ಅಸಂಘಟಿತ ವಲಯದಲ್ಲಿ ಕೆಲಸ ನಿರ್ವಹಿಸುವವರಿಗೆ ಭದ್ರತೆ ಒದಗಿಸುವ ದೃಷ್ಟಿಯಿಂದ ರೂಪಿಸಿರುವ ಯೋಜನೆ ಅಟಲ್ ಪೆನ್ಷನ್ ಯೋಜನೆ (APY). 18ರಿಂದ 40 ವರ್ಷ ವಯಸ್ಸಿನ ಭಾರತೀಯ ನಾಗರಿಕರಿಗಾಗಿ ಈ ಯೋಜನೆ ಇದೆ. ಇದನ್ನು ನಿರ್ವಹಣೆ ಮಾಡುವುದು ಪೆನ್ಷನ್ ಫಂಡ್ ನಿಯಂತ್ರಕವಾದ ಪೆನ್ಷನ್ ಫಂಡ್ ರೆಗ್ಯುಲೇಟರಿ ಅಂಡ್ ಡೆವಲಪ್ಮೆಂಟ್ ಅಥಾರಿಟಿ (PFRDA). ಅಟಲ್ ಪೆನ್ಷನ್ ಯೋಜನಾ ಮೂಲಕ ತಿಂಗಳಿಗೆ 5000 ರೂಪಾಯಿ ಪೆನ್ಷನ್ ಬರುತ್ತದೆ; ಅದು ಕೂಡ 60 ವರ್ಷದ ನಂತರ. ಅದಕ್ಕೂ ಮುಂಚೆ 60 ವರ್ಷ ತುಂಬುದ ತನಕ, ಕನಿಷ್ಠ 20 ವರ್ಷಗಳ ಕಾಲ ಕೊಡುಗೆಯನ್ನು ಕಟ್ಟಿರಬೇಕು. ಅಟಲ್ ಪೆನ್ಷನ್ ಯೋಜನೆ ಅಡಿಯಲ್ಲಿ ಚಂದಾದಾರರಿಗೆ ತಿಂಗಳಿಗೆ 1000 ರೂಪಾಯಿಯಿಂದ 5000 ರೂಪಾಯಿ ತನಕ ಪೆನ್ಷನ್ ಬರುತ್ತದೆ.
ಈ ಯೋಜನೆಯ ಚಂದಾದಾರರು ಕಡ್ಡಾಯವಾಗಿ ಬ್ಯಾಂಕ್ ಖಾತೆ ಹೊಂದಿರಬೇಕು. ಅದು ಆಧಾರ್ ಮತ್ತು ಮೊಬೈಲ್ ಸಂಖ್ಯೆ ಜತೆ ಜೋಡಣೆ ಆಗಿರಬೇಕು. ಅವಧಿಗೆಪೂರ್ವವಾಗಿ ಪೆನ್ಷನ್ ಪಾವತಿ ಮತ್ತು ಎಪಿವೈನಿಂದ ಹೊರಬರುವುದಕ್ಕೆ ಅವಕಾಶ ಇಲ್ಲ. ಆದರೆ ಖಾತೆದಾರರಿಗೆ ಕಾಯಿಲೆ ಅಥವಾ ಸಾವು ಸಂಭವಿಸಿದಲ್ಲಿ ಅಂಥ ಸಂದರ್ಭದಲ್ಲಿ ಮಾತ್ರ ಅವಕಾಶ ಇದೆ. ನೆನಪಿಟ್ಟುಕೊಳ್ಳಬೇಕಾದ ಅಂಶ ಏನೆಂದರೆ, ಚಿಕ್ಕ ವಯಸ್ಸಿನಲ್ಲೇ ಪೆನ್ಷನ್ ಸ್ಕೀಮ್ಗೆ ನೋಂದಣಿ ಮಾಡಿದರೆ ಹೆಚ್ಚಿನ ಮೊತ್ತವನ್ನು ಕಟ್ಟುವ ಅಗತ್ಯ ಇಲ್ಲ. ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚು ಸದಸ್ಯರು ಪಿಎಫ್ಆರ್ಡಿಎ ಪೆನ್ಷನ್ ಯೋಜನೆಗೆ ಅಪ್ಲೈ ಮಾಡಬಹುದು. ಆದರೆ ಆರಂಭದ ವಯಸ್ಸು 18ರಿಂದಲೇ ಶುರು ಮಾಡಬಹುದು.
ಚಂದಾದಾರರು ತಿಂಗಳಿಗೆ 210 ರೂಪಾಯಿ ಕೊಡುಗೆಯೊಂದಿಗೆ ಶುರು ಮಾಡಬಹುದು. 60ನೇ ವಯಸ್ಸಿನ ತನಕ ಕಟ್ಟುತ್ತಾರೆ. 39 ವರ್ಷ ವಯಸ್ಸಿನೊಳಗೆ ಇರುವ ವಿವಾಹಿತರು ಈ ಯೋಜನೆಗೆ ಪ್ರತ್ಯೇಕವಾಗಿ ಅಪ್ಲೈ ಮಾಡಬಹುದು. ಇದರಿಂದಾಗಿ ಈ ದಂಪತಿಗೆ ಒಟ್ಟಾರೆಯಾಗಿ 60 ವರ್ಷಗಳ ನಂತರ ಪ್ರತಿ ತಿಂಗಳು 10,000 ರೂಪಾಯಿ ಬರುತ್ತದೆ. ಗಂಡ- ಹೆಂಡತಿ 30 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರು 577 ರೂಪಾಯಿಯನ್ನು ತಮ್ಮ ಎಪಿವೈ ಖಾತೆಗೆ ಜಮೆ ಮಾಡಿದರೆ ಆಯಿತು. ಅದೇ ಆ ದಂಪತಿಯ ವಯಸ್ಸು 35 ವಯಸ್ಸಾದಲ್ಲಿ ತಿಂಗಳ ಕೊಡುಗೆ 902 ಆಗುತ್ತದೆ.
ಖಾತ್ರಿ ತಿಂಗಳ ಪೆನ್ಷನ್ ಮಾತ್ರವಲ್ಲದೆ, ಒಂದು ವೇಳೆ ಚಂದಾದಾರರು ಮೃತಪಟ್ಟರೆ ಸಂಗಾತಿಗೆ 8.5 ಲಕ್ಷ ರೂಪಾಯಿ ತನಕ ಬರುತ್ತದೆ. ಇದರ ಜತೆಗೆ ಪ್ರತಿ ತಿಂಗಳು ಪೆನ್ಷನ್ ಕೂಡ ಬರುವುದು ಮುಂದುವರಿಯುತ್ತದೆ. ಪೆನ್ಷನ್ ಮೊತ್ತ ಎಷ್ಟು ಬರಬೇಕು ಎಂಬುದನ್ನು ಗಣನೆಗೆ ತೆಗೆದುಕೊಂಡು, ವಯಸ್ಸಿನ ಆಧಾರದಲ್ಲಿ ಮೂರು ತಿಂಗಳಿಗೆ ಒಮ್ಮೆ ಇಂತಿಷ್ಟು ಮೊತ್ತ ಎಂದು ನಿರ್ದಿಷ್ಟವಾಗಿ ಕಟ್ಟಬೇಕಾಗುತ್ತದೆ. ವಯಸ್ಸು ಹೆಚ್ಚಿದಂತೆಲ್ಲ ಈ ಮೊತ್ತ ಸಹ ಹೆಚ್ಚುತ್ತದೆ.
ಇದನ್ನೂ ಓದಿ: ಪೆನ್ಷನ್ ಫಂಡ್ ಆಸ್ತಿ ನಿರ್ವಹಣೆ ಮೌಲ್ಯ ದಾಖಲೆಯ 6 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು
ಇದನ್ನೂ ಓದಿ: ನ್ಯಾಷನಲ್ ಪೆನ್ಷನ್ ಸಿಸ್ಟಮ್, ಅಟಲ್ ಪೆನ್ಷನ್ ಯೋಜನಾ ಚಂದಾದಾರರ ಸಂಖ್ಯೆ ಶೇ 22 ಹೆಚ್ಚಳ
(Atal Pension Yojana Husband And Wife Can Get Up to Rs 10000 Per Month )
Published On - 11:40 am, Thu, 29 July 21