ಅಪವಾದ, ಜೈಲು, ಕ್ಯಾನ್ಸರ್… ಕೊನೆಗೂ ಪರಲೋಕ ಪಾಲಾದ ಅನಿತಾ ಗೋಯಲ್

|

Updated on: May 16, 2024 | 3:52 PM

Anita Goyal dies of cancer: ಜೆಟ್ ಏರ್ವೇಸ್​ನ ಮಾಜಿ ನಿರ್ದೇಶಕಿ ಅನಿತಾ ಗೋಯಲ್ ಮೇ 16ರ ಮುಂಜಾವಿನಂದು ಮುಂಬೈನಲ್ಲಿ ನಿಧನರಾಗಿದ್ದಾರೆ. ಜೆಟ್ ಏರ್ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಪತ್ನಿಯಾದ 71 ವರ್ಷದ ಅನಿತಾ ಅವರು ಪತಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಜೆಟ್ ಏರ್ವೇಸ್​ಗೆ ಪಡೆದಿದ್ದ ಸಾಲದ ಹಣವನ್ನು ವೈಯಕ್ತಿಕವಾಗಿ ಬಳಸಿಕೊಂಡ ಆರೋಪಗಳು ಪತಿ, ಪತ್ನಿ ಮೇಲಿದ್ದವು. ಇಬ್ಬರೂ ಕೂಡ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅನಿತಾ ಗೋಯಲ್ ಕಳೆದ ವರ್ಷ ಬಂಧಿತರಾದರೂ ಜಾಮೀನಿನ ಮೇಲೆ ಹೊರಬಂದು ಕ್ಯಾನ್ಸರ್​ಗೆ ಚಿಕಿತ್ಸೆ ಪಡೆಯುತ್ತಿದ್ದರು.

ಅಪವಾದ, ಜೈಲು, ಕ್ಯಾನ್ಸರ್... ಕೊನೆಗೂ ಪರಲೋಕ ಪಾಲಾದ ಅನಿತಾ ಗೋಯಲ್
ನರೇಶ್ ಗೋಯಲ್ ಮತ್ತು ಅನಿತಾ ಗೋಯಲ್
Follow us on

ಮುಂಬೈ, ಮೇ 16: ಜೆಟ್ ಏರ್​ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರ ಪತ್ನಿ ಅನಿತಾ ಗೋಯಲ್ (Anita Goyal) ಇಂದು ಗುರುವಾರ ಆಸ್ಪತ್ರೆಯೊಂದರಲ್ಲಿ ಅಸುನೀಗಿದ್ದಾರೆ. ದೀರ್ಘಕಾಲದಿಂದ ಕ್ಯಾನ್ಸರ್ ಕಾಯಿಲೆಗೆ ಒಳಗಾಗಿದ್ದ ಅವರು ಇಂದು ಉಸಿರಾಟ ಅಂತ್ಯಗೊಳಿಸಿದ್ದಾರೆ. ಪತಿ ನರೇಶ್ ಗೋಯಲ್, ಮಕ್ಕಳಾದ ನಮ್ರತಾ ಮತ್ತು ನಿವಾನ್ ಅವರನ್ನು ಅಗಲಿದ್ದಾರೆ. ವರದಿಗಳ ಪ್ರಕಾರ 70 ವರ್ಷದ ಅನಿತಾ ಅವರು ರಾತ್ರಿ ಜಾವ 3 ಗಂಟೆಗೆ ನಿಧನರಾಗಿದ್ದಾರೆ. ಇಂದು ಗುರುವಾರವೇ ಮುಂಬೈನಲ್ಲಿ ಅಂತ್ಯ ಸಂಸ್ಕಾರ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅನಿತಾ ಗೋಯಲ್ ಅವರು ಕೊನೆಯ ಹಂತದ ಕ್ಯಾನ್ಸರ್​ನಿಂದ ಬಾಧಿತರಾಗಿದ್ದರು. ದೀರ್ಘ ಕಾಲದಿಂದ ಜೀವನ್ಮರಣ ಹೋರಾಟ ನಡೆಸಿ ಕೊನೆಗೆ ಬಲಿಯಾಗಿದ್ದಾರೆ. ಅವರ ಪತಿ ನರೇಶ್ ಗೋಯಲ್ ಕೂಡ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾರೆ.

ಅಪವಾದ, ಜೈಲು ಮತ್ತು ಕ್ಯಾನ್ಸರ್

75 ವರ್ಷದ ನರೇಶ್ ಗೋಯಲ್ ಮತ್ತು ಅನಿತಾ ಗೋಯಲ್ ಇಬ್ಬರ ಮೇಲೂ ಅಕ್ರಮ ಹಣ ವರ್ಗಾವಣೆಯ ಆರೋಪ ಇದೆ. ಬ್ಯಾಂಕುಗಳಿಂದ 6,000 ಕೋಟಿ ರೂ ಮೊತ್ತದ ಸಾಲದ ಹಣ ವಾಪಸ್ ಮಾಡಿಲ್ಲದಿರುವುದು, ಮತ್ತು ಸಾಲದ ಹಣವನ್ನು ಉದ್ದೇಶಿತ ಕಾರ್ಯಗಳಿಗೆ ವಿನಿಯೋಗಿಸದೆ ವೈಯಕ್ತಿಕವಾಗಿ ಬಳಸಿಕೊಂಡಿರುವುದು ಫೋರೆನ್ಸಿಕ್ ಆಡಿಟಿಂಗ್​ನಿಂದ ಗೊತ್ತಾಗಿದೆ.

ಇದನ್ನೂ ಓದಿ: ಸ್ವಾತಿ ಮಲಿವಾಲ್ ಮೇಲೆ ದೌರ್ಜನ್ಯ; ಬಿಭವ್ ಕುಮರ್​​ಗೆ ಮಹಿಳಾ ಆಯೋಗದಿಂದ ಸಮನ್ಸ್

ಈ ಸಂಬಂಧ ನರೇಶ್ ಗೋಯಲ್, ಅನಿತಾ ಗೋಯಲ್ ಮತ್ತಿತರ ವಿರುದ್ಧ ಕೆನರಾ ಬ್ಯಾಂಕ್ ದೂರು ಕೊಟ್ಟಿದ್ದು, ಅದರ ಅಧಾರದ ಮೇಲೆ ಇಡಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದೆ.

ಕಳೆದ ವರ್ಷ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನರೇಶ್ ಗೋಯಲ್ ಮತ್ತು ಅನಿತಾ ಗೋಯಲ್ ಅವರನ್ನು ಬಂಧಿಸಿದ್ದರು. ಅನಿತಾ ಗೋಯಲ್ ಅವರು ಕ್ಯಾನ್ಸರ್ ರೋಗದ ಕೊನೆಯ ಹಂತದಲ್ಲಿದ್ದರಿಂದ ಜಾಮೀನು ಪಡೆದು ಹೊರಗೆ ಬಂದಿದ್ದರು. ಜೈಲಿನಿಂದ ಹೊರಬಂದರೂ ಕ್ಯಾನ್ಸರ್ ಕಾಯಿಲೆಯಿಂದ ಪಾರಾಗಿ ಬರಲು ಅನಿತಾಗೆ ಸಾಧ್ಯವಾಗಲಿಲ್ಲ.

ಪತಿ ನರೇಶ್ ಗೋಯಲ್ ಕೂಡ ಕ್ಯಾನ್ಸರ್ ರೋಗಿಯಾದರೂ ಜಾಮೀನು ಪಡೆಯಲು ಸಾಧ್ಯವಾಗಿರಲಿಲ್ಲ. ಕಳೆದ ವಾರವಷ್ಟೇ ಅವರಿಗೆ ಮಧ್ಯಂತರ ಜಾಮೀನು ಸಿಕ್ಕಿತ್ತು. ಗಂಭೀರ ಸ್ಥಿತಿಯಲ್ಲಿರುವ ತಮ್ಮ ಪತ್ನಿಯನ್ನು ನೋಡಲು ಅವರಿಗೆ ಎರಡು ತಿಂಗಳು ಇಂಟೆರಿಂ ಬೈಲ್ ಸಿಕ್ಕಿತ್ತು.

ಇದನ್ನೂ ಓದಿ: ನೀವು ಸ್ಲೀಪಿಂಗ್ ಪಾರ್ಟ್ನರ್, ನಾನು ವರ್ಕಿಂಗ್ ಪಾರ್ಟ್ನರ್: ಸಭಿಕರೊಬ್ಬರ ಪ್ರಶ್ನೆಗೆ ನಿರ್ಮಲಾ ಸೀತಾರಾಮನ್ ಬೌಲ್ಡ್

ಉದ್ಯೋಗಿಯಾಗಿ ಸೇರಿಕೊಂಡು ಗೋಯಲ್ ಜೊತೆ ವಿವಾಹ

ನರೇಶ್ ಗೋಯಲ್ ಅವರ ಕಂಪನಿಗೆ ಅನಿತಾ ಅವರು 1979ರಲ್ಲಿ ಸಾಮಾನ್ಯ ಉದ್ಯೋಗಿಯಾಗಿ ಕೆಲಸಕ್ಕೆ ಸೇರಿದ್ದರು. ಮಾರ್ಕೆಟಿಂಗ್ ಅನಾಲಿಸ್ಟ್ ಆಗಿ ಕೆಲಸಕ್ಕೆ ಸೇರಿ ಹಂತ ಹಂತವಾಗಿ ಅವರು ಬೆಳೆಯುತ್ತಾ ಹೋಗಿದ್ದರು. ಅವರು ಕೆಲಸಕ್ಕೆ ಸೇರಿ 9 ವರ್ಷಗಳ ಬಳಿಕ ನರೇಶ್ ಗೋಯಲ್ ಅವರನ್ನು ವರಿಸಿದ್ದರು. ಜೆಟ್ ಏರ್ವೇಸ್​ನ ನಿರ್ದೇಶಕಿಯಾಗಿಯೂ ಅವರು ಕರ್ತವ್ಯ ನಿಭಾಯಿಸಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ