರು.
ಆದರೆ, ದಿಢೀರನೇ ಆರೋಪ ಬೇರೆಯೇ ತಿರುವು ಪಡೆಯಿತು ಎನ್ನುತ್ತಿದೆ ಸೆಬಿ. ಸಂಸ್ಥೆಯಲ್ಲಿ ಟಾಕ್ಸಿಕ್ ವರ್ಕ್ ಕಲ್ಚರ್ ಇದೆ ಎನ್ನುವ ವಾದವನ್ನು ಯಾರೋ ಹೊರಗಿನವರ ಕುಮ್ಮಕ್ಕಿನಿಂದ ಸೇರಿಸಲಾಯಿತು ಎನ್ನುವುದು ಸೆಬಿ ಪ್ರತ್ಯಾರೋಪ.
ಇದನ್ನೂ ಓದಿ: ಜಾಗತಿಕ ವಿಮಾನ ಉತ್ಪಾದನೆಗೆ ಭಾರತ ಅಡ್ಡೆಯಾಗಬಲ್ಲುದಾ? ಎಸ್ಪಿವಿ ತಂಡ ಕಟ್ಟಲಿರುವ ಸರ್ಕಾರ; ಎಚ್ಎಎಲ್ಗೆ ಗುರುತರ ಜವಾಬ್ದಾರಿ
ಅಧಿಕಾರಿಗಳ ಕಾರ್ಯಕ್ಷಮತೆ ಕುಂದಿದಾಗ, ಹಾಗು ಕೆಆರ್ಎ ಗುರಿಯ ಮಾಹಿತಿ ಸರಿಯಾಗಿ ನೀಡದಿದ್ದಾಗ, ಮತ್ತು ವಿವಿಧ ಇಲಾಖೆಗಳ ಮಧ್ಯೆ ಬಹಳ ದಿನ ಕಾಲ ಫೈಲ್ಗಳನ್ನು ಓಡಾಡಿಸುತ್ತಿದ್ದಾಗ, ಮತ್ತು ಕೆಲ ಉದ್ಯೋಗಿಗಳಿಗೆ ನೀಡಿದ ಅಪ್ರೈಸಲ್ ಅಂಕಗಳನ್ನು ಬದಲಿಸಿದಾಗ, ಈ ಎಲ್ಲಾ ಸಂದರ್ಭಗಳಲ್ಲಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡಿರುವುದುಂಟು. ಇಂಥವರು ಟಾಕ್ಸಿಕ್ ವರ್ಕ್ ಕಲ್ಚರ್ ಇದೆ ಎನ್ನುತ್ತಿದ್ದಾರೆ ಎಂದು ಸೆಬಿ ಸ್ಪಷ್ಟನೆ ನೀಡಿದೆ.
ಸೆಬಿಯಲ್ಲಿ ಎ ಗ್ರೇಡ್ನ 1,000 ಅಧಿಕಾರಿಗಳಿದ್ದಾರೆ. ಇವರಲ್ಲಿ ಅರ್ಧದಷ್ಟು ಜನರು ಸೆಬಿ ಮ್ಯಾನೇಜ್ಮೆಂಟ್ ವಿರುದ್ಧ ಹಣಕಾಸು ಸಚಿವಾಲಯಕ್ಕೆ ಬರೆದ ಪತ್ರದಲ್ಲಿ ಸಹಿ ಹಾಕಿರುವುದು ಗಮನಾರ್ಹ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ