ಬೆಂಗಳೂರು: ಏರೋನಿಕ್ಸ್ ಸಂಸ್ಥೆಯ ಎಂಡಿ ಫಣೀಂದ್ರ ಸುಬ್ರಮಣ್ಯ ಹಾಗೂ ಸಿಇಒ ವಿನು ಕುಮಾರ್ ಅವರಿಬ್ಬರನ್ನು ಕಚೇರಿಗೇ ನುಗ್ಗಿ ಹತ್ಯೆಗೈದ ಘಟನೆ ಸಿಲಿಕಾನ್ ಸಿಟಿಯನ್ನು ಬೆಚ್ಚಿಬೀಳಿಸಿತ್ತು. ಏರೋನಿಕ್ಸ್ ಸಂಸ್ಥೆಯ ಬ್ಯುಸಿನೆಸ್ ಎದುರಾಳಿ ಜಿನೆಟ್ (G Net) ಕಂಪನಿಯ ಮಾಲೀಕ ಅರುಣ್ ಕುಮಾರ್ ಈ ಘಟನೆಯ ಹಿಂದಿನ ಮಾಸ್ಟರ್ ಮೈಂಡ್ ಎಂದು ಹೇಳಲಾಗಿದೆ. ಕೊಲೆ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆಸ್ತಿಪಾಸ್ತಿಗಾಗಿ ಅಣ್ಣತಮ್ಮಂದಿರ ಹತ್ಯೆಗಳಾಗುವಾಗ ಕೋಟಿಗಟ್ಟಲೆ ಹಣದ ವ್ಯವಹಾರ ಇರುವಾಗ ಕೊಲೆಗಳಾದರೆ ಅಚ್ಚರಿ ಎನಿಸುವುದಿಲ್ಲ. ಬ್ಯುಸಿನೆಸ್ ರೈವಲ್ರಿಗಳು (Business Rivalry) ಕೊಲೆಯಲ್ಲಿ ಅಂತ್ಯಗೊಂಡ ಹಲವು ಪ್ರಕರಣಗಳಿವೆ. ಆದರೆ ಅದೇ ವ್ಯಾವಹಾರಿಕ ಪೈಪೋಟಿ ಅತ್ಯುತ್ತಮ ಉತ್ಪನ್ನವನ್ನು ಜಗತ್ತಿಗೆ ಅನಾವರಣಗೊಳಿಸಿದ್ದಿದೆ. ಇಂಥ ಕೆಲ ಹೈಪ್ರೊಫೈಲ್ ಕೇಸ್ಗಳು ಈ ಸಂದರ್ಭದಲ್ಲಿ ನೆನಪಿಗೆ ಬರುತ್ತವೆ.
ಇದು ಬಹಳ ಖ್ಯಾತವಾಗಿರುವ ಪ್ರಕರಣ. ನೀವು ಲಂಬೋರ್ಗಿನಿ ಮತ್ತು ಫೆರಾರಿ ಕಾರು ಕಂಪನಿಗಳ ಹೆಸರು ಕೇಳಿರಬಹುದು. ಎರಡೂ ಕೂಡ ಲಕ್ಸುರಿ ಮತ್ತು ದುಬಾರಿ ಕಾರುಗಳು. ಲಂಬೋರ್ಗಿನಿ ಮುಂಚೆ ಟ್ರಾಕ್ಟರ್ ತಯಾರಿಸುತ್ತಿದ್ದ ಕಂಪನಿ. ಫೆರುಶಿಯೋ ಲಂಬೋರ್ಗಿನಿ ಇದರ ಸ್ಥಾಪಕರು. ಇವರು ಒಮ್ಮೆ ಫೆರಾರಿ ಖರೀದಿಸುತ್ತಾರೆ. ಕಾರಿನ ಕ್ಲಚ್ ಪ್ಲೇಟ್ನಲ್ಲಿ ಸಮಸ್ಯೆ ಕಾಣುತ್ತದೆ. ಫೆರಾರಿ ಮುಖ್ಯಸ್ಥ ಎಂಜೋ ಫೆರಾರಿ ಅವರನ್ನು ಸಂಪರ್ಕಿಸಿ ಈ ಸಮಸ್ಯೆ ಬಗ್ಗೆ ತಿಳಿಸಿ ಸರಿಪಡಿಸುವಂತೆ ಸಲಹೆ ನೀಡುತ್ತಾರೆ.
ಇದನ್ನೂ ಓದಿ: Elon Musk: ಪ್ರಪಂಚ ಅರಿಯುವ ಗುರಿ; ಇಲಾನ್ ಮಸ್ಕ್ ಹೊಸ ಎಐ ಸಾಹಸ; ಗೂಗಲ್, ಓಪನ್ಎಐಗೆ ಓಪನ್ ಚಾಲೆಂಜಾ?
ಆಗ ಎಂಜೋ ಫೆರಾರಿ ಹೇಳಿದ್ದಿದು: ‘ನಾನು ಕಾರು ತಯಾರಿಸುತ್ತೇ. ನೀವು ಟ್ರಾಕ್ಟರ್ ತಯಾರಿಸಿಕೊಂಡು ಇರಿ ಸಾಕು,’ ಎಂದು ತಮ್ಮ ವಿಚಾರಕ್ಕೆ ಮೂಗುತೂರಿಸಬಾರದು ಎಂದು ಪರೋಕ್ಷವಾಗಿ ಟಾಂಟ್ ಮಾಡುತ್ತಾರೆ. ಇದನ್ನೇ ಸವಾಲಾಗಿ ಸ್ವೀಕರಿಸಿಕೊಂಡ ಫೆರುಶಿಯೋ ಮುಂದಿನ ದಿನಗಳಲ್ಲಿ ಅದ್ಭುತವಾದ ಮತ್ತು ರಮಣೀಯವಾದ ಕಾರುಗಳನ್ನು ತಯಾರಿಸುತ್ತಾರೆ.
ಬಿಲ್ ಗೇಟ್ಸ್ ಮೈಕ್ರೋಸಾಫ್ಟ್ ಸ್ಥಾಪಕರು. ಸ್ಟೀವ್ ಜಾಬ್ಸ್ ಆ್ಯಪಲ್ ಜನಕ. ಇಂದು ಈ ಎರಡು ಶ್ರೇಷ್ಠ ಉತ್ಪನ್ನಗಳು ಜನರಿಗೆ ಸಿಗುತ್ತಿವೆ ಎಂದರೆ ಅವರಿಬ್ಬರ ರೈವಲ್ರಿಯೇ ಕಾರಣ. ಸ್ಟೀವ್ ಜಾಬ್ಸ್ ಮತ್ತು ಬಿಲ್ ಗೇಟ್ಸ್ ಹಿಂದೆ ಆ್ಯಪಲ್ ಕಂಪ್ಯೂಟರಿಗೆ ಸಾಫ್ಟ್ವೇರ್ ತಯಾರಿಸಲು ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಆಗ ಮೈಕ್ರೋಸಾಫ್ಟ್ ಸಂಸ್ಥೆ ವಿಂಡೋಸ್ ಆಪರೇಟಿಂಗ್ ಸಿಸ್ಟಂ ಬಿಡುಗಡೆ ಮಾಡಿತು. ಬಿಲ್ ಗೇಟ್ಸ್ ಅವರೇ ಖುದ್ದಾಗಿ ಅದಕ್ಕೆ ಕೋಡಿಂಗ್ ಬರೆದಿದ್ದರೆನ್ನಲಾಗಿದೆ.
ಇದು ಸ್ಟೀವ್ ಜಾಬ್ಸ್ ಅವರನ್ನು ಕೆರಳಿಸಿತು. ಬಿಲ್ ಗೇಟ್ಸ್ ಕಳ್ಳ ಎಂದು ಸಾರಿದರು. ಇಬ್ಬರ ಮಧ್ಯೆ ವಾಗ್ಯುದ್ಧ ತಾರಕಕ್ಕೇರಿತು. ಅದರ ನಡುವೆಯೂ ಅ್ಯಪಲ್ ಮತ್ತು ಮೈಕ್ರೋಸಾಫ್ಟ್ ತಾಂತ್ರಿಕವಾಗಿ ಶ್ರೇಷ್ಠ ಉತ್ಪನ್ನಗಳನ್ನು ಕೊಡುತ್ತಾ ಬಂದವು. ಅದಕ್ಕೆ ಅವರಿಬ್ಬರ ವೈಯಕ್ತಿಕ ಪೈಪೋಟಿ ಕಾರಣ ಎಂದರೆ ತಪ್ಪಾಗಲಾರದು. ಆದರೆ, ಕೊನೆಕೊನೆಯಲ್ಲಿ ಬಿಲ್ ಗೇಟ್ಸ್ ತಾನು ಸ್ಟೀವ್ ಜಾಬ್ಸ್ ಬಳಿ ತನ್ನ ತಪ್ಪೊಪ್ಪಿಕೊಳ್ಳುವ ಮಟ್ಟಕ್ಕೆ ಪರಿವರ್ತನೆಗೊಂಡಿದ್ದರು.
ಇದನ್ನೂ ಓದಿ: Goldman Sachs: ತಿಂಗಳಿಗೆ ಬಾಡಿಗೆ ಬರೋಬ್ಬರಿ 4 ಕೋಟಿಗೂ ಹೆಚ್ಚು; ಭಾರತದಲ್ಲಿ ಗೋಲ್ಡ್ಮನ್ ಸ್ಯಾಕ್ಸ್ ದುಬಾರಿ ಕಚೇರಿ
ಪ್ಯೂಮಾ ಮತ್ತು ಆಡಿಡಾಸ್ ಎಂಬ ಎರಡು ಶ್ರೇಷ್ಠ ಬ್ರ್ಯಾಂಡ್ ಹೆಸರು ಕೇಳಿರಬಹುದು. ಇವುಗಳ ಹುಟ್ಟಿನ ಹಿಂದೆ ಸಹೋದರರ ಸವಾಲಿನ ಕಥೆ ಇದೆ. ಜರ್ಮನಿಯ ರುಡೋಲ್ಫ್ ಮತ್ತು ಅಡಾಲ್ಫ್ ಎಂಬಿಬ್ಬರ ಸಹೋದರರ ಬ್ಯುಸಿನೆಸ್ ರೈವಲ್ರಿ ಕಥೆ ಇದು.
ವಿಶ್ವ ಮಹಾಯುದ್ಧಕ್ಕೆ ಮೊದಲು ಈ ಇಬ್ಬರು ಸಹೋದರರು ಗೆಡಾ ಎಂಬ ಶೂ ತಯಾರಿಕೆ ಘಟಕ ನಡೆಸುತ್ತಿದ್ದರು. ಎರಡನೇ ವಿಶ್ವ ಮಹಾಯುದ್ಧದಲ್ಲಿ ಹಿರಿಯಣ್ಣ ರುಡೋಲ್ಫ್ ಅವರು ಜರ್ಮನಿ ಸೇನೆ ಸೇರಿದರು. ಗೆಡಾ ವ್ಯವಹಾರವನ್ನು ತಮ್ಮ ಅಡಾಲ್ಫ್ ನೋಡಿಕೊಳ್ಳುತ್ತಿದ್ದ.
ಇದನ್ನೂ ಓದಿ: Cheap Gold: ಯಾವ್ಯಾವ ದೇಶಗಳಲ್ಲಿ ಚಿನ್ನ ಕಡಿಮೆ ಬೆಲೆಗೆ ಸಿಗುತ್ತದೆ? ಭಾರತಕ್ಕಿಂತ ಬಹಳ ಅಗ್ಗ ಇಲ್ಲಿನ ಚಿನ್ನ
ಈ ವೇಳೆ ರುಡೋಲ್ಫ್ ಮತ್ತು ಅಡಾಲ್ಫ್ ಅವರ ಪತ್ನಿಯರ ಮಧ್ಯೆ ತಿಕ್ಕಾಟ ಶುರುವಾಯಿತು. ಅತ್ತ, ತಮ್ಮನೇ ಪಿತೂರಿ ಮಾಡಿ ತನ್ನನ್ನು ಜರ್ಮನಿ ಸೇನೆಗೆ ಸೇರುವಂತೆ ಮಾಡಿ ವ್ಯವಹಾರ ನೋಡಿಕೊಳ್ಳುತ್ತಿದ್ದಾನೆ ಎಂದು ರುಡೋಲ್ಫ್ಗೆ ಅನುಮಾನ ಬರುತ್ತದೆ.
1948ರಲ್ಲಿ ರುಡೋಲ್ಫ್ ಅವರು ರುಡಾ ಎಂಬ ಸಂಸ್ಥೆ ಸ್ಥಾಪಿಸುತ್ತಾರೆ. ಅದು ಮುಂದೆ ಪ್ಯೂಮಾ ಎಂದು ಹೆಸರು ಪಡೆಯುತ್ತದೆ. ಅದಾಗಿ ಮರುವರ್ಷ, 1949ರಲ್ಲಿ ತಮ್ಮ ಅಡಾಲ್ಫ್ ಕೂಡ ಹೊಸ ಸಂಸ್ಥೆ ಕಟ್ಟುತ್ತಾರೆ. ಅದು ಅದಿದಾಸ್ ಆಗುತ್ತದೆ.
ಮಾಹಿತಿಕೃಪೆ: ಅರುಣ್ ಕಲ್ಯಾಣಸುಂದರಮ್, ನ್ಯೂಸ್9
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ