ಮುಂಬೈ: ಫ್ಯಾಷನ್ ಮತ್ತು ಸೌಂದರ್ಯ ಉತ್ಪನ್ನಗಳ ಮಾರಾಟ ಮಾಡುವ ಇ-ಕಾಮರ್ಸ್ ಕಂಪನಿ ನೈಕಾ (Nykaa) ಮುಖ್ಯ ಹಣಕಾಸು ಅಧಿಕಾರಿ (CFO) ಸ್ಥಾನಕ್ಕೆ ಅರವಿಂದ ಅಗರ್ವಾಲ್ (Arvind Agarwal) ಮಂಗಳವಾರ ಮಂಗಳವಾರ ರಾಜೀನಾಮೆ ನೀಡಿದ್ದಾರೆ. ಕಂಪನಿಯ ಷೇರು ಮೌಲ್ಯ ಕುಸಿಯುತ್ತಿರುವ ಮಧ್ಯೆಯೇ ಈ ಬೆಳವಣಿಗೆ ನಡೆದಿದೆ. ಅರವಿಂದ ಅಗರ್ವಾಲ್ ಅವರು ಸಿಎಫ್ಒ ಹುದ್ದೆಗೆ ರಾಜೀನಾಮೆ ನೀಡಿದ್ದು, ಕಂಪನಿ ತ್ಯಜಿಸುತ್ತಿದ್ದಾರೆ. ಡಿಜಿಟಲ್ ಆರ್ಥಿಕತೆ ಮತ್ತು ಸ್ಟಾರ್ಟಪ್ ಕ್ಷೇತ್ರದಲ್ಲಿ ಇತರ ಅವಕಾಶಗಳನ್ನು ಅನುಸರಿಸುವುದಕ್ಕಾಗಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ. ಜತೆಗೆ, ನಿರ್ಗಮಿತ ಸಿಎಫ್ಒಗೆ ಶುಭ ಹಾರೈಸಿದೆ.
‘ಈವರೆಗಿನ ನೈಕಾ ಪಯಣವು ಅದ್ಭುತವಾಗಿತ್ತು. ನನ್ನೆಲ್ಲ ಕಲಿಕೆ ಮತ್ತು ಅನುಭವಗಳನ್ನು ಇಲ್ಲಿ ಪಡೆದಿದ್ದೇನೆ. ವೈಯಕ್ತಿಕ ಬೆಳವಣಿಗೆ, ಡಿಜಿಟಲ್ ಆರ್ಥಿಕತೆ ಮತ್ತು ಸ್ಟಾರ್ಟಪ್ ಕ್ಷೇತ್ರದಲ್ಲಿ ಅವಕಾಶಗಳನ್ನು ಅರಸಿ ನೈಕಾದಿಂದ ನಿರ್ಗಮಿಸುತ್ತಿದ್ದೇನೆ. ನೈಕಾಗೆ ಮುಂದಿನ ದಿನಗಳಲ್ಲಿ ಶುಭವಾಗಲಿ ಮತ್ತು ಉತ್ತಮ ಬೆಳವಣಿಗೆ ಕಾಣುವಂತಾಗಲಿ’ ಎಂದು ಅರವಿಂದ ಅಗರ್ವಾಲ್ ತಿಳಿಸಿದ್ದಾರೆ.
ನೈಕಾ ಲಿಸ್ಟೆಡ್ ಕಂಪನಿಯಾಗಿ ಗುರುತಿಸಿಕೊಳ್ಳುವಲ್ಲಿ ಮತ್ತು ಲಾಭದಾಯಕ ಸ್ಟಾರ್ಟಪ್ ಆಗಿ ಪರಿವರ್ತನೆ ಹೊಂದುವಂತೆ ಮಾಡುವಲ್ಲಿ ಅರವಿಂದ ಪ್ರಮುಖ ಪಾತ್ರ ವಹಿಸಿದ್ದರು. ಅವರನ್ನು ಬೀಳ್ಕೊಡುವುದಕ್ಕೆ ವಿಷಾದಿಸುತ್ತೇವೆ. ಅವರಿಗೆ ಶುಭ ಹಾರೈಸುತ್ತೇವೆ ಎಂದು ಕಂಪನಿಯ ಸ್ಥಾಪಕಿ ಮತ್ತು ಅಧ್ಯಕ್ಷೆ ಫಲ್ಗುಣಿ ನಾಯರ್ ಬಿಎಸ್ಇ ಲಿಸ್ಟಿಂಗ್ನಲ್ಲಿ ತಿಳಿಸಿದ್ದಾರೆ.
ಕುಸಿಯುತ್ತಿರುವ ಷೇರು ಮೌಲ್ಯ
ನೈಕಾದ ಷೇರು ಮೌಲ್ಯದಲ್ಲಿ ನವೆಂಬರ್ 10ರಂದು ಶೇಕಡಾ 7ರಷ್ಟು ಕುಸಿತವಾಗಿತ್ತು. ಇಂದು (ನವೆಂಬರ್ 22) ಮತ್ತೆ ಶೇಕಡಾ 5ರಷ್ಟು ಕುಸಿತ ಕಂಡಿದೆ. ಐಪಿಒ (ಆರಂಭಿಕ ಸಾರ್ವಜನಿಕ ಕೊಡುಗೆ) ಲಾಕ್ ಇನ್ ಅವಧಿ ಮುಕ್ತಾಯಗೊಂಡ ಬೆನ್ನಲ್ಲೇ ಐಪಿಒ ಷೇರು ಖರೀದಿಸಿದ್ದವರು ಮಾರಾಟಕ್ಕೆ ಮುಂದಾಗಿದ್ದಾರೆ. ಇದು ಷೇರು ಮೌಲ್ಯದಲ್ಲಿ ಕುಸಿತಕ್ಕೆ ಕಾರಣ ಎನ್ನಲಾಗಿದೆ. ಏತನ್ಮಧ್ಯೆ, ನೈಕಾದ 335 ಕೋಟಿ ಮೌಲ್ಯದ ಷೇರುಗಳ ಮಾರಾಟಕ್ಕೆ ಲೈಟ್ಹೌಸ್ ಇಂಡಿಯಾ ಮುಂದಾಗಿದೆ ಎಂದೂ ವರದಿಯಾಗಿದೆ. ಈ ಹಿಂದೆ ನವೆಂಬರ್ 10ರಂದು ಲೈಟ್ಹೌಸ್ ಇಂಡಿಯಾ ಪ್ರತಿ ಷೇರಿಗೆ 171 ರೂ.ನಂತೆ 96,89,240 ನೈಕಾ ಷೇರುಗಳನ್ನು ಮಾರಾಟ ಮಾಡಿತ್ತು. ನವೆಂಬರ್ 15ರಂದು ಸೆಗಂತಿ ಇಂಡಿಯಾ ಮಾರಿಷಸ್ ಕಂಪನಿ ಸಹ ಪ್ರತಿ ಷೇರಿಗೆ 199 ರೂ.ನಂತೆ 33,73,243 ನೈಕಾ ಷೇರುಗಳನ್ನು ಮಾರಾಟ ಮಾಡಿತ್ತು ಎಂಬುದು ಎನ್ಎಸ್ಇ ದತ್ತಾಂಶಗಳಿಂದ ತಿಳಿದುಬಂದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:01 pm, Tue, 22 November 22