
ನವದೆಹಲಿ, ಏಪ್ರಿಲ್ 25: ಆ್ಯಪಲ್ ಸಂಸ್ಥೆ ಭಾರತದಲ್ಲಿ ಐಫೋನ್ ತಯಾರಿಕೆ (iPhone production) ಹೆಚ್ಚಿಸುವ ತರಾತುರಿ ತೋರುತ್ತಿದೆ. ಅಮೆರಿಕದ ಮಾರುಕಟ್ಟೆಗೆ ಬೇಕಾದ ಎಲ್ಲಾ ಐಫೋನ್ಗಳನ್ನು 2026ರೊಳಗೆ ಭಾರತದಲ್ಲಿ ತಯಾರಿಸುವಂತಾಗುವ ಗುರಿಯನ್ನು ಆ್ಯಪಲ್ ಇಟ್ಟಿದೆ. ಆ್ಯಪಲ್ ಕಂಪನಿ ತನ್ನ ಉತ್ಪನ್ನಗಳಿಗೆ ಜಾಗತಿಕ ಸರಬರಾಜು ಸರಪಳಿಯ ವ್ಯವಸ್ಥೆಯಲ್ಲಿ (global supply chain) ಮಹತ್ತರ ಬದಲಾವಣೆ ತರುತ್ತಿದೆ. ಅಮೆರಿಕದ ಮಾರುಕಟ್ಟೆಗೆ ಮೇಡ್ ಇನ್ ಚೀನಾ ಬದಲು ಮೇಡ್ ಇನ್ ಇಂಡಿಯಾದ ಫೋನ್ಗಳನ್ನು ಕಳುಹಿಸುವ ಸಂಕಲ್ಪ ತೊಟ್ಟಿದೆ.
ಭಾರತದಲ್ಲಿ ಈಗ ತಯಾರಾಗುತ್ತಿರುವ ಫೋನ್ಗಳಲ್ಲಿ ಬಹಳಷ್ಟನ್ನು ರಫ್ತು ಮಾಡಲಾಗುತ್ತಿದೆ. ಹೀಗೆ ರಫ್ತು ಮಾಡಲಾಗುತ್ತಿರುವ ಬಹುತೇಕ ಐಫೋನ್ಗಳು ಅಮೆರಿಕದ ಮಾರುಕಟ್ಟೆಗೆ ಹೋಗುತ್ತಿವೆ. ಆದರೂ ಕೂಡ ಈ ರಫ್ತು ಪ್ರಮಾಣ ಸಾಕಾಗುತ್ತಿಲ್ಲ. 2026ರೊಳಗೆ ಅಮೆರಿಕಕ್ಕೆ ಅಗತ್ಯವಾದ ಎಲ್ಲಾ ಐಫೋನ್ಗಳನ್ನೂ ಭಾರತದಿಂದಲೇ ನಿರ್ಮಿಸಿ ಕೊಡಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: ಭಾರತ, ಸೌತ್ ಕೊರಿಯಾಗಿಂತಲೂ ಶ್ರೀಮಂತವಾಗಿದ್ದ ಪಾಕಿಸ್ತಾನ ಎಡವಿದ್ದು ಎಲ್ಲಿ? ಇಲ್ಲಿವೆ ರೋಚಕ ಅಂಶಗಳು
ವರದಿಗಳ ಪ್ರಕಾರ, ವಿಶ್ವದ ಶೇ. 20ರಷ್ಟು ಐಫೋನ್ಗಳು ಈಗ ಭಾರತದಲ್ಲಿ ಅಸೆಂಬಲ್ ಆಗುತ್ತಿವೆ. ಈ ವರ್ಷಾಂತ್ಯದೊಳಗೆ ಭಾರತದಲ್ಲಿ ಐಫೋನ್ ತಯಾರಿಕೆ ಪ್ರಮಾಣ ಶೇ. 25ರಷ್ಟಾಗಬೇಕು ಎನ್ನುವ ಗುರಿ ಆ್ಯಪಲ್ಗೆ ಇತ್ತು. ಅದು ಈಗ ಬಹುತೇಕ ಈಡೇರುತ್ತಿದೆ. ಈಗ ಅಮೆರಿಕದ ಮಾರುಕಟ್ಟೆಗೆ ಬೇಕಾದ ಎಲ್ಲಾ ಐಫೋನ್ಗಳನ್ನೂ ಭಾರತದಿಂದಲೇ ಸರಬರಾಜು ಮಾಡುವ ಉದ್ದೇಶ ಇದೆ.
ವಿವಿಧ ಕ್ಷೇತ್ರಗಳಲ್ಲಿ ಉತ್ಪಾದನೆಯ ವಿಷಯಕ್ಕೆ ಬಂದರೆ ಚೀನಾ ಜಾಗತಿಕ ಫ್ಯಾಕ್ಟರಿ ಎನಿಸಿದ್ದ ದೇಶ. ಆದರೆ, ಕೋವಿಡ್ ಬಳಿಕ ಚೀನಾ ಅವಶ್ಯಕತೆಗಿಂತ ಹೆಚ್ಚು ಲಾಕ್ ಡೌನ್ ಮಾಡಿದ ಪರಿಣಾಮ ಉತ್ಪಾದನೆ ಕುಂಠಿತಗೊಂಡಿತು. ಜಾಗತಿಕ ಕಂಪನಿಗಳ ಸರಬರಾಜು ಸರಪಳಿ ವ್ಯವಸ್ಥೆ ಅಲ್ಲೋಲಕಲ್ಲೋಲಗೊಂಡಿತ್ತು. ಹೀಗಾಗಿ, ಅಮೆರಿಕನ್ ಕಂಪನಿಗಳು ಚೀನಾದಲ್ಲಿದ್ದ ತಮ್ಮ ಉತ್ಪಾದನಾ ಸರಪಳಿಯನ್ನು ಭಾರತ, ವಿಯೆಟ್ನಾಂ, ಇಂಡೋನೇಷ್ಯ ಇತ್ಯಾದಿ ಪರ್ಯಾಯ ಸ್ಥಳಗಳಿಗೆ ವಿಸ್ತರಿಸತೊಡಗಿವೆ. ಆ್ಯಪಲ್ ಕಂಪನಿ ತನ್ನ ಪರ್ಯಾಯ ಸ್ಥಳವಾಗಿ ಭಾರತಕ್ಕೆ ಆದ್ಯತೆ ಕೊಟ್ಟಿದೆ.
ಇದನ್ನೂ ಓದಿ: ಚೀನಾ ಜಿಡಿಪಿ ಸಖತ್ತಾಗಿದ್ದರೂ ಷೇರು ಮಾರುಕಟ್ಟೆ ಲತ್ತೆ ಹೊಡೆಯುತ್ತಿರೋದ್ಯಾಕೆ? ಇಲ್ಲಿದೆ ಇಂಟರೆಸ್ಟಿಂಗ್ ಡಾಟಾ
ಈಗ ಡೊನಾಲ್ಡ್ ಟ್ರಂಪ್ ಅವರು ಚೀನಾ ಮೇಲೆ ಟ್ಯಾರಿಫ್ ಹೆಚ್ಚಿಸಿರುವುದರಿಂದ ಆ್ಯಪಲ್ ಕಂಪನಿ ಇನ್ನಷ್ಟು ತರಾತುರಿಯಲ್ಲಿ ಚೀನಾದಿಂದ ಕಾಲ್ತೆಗೆಯಲು ನಿರ್ಧರಿಸಿದೆ. ಈಗ ಶೇ. 75ಕ್ಕಿಂತಲೂ ಹೆಚ್ಚು ಐಫೋನ್ಗಳು ಚೀನಾದಲ್ಲೇ ತಯಾರಾಗುತ್ತಿವೆ. ಇದನ್ನು ಸಾಧ್ಯವಾದಷ್ಟೂ ಕಡಿಮೆ ಮಾಡುವುದು ಆ್ಯಪಲ್ನ ಸಂಕಲ್ಪವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ