ಲಕ್ಷದ್ವೀಪಕ್ಕೆ ಬೆಂಗಳೂರಿನಿಂದ ನೇರ ಫ್ಲೈಟ್; ಮಾರ್ಚ್ 31ರಿಂದ ಇಂಡಿಗೋದಿಂದ ವಿಮಾನ ಹಾರಾಟ

Bangalore to Lakshadweep Direct Flight Service: ಇಂಡಿಗೋ ಏರ್ಲೈನ್ ಸಂಸ್ಥೆ ಬೆಂಗಳೂರಿನಿಂದ ಲಕ್ಷದ್ವೀಪಕ್ಕೆ ನೇರ ಫ್ಲೈಟ್ ಆರಂಭಿಸುತ್ತಿದೆ. ಕೊಚ್ಚಿಯಲ್ಲಿ ನಿಲುಗಡೆ ಇಲ್ಲದೇ ನೇರ ಲಕ್ಷದ್ವೀಪಕ್ಕೆ ಕರೆದೊಯ್ಯುವ ಇಂಡಿಗೋ ಫ್ಲೈಟ್ ಮಾರ್ಚ್ 31ಕ್ಕೆ ಶುರುವಾಗುತ್ತದೆ. ಮೇಕ್ ಮೈ ಟ್ರಿಪ್​ನಲ್ಲಿರುವ ಮಾಹಿತಿ ಪ್ರಕಾರ ಈ ಫ್ಲೈಟ್ ಟಿಕೆಟ್ ಬೆಲೆ 6,999 ರೂ ಇದೆ. ಸದ್ಯ ಇರುವ ಸಂದರ್ಭದಲ್ಲಿ ಲಕ್ಷದ್ವೀಪಕ್ಕೆ ಹೋಗುವವರು ಕೊಚ್ಚಿ ಏರ್​ಪೋರ್ಟ್​ನಲ್ಲಿ ಇಳಿದು ಅಲ್ಲಿ ಮತ್ತೊಂದು ಫ್ಲೈಟ್ ಮೂಲಕ ಲಕ್ಷದ್ವೀಪಕ್ಕೆ ಹೋಗಬೇಕಿತ್ತು.

ಲಕ್ಷದ್ವೀಪಕ್ಕೆ ಬೆಂಗಳೂರಿನಿಂದ ನೇರ ಫ್ಲೈಟ್; ಮಾರ್ಚ್ 31ರಿಂದ ಇಂಡಿಗೋದಿಂದ ವಿಮಾನ ಹಾರಾಟ
ಇಂಡಿಗೋ ವಿಮಾನ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 18, 2024 | 5:51 PM

ನವದೆಹಲಿ, ಮಾರ್ಚ್ 18: ಲಕ್ಷದ್ವೀಪಕ್ಕೆ ಪ್ರವಾಸ ಹೋಗಬಯಸುವ ಬೆಂಗಳೂರು ಸುತ್ತಮುತ್ತಲಿನ ಜನರಿಗೆ ಖುಷಿಯ ಸುದ್ದಿ. ಬೆಂಗಳೂರಿನಿಂದ ಲಕ್ಷದ್ವೀಪಕ್ಕೆ ನೇರ ಫ್ಲೈಟ್ (Bengaluru to Lakshadweep direct flight) ಆರಂಭಿಸಲಾಗುತ್ತಿದೆ. ಇಂಡಿಗೋ ಸಂಸ್ಥೆ ಲಕ್ಷದ್ವೀಪದ ಅಗತ್ತಿ ವಿಮಾನ ನಿಲ್ದಾಣಕ್ಕೆ (Agatti airport) ಬೆಂಗಳೂರಿನಿಂದ ನೇರ ಫ್ಲೈಟ್ ಸೇವೆಯನ್ನು ಮಾರ್ಚ್ 31ರಿಂದ ನಡೆಸುತ್ತಿದೆ. ಈ ವಿಮಾನದಲ್ಲಿ 78 ಸೀಟುಗಳು ಇರುತ್ತವೆ. ಬೆಂಗಳೂರಿನಿಂದ ಈ ಫ್ಲೈಟ್​ನಲ್ಲಿ ಹೊರಟರೆ ಕೊಚ್ಚಿಯಲ್ಲಿ ಇಳಿದು ವಿಮಾನ ಬದಲಿಸುವ ಅಗತ್ಯ ಇರುವುದಿಲ್ಲ. ನೇರವಾಗಿ ಅಗತ್ತಿ ವಿಮಾನ ನಿಲ್ದಾಣ ತಲುಪಬಹುದು.

ಇಂಡಿಗೋ ವಿಮಾನ ಸಂಸ್ಥೆಯ 2,000ಕ್ಕೂ ಹೆಚ್ಚು ವಿಮಾನಗಳು ನಿತ್ಯ ಸಂಚರಿಸುತ್ತವೆ. ಒಟ್ಟು 121 ಸ್ಥಳಗಳಿಗೆ ವಿಮಾನ ಸೇವೆ ನೀಡುತ್ತಿದೆ. ಭಾರತದಲ್ಲಿ ಸ್ಥಳಗಳಿಗೆ ಅದರ ವಿಮಾನಗಳ ಸಂಚಾರ ಇದೆ. ಅಗತ್ತಿಗೆ ಇಂಡಿಗೋ ವಿಮಾನ ಹೋಗುತ್ತಿರುವುದು ಇದೇ ಮೊದಲು.

ಇದನ್ನೂ ಓದಿ: ಹಣ ಮಾಡುವ ಆಸೆಯಿಂದ ಉದ್ದಿಮೆ ಸ್ಥಾಪಿಸಿದರೆ ಸೋಲುತ್ತೀರಿ: ಜೊಮಾಟೊ ಸಿಇಒ ದೀಪಿಂದರ್ ಗೋಯಲ್

ಈ ಮುಂಚೆ ಲಕ್ಷದ್ವೀಪಕ್ಕೆ ವಿಮಾನದ ಮೂಲಕ ಹೋಗಬೇಕೆಂದರೆ ಕನಿಷ್ಠ ಎರಡು ವಿಮಾನಗಳನ್ನಾದರೂ ಹತ್ತಬೇಕಿತ್ತು. ಕೊಚ್ಚಿ ವಿಮಾನ ನಿಲ್ದಾಣಕ್ಕೆ ಹೋಗಿ ಅಲ್ಲಿಂದ ಬೇರೆ ಫ್ಲೈಟ್​ನಲ್ಲಿ ಲಕ್ಷದ್ವೀಪಕ್ಕೆ ಹೋಗಬೇಕಿತ್ತು. ಲಕ್ಷದ್ವೀಪದಲ್ಲಿ ಸದ್ಯ ವಿಮಾನ ನಿಲ್ದಾಣ ಇರುವುದು ಅಗತ್ತಿ ದ್ವೀಪದಲ್ಲಿ ಮಾತ್ರವೇ. ಮಿನಿಕಾಯ್ ದ್ವೀಪದಲ್ಲಿ ಇನ್ನೊಂದು ವಿಮಾನ ನಿಲ್ದಾಣ ನಿರ್ಮಿಸುವ ಯೋಜನೆಯನ್ನು ಸರ್ಕಾರ ಹಾಕಿದೆ. ಈ ಮಿನಿಕೋಯ್ ಏರ್ಪೋರ್ಟ್ ಅನ್ನು ಮಿಲಿಟರಿ ವಾಯು ನೆಲೆಯಾಗಿ ಮಾಡಿಕೊಳ್ಳುವ ಸಾಧ್ಯತೆ ಇದೆ.

ಲಕ್ಷದ್ವೀಪ ಇತ್ತೀಚಿನ ದಿನಗಳಲ್ಲಿ ಭಾರತೀಯರ ಆಸಕ್ತಿ ಕೆರಳಿಸಿದೆ. ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪಕ್ಕೆ ಭೇಟಿ ಕೊಟ್ಟಾಗಿನಿಂದ ಅದು ಟ್ರೆಂಡಿಂಗ್​ನಲ್ಲಿ ಇದೆ. ಮಾಲ್ಡೀವ್ಸ್ ಪ್ರವಾಸಕ್ಕೆ ಹೋಗಬಯಸುವರಲ್ಲಿ ಬಹಳಷ್ಟು ಜನರು ತಮ್ಮ ಪ್ಲಾನ್ ಬದಲಿಸಿ ಲಕ್ಷದ್ವೀಪದತ್ತ ಮನಸು ಮಾಡುತ್ತಿದ್ದಾರೆ ಎನ್ನುವಂತಹ ಸುದ್ದಿ ಇದೆ. ಹೀಗಾಗಿ, ಲಕ್ಷದ್ವೀಪಕ್ಕೆ ವಿಮಾನ ಸೇವೆಗೆ ಬೇಡಿಕೆ ಹೆಚ್ಚುತ್ತಿದೆ.

ಇದನ್ನೂ ಓದಿ: ನಾಲ್ಕು ತಿಂಗಳ ಮೊಮ್ಮಗನಿಗೆ 240 ಕೋಟಿ ರೂ ಮೌಲ್ಯದ ಷೇರುಗಳನ್ನು ಗಿಫ್ಟ್ ಆಗಿ ಕೊಟ್ಟ ಇನ್ಫೋಸಿಸ್ ನಾರಾಯಣಮೂರ್ತಿ

ಸದ್ಯ ಬೆಂಗಳೂರಿನಿಂದ ಅಲಾಯನ್ಸ್ ಏರ್ ಮತ್ತು ಇಂಡಿಗೋ ಏರ್ಲೈನ್ಸ್ ಸಂಸ್ಥೆಗಳು ಮಾತ್ರವೇ ಲಕ್ಷದ್ವೀಪಕ್ಕೆ ವಿಮಾನ ಹಾರಾಟ ಸೇವೆ ನಡೆಸುತ್ತಿರುವುದು. ಬೆಂಗಳೂರಿನಿಂದ ಟಿಕೆಟ್ ಬೆಲೆ ಒಬ್ಬರಿಗೆ 11,000 ರೂನಿಂದ 15,000 ರೂ ಆಗುತ್ತದೆ. ಆದರೆ ಲಕ್ಷದ್ವೀಪಕ್ಕೆ ನಾನ್​ಸ್ಟಾಪ್ ಇಂಡಿಗೋ ಫ್ಲೈಟ್​ನ ಟಿಕೆಟ್ ಬೆಲೆ ಕೇವಲ 6,999 ರೂ ಮಾತ್ರವೇ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ