
ವಾಷಿಂಗ್ಟನ್, ಅಕ್ಟೋಬರ್ 29: ಬೃಹತ್ ಲಾಜಿಸ್ಟಿಕ್ಸ್ ದೈತ್ಯ ಕಂಪನಿಯಾದ ಯುಪಿಎಸ್ (UPS) ಕಳೆದ ವರ್ಷದಿಂದೀಚೆ ಬರೋಬ್ಬರಿ 48,000 ಉದ್ಯೋಗಿಗಳನ್ನು ಕೆಲಸದಿಂದ (Layoffs) ತೆಗೆದುಹಾಕಿದೆ. ಲಾಭ ಹೆಚ್ಚಿಸಲು ಮತ್ತು ಹೂಡಿಕೆದಾರರ ವಿಶ್ವಾಸ ಕುದುರಿಸಲು ಯುಪಿಎಸ್ ಈ ಕ್ರಮ ತೆಗೆದುಕೊಂಡಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಲೇ ಆಫ್ ಮಾಡಿರುವ ಸಂಗತಿಯನ್ನು ಸ್ವತಃ ಯುಪಿಎಸ್ ಸಂಸ್ಥೆಯೇ ತಿಳಿಸಿದೆ. ಈ 48,000 ಉದ್ಯೋಗಿಗಳೆಂದರೆ ಕಂಪನಿಯ ಶೇ. 10ರಷ್ಟಾಗುತ್ತದೆ.
2024ರ ಆರಂಭದಲ್ಲಿ ಯುಪಿಎಸ್ ಕಂಪನಿಯಲ್ಲಿ 5,00,000 ಮಂದಿ ಉದ್ಯೋಗಿಗಳಿದ್ದರು. 2024ರಲ್ಲಿ ಮ್ಯಾನೇಜ್ಮೆಂಟ್ ಟೀಮ್ಗಳಲ್ಲಿ 14,000 ಮಂದಿಯನ್ನು ಲೇ ಆಫ್ ಮಾಡಲಾಗಿದೆ. ಈ ವರ್ಷ (2025) ಚಾಲಕರು ಮತ್ತು ಉಗ್ರಾಣ ವಿಭಾಗಗಳಲ್ಲಿ 34,000 ಮಂದಿಗೆ ಕೆಲಸ ಹೋಗಿದೆ.
ಇದನ್ನೂ ಓದಿ: ಎಸ್ಜೆ-100 ಪ್ಯಾಸೆಂಜರ್ ವಿಮಾನ ತಯಾರಿಕೆ; ರಷ್ಯನ್ ಕಂಪನಿ ಜೊತೆ ಎಚ್ಎಎಲ್ನಿಂದ ಒಪ್ಪಂದ
ಅಮೆರಿಕದ ಅಟ್ಲಾಂಟಾದಲ್ಲಿ ಪ್ರಧಾನ ಕಚೇರಿ ಹೊಂದಿರುವ ಯುಪಿಎಸ್ (ಯುನೈಟೆಡ್ ಪಾರ್ಸಲ್ ಸರ್ವಿಸ್) ಸಂಸ್ಥೆ ವಿಶ್ವದ ಅತಿದೊಡ್ಡ ಕಂಪನಿಗಳಲ್ಲಿ ಒಂದು. ಕಳೆದ 120 ವರ್ಷಗಳಿಂದ ಅಸ್ತಿತ್ವದಲ್ಲಿರುವ ಇದು ಶಿಪ್ಪಿಂಗ್, ಕೊರಿಯರ್ ಸೇವೆ ನೀಡುವ ಲಾಜಿಸ್ಟಿಕ್ಸ್ ಕಂಪನಿ. 200ಕ್ಕೂ ಹೆಚ್ಚು ದೇಶಗಳಿಗೆ ಇದು ಸರಕುಗಳನ್ನು ಸಾಗಿಸುವ ವ್ಯವಸ್ಥೆ ಇರುವ ಇದು ವಿಶ್ವದ ಅತಿದೊಡ್ಡ ಕೊರಿಯರ್ ಕಂಪನಿಯೂ ಹೌದು. ಅಮೇಜಾನ್ ಜೊತೆ ಡೆಲಿವರಿ ಪಾರ್ಟ್ನರ್ಶಿಪ್ ಕೂಡ ಹೊಂದಿದೆ.
ಯುಪಿಎಸ್ ಕಂಪನಿಯ ಮೂರನೇ ತ್ರೈಮಾಸಿಕದಲ್ಲಿ (ಜುಲೈನಿಂದ ಸೆಪ್ಟೆಂಬರ್) ಉತ್ತಮ ಲಾಭ ತೋರಿದೆ. ಇದಕ್ಕೆ ಕಾರಣ ಯುಪಿಎಸ್ ನಡೆಸಿದ ಲೇ ಆಫ್ ಕ್ರಮ ಎನ್ನಲಾಗಿದೆ. ಸಾಕಷ್ಟು ಉದ್ಯೋಗಗಳನ್ನು ನೀಡಿರುವ ಯುಪಿಎಸ್ ಗಳಿಸುತ್ತಿದ್ದ ಲಾಭ ತೃಪ್ತಿದಾಯಕವಾಗಿರಲಿಲ್ಲ. ಅದರ ಷೇರು ಮೌಲ್ಯವೂ ಕೂಡ ಹೆಚ್ಚುತ್ತಿರಲಿಲ್ಲ. ಇದರಿಂದ ಹೂಡಿಕೆದಾರರು ವಿಶ್ವಾಸ ಕಳೆದುಕೊಂಡಿದ್ದರು.
ಇದನ್ನೂ ಓದಿ: ಚಿನ್ನ, ಬೆಳ್ಳಿಗೆ ಸಾಲ; ಎಲ್ಟಿವಿ ಹೆಚ್ಚಳ ಇತ್ಯಾದಿ ಆರ್ಬಿಐನ ಹೊಸ ಮಾರ್ಗಸೂಚಿ ಗಮನಿಸಿ…
ಈ ಕಾರಣಕ್ಕೆ ಯುಪಿಎಸ್ ಸಂಸ್ಥೆ ತನಗೆ ಹೆಚ್ಚು ಲಾಭ ತಾರದ ಬ್ಯುಸಿನೆಸ್ಗಳನ್ನು ಕೈಬಿಟ್ಟು, ತನ್ನ ಇತರ ವಿಭಾಗಗಳಲ್ಲಿ ಒಂದಷ್ಟು ರಚನಾತ್ಮಕ ಬದಲಾವಣೆ ಮಾಡಿದೆ. ಇದರಿಂದಾಗಿ 48,000 ಮಂದಿಗೆ ಕೆಲಸ ಹೋಗುವಂತಾಗಿದೆ. ಅಮೇಜಾನ್ ಜೊತೆ ಇದ್ದ ಡೆಲಿವರಿ ಪಾರ್ಟ್ನರ್ಶಿಪ್ ಅನ್ನೂ ಯುಪಿಎಸ್ ಕಡಿಮೆಗೊಳಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ