ಅಮೇಜಾನ್ನಿಂದ 14,000 ಮಂದಿ ಲೇಆಫ್, ಭಾರತದಲ್ಲೂ ಗಣನೀಯ ಕತ್ತರಿ
Amazon lays off 14,000 employees globally: ಜಾಗತಿಕ ಇ-ಕಾಮರ್ಸ್ ದೈತ್ಯ ಅಮೇಜಾನ್ ಮತ್ತೊಂದು ದೊಡ್ಡ ಸುತ್ತಿನ ಲೇ ಆಫ್ ನಡೆಸಿದೆ. 2023ರಲ್ಲಿ 9,000 ಮಂದಿಯನ್ನು ಕೆಲಸದಿಂದ ತೆಗೆದಿದ್ದ ಅದು, ಈಗ 14,000 ಮಂದಿಯನ್ನು ಮನೆಗೆ ಕಳುಹಿಸಿದೆ. ಎಐ ಅಳವಡಿಕೆಯನ್ನು ಹೆಚ್ಚಿಸಿರುವ ಪರಿಣಾಮವಾಗಿ ಈ ಉದ್ಯೋಗಗಳನ್ನು ನಿಲ್ಲಿಸಿದೆ.

ನವದೆಹಲಿ, ಅಕ್ಟೋಬರ್ 29: ವಿಶ್ವದ ನಂಬರ್ ಒನ್ ಇ-ಕಾಮರ್ಸ್ ಸಂಸ್ಥೆಯಾದ ಅಮೇಜಾನ್ ತನ್ನ 14,000 ಉದ್ಯೋಗಿಗಳನ್ನು ಲೇ ಆಫ್ (Amazon layoffs) ಮಾಡಿದೆ. ಅಮೇಜಾನ್ ಸಂಸ್ಥೆ ಎಐ ಅಳವಡಿಕೆ ಮೇಲೆ ಒತ್ತು ಕೊಡುತ್ತಿರುವ ಫಲವಾಗಿ ಈ ಉದ್ಯೋಗ ಕತ್ತರಿ ದೊಡ್ಡ ಮಟ್ಟದಲ್ಲಿ ಆಗುತ್ತಿದೆ. ಮುಂದಿನ ದಿನಗಳಲ್ಲಿ ಅಮೇಜಾನ್ನಲ್ಲಿ ಇನ್ನೂ ಹೆಚ್ಚಿನ ಮಟ್ಟದ ಲೇ ಆಫ್ಗಳು ನಡೆಯುವ ಸಾಧ್ಯತೆ ಇದೆ. ಅಮೇಜಾನ್ ಸಿಇಒ ಆ್ಯಂಡಿ ಜ್ಯಾಸಿ ಅವರು ಇದರ ಸುಳಿವನ್ನು ಜೂನ್ನಲ್ಲೇ ನೀಡಿದ್ದಾರೆ. ಜನರೇಟಿವ್ ಎಐನಿಂದ ಮುಂದಿನ ಕೆಲ ತಿಂಗಳಲ್ಲಿ ಅಮೇಜಾನ್ನ ಕಾರ್ಪೊರೇಟ್ ಉದ್ಯೋಗಿಗಳ ಸಂಖ್ಯೆ ಇಳಿಯಲಿದೆ ಎಂದಿದ್ದರು. ಅದರ ಮೊದಲ ಕಂತಿನಂತೆ ಈಗ 14,000 ಮಂದಿಗೆ ಕೆಲಸ ಹೋಗಿದೆ.
ಜನರೇಟಿವ್ ಎಐ ಸರ್ವಿಸ್ಗಳ ಮೇಲೆ ಅಮೇಜಾನ್ ಹೆಚ್ಚು ಗಮನ ಹರಿಸತೊಡಗಿದೆ. ಜೂನ್ನಲ್ಲಿ ಸಿಇಒ ನೀಡಿದ ಮಾಹಿತಿ ಪ್ರಕಾರ 1,000ಕ್ಕೂ ಅಧಿಕ ಜನರೇಟಿವ್ ಎಐ ಸರ್ವಿಸ್ಗಳನ್ನು ಅಮೇಜಾನ್ ಹೊಂದಿದೆ. ಭವಿಷ್ಯದಲ್ಲಿ ಅದು ಯೋಜಿಸಿರುವ ಪ್ರಕಾರ ಇದು ಬಹಳ ಕಡಿಮೆ ಸಂಖ್ಯೆ. ಹೀಗಾಗಿ, ಮಾನವ ಸಂಪನ್ಮೂಲಗಳ ಪ್ರಮಾಣವನ್ನು ಅಮೇಜಾನ್ ಗಣನೀಯವಾಗಿ ಕಡಿಮೆಗೊಳಿಸುವ ಸಾಧ್ಯತೆಯಂತೂ ಕಾಣುತ್ತಿದೆ.
ಇದನ್ನೂ ಓದಿ: UPS Layoffs: ಬರೋಬ್ಬರಿ 48,000 ಮಂದಿಯನ್ನು ಕೆಲಸದಿಂದ ತೆಗೆದುಹಾಕಿದ ಯುಪಿಎಸ್
ಭಾರತದಲ್ಲಿ 1,000 ಮಂದಿಗೆ ಪಿಂಕ್ ಸ್ಲಿಪ್?
ಜಾಗತಿಕವಾಗಿ ಅಮೇಜಾನ್ 14,000 ಮಂದಿಯನ್ನು ಲೇ ಆಫ್ ಮಾಡಿದೆ. ಭಾರತದಲ್ಲಿರುವ ಅದರ ಕಚೇರಿಗಳಿಂದ ಸುಮಾರು 800ರಿಂದ 1,000 ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಹಾಕಿದೆ ಎನ್ನುವಂತಹ ಸುದ್ದಿ ಇದೆ. ಫಿನಾನ್ಸ್, ಮಾರ್ಕೆಟಿಂಗ್, ಹ್ಯೂಮನ್ ರಿಸೋರ್ಸ್, ಟೆಕ್ ವಿಭಾಗಗಳಿಂದ ಭಾರತೀಯ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಜಾಗತಿಕ ಟೀಮ್ಗಳಿಗೆ ನೇರವಾಗಿ ರಿಪೋರ್ಟಿಂಗ್ ಮಾಡುತ್ತಿರುವ ಉದ್ಯೋಗಿಗಳೇ ಹೆಚ್ಚಾಗಿ ಕೆಲಸ ಕಳೆದುಕೊಂಡಿರುವುದು.
2023ರಲ್ಲೂ ಅಮೇಜಾನ್ ಜಾಗತಿಕವಾಗಿ 9,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿತ್ತು. ಆಗ ಭಾರತದಲ್ಲಿ 500 ಅಮೇಜಾನ್ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದರು. ಆ್ಯಂಡಿ ಜ್ಯಾಸಿ ಅವರು 2021ರಲ್ಲಿ ಅಮೇಜಾನ್ಗೆ ಸಿಇಒ ಆಗಿ ಬಂದಾಗಿನಿಂದ ಭರ್ಜರಿ ಉದ್ಯೋಗ ಕತ್ತರಿ ಹಾಕಲು ಪ್ರಾಧಾನ್ಯತೆ ನೀಡುತ್ತಿದ್ದಾರೆ.
ಇದನ್ನೂ ಓದಿ: ಎಸ್ಜೆ-100 ಪ್ಯಾಸೆಂಜರ್ ವಿಮಾನ ತಯಾರಿಕೆ; ರಷ್ಯನ್ ಕಂಪನಿ ಜೊತೆ ಎಚ್ಎಎಲ್ನಿಂದ ಒಪ್ಪಂದ
ಈಗ ಹೊಸ ಸುತ್ತಿನಲ್ಲಿ ಕೆಲಸ ಕಳೆದುಕೊಂಡಿರುವ ಉದ್ಯೋಗಿಗಳಿಗೆ ಮುಂದಿನ 90 ದಿನಗಳವರೆಗೆ ಸಂಬಳ ಇತ್ಯಾದಿ ಎಲ್ಲಾ ಭತ್ಯೆಯನ್ನು ಕೊಟ್ಟು ಕಳುಹಿಸುತ್ತಿದೆ ಅಮೇಜಾನ್. ಲೇ ಆಫ್ ಮಾಡುತ್ತಿರುವ ಜೊತೆ ಜೊತೆಗೆ ಕೆಲ ಹೊಸ ಉದ್ಯೋಗಗಳಿಗೂ ನೇಮಕಾತಿ ಮಾಡಲಾಗುತ್ತಿದೆ. ಹೆಚ್ಚು ಕ್ಷಮತೆಯಿಂದ ಕೆಲಸ ಸಾಗುವ ಉದ್ದೇಶದಿಂದ ಸ್ಟ್ರೀಮ್ಲೈನ್ ಮಾಡಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




