ಢಾಕಾ, ನವೆಂಬರ್ 14: ಬಾಂಗ್ಲಾದೇಶದ ಗಾರ್ಮೆಂಟ್ ಫ್ಯಾಕ್ಟರಿ ಉದ್ಯೋಗಿಗಳು (garments factory workers) ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಕನಿಷ್ಠ ವೇತನವನ್ನು ಹೆಚ್ಚಿಸಬೇಕೆಂದು ಅಲ್ಲಿ ಕಳೆದ ತಿಂಗಳಿಂದ ನಡೆಯುತ್ತಿರುವ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿವೆ. 70ಕ್ಕೂ ಹೆಚ್ಚು ಫ್ಯಾಕ್ಟರಿಗಳನ್ನು ಕಾರ್ಮಿಕರು ಹಾನಿಗೆಡವಿದ್ದಾರೆ. ಪ್ರತಿಭಟನೆಯಲ್ಲಿ ಮೂವರು ಕಾರ್ಮಿಕರು ಬಲಿಯಾಗಿದ್ದಾರೆ. 150 ಗಾರ್ಮೆಂಟ್ ಫ್ಯಾಕ್ಟರಿಗಳು ಅನಿರ್ದಿಷ್ಟಾವಧಿಯವರೆಗೆ ಬಾಗಿಲು ಬಂದ್ ಮಾಡಿಕೊಂಡಿವೆ. ಇದು ಬಾಂಗ್ಲಾದೇಶ ಸರ್ಕಾರವನ್ನ ತಲ್ಲಣಗೊಳಿಸಿದೆ. ಭಾರತದಲ್ಲಿ ಇಂಥ ಹತ್ತು ಹಲವು ಪ್ರತಿಭಟನೆಗಳು ವರ್ಷಂಪ್ರತಿ ನಡೆಯುತ್ತಲೇ ಇರುತ್ತದೆ. ಬಾಂಗ್ಲಾದೇಶದ್ದೇನು ವಿಶೇಷ ಎನಿಸಬಹುದು. ಆದರೆ, ಬಾಂಗ್ಲಾದೇಶದ ಆರ್ಥಿಕತೆಗೆ ಗಾರ್ಮೆಂಟ್ ಫ್ಯಾಕ್ಟರಿಗಳೇ ಬೆನ್ನೆಲುಬು.
ಬಾಂಗ್ಲಾದೇಶ ಒಂದು ವರ್ಷದಲ್ಲಿ ಮಾಡುವ ರಫ್ತು 55 ಬಿಲಿಯನ್ ಡಾಲರ್ನಷ್ಟಿದೆ. ಇದರಲ್ಲಿ ಗಾರ್ಮೆಂಟ್ ಉದ್ಯಮದ ಕೊಡುಗೆಯೇ ಶೇ. 85ರಷ್ಟಿದೆ. ಅಂದರೆ, ಭಾರತಕ್ಕೆ ಐಟಿ ಸೆಕ್ಟರ್ ಹೇಗೋ ಹಾಗೆ ಬಾಂಗ್ಲಾದೇಶಕ್ಕೆ ಗಾರ್ಮೆಂಟ್ಸ್ ಸೆಕ್ಟರ್. ಬಾಂಗ್ಲಾದಲ್ಲಿ ಒಟ್ಟು 3,500 ಗಾರ್ಮೆಂಟ್ಸ್ ಫ್ಯಾಕ್ಟರಿಗಳಿವೆ. ಲೆವಿಸ್, ಝಾರಾ, ಎಚ್ ಅಂಡ್ ಎಂ ಇತ್ಯಾದಿ ವಿಶ್ವಖ್ಯಾತ ಫ್ಯಾಷನ್ ಬ್ರ್ಯಾಂಡ್ಗಳು ಬಾಂಗ್ಲಾದೇಶಕ್ಕೆ ಔಟ್ಸೋರ್ಸ್ ಮಾಡುತ್ತಿವೆ.
ಇದನ್ನೂ ಓದಿ: ಅಮೆರಿಕ, ಯೂರೋಪ್ನಲ್ಲಿ ಬಜೆಟ್ ಕಡಿಮೆ ಆದರೂ ನಾರ್ಡಿಕ್ ದೇಶಗಳಿಂದ ಭಾರತೀಯ ಐಟಿ ಕಂಪನಿಗಳಿಗೆ ಸಖತ್ ಬಿಸಿನೆಸ್
ಬಾಂಗ್ಲಾದೇಶದ 3,500 ಗಾರ್ಮೆಂಟ್ಸ್ ಫ್ಯಾಕ್ಟರಿಗಳಲ್ಲಿ 40,00,000 ಕೆಲಸಗಾರರಿದ್ದಾರೆ. ಇವರಲ್ಲಿ ಹೆಚ್ಚಿನವರು ಮಹಿಳೆಯರೇ ಆಗಿದ್ದಾರೆ. ಇವರ ತಿಂಗಳ ಆರಂಭಿಕ ಸಂಬಳ 8,300 ಟಾಕಾ. ಅಂದರೆ ಸುಮಾರು 6,200 ರೂ ಮಾತ್ರವೇ. ಈ ಸಂಬಳವನ್ನು ಹೆಚ್ಚಿಸಬೇಕೆಂದು ಅಲ್ಲಿ ಉಗ್ರ ಹೋರಾಟವೇ ನಡೆಯುತ್ತಿದೆ.
ಗಾರ್ಮೆಂಟ್ಸ್ ಉದ್ಯೋಗಿಗಳ ವೇತನ ಪರಿಷ್ಕಾರಕ್ಕಾಗಿ ಅಲ್ಲಿನ ಸರ್ಕಾರ ಸಮಿತಿಯಿಂದನ್ನು ರಚಿಸಿತ್ತು. ಅದು ಕನಿಷ್ಠ ವೇತನವನ್ನು 12,500 ರೂ ಹೆಚ್ಚಿಸುವಂತೆ ಶಿಫಾರಸು ಮಾಡಿತು. ಆದರೆ, ಬಾಂಗ್ಲಾದೇಶದ ಗಾರ್ಮೆಂಟ್ಸ್ ಉದ್ಯೋಗಿಗಳು ಈ ಏರಿಕೆಯನ್ನು ತಿರಸ್ಕರಿಸಿದ್ದಾರೆ. ಕನಿಷ್ಠ ವೇತನ 23,000 ಟಾಕಾ (ಸುಮಾರು 17,000 ರೂ) ಇರಬೇಕೆಂದು ಬೇಡಿಕೆ ಇಟ್ಟಿದ್ದಾರೆ.
ಇದನ್ನೂ ಓದಿ: ಅರ್ಜೆಂಟೀನಾದಲ್ಲಿ ಭೀಕರ ಹಣದುಬ್ಬರ; ಉಟ್ಟ ಉಡುಗೆ ಮಾರಿ ಜೀವನ ನಡೆಸಬೇಕಾದ ಸ್ಥಿತಿ
ಕಳೆದ ವಾರ ಬಾಂಗ್ಲಾದೇಶಾದ್ಯಂತ 15,000 ಗಾರ್ಮೆಂಟ್ಸ್ ಉದ್ಯೋಗಿಗಳ ಪ್ರತಿಭಟನೆ ನಡೆದು ಪೊಲೀಸರೊಂದಿಗೆ ಘರ್ಷಣೆ ಆಗಿತ್ತು. ಟುಸುಕಾ ಸೇರಿದಂತೆ ಹಲವಾರು ಫ್ಯಾಕ್ಟರಿಗಳಿಗೆ ನುಗ್ಗಿ ಕಾರ್ಮಿಕರು ಹಾನಿ ಮಾಡಿದ್ದರು. ಈ ದಾಂದಲೆಯಲ್ಲಿ ಪೊಲೀಸರು 11,000 ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಕಾರ್ಮಿಕ ಪ್ರತಿಭಟನೆ ಇನ್ನಷ್ಟು ವಿಕೋಪಕ್ಕೆ ಹೋಗಬಹುದು ಎಂದು ಭಾವಿಸಿ ಅಶುಲಿಯಾ, ಘಾಜಿಪುರ್ ಪಟ್ಟಣಗಳಲ್ಲಿ 150 ಗಾರ್ಮೆಂಟ್ಸ್ ಫ್ಯಾಕ್ಟರಿಗಳು ಅನಿರ್ದಿಷ್ಟಾವಧಿಯವರೆಗೆ ಮುಚ್ಚಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ