
ನವದೆಹಲಿ, ಆಗಸ್ಟ್ 24: ನೆಲಕಚ್ಚಿದ್ದ ಅನಿಲ್ ಅಂಬಾನಿ (Anil Ambani) ಫೀನಿಕ್ಸ್ನಂತೆ ಮೇಲೇರಿ ಬಂದು ಉದ್ಯಮ ಸಾಮ್ರಾಜ್ಯ ಮರುಸ್ಥಾಪನೆ ಮಾಡುತ್ತಿದ್ದಾರೆ ಎಂದು ಎಲ್ಲರೂ ಅಚ್ಚರಿಯಿಂದ ಮೂಗಿನ ಮೇಲೆ ಬೆರಳುತ್ತಿರುವ ಹೊತ್ತಲ್ಲೇ ಸಾಲು ಸಾಲಾಗಿ ಸಂಕಷ್ಟಗಳು ವಕ್ಕರಿಸಿವೆ. ಅವರು ಸಾಲ ಮಾಡಿ ವಂಚನೆ ಎಸಗಿರುವ ಒಂದೊಂದೇ ಪ್ರಕರಣಗಳು ಬೆಳಕಿಗೆ ಬರತೊಡಗಿವೆ. ಇತ್ತೀಚೆಗಷ್ಟೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅನಿಲ್ ಅಂಬಾನಿಯವರ ರಿಲಾಯನ್ಸ್ ಕಮ್ಯೂನಿಕೇಶನ್ಸ್ನ ಅಕೌಂಟ್ಗಳನ್ನು ‘ಫ್ರಾಡ್’ ಎಂದು ಘೋಷಿಸಿತ್ತು. ಅದರ ಬೆನ್ನಲ್ಲೇ ಬ್ಯಾಂಕ್ ಆಫ್ ಇಂಡಿಯಾ ಕೂಡ ಈ ಹಣೆಪಟ್ಟಿ ನೀಡಿದೆ.
ಅನಿಲ್ ಅಂಬಾನಿವರ ಲೋನ್ ಅಕೌಂಟ್ಗಳು, ಹಾಗೂ ಅವರ ಮಾಲಕತ್ವದ ರಿಲಾಯನ್ಸ್ ಕಮ್ಯೂನಿಕೇಶನ್ ಮತ್ತು ರಿಲಾಯನ್ಸ್ ಟೆಲಿಕಾಂ ಸಂಸ್ಥೆಗಳ ಲೋನ್ ಅಕೌಂಟ್ಗಳನ್ನು ಬ್ಯಾಂಕ್ ಆಫ್ ಇಂಡಿಯಾ ‘ಫ್ರಾಡ್’ ಎಂದು ವರ್ಗೀಕರಿಸಿದೆ.
ಇದನ್ನೂ ಓದಿ: ಬೆಂಗಳೂರಿನ ಫ್ಲೈಯಿಂಗ್ ವೆಡ್ಜ್ನಿಂದ ಕಾಲಭೈರವ ಸಿದ್ಧ: ಇದು ಭಾರತದ ಮೊದಲ ದೇಶೀಯ ನಿರ್ಮಾಣದ MALE ಯುದ್ಧವಿಮಾನ
ಸಾಲ ಪಡೆಯುವಾಗ ಇದ್ದ ಷರತ್ತುಗಳನ್ನು ಪೂರೈಸಿಲ್ಲ. ಹಾಗೂ ಸಾಲದ ಹಣವನ್ನು ಅಕ್ರಮವಾಗಿ ಬೇರೆಡೆ ವರ್ಗಾಯಿಸಲಾಗಿದೆ ಎಂಬುದು ಅನಿಲ್ ಅಂಬಾನಿಯ ಸಾಲಗಳಿಗೆ ‘ಫ್ರಾಡ್’ ಎಂದು ಹಣೆಪಟ್ಟಿ ಹಾಕಲು ಪ್ರಮುಖ ಕಾರಣಗಳೆನ್ನಲಾಗಿದೆ.
ಎಕ್ಸ್ಚೇಂಜ್ ಫೈಲಿಂಗ್ನಲ್ಲಿ ನೀಡಿರುವ ಮಾಹಿತಿ ಪ್ರಕಾರ ರಿಲಾಯನ್ಸ್ ಕಮ್ಯೂನಿಕೇಶನ್ಸ್ ಸಂಸ್ಥೆಗೆ ಬ್ಯಾಂಕ್ ಆಫ್ ಇಂಡಿಯಾದಿಂದ ಆಗಸ್ಟ್ 22ಕ್ಕೆ ನೋಟೀಸ್ ಸಿಕ್ಕಿದೆ. ರಿಲಾಯನ್ಸ್ ಕಮ್ಯೂನಿಕೇಶನ್ಸ್ (ಆರ್ಕಾಮ್) ಕಂಪನಿಯ ಪ್ರೊಮೋಟರ್ ಅನಿಲ್ ಅಂಬಾನಿ ಹಾಗೂ ಮಾಜಿ ನಿರ್ದೇಶಕ ಮಂಜರಿ ಅಶೋಕ್ ಕಾಕರ್ ಅವರ ಲೋನ್ ಅಕೌಂಟ್ಗಳನ್ನು ‘ಫ್ರಾಡ್’ ಎಂದು ವರ್ಗೀಕರಿಸಲು ನಿರ್ಧರಿಸಿರುವುದಾಗಿ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ ಎಂದು ರಿಲಾಯನ್ಸ್ ಕಮ್ಯೂನಿಕೇಶನ್ಸ್ ಸಂಸ್ಥೆ ತನ್ನ ಎಕ್ಸ್ಚೇಂಜ್ ಫೈಲಿಂಗ್ನಲ್ಲಿ ಹೇಳಿದೆ.
ಇದನ್ನೂ ಓದಿ: ನಾಯಿ ಮೂಸಿದರೆ ಮನುಷ್ಯರ ಕಾಯಿಲೆ ಪತ್ತೆ; ಬೆಂಗಳೂರಿನ ಸ್ಟಾರ್ಟಪ್ನಿಂದ ಹೊಸ ರೋಗಪತ್ತೆ ಸಾಧನ ಆವಿಷ್ಕಾರ
ಬ್ಯಾಂಕ್ ಆಫ್ ಇಂಡಿಯಾ 2016ರ ಆಗಸ್ಟ್ ತಿಂಗಳಲ್ಲಿ ಆರ್ಕಾಂಗೆ 700 ಕೋಟಿ ರೂ ಮೊತ್ತದ ಸಾಲ ಮಂಜೂರು ಮಾಡಿತ್ತು. ಬಂಡವಾಳ, ಕಾರ್ಯಾಚರಣೆ ವೆಚ್ಚ, ಬೇರೆ ಸಾಲ ಮರುಪಾವತಿ ಉದ್ದೇಶಕ್ಕೆ ಈ ಸಾಲ ನೀಡಲಾಗಿತ್ತು. ಹೀಗೆ ವಿತರಣೆಯಾದ ಸಾಲದ ಹಣದಲ್ಲಿ ಅರ್ಧದಷ್ಟನ್ನು ಫಿಕ್ಸೆಡ್ ಡೆಪಾಸಿಟ್ಗಳಲ್ಲಿ ಹೂಡಿಕೆ ಮಾಡಲಾಗಿದೆ. ಇದು ಸಾಲಕ್ಕೆ ವಿಧಿಸಿದ್ದ ಷರತ್ತುಗಳ ಉಲ್ಲಂಘನೆ ಎನಿಸಿದೆ. 2017ರ ಜೂನ್ 30ರಂದು ಆ ಸಾಲ ಬಡ್ಡಿಗೆ ಬಡ್ಡಿ ಬೆಳೆದು 724.78 ಕೋಟಿ ರೂ ಆಗಿ, ಅನುತ್ಪಾದಕ ಸಾಲವಾಗಿ ಪರಿಣಮಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ