Goldman Sachs: ತಿಂಗಳಿಗೆ ಬಾಡಿಗೆ ಬರೋಬ್ಬರಿ 4 ಕೋಟಿಗೂ ಹೆಚ್ಚು; ಭಾರತದಲ್ಲಿ ಗೋಲ್ಡ್ಮನ್ ಸ್ಯಾಕ್ಸ್ ದುಬಾರಿ ಕಚೇರಿ
Monthly Rent of Over Rs 4 Cr: ಜಾಗತಿಕ ಬ್ಯಾಂಕಿಂಗ್ ದೈತ್ಯ ಗೋಲ್ಡ್ಮನ್ ಸ್ಯಾಕ್ಸ್ ಸರ್ವಿಸಸ್ ಪ್ರೈ ಲಿ ಸಂಸ್ಥೆ ಹೈದರಾಬಾದ್ನ ನಾಲೆಡ್ಜ್ ಸಿಟಿಯಲ್ಲಿ 12 ಅಂತಸ್ತುಗಳ ಕಟ್ಟಡದಲ್ಲಿ 9 ಮಹಡಿಗಳನ್ನು ಬಾಡಿಗೆ ಪಡೆದುಕೊಂಡಿದೆ. ತಿಂಗಳಿಗೆ ರೆಂಟ್ ಬರೋಬ್ಬರಿ 4.14 ಕೋಟಿ ರೂ.
ಹೈದರಾಬಾದ್: ಅಮೆರಿಕದ ಇನ್ವೆಸ್ಟ್ಮೆಂಟ್ ಬ್ಯಾಂಕಿಂಗ್ ದೈತ್ಯ ಗೊಲ್ಡ್ಮನ್ ಸ್ಯಾಕ್ಸ್ ಸರ್ವಿಸಸ್ (Goldman Sachs Services Pvt Ltd) ಸಂಸ್ಥೆ ಹೈದರಾಬಾದ್ನಲ್ಲಿ ಕಟ್ಟಡ ಬಾಡಿಗೆಗೆ ಪಡೆದುಕೊಂಡಿದೆ. ಗೋಲ್ಡ್ಮನ್ ಸ್ಯಾಕ್ಸ್ ಸಂಸ್ಥೆ 9 ಅಂತಸ್ತು ಇರುವ 3.5 ಲಕ್ಷ ಚದರ ಅಡಿ ವಿಸ್ತೀರ್ಣದ ಕಟ್ಟಡವನ್ನು 117 ತಿಂಗಳಿಗೆ ಬಾಡಿಗೆಗೆ ಪಡೆದಿದೆ. ಅಂದರೆ ಸುಮಾರು 10 ವರ್ಷ ಈ ಕಟ್ಟಡವನ್ನು ಗೋಲ್ಡ್ಮ್ಯಾನ್ ಸ್ಯಾಕ್ಸ್ ಬಳಸಲಿದೆ. ತಿಂಗಳಿಗೆ ಬಾಡಿಗೆ ಬರೋಬ್ಬರಿ 4.14 ಕೋಟಿ ರೂ ಎಂದು ಮನಿಕಂಟ್ರೋಲ್ ವೆಬ್ಸೈಟ್ನಲ್ಲಿ ವರದಿಯಾಗಿದೆ.
ಹೈದರಾಬಾದ್ನ ನಾಲೆಜ್ ಸಿಟಿಯಲ್ಲಿರುವ 12 ಮಹಡಿಯ ಕಟ್ಟಡದಲ್ಲಿ ಗ್ರೌಂಡ್ ಫ್ಲೋರ್ ಸೇರಿದಂತೆ 8 ಅಂತಸ್ತಿನವರೆಗೂ 9 ಫ್ಲೋರ್ಗಳನ್ನು ಗೋಲ್ಡ್ಮನ್ ಸ್ಯಾಕ್ಸ್ ಪಡೆದುಕೊಂಡಿದೆ. ದೇವಭೂಮಿ ರಿಯಾಲ್ಟರ್ಸ್ ಪ್ರೈ ಲಿ ಸಂಸ್ಥೆ ನಿರ್ಮಿಸಿರುವ ಈ ಕಟ್ಟಡ ಒಟ್ಟು 5.09 ಲಕ್ಷ ಚದರ ಅಡಿ ವಿಸ್ತೀರ್ಣದ್ದಾಗಿದೆ. ಇದರಲ್ಲಿ ಗೊಲ್ಡ್ಮ್ಯಾನ್ ಸ್ಯಾಕ್ಸ್ ಕಂಪನಿ ಪಡೆದಿರುವ 9 ಅಂತಸ್ತುಗಳ ಒಟ್ಟು ವಿಸ್ತೀರ್ಣ 3,51,109 ಚದರ ಅಡಿ ಎನ್ನಲಾಗಿದೆ.
ಇದನ್ನೂ ಓದಿ: HDFC: ಯುಪಿಐ ಕ್ಯೂಅರ್ ಕೋಡ್ಗೆ ಡಿಜಿಟಲ್ ರುಪಾಯಿ ಲಿಂಕ್ ಮಾಡಿದ ಮೊದಲ ಬ್ಯಾಂಕ್ ಎಚ್ಡಿಎಫ್ಸಿ
ಚದರಡಿ ಲೆಕ್ಕದಲ್ಲಿ ಬಾಡಿಗೆ ನಿಗದಿಯಾಗಿದೆ. ಮೊದಲ 36 ತಿಂಗಳಿಗೆ ಒಂದು ಚದರಡಿ ಜಾಗಕ್ಕೆ 118 ರು ಮಾಸಿಕ ಬಾಡಿಗೆ ಇರುತ್ತದೆ. ಮುಂದಿನ 36 ತಿಂಗಳಿಗೆ ಇದು 128.2 ರೂಗೆ ಏರುತ್ತದೆ. ನಂತರದ 36 ತಿಂಗಳಿಗೆ 139.9 ರೂ ಹಾಗೂ ಕೊನೆಯ 9 ತಿಂಗಳಿಗೆ 103.4 ರೂನಂತೆ ಬಾಡಿಗೆ ನಿಗದಿಯಾಗಿದೆ. ಅದರಂತೆ ಸದ್ಯ ಮೊದಲ 3 ವರ್ಷ ಗೋಲ್ಡ್ಮನ್ ಸ್ಯಾಕ್ಸ್ ಸರ್ವಿಸಸ್ ತಿಂಗಳಿಗೆ 4.14 ಕೋಟಿ ರೂನಷ್ಟು ಬಾಡಿಗೆ ಪಾವತಿಸುತ್ತದೆ.
ಈ ಕಟ್ಟಡ ನಿರ್ಮಿಸಿದ ದೇವಭೂಮಿ ರಿಯಾಲ್ಟರ್ಸ್ ಸಂಸ್ಥೆ ಸತ್ವ ಗ್ರೂಪ್ಗೆ ಸೇರಿದ್ದು. ಸಲಾರ್ಪುರಿಯಾ ಸತ್ವ ಹೈದರಾಬಾದ್, ಬೆಂಗಳೂರು ಮೊದಲಾದೆಡೆ ಪ್ರಮುಖ ಜಾಗಗಳಲ್ಲಿ ಕಟ್ಟಡಗಳನ್ನು ನಿರ್ಮಿಸಿದೆ.
ಇದನ್ನೂ ಓದಿ: Deepavali Train: ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗಬೇಕಾ? ರೈಲು ಟಿಕೆಟ್ ಬುಕಿಂಗ್ ಈಗಲೇ ಶುರು
ಭಾರತದ ಅತ್ಯಂತ ದುಬಾರಿ ವಾಣಿಜ್ಯ ಕಟ್ಟಡಗಳು
ಇತ್ತೀಚೆಗೆ ಮುಂಬೈ ಮತ್ತು ದೆಹಲಿಯಲ್ಲಿ ಆ್ಯಪಲ್ ಸ್ಟೋರ್ಗಳು ಶುರುವಾಗಿದ್ದವು. ಎರಡೂ ಕೂಡ ಸುಮಾರು 40 ಲಕ್ಷ ರೂ ಆಸುಪಾಸಿನ ಮಾಸಿಕ ಬಾಡಿಗೆ ಹೊಂದಿವೆ. ಈಗ ಹೈದರಾಬಾದ್ನಲ್ಲಿ ಗೋಲ್ಡ್ಮನ್ ಸ್ಯಾಕ್ಸ್ ಸಂಸ್ಥೆ 4 ಕೋಟಿಗೂ ಹೆಚ್ಚು ಬಾಡಿಗೆಗೆ ಕಟ್ಟಡವನ್ನು ಪಡೆದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ