ಬೆಂಗಳೂರು, ಅಕ್ಟೋಬರ್ 16: ಸರ್ಕಾರಿ ಸ್ವಾಮ್ಯದ ಬೆಮೆಲ್ ಸಂಸ್ಥೆಗೆ ಬುಲೆಟ್ ಟ್ರೈನ್ ತಯಾರಿಸುವ ಮಹತ್ವದ ಗುತ್ತಿಗೆ ಸಿಕ್ಕಿದೆ. ವರದಿ ಪ್ರಕಾರ ಬೆಮೆಲ್ ಎರಡು ಹೈಸ್ಪೀಡ್ ಟ್ರೈನ್ಗಳನ್ನು ತಯಾರಿಸಿಕೊಡಲಿದೆ. ಇದು 866.87 ಕೋಟಿ ರೂ ಮೊತ್ತದ ಗುತ್ತಿಗೆಯಾಗಿದೆ. ಟ್ರೈನ್ನ ವಿನ್ಯಾಸ, ತಯಾರಿಕೆ ಮತ್ತು ಅಳವಡಿಕೆಯ ಕಾರ್ಯವನ್ನು ಬೆಮೆಲ್ ಮಾಡಲಿದೆ. ದೇಶೀಯವಾಗಿ ನಿರ್ಮಾಣವಾಗಲಿರುವ ಭಾರತದ ಮೊದಲ ಬುಲೆಟ್ ರೈಲು ಇದಾಗಲಿದೆ.
ಬೆಂಗಳೂರಿನಲ್ಲಿ ಮುಖ್ಯಕಚೇರಿ ಮತ್ತು ಕಾರ್ಖಾನೆಗಳನ್ನು ಹೊಂದಿರುವ ಬೆಮೆಲ್, ಸಿಲಿಕಾನ್ ಸಿಟಿಯಲ್ಲೇ ಟ್ರೈನ್ಸೆಟ್ಗಳನ್ನು ನಿರ್ಮಿಸಲಿದೆ. 2026ರ ಕೊನೆಯಲ್ಲಿ ಇವುಗಳನ್ನು ರೈಲ್ವೆ ಇಲಾಖೆಗೆ ಒಪ್ಪಿಸುವ ಹೊಣೆ ಇದೆ. ಭಾರತದಲ್ಲಿ ನಿರ್ಮಾಣವಾಗಿರುವ ವಂದೇ ಭಾರತ್ ರೈಲು ಕೂಡ ಹೈಸ್ಪೀಡ್ ಆಗಿದೆಯಾದರೂ ಅದು ಬುಲೆಟ್ ಟ್ರೈನ್ ವರ್ಗೀಕರಣಕ್ಕೆ ಬರುವುದಿಲ್ಲ. ಗಂಟೆಗೆ 250 ಕಿಮೀಗೂ ಹೆಚ್ಚು ವೇಗದಲ್ಲಿ ಹೋಗುವ ರೈಲುಗಳನ್ನು ಬುಲೆಟ್ ಟ್ರೈನ್ ಎಂದು ಪರಿಗಣಿಸಲಾಗುತ್ತದೆ. ಬೆಮೆಲ್ನಿಂದ ನಿರ್ಮಾಣವಾಗಲಿರುವ ಹೈಸ್ಪೀಡ್ ಟ್ರೈನು 280 ಕಿಮೀ ವೇಗ ಹೊಂದಿರಲಿದೆ.
ಇದನ್ನೂ ಓದಿ: ಐದು ವರ್ಷದಲ್ಲಿ 5,00,000 ಉದ್ಯೋಗ ಸೃಷ್ಟಿಸಲಿದ್ದೇವೆ: ಟಾಟಾ ಗ್ರೂಪ್ ಮುಖ್ಯಸ್ಥ ಚಂದ್ರಶೇಖರನ್
ಅಹ್ಮದಾಬಾದ್ ಮತ್ತು ಮುಂಬೈ ನಡುವೆ ಹೈಸ್ಪೀಡ್ ರೈಲು ನೆಟ್ವರ್ಕ್ ನಿರ್ಮಿಸಲಾಗುತ್ತಿದೆ. ಇದು 2027ಕ್ಕೆ ಮುಗಿಯುವ ನಿರೀಕ್ಷೆ ಇದೆ. ಈ ಮಾರ್ಗಕ್ಕೆ ಜಪಾನ್ನ ಬುಲೆಟ್ ಟ್ರೈನ್ ಅನ್ನು ಓಡಿಸುವ ಇರಾದೆ ರೈಲ್ವೆ ಇಲಾಖೆಯದ್ದಾಗಿತ್ತು. ಆದರೆ, ಒಂದು ಬುಲೆಟ್ ಟ್ರೈನ್ ಬೋಗಿಗೆ 46 ಕೋಟಿ ರೂನಂತೆ ಜಪಾನೀ ಕಂಪನಿಗಳು ಬೆಲೆ ಹೇಳಿದ್ದವು. ಬೆಮೆಲ್ ಸಂಸ್ಥೆ ಪ್ರತೀ ಕೋಚ್ಗೆ 27.86 ಕೋಟಿ ರೂನಂತೆ ಬುಲೆಟ್ ಟ್ರೈನ್ ಅನ್ನು ನಿರ್ಮಿಸಲಿದೆ.
ಇದನ್ನೂ ಓದಿ: ಚೀನಾದ ಶ್ರೀಮಂತರಿಗೆ ಹೆಚ್ಚಲಿರುವ ತೆರಿಗೆ ಸಂಕಟ; ಬೊಕ್ಕಸವೂ ತುಂಬೀತು, ಸಂಪತ್ತೂ ಮರುಹಂಚಿಕೆಯಾದೀತು
ಜಪಾನೀ ಕಂಪನಿಗಳು ಬುಲೆಟ್ ಟ್ರೈನುಗಳ ನಿರ್ಮಾಣದಲ್ಲಿ ಅನುಭವ ಹೊಂದಿವೆ. ಉತ್ಕೃಷ್ಟ ಗುಣಮಟ್ಟದ ರೈಲುಗಳನ್ನು ಜಪಾನೀಯರು ನಿರ್ಮಿಸುತ್ತಾರೆ. ಮುಂಬೈ-ಅಹ್ಮದಾಬಾದ್ ನಡುವಿನ ಹೈಸ್ಪೀಡ್ ರೈಲಿನಲ್ಲಿ ಜಪಾನ್ನ ಶಿಂಕಾನ್ಸೆನ್ ಇ5 ಸೀರೀಸ್ನ ಬುಲೆಟ್ ಟ್ರೈನುಗಳನ್ನು ಅಳವಡಿಸಲು ನಿರ್ಧರಿಸಲಾಗಿತ್ತು. ಇವುಗಳ ಟಾಪ್ ಸ್ಪೀಡ್ 320 ಕಿಮೀ ಇದೆ. ಅಧಿಕ ಬೆಲೆ ಕಾರಣ ಜಪಾನ್ ಜೊತೆಗಿನ ಮಾತುಕತೆ ಇನ್ನೂ ಅಂತಿಮಗೊಂಡಿಲ್ಲ. ಈಗ ಬೆಮೆಲ್ ಸಂಸ್ಥೆ ಕಡಿಮೆ ಬೆಲೆಗೆ ಟ್ರೈನುಗಳನ್ನು ನಿರ್ಮಿಸುತ್ತಿರುವುದರಿಂದ ಶಿಂಕಾನ್ಸೆನ್ ಬುಲೆಟ್ ಟ್ರೈನುಗಳು ಭಾರತಕ್ಕೆ ಬರುವುದು ಅನುಮಾನ. ಮುಂಬೈ ಅಹ್ಮದಾಬಾದ್ ಮಾರ್ಗಕ್ಕೆ ಬೆಮೆಲ್ನ ಬುಲೆಟ್ ಟ್ರೈನುಗಳೇ ಸಂಚರಿಸುವ ಸಾಧ್ಯತೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:26 am, Wed, 16 October 24