6ಜಿಯಲ್ಲಿ ಭಾರತ ಪ್ರಾಬಲ್ಯ; ಶಕ್ತಿಶಾಲಿ ಭಾರತದ ನಿರ್ಮಾಣಕ್ಕೆ ನಾವೂ ಜೊತೆ: ಜಿಯೋ, ಏರ್ಟೆಲ್ ಮುಖ್ಯಸ್ಥರ ಮಾತು
ITU World telecommunication standardization Assembly, India mobile congress 2024: ರಾಷ್ಟ್ರ ರಾಜಧಾನಿ ನಗರಿಯಲ್ಲಿ ನಿನ್ನೆ ಇಂಡಿಯಾ ಮೊಬೈಲ್ ಕಾಂಗ್ರೆಸ್ ಸಮ್ಮೇಳನ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದರು. ತಂತ್ರಜ್ಞಾನ, ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದ ಬಗ್ಗ ಪ್ರಧಾನಿಗಳಿಗಿರುವ ಧೋರಣೆಯನ್ನು ಏರ್ಟೆಲ್ ಮುಖ್ಯಸ್ಥ ಸುನೀಲ್ ಭಾರ್ತಿ ಮಿಟ್ಟಲ್ ಪ್ರಶಂಸಿಸಿದರು. ರಿಲಾಯನ್ಸ್ ಜಿಯೋ ಮುಖ್ಯಸ್ಥ ಆಕಾಶ್ ಅಂಬಾನಿ ಮಾತನಾಡಿ, ಭಾರತ 6ಜಿಯಲ್ಲಿ ಪ್ರಾಬಲ್ಯ ತೋರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನವದೆಹಲಿ, ಅಕ್ಟೋಬರ್ 16: ತಂತ್ರಜ್ಞಾನ ಮತ್ತು ತಯಾರಿಕಾ ಕ್ಷೇತ್ರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೊಂದಿರುವ ನಿಲುವನ್ನು ಭಾರ್ತಿ ಏರ್ಟೆಲ್ ಮುಖ್ಯಸ್ಥ ಸುನೀಲ್ ಮಿಟ್ಟಲ್ ಶ್ಲಾಘಿಸಿದರು. ನಿನ್ನೆ ಮಂಗಳವಾರ ಇಲ್ಲಿ ನಡೆದ ಐಟಿಯು ವರ್ಲ್ಡ್ ಟೆಲಿಕಮ್ಯೂನಿಕೇಶನ್ ಸ್ಟಾಂಡರ್ಡೈಸೇಶನ್ ಸಭೆಯಲ್ಲಿ ಮಾತನಾಡಿದ ಸುನೀಲ್ ಭಾರ್ತಿ ಮಿಟ್ಟಲ್, ಶಕ್ತಿಶಾಲಿ ಭಾರತದ ನಿರ್ಮಾಣದಲ್ಲಿ ತಮ್ಮ ಸಂಸ್ಥೆಯ ಪಾತ್ರವೂ ಇರುತ್ತದೆ ಎಂದು ಭರವಸೆ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಹಲವು ಉದ್ಯಮಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಭಾರತದ ದೂರಸಂಪರ್ಕ ಕ್ರಾಂತಿಯಲ್ಲಿ ಏರ್ಟೆಲ್ ಮುಂಚೂಣಿಯಲ್ಲಿದೆ. ಭಾರತದ ಮೊದಲ ಸ್ಪ್ಯಾಮ್ ವಿರೋಧಿ ನೆಟ್ವರ್ಕ್ ಅನ್ನು ಏರ್ಟೆಲ್ ಆರಂಭಿಸಿದೆ. ಟೆಲಿಕಾಂ ಉದ್ಯಮ, ಟೆಲಿಕಾಂ ಇಲಾಖೆ ಜೊತೆಗೂಡಿ ನಾವು ಜನರಿಗೆ ಸುರಕ್ಷಿತ ಸೇವೆ ಒದಗಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಸುನೀಲ್ ಮಿಟ್ಟಲ್ ಹೇಳಿದರು.
6ಜಿಯಲ್ಲಿ ಭಾರತದ್ದೇ ಪ್ರಾಬಲ್ಯ: ಆಕಾಶ್ ಅಂಬಾನಿ
ಇದೇ ಸಭೆಯಲ್ಲಿ ಮಾತನಾಡಿದ ರಿಲಾಯನ್ಸ್ ಜಿಯೋ ಛೇರ್ಮನ್ ಆಕಾಶ್ ಅಂಬಾನಿ, ಮುಂಬರಲಿರುವ 6ಜಿ ನೆಟ್ವರ್ಕ್ನ ಅಳವಡಿಕೆಯಲ್ಲಿ ಭಾರತ ಪ್ರಾಬಲ್ಯ ತೋರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕರುನಾಡ ಹೆಮ್ಮೆ; ಭಾರತದ ಮೊದಲ ಬುಲೆಟ್ ಟ್ರೈನು ನಿರ್ಮಾಣ ಬೆಂಗಳೂರಿನಲ್ಲಿ; ಬೆಮೆಲ್ ಸಂಸ್ಥೆಗೆ ಗುತ್ತಿಗೆ
ಎಂಟು ವರ್ಷದ ಹಿಂದೆ 2ಜಿ ವೇಗದಲ್ಲಿ ತೆವಳುತ್ತಿದ್ದ ಭಾರತ ಈಗ 5ಜಿ ಹೆದ್ದಾರಿಯಲ್ಲಿ ಡಿಜಿಟಲ್ ಸೂಪರ್ಪವರ್ ಆಗುತ್ತಿದೆ. 6ಜಿಯಲ್ಲಿ ಭಾರತದ ಸಾಧನೆ ಇನ್ನೂ ಅಮೋಘವಾಗಿರಲಿದೆ ಎಂದು ಪ್ರಧಾನಿಗಳಿಗೆ ಭರವಸೆ ನೀಡುತ್ತೇನೆ ಎಂದು ಮುಕೇಶ್ ಅಂಬಾನಿ ಅವರ ಹಿರಿಯ ಮಗನಾದ ಆಕಾಶ್ ಅಂಬಾನಿ ಹೇಳಿದರು.
ಮೊಬೈಲ್ ಡಾಟಾ ದರ ಬಹಳ ಅಗ್ಗ
ಬೇರೆ ದೊಡ್ಡ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮೊಬೈಲ್ ಡಾಟಾ ದರಗಳು ಬಹಳ ಕಡಿಮೆ ಇದೆ. ಹಾಗೆಯೇ ಬಹಳ ಅಧಿಕ ಇಂಟರ್ನೆಟ್ ಸ್ಪೀಡ್ ಇರುವ ನೆಟ್ವರ್ಕ್ ನಮ್ಮದು. ತಲಾವಾರು ಡಾಟಾ ಬಳಕೆ 30ಜಿಬಿಗೂ ಅಧಿಕ ಇದೆ. ಇದು ಜಾಗತಿಕವಾಗಿ ಅತ್ಯಧಿಕ ಡಾಟಾ ಬಳಕೆಗಳಲ್ಲಿ ಒಂದು. ಇಲ್ಲಿರುವುದು ಅರ್ಧ ಚಿತ್ರಣ ಮಾತ್ರ. ಭಾರತದ ಡಿಜಿಟಲ್ ಪರಿವರ್ತನೆಯ ಕಥೆ ಮತ್ತೊಂದು ಮಗ್ಗುಲನ್ನು ತೆರೆದಿಡುತ್ತದೆ ಎಂದು ಜಿಯೋ ಮುಖ್ಯಸ್ಥರು ಹೇಳಿದರು.
ಇದನ್ನೂ ಓದಿ: ಐದು ವರ್ಷದಲ್ಲಿ 5,00,000 ಉದ್ಯೋಗ ಸೃಷ್ಟಿಸಲಿದ್ದೇವೆ: ಟಾಟಾ ಗ್ರೂಪ್ ಮುಖ್ಯಸ್ಥ ಚಂದ್ರಶೇಖರನ್
ರಾಷ್ಟ್ರ ರಾಜಧಾನಿಯ ಭಾರತ್ ಮಂಡಪಂನಲ್ಲಿ ನಡೆಯುತ್ತಿರುವ ಇಂಡಿಯಾ ಮೊಬೈಲ್ ಸಮ್ಮೇಳನದಲ್ಲಿ 190ಕ್ಕೂ ಹೆಚ್ಚು ದೇಶಗಳಿಂದ ತಜ್ಞರು, ನೀತಿ ರೂಪಕರು, ಉದ್ಯಮ ಮುಖಂಡರು ಪಾಲ್ಗೊಂಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ