ಸರ್ಕಾರಕ್ಕೆ ತೆರಿಗೆ ಕಟ್ಟುವುದು ಶಿಕ್ಷೆ ಎಂದಿದ್ದ ಉದ್ಯಮಿ ಅಶ್ನೀರ್ ಗ್ರೋವರ್ ಈಗ ಪ್ರಾಮಾಣಿಕ ತೆರಿಗೆ ಪಾವತಿದಾರ

|

Updated on: Mar 17, 2024 | 4:22 PM

BharatPe Founder's New Social Media Post: ವಿವಾದಾತ್ಮಕ ಉದ್ಯಮಿ ಅಶ್ನೀರ್ ಗ್ರೋವರ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದು ತಮ್ಮನ್ನು ಪ್ರಾಮಾಣಿಕ ತೆರಿಗೆ ಪಾವತಿದಾರ ಎಂದು ಬಣ್ಣಿಸಿದ್ದಾರೆ. 2021-22ರ ವರ್ಷದಲ್ಲಿ ನಡೆಸಿದ ಫೇಸ್ಲೆಸ್ ಅಸೆಸ್ಮೆಂಟ್​ನ ವಿವರವನ್ನು ಬಹಿರಂಗಪಡಿಸಿದ ಆದಾಯ ತೆರಿಗೆ ಇಲಾಖೆಗೆ ಅವರು ಧನ್ಯವಾದ ಹೇಳಿದ್ದಾರೆ. ತನ್ನ ತಂದೆ ಸಾಯುವ ಮುನ್ನ ತನಗೆ ಸಲ್ಲಿಸಿದ ಕೊನೆಯ ಐಟಿ ರಿಟರ್ನ್ ಅದಾಗಿತ್ತು. ಅವರು ತನಗೆ ಪ್ರಾಮಾಣಿಕತೆ ಕಲಿಸಿದ್ದಾರೆ ಎಂದು ಗ್ರೋವರ್ ಹೇಳಿಕೊಂಡಿದ್ದಾರೆ.

ಸರ್ಕಾರಕ್ಕೆ ತೆರಿಗೆ ಕಟ್ಟುವುದು ಶಿಕ್ಷೆ ಎಂದಿದ್ದ ಉದ್ಯಮಿ ಅಶ್ನೀರ್ ಗ್ರೋವರ್ ಈಗ ಪ್ರಾಮಾಣಿಕ ತೆರಿಗೆ ಪಾವತಿದಾರ
ಅಶ್ನೀರ್ ಗ್ರೋವರ್
Follow us on

ನವದೆಹಲಿ, ಮಾರ್ಚ್ 17: ಭಾರತದ ತೆರಿಗೆ ವ್ಯವಸ್ಥೆ ಬಗ್ಗೆ ಸದಾ ಟೀಕೆಗಳ ಮಳೆ ಸುರಿಸುವ ಉದ್ಯಮಿ ಅಶ್ನೀರ್ ಗ್ರೋವರ್ (Ashneer Grover) ಇದೀಗ ತಮ್ಮನ್ನು ಗೌರವಯುತ ತೆರಿಗೆ ಪಾವತಿದಾರ ಎಂದು ಹೇಳಿಕೊಂಡಿದ್ದಾರೆ. ತಮ್ಮ ತಂದೆ ತನಗೆ ಪ್ರಾಮಾಣಿಕತೆ (honesty) ಕಲಿಸಿರುವುದಾಗಿ ಹೇಳಿರುವ ಅವರು, ಆದಾಯ ತೆರಿಗೆಯಿಂದ ತನ್ನ ಐಟಿ ರಿಟರ್ನ್ಸ್ ಅಸೆಸ್ಮೆಂಟ್ ನಡೆಸಿರುವ ವಿಚಾರವನ್ನು ಪ್ರಸ್ತಾಪಿಸಿ, ಇಲಾಖೆಗೆ ಧನ್ಯವಾದ ಹೇಳಿದ್ದಾರೆ. 2021-22ರ ತನ್ನ ಐಟಿ ರಿಟರ್ನ್​ನ ಫೇಸ್ಲೆಸ್ ಅಸೆಸ್ಮೆಂಟ್​ನ (faceless assessment) ವಿವರವನ್ನು ಆದಾಯ ತೆರಿಗೆ ಸಕಾಲಕ್ಕೆ ಬಹಿರಂಗಗೊಳಿಸಿದೆ. ಅದರಲ್ಲೂ ಯಾವ ತೆರಿಗೆ ಬಾಕಿ ಇಲ್ಲದಿರುವುದನ್ನು ತಿಳಿಸಿದೆ. ಇದಕ್ಕಾಗಿ ಆದಾಯ ತೆರಿಗೆ ಇಲಾಖೆಗೆ ಧನ್ಯವಾದ ಹೇಳುತ್ತೇನೆ ಎಂದು ಭಾರತ್​ಪೇ ಸಂಸ್ಥಾಪಕರೂ ಆದ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಅದೇ ಪೋಸ್ಟ್​ನಲ್ಲಿ ಅವರು ತಮ್ಮನ್ನು ಪ್ರಾಮಾಣಿಕ ತೆರಿಗೆ ಪಾವತಿದಾರ ಎಂದು ಹೇಳಿಕೊಂಡಿದ್ದಾರೆ.

‘ನಾನು ಯಾವಾಗಲೂ ಗೌರವಯುತ ತೆರಿಗೆ ಪಾವತಿದಾರನಾಗಿದ್ದೇನೆ. ನನ್ನ ಸಿಎ ಆಗಿದ್ದ ನನ್ನ ತಂದೆ ಅಶೋಕ್ ಗ್ರೋವರ್ ಸಾಯುವ ಮುನ್ನ ಮಾಡಿದ ಕೊನೆಯ ರಿಟರ್ನ್ (2021-22ರದ್ದು) ಇದಾಗಿತ್ತು. ಅವರು ತೆರಿಗೆ ವಿಷಯದಲ್ಲಿ ಬಹಳ ಖಚಿತವಾಗಿದ್ದರು. ನನ್ನನ್ನು ಪ್ರಾಮಾಣಿಕನನ್ನಾಗಿ ಇಟ್ಟಿದ್ದರು. ನನ್ನ ಪ್ರಕರಣಗಳಲ್ಲಿ ನನಗೆ ರಕ್ಷಣೆ ಇದರಿಂದ ಇನ್ನಷ್ಟು ಹೆಚ್ಚಾಗುತ್ತದೆ,’ ಎಂದು ಕ್ರಿಕ್​ಪೆ ಎಂಬ ಫ್ಯಾಂಟಸಿ ಗೇಮ್​ನ ಸಂಸ್ಥಾಪಕರೂ ಅದ ಅವರು ಬರೆದಿದ್ದಾರೆ.

ಅಶ್ನೀರ್ ಗ್ರೋವರ್ ಮಾಡಿದ ಟ್ವೀಟ್…

ಅಶ್ನೀರ್ ಗ್ರೋವರ್ ಕೆಲ ಅವ್ಯವಹಾರ ಪ್ರಕರಣಗಳಲ್ಲಿ ಆರೋಪ ಎದುರಿಸುತ್ತಿದ್ದಾರೆ. ಇವರು ಹಾಗು ಪತ್ನಿ ಮಾಧುರಿ ಜೈನ್ ಅವರಿಗೆ ವಿದೇಶಕ್ಕೆ ಹೋಗದಂತೆ ಇತ್ತೀಚೆಗೆ ಏರ್​ಪೋರ್ಟ್​ನಲ್ಲಿ ತಡೆಯಲಾಗಿತ್ತು. ದೆಹಲಿ ಪೊಲೀಸ್​ನ ಆರ್ಥಿಕ ಅಪರಾಧ ವಿಭಾಗ, ಇಡಿ ಮೊದಲಾದ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಈ ಸಂದರ್ಭದಲ್ಲಿ ಅಶ್ನೀರ್ ಗ್ರೋವರ್ ಆದಾಯ ತೆರಿಗೆ ಇಲಾಖೆಯಿಂದ ಶೂನ್ಯ ತೆರಿಗೆ ಡಿಮ್ಯಾಂಡ್ ಬಂದಿರುವ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಮದರ್ ಡೈರಿಯಿಂದ ಹಣ್ಣು ಸಂಸ್ಕರಣಾ ಘಟಕ; ಮಹಾರಾಷ್ಟ್ರದಲ್ಲಿ ಬೃಹತ್ ಡೈರಿ; ಒಟ್ಟು 750 ರೂ ಹೂಡಿಕೆ

ತೆರಿಗೆ ಎಂಬುದು ಸರ್ಕಾರದಿಂದ ನೀಡಲಾಗುವ ಶಿಕ್ಷೆ ಎಂದಿದ್ದ ಗ್ರೋವರ್

ಅಶ್ನೀರ್ ಗ್ರೋವರ್ ಇತ್ತೀಚಿನ ವರ್ಷಗಳಲ್ಲಿ ಸರ್ಕಾರದ ಕೆಲ ಹಣಕಾಸು ನೀತಿಗಳನ್ನು ಬಹಿರಂಗವಾಗಿಯೇ ಟೀಕಿಸುತ್ತಿದ್ದಾರೆ. ಭಾರತದಲ್ಲಿ ಉದ್ಯಮಿಗಳಿಗೆ ಪೂರಕವಾದ ವಾತಾವರಣ ಇಲ್ಲ ಎಂದು ಹೇಳಿರುವ ಅವರು, ಸರ್ಕಾರ ಉದ್ಯಮಿಗಳಿಗೆ ಮತ್ತು ಜನಸಾಮಾನ್ಯರಿಗೆ ತೆರಿಗೆ ಶಿಕ್ಷೆ ವಿಧಿಸುತ್ತದೆ ಎಂದಿದ್ದಾರೆ.

ಸರ್ಕಾರದ ದೋಷಪೂರಿತ ತೆರಿಗೆ ವ್ಯವಸ್ಥೆಯಲ್ಲಿ ನಮ್ಮ ಆದಾಯದಲ್ಲಿ ಶೇ. 30-40ರಷ್ಟು ಆದಾಯ ಸರ್ಕಾರಕ್ಕೆ ಹೋಗುತ್ತದೆ. ಅದಕ್ಕೆ ಬದಲಾಗಿ ನಮಗೆ ಯಾವ ಅನುಕೂಲವೂ ಸಿಗುವುದಿಲ್ಲ. ಈ ದೇಶದಲ್ಲಿ ತೆರಿಗೆ ಪಾವತಿದಾರರು ದಾನದಲ್ಲಿ ತೊಡಗಿದ್ದಾರೆ ಎಂದು ಅಶ್ನೀರ್ ಗ್ರೋವರ್ ಇತ್ತೀಚೆಗೆ ಹೇಳಿದ್ದರು.

‘ನಾನು 10 ರುಪಾಯಿ ಗಳಿಸಿದರೆ ಅದರಲ್ಲಿ 4 ರುಪಾಯಿಯನ್ನು ಸರ್ಕಾರ ಇರಿಸಿಕೊಳ್ಳುತ್ತದೆ. ಅಂದರೆ 12 ತಿಂಗಳಲ್ಲಿ ನೀವು ಸರ್ಕಾರಕ್ಕಾಗಿಯೇ 5 ತಿಂಗಳು ದುಡಿಯುತ್ತೀರಿ. ನಿಮ್ಮ ಜೀವನದಲ್ಲಿ ಎಷ್ಟು ವರ್ಷ ನೀವು ಸರ್ಕಾರಕ್ಕೆ ಗುಲಾಮರಾಗಿರಬೇಕು ಹೇಳಿ. ಇದೇ ಹಣೆಬರಹ ಎಂದು ನಾವೆಲ್ಲಾ ಒಪ್ಪಿಬಿಟ್ಟಿದ್ದೇವೆ,’ ಎಂಬುದು ಅಶ್ನೀರ್ ಅನಿಸಿಕೆ.

ಇದನ್ನೂ ಓದಿ: ಭೂಮಿಯಲ್ಲಿ ಎಲ್ಲೇ ಅಡಗಿದರೂ ಕಣ್ತಪ್ಪಿಸಿಕೊಳ್ಳಲಾಗದು: ಅಮೆರಿಕದ ಸ್ಪೇಸ್​ಎಕ್ಸ್​ನಿಂದ ನೂರಾರು ಸೀಕ್ರೆಟ್ ಸೆಟಿಲೈಟ್​ಗಳು

ಉದ್ಯಮಿಗಳಿಗೆ ಇದು ಗೊತ್ತಿರುವುದರಿಂದ ಅವರು ತೆರಿಗೆ ಪಾವತಿಸುವುದಿಲ್ಲ. ಸಂಬಳದಾರ ಉದ್ಯೋಗಿಗಳಿಗೆ ಬೇರೆ ಆಯ್ಕೆಗಳಿಲ್ಲ. ಮೂಲದಲ್ಲೇ ಅವರಿಗೆ ಆದಾಯ ತೆರಿಗೆ ಕಡಿತವಾಗುತ್ತದೆ. ತೆರಿಗೆ ಒಂದು ಶಿಕ್ಷೆಯಂತೆ. ಇದರ ಜೊತೆಗೆ ಶೇ 18ರಷ್ಟು ಜಿಎಸ್​ಟಿ ಬೇರೆ. ಕೊನೆಗೆ, ಯಾರಿಗಾಗಿ ನೀವು ಬದುಕಿದ್ದೀರಿ ಎಂದು ಅನಿಸುತ್ತದೆ,’ ಎಂದು ಅವರು ಮಾರ್ಮಿಕವಾಗಿ ಒಮ್ಮೆ ಹೇಳಿದ್ದರು.

‘ಸರ್ಕಾರವು ವಿದೇಶೀ ಹೂಡಿಕೆದಾರರಿಂದ ಬಿಲಿಯನ್​ಗಟ್ಟಲೆ ಎಫ್​ಡಿಐ ಪಡೆದಿದೆ.ಇದೇ ಹೂಡಿಕೆದಾರರು ಕಾನೂನು ಕಟ್ಟಳೆ ಭಯದಲ್ಲಿ ಭಾರತದಿಂದ ಕಾಲ್ತೆಗೆಯುತ್ತಾರೆ. ಇದು ಆನ್​ಲೈನ್ ಗೇಮ್ ಕ್ಷೇತ್ರ ಮಾತ್ರವಲ್ಲ, ಎಲ್ಲಾ ಸೆಕ್ಟರ್​ಗಳಲ್ಲೂ, ಎಲ್ಲಾ ಸ್ಟಾರ್ಟಪ್​ಗಳಿಗೂ ಆಗುತ್ತದೆ. ಟೆಕ್ ಕಂಪನಿಗಳಿಗೆ ಕಷ್ಟವಾಗುತ್ತದೆ. ಮುಂದೆ ಎಲ್ಲಾ ಟೆಕ್ ಕಂಪನಿಗಳೂ ದುಬೈ ಅಥವಾ ಸಿಂಗಾಪುರದಲ್ಲಿ ನೆಲಸುತ್ತವೆ’ ಎಂದು ಅಶ್ನೀರ್ ಗ್ರೋವರ್ ಅಸಮಾಧಾನ ತೋರ್ಪಡಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:12 pm, Sun, 17 March 24