ಭಾರತದಲ್ಲಿ ಆ್ಯಪಲ್ನಿಂದ ಈ ವರ್ಷ 6 ಲಕ್ಷ ಉದ್ಯೋಗಸೃಷ್ಟಿ; ಸ್ಥಳೀಯವಾಗಿ ಐಫೋನ್ ಪ್ರೋ ತಯಾರಾದರೂ ಕಡಿಮೆ ಬೆಲೆಗೆ ಮಾರಾಟ ಸಾಧ್ಯತೆ ಇಲ್ಲ
Apple iPhone 16 Pro manufacturing in India: ಆ್ಯಪಲ್ನ ಬಹುನಿರೀಕ್ಷಿತ ಐಫೋನ್ 16 ಪ್ರೋ ಮಾಡಲ್ಗಳನ್ನು ಭಾರತದಲ್ಲಿ ತಯಾರಿಸಬಹುದು ಎನ್ನಲಾಗುತ್ತಿದೆ. ಫಾಕ್ಸ್ಕಾನ್ನ ಚೆನ್ನೈ ಘಟಕದಲ್ಲಿ ಇದರ ನಿರ್ಮಾಣವಾಗಬಹುದು. 2 ಲಕ್ಷ ನೇರ ಉದ್ಯೋಗ ಮತ್ತು 4 ಲಕ್ಷ ಪರೋಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ. ಮುಂದಿನ ತಿಂಗಳು (ಸೆಪ್ಟಂಬರ್) ಎರಡನೇ ವಾರದಲ್ಲಿ ಐಫೋನ್ 16 ಸರಣಿಯ ಫೋನ್ಗಳು ಮಾರುಕಟ್ಟೆಗೆ ಬರುತ್ತಿವೆ.
ನವದೆಹಲಿ, ಆಗಸ್ಟ್ 27: ಆ್ಯಪಲ್ನ ಬಹಳ ನಿರೀಕ್ಷೆಯ ಐಫೋನ್ 16 ಪ್ರೋ ಮಾಡಲ್ಗಳನ್ನು ಭಾರತದಲ್ಲಿ ತಯಾರಿಸುವ ಸಾಧ್ಯತೆ ಇದೆ. ಇದು ನಿಜವಾದಲ್ಲಿ, ಭಾರತದಲ್ಲಿ ಮೊದಲ ಬಾರಿಗೆ ಐಫೋನ್ ಪ್ರೋ ಉತ್ಪಾದನೆ ಆಗಲಿದೆ. ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ ಈ ಹಣಕಾಸು ವರ್ಷ ಮುಗಿಯುವುದರೊಳಗೆ ಐಫೋನ್ ಪ್ರೋ ಮಾಡಲ್ಗಳ ತಯಾರಿಕೆಯಿಂದಾಗಿ ಭಾರತದಲ್ಲಿ 6 ಲಕ್ಷ ಹೊಸ ಉದ್ಯೋಗಗಳ ಸೃಷ್ಟಿ ಆಗುವ ನಿರೀಕ್ಷೆ ಇದೆ. ಈ ಪೈಕಿ ಎರಡು ಲಕ್ಷದಷ್ಟು ನೇರ ಉದ್ಯೋಗವೇ ಇರಲಿದೆ. ಪರೋಕ್ಷವಾಗಿ ನಾಲ್ಕು ಲಕ್ಷ ಉದ್ಯೋಗಗಳ ಸೃಷ್ಟಿಯಾಗಲಿದೆ. ಎರಡು ಲಕ್ಷ ನೇರ ನೇಮಕಾತಿಯಲ್ಲಿ ಶೇ. 70ರಷ್ಟು ಮಹಿಳೆಯರೇ ಇರುವ ಸಾಧ್ಯತೆ ಇದೆ ಎಂದು ವರದಿ ಹೇಳುತ್ತಿದೆ.
ಆ್ಯಪಲ್ ಕಂಪನಿ ನೇರವಾಗಿ ತನ್ನ ಉತ್ಪನ್ನಗಳನ್ನು ತಯಾರಿಸುವುದಿಲ್ಲ. ಫಾಕ್ಸ್ಕಾನ್, ಟಾಟಾ ಇತ್ಯಾದಿ ಕೆಲ ಸಂಸ್ಥೆಗಳಿಗೆ ಗುತ್ತಿಗೆ ಕೊಡುತ್ತದೆ. ಫಾಕ್ಸ್ಕಾನ್ ಭಾರತದಲ್ಲಿ ಈಗಾಗಲೇ ಐಫೋನ್ ಇತ್ಯಾದಿ ಆ್ಯಪಲ್ ಉತ್ಪನ್ನಗಳನ್ನು ತಯಾರಿಸುತ್ತಿದೆ. ತಮಿಳುನಾಡಿನಲ್ಲಿ ಬೃಹತ್ ಘಟಕಗಳನ್ನು ಹೊಂದಿದೆ. ಬೆಂಗಳೂರು ಮತ್ತು ಹೈದರಾಬಾದ್ನಲ್ಲೂ ಅದು ಘಟಕಗಳನ್ನು ಸ್ಥಾಪಿಸುತ್ತಿದೆ.
ಟಾಟಾ ಗ್ರೂಪ್ನ ಸಂಸ್ಥೆ ಕೂಡ ಐಫೋನ್ ತಯಾರಿಸುವ ಗುತ್ತಿಗೆ ಪಡೆದಿದೆ. ಕೋಲಾರದಲ್ಲಿ ವಿಸ್ಟ್ರಾನ್ ಕಂಪನಿಯ ಐಫೋನ್ ಘಟಕವನ್ನು ಖರೀದಿಸಿದ್ದ ಟಾಟಾ ಅಲ್ಲಿಯೇ ಐಫೋನ್ ತಯಾರಿಕೆ ಮುಂದುವರಿಸಿದೆ.
ಇದನ್ನೂ ಓದಿ: ಒನ್ ಪಾಯಿಂಟ್ ಒನ್ ಸಲ್ಯೂಶನ್ಸ್ ಷೇರು, 4 ವರ್ಷದಲ್ಲಿ 44 ಪಟ್ಟು ಲಾಭ; ಪಕ್ಕಾ ಮಲ್ಟಿಬ್ಯಾಗರ್ ಸ್ಟಾಕು
ಈ ಹಿಂದೆ ಪ್ರಕಟವಾಗಿದ್ದ ಬ್ಲೂಮ್ಬರ್ಗ್ ವರದಿ ಪ್ರಕಾರ ತಮಿಳುನಾಡಿನ ಶ್ರೀಪೆರಂಬುದೂರಿನಲ್ಲಿರುವ ಫಾಕ್ಸ್ಕಾನ್ ಘಟಕದಲ್ಲಿ ಐಫೋನ್ 16 ಪ್ರೋ ಮತ್ತು ಐಫೋನ್ 16 ಪ್ರೋ ಮ್ಯಾಕ್ಸ್ ಮಾಡಲ್ಗಳನ್ನು ತಯಾರಿಸುವ ಸಾಧ್ಯತೆ ಇದೆ ಎನ್ನಲಾಗಿತ್ತು.
ಐಫೋನ್ 16 ಸರಣಿಯ ಮಾಡಲ್ ಫೋನ್ಗಳು ಸೆಪ್ಟಂಬರ್ 9-10ರಂದು ಬಿಡುಗಡೆ ಆಗಲಿವೆ. ಚೀನಾದಲ್ಲಿ ಪ್ರೋ ಮಾಡಲ್ಗಳು ಸದ್ಯ ತಯಾರಾಗುತ್ತಿದೆ. ಭಾರತದಲ್ಲಿ ಐಫೋನ್ 16 ಫೋನ್ಗಳ ಉತ್ಪಾದನೆ ನಡೆಯುತ್ತಿದೆಯಾದರೂ ಪ್ರೋ ಮಾಡಲ್ಗಳ ತಯಾರಿಕೆ ಇಲ್ಲ. ಈ ವರ್ಷಾಂತ್ಯದೊಳಗೆ ಭಾರತದಲ್ಲೂ ಇವುಗಳ ಉತ್ಪಾದನೆ ಆರಂಭವಾಗಬಹುದು.
ಮೇಡ್ ಇನ್ ಇಂಡಿಯಾ ಐಫೋನ್ಗಳು ಕಡಿಮೆ ಬೆಲೆಗೆ ಸಿಗುತ್ತಾ?
ಸೆಪ್ಟೆಂಬರ್ ಎರಡನೇ ವಾರದಲ್ಲಿ ಬಿಡುಗಡೆ ಆಗಲಿರುವ ಐಫೋನ್ 16 ಸರಣಿಯ ಸ್ಮಾರ್ಟ್ಫೋನ್ಗಳ ಬೆಲೆ ಎಷ್ಟೆಂದು ಇನ್ನೂ ಗೊತ್ತಾಗಿಲ್ಲ. ಬೆಲೆ ವಿವರ ಲೀಕ್ ಆಗಿದೆ ಎನ್ನಲಾದ ವರದಿಗಳ ಪ್ರಕಾರ ಐಫೋನ್ 16 ಸರಣಿ 799 ಡಾಲರ್ನಿಂದ ಆರಂಭವಾಗಬಹುದು. ಭಾರತೀಯ ರುಪಾಯಿ ಕರೆನ್ಸಿಯಲ್ಲಿ ಇದು 67,100 ರೂ ಆಗುತ್ತದೆ. ಐಫೋನ್ 16 ಪ್ರೋ ಮ್ಯಾಕ್ಸ್ ಮಾಡಲ್ 1,199 ಡಾಲರ್ಗೆ ಮಾರಾಟಕ್ಕಿರಬಹುದು. ಮೆಮೋರಿ ಕೆಪಾಸಿಟಿ ಪ್ರಕಾರ ಬೆಲೆಯಲ್ಲಿ ವ್ಯತ್ಯಯ ಆಗಬಹುದು.
ಇದನ್ನೂ ಓದಿ: ಮನೆ ಬೆಲೆ ಹೆಚ್ಚಳ: ಭಾರತದ ಟಾಪ್ 3 ಪ್ರದೇಶಗಳಲ್ಲಿ ಬೆಂಗಳೂರಿನ ಬಾಗಲೂರು, ವೈಟ್ಫೀಲ್ಡ್; ಯಾಕಿಷ್ಟು ಏರಿಕೆ ಆಗ್ತಿದೆ ಗೊತ್ತಾ?
ಭಾರತದಲ್ಲಿ ಐಫೋನ್ 16 ಪ್ರೋ ಮ್ಯಾಕ್ಸ್ ಫೋನ್ನ ಬೆಲೆ ಎರಡು ಲಕ್ಷ ರೂ ಆಸುಪಾಸಿನಲ್ಲಿ ಇರಬಹುದು ಎಂದು ಹೇಳಲಾಗುತ್ತಿದೆ. ಭಾರತದಲ್ಲಿ ಪ್ರೋ ಮಾಡಲ್ಗಳನ್ನು ತಯಾರಿಸಿದರೆ, ತಯಾರಿಕೆ ವೆಚ್ಚ ಕಡಿಮೆ ಆಗುತ್ತದಾದರೂ ಭಾರತದಲ್ಲಿ ಫೋನ್ ಬೆಲೆ ಕಡಿಮೆ ಮಾಡುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ