AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೆನ್ಷನ್ ಫಂಡ್ ಆಸ್ತಿ ನಿರ್ವಹಣೆ ಮೌಲ್ಯ ದಾಖಲೆಯ 6 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು

ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಡಿ ನಿರ್ವಹಣೆಯಲ್ಲಿರುವ ಸ್ವತ್ತಿನ ಮೌಲ್ಯ 6 ಲಕ್ಷ ಕೋಟಿ ರೂಪಾಯಿ ಮಟ್ಟ ದಾಟಿದೆ ಎಂಬ ಮಾಹಿತಿಯನ್ನು ನೀಡಲಾಗಿದೆ.

ಪೆನ್ಷನ್ ಫಂಡ್ ಆಸ್ತಿ ನಿರ್ವಹಣೆ ಮೌಲ್ಯ ದಾಖಲೆಯ 6 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು
ಪ್ರಾತಿನಿಧಿಕ ಚಿತ್ರ
Follow us
Srinivas Mata
|

Updated on: May 26, 2021 | 9:45 PM

ನವದೆಹಲಿ: ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಡಿ ನಿರ್ವಹಣೆಯಲ್ಲಿರುವ ಸ್ವತ್ತಿನ ಮೌಲ್ಯ 6 ಲಕ್ಷ ಕೋಟಿ ರೂಪಾಯಿ ಮಟ್ಟ ದಾಟಿದೆ. ರಾಷ್ಟ್ರೀಯ ಪಿಂಚಣಿ ಯೋಜನೆ ಮತ್ತು ಅಟಲ್ ಪಿಂಚಣಿ ಯೋಜನೆಯ ಚಂದಾದಾರರ ಕೊಡುಗೆಯಿಂದ ಈ ಮೊತ್ತಕ್ಕೆ ಏರಿಕೆಯಾಗಿದೆ. 8,791 ಕಾರ್ಪೊರೇಟ್ ಸಂಸ್ಥೆಗಳ ನೋಂದಣಿಯಿಂದ ರಾಷ್ಟ್ರೀಯ ಪಿಂಚಣಿ ಯೋಜನೆ (NPS)ಗೆ 2021ರ ಮೇ 21ರ ವರೆಗೆ 11.53 ಲಕ್ಷ ಚಂದಾದಾರರ ಸೇರ್ಪಡೆ ಆಗಿದೆ ಎಂದು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಪಿಎಫ್ಆರ್​ಡಿಎ ಬುಧವಾರ ಪ್ರಕಟಿಸಿದೆ. ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್​ಪಿಎಸ್) ಮತ್ತು ಅಟಲ್ ಪಿಂಚಣಿ ಯೋಜನೆ(ಎಪಿವೈ) ಆರಂಭವಾದ 13 ವರ್ಷಗಳ ನಂತರ ಈ ಬೃಹತ್ ಮೊತ್ತದ ಸ್ವತ್ತು ಪ್ರಾಧಿಕಾರದ ನಿರ್ವಹಣೆಯಲ್ಲಿದೆ. ಕೇವಲ 6 ತಿಂಗಳ ಅವಧಿಯಲ್ಲಿ 1 ಲಕ್ಷ ಕೋಟಿ ರೂಪಾಯಿ ಸ್ವತ್ತು ಕ್ರೋಡೀಕರಣವಾಗಿದೆ ಎಂದು ಅದು ತಿಳಿಸಿದೆ.

ರಾಷ್ಟ್ರೀಯ ಪಿಂಚಣಿ ಯೋಜನೆಯ ಚಂದಾದಾರರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುತ್ತಲೇ ಇದ್ದು, ಗಣನೀಯ ಪ್ರಗತಿ ಕಂಡುಬಂದಿದೆ. ಈ ಯೋಜನೆಗೆ 74.10 ಲಕ್ಷ ಸರ್ಕಾರಿ ನೌಕರರು ನೋಂದಣಿ ಆಗಿದ್ದಾರೆ. ಸರ್ಕಾರೇತರ ವಲಯದಿಂದ 28.37 ಲಕ್ಷ ನೌಕರರು ಸೇರ್ಪಡೆ ಆಗಿದ್ದಾರೆ. ಇದರೊಂದಿಗೆ ಪಿಎಫ್ಆರ್​ಡಿಎಗೆ ನೋಂದಣಿ ಆಗಿರುವ ಒಟ್ಟು ಚಂದಾದಾರರ ನೆಲೆ ಅಥವಾ ಸಂಖ್ಯೆ ಇದೀಗ 4.28 ಕೋಟಿಗೆ ಹೆಚ್ಚಳವಾಗಿದೆ.

ಪಿಎಫ್​ಆರ್​ಡಿಎ ಅಧ್ಯಕ್ಷ ಸುಪ್ರತಿಮ್ ಬಂಡೋಪಾಧ್ಯಾಯ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, “ನಿರ್ವಹಣೆಯಲ್ಲಿರುವ ಸ್ವತ್ತಿನ ಮೌಲ್ಯ 6 ಲಕ್ಷ ಕೋಟಿ ರೂಪಾಯಿ ಗಡಿ ದಾಟಿ ಹೊಸ ಮೈಲುಗಲ್ಲು ಸ್ಥಾಪಿಸಿರುವುದು ನಮಗೆ ಅತೀವ ಸಂತಸ ತಂದಿದೆ. ಕೇವಲ 7 ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ, ಅಂದರೆ 2020 ಅಕ್ಟೋಬರ್​ನಲ್ಲಿ ನಮ್ಮ ಸ್ವತ್ತಿನ ಮೌಲ್ಯ 5 ಲಕ್ಷ ಕೋಟಿ ರೂಪಾಯಿ ಇತ್ತು. ಪಿಎಫ್​ಆರ್​ಡಿಎ ಮತ್ತು ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ನಂಬಿಕೆಯ ಚಂದಾದಾರರು ಇದ್ದಾರೆ ಎಂಬುದನ್ನು ಈ ಸಾಧನೆ ಬಿಂಬಿಸುತ್ತಿದೆ. ಕೋವಿಡ್-19 ಸಾಂಕ್ರಾಮಿಕ ಸೋಂಕಿನ ಕಾಲಘಟ್ಟದಲ್ಲಿ ಜನರು ತಮ್ಮ ಆರ್ಥಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಿವೃತ್ತಿ ಯೋಜನೆಗೆ ಆದ್ಯತೆ ನೀಡುತ್ತಿರುವುದು ಹೆಚ್ಚಾಗಿ ಕಂಡುಬರುತ್ತಿದೆ,” ಎಂದು ತಿಳಿಸಿದ್ದಾರೆ. 2021ರ ಮೇ 21ರ ವರೆಗೆ ಅನ್ವಯವಾಗುವಂತೆ, ರಾಷ್ಟ್ರೀಯ ಪಿಂಚಣಿ ಯೋಜನೆ ಮತ್ತು ಅಟಲ್ ಪಿಂಚಣಿ ಯೋಜನೆಗೆ ಒಟ್ಟು 4.28 ಕೋಟಿ ಚಂದಾದಾರರು ನೋಂದಣಿ ಆಗಿದ್ದಾರೆ.

ಪಿಎಫ್​ಆರ್​ಡಿಎ ಬಗ್ಗೆ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ಶಾಸನಬದ್ಧ ಸಂಸ್ಥೆಯಾಗಿದೆ. ಸಂಸತ್​ನಲ್ಲಿ ಕಾಯ್ದೆ ರೂಪಿಸಿ, ಈ ಪ್ರಾಧಿಕಾರ ಸ್ಥಾಪಿಸಲಾಗಿದೆ. ರಾಷ್ಟ್ರೀಯ ಪಿಂಚಣಿ ನಿಧಿ, ಅಟಲ್ ಪಿಂಚಣಿ ನಿಧಿ ಸೇರಿದಂತೆ ಈ ಕಾಯ್ದೆಗೆ ಅನ್ವಯವಾಗುವ ನಾನಾ ಪಿಂಚಣಿ ಯೋಜನೆಗಳ ನಿಯಂತ್ರಣ, ಉತ್ತೇಜನ ಮತ್ತು ಕ್ರಮಬದ್ಧ ಬೆಳವಣಿಗೆಯನ್ನು ಖಾತ್ರಿಪಡಿಸುವುದು ಪ್ರಾಧಿಕಾರದ ಜವಾಬ್ದಾರಿಯಾಗಿದೆ. ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಆರಂಭದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆಂದೇ 2004ರ ಜನವರಿ 1ರಿಂದ ಅನ್ವಯವಾಗುವಂತೆ ಆರಂಭಿಸಲಾಗಿದೆ. ಈ ಯೋಜನೆಯನ್ನು ಬಹುತೇಕ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಹ ನೌಕರ ವರ್ಗಕ್ಕೆ ಅಳವಡಿಸಿಕೊಂಡಿವೆ. ಈ ಯೋಜನೆಯನ್ನು ಎಲ್ಲಾ ಭಾರತೀಯ ನಾಗರಿಕರಿಗೆ (ನಿವಾಸಿಗಳು, ಅನಿವಾಸಿ ಭಾರತೀಯರು ಮತ್ತು ಸಾಗರೋತ್ತರ ಭಾರತೀಯರು) ಮತ್ತು ಕಾರ್ಪೊರೇಟ್ ಸಂಸ್ಥೆಗಳಿಗೆ ಸ್ವಯಂಪ್ರೇರಿತ ಮನವಿಗಳ ಆಧಾರದಲ್ಲಿ ವಿಸ್ತರಿಸಲಾಗಿದೆ.

ಇದನ್ನೂ ಓದಿ: ನ್ಯಾಷನಲ್ ಪೆನ್ಷನ್ ಸಿಸ್ಟಮ್, ಅಟಲ್ ಪೆನ್ಷನ್ ಯೋಜನಾ ಚಂದಾದಾರರ ಸಂಖ್ಯೆ ಶೇ 22 ಹೆಚ್ಚಳ

(PFRDA manages asset valuation of more than Rs 6 lakh crore valuation, according to government)