ಚೀನಾದ ಶ್ರೀಮಂತರಿಗೆ ಹೆಚ್ಚಲಿರುವ ತೆರಿಗೆ ಸಂಕಟ; ಬೊಕ್ಕಸವೂ ತುಂಬೀತು, ಸಂಪತ್ತೂ ಮರುಹಂಚಿಕೆಯಾದೀತು
Tax on overseas investment gain of China's ultra-rich: ಚೀನಾ ಸರ್ಕಾರ ತನ್ನ ದೇಶದ ಅತಿ ಶ್ರೀಮಂತ ವ್ಯಕ್ತಿಗಳ ಮೇಲೆ ತೆರಿಗೆ ಹಾಕುತ್ತಿದೆ. ವಿದೇಶಗಳಲ್ಲಿನ ಹೂಡಿಕೆಗಳಿಂದ ಪಡೆದ ಲಾಭಕ್ಕೆ ಸರ್ಕಾರ ಶೇ. 20ರಷ್ಟು ತೆರಿಗೆ ಹಾಕಲಾಗುತ್ತಿದೆಯಂತೆ. ಕೆಲ ವರ್ಷಗಳಿಂದಲೂ ಚೀನಾದ ಶ್ರೀಮಂತರು ಬೇರೆ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ.
ಬೀಜಿಂಗ್, ಅಕ್ಟೋಬರ್ 15: ಮಂದಗೊಳ್ಳುತ್ತಿರುವ ಆರ್ಥಿಕತೆಗೆ ಶಕ್ತಿ ತುಂಬಲು ಹರಸಾಹಸ ನಡೆಸುತ್ತಿರುವ ಚೀನಾಗೆ ಈಗ ಹೆಚ್ಚೆಚ್ಚು ಫಂಡಿಂಗ್ ಅಗತ್ಯತೆ ಇದೆ. ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಚೀನಾ ಹೊಸ ಮಾರ್ಗ ಅನ್ವೇಷಿಸುತ್ತಿದೆ. ಈ ನಿಟ್ಟಿನಲ್ಲಿ ಶ್ರೀಮಂತರನ್ನು ಚೀನಾ ಟಾರ್ಗೆಟ್ ಮಾಡಿದೆ. ವಿದೇಶಗಳಲ್ಲಿ ಹೂಡಿಕೆ ಮಾಡಿ ಲಾಭ ಗಳಿಸುವ ಚೀನಾದ ಅತಿ ಶ್ರೀಮಂತರಿಗೆ ಸರ್ಕಾರ ತೆರಿಗೆ ಹೇರಲು ಯೋಜಿಸಿದೆ. ಅಂದರೆ, ವಿದೇಶಗಳಲ್ಲಿ ಹೂಡಿಕೆ ಮಾಡಿ ಇವರು ಗಳಿಸುವ ಲಾಭಕ್ಕೆ ತೆರಿಗೆ ಕಟ್ಟಬೇಕಾಗಬಹುದು. ಈ ಕ್ರಮವನ್ನು ಸರ್ಕಾರ ಜಾರಿಗೊಳಿಸುವ ಪ್ರಕ್ರಿಯೆ ಆರಂಭಿಸಿದೆ ಎಂಬುದು ಬ್ಲೂಮ್ಬರ್ಗ್ ವರದಿಯಿಂದ ತಿಳಿದುಬರುತ್ತಿದೆ.
ಈ ವರದಿ ಪ್ರಕಾರ, ವಿದೇಶಗಳಲ್ಲಿನ ಹೂಡಿಕೆಗಳಿಂದ ಬರುವ ಲಾಭದ ಮೇಲೆ ಶೇ. 20ರವರೆಗೆ ತೆರಿಗೆ ಹಾಕಲಾಗುತ್ತಿದೆ. ಹಲವು ಚೀನೀ ಪ್ರಜೆಗಳಿಗೆ ಸರ್ಕಾರದ ವತಿಯಿಂದ ಟ್ಯಾಕ್ಸ್ ನೋಟೀಸ್ ಹೋಗಿದೆ, ಅಥವಾ ಅಧಿಕಾರಿಗಳು ಸಂಪರ್ಕ ಮಾಡಿದ್ದಾರೆ ಎನ್ನಲಾಗುತ್ತಿದೆ. ಬೇರೆ ದೇಶಗಳ ಷೇರು ಮಾರುಕಟ್ಟೆಯಲ್ಲಿ ಮಾಡಿರುವ ಹೂಡಿಕೆಗಳೂ ಕೂಡ ಆಫ್ಶೋರ್ ಅಸೆಟ್ ವರ್ಗಕ್ಕೆ ಸೇರುತ್ತವೆ. ಚೀನಾದ ಬಹಳಷ್ಟು ಶ್ರೀಮಂತರು ಹಾಂಕಾಂಗ್ ಮತ್ತು ಅಮೆರಿಕದ ಮಾರುಕಟ್ಟೆಗಳಲ್ಲಿ ಸಾಕಷ್ಟು ಹೂಡಿಕೆ ಮಾಡಿದ್ದಾರೆ. ಈಗ ಇವರು ಸರ್ಕಾರ ಪಾಲಿಗೆ ಆದಾಯ ಮೂಲವಾಗಲಿದ್ದಾರೆ.
ಇದನ್ನೂ ಓದಿ: ಇಲಾನ್ ಮಸ್ಕ್ ಸೂಪರ್ ಮ್ಯಾನ್; ಈ ಕೆಲಸ ಮಾಡೋಕೆ ಅವರೊಬ್ರಿಂದ್ಲೇ ಸಾಧ್ಯ: ನಿವಿಡಿಯಾ ಸಿಇಒ ಹೊಗಳಿಕೆ
ಸಮಾನ ಸಂಪತ್ತು, ಚೀನಾದ ಗುರಿ
ಅತಿ ಶ್ರೀಮಂತರ ವಿದೇಶೀ ಆದಾಯಕ್ಕೆ ತೆರಿಗೆ ವಿಧಿಸುವ ಮೂಲಕ ಚೀನಾ ಒಂದು ಕಲ್ಲಿಗೆ ಎರಡು ಹಕ್ಕಿ ಹೊಡೆದಂತಾಗುತ್ತದೆ. ಒಂದು, ಸರ್ಕಾರಕ್ಕೆ ಆದಾಯ ಒಳಹರಿವು ಹೆಚ್ಚುತ್ತದೆ. ಇನ್ನೊಂದು, ಸಂಪತ್ತು ಮರುಹಂಚಿಕೆ ಹೆಚ್ಚು ಸಮರ್ಪಕವಾಗುತ್ತದೆ.
ಶ್ರೀಮಂತರು ಹೆಚ್ಚು ಶ್ರೀಮಂತರಾಗುವುದನ್ನು ನಿಯಂತ್ರಿಸುವುದು, ಜನಕಲ್ಯಾಣ ಯೋಜನೆಗಳ ಮೂಲಕ ಜನಸಾಮಾನ್ಯರನ್ನು ಬಲಪಡಿಸುವುದು ಸಂಪತ್ತು ಮರುಹಂಚಿಕೆ ವಿಧಾನಗಳಲ್ಲಿ ಪ್ರಮುಖವಾದುದು. ಚೀನಾ ಸರ್ಕಾರ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದೆ. ಹಲವು ವರ್ಷಗಳಿಂದಲೂ ಸರ್ಕಾರವು ಶ್ರೀಮಂತರ ಮೇಲೆ ಹತೋಟಿ ಹೊಂದುವ ಕ್ರಮ ಕೈಗೊಳ್ಳುತ್ತಾ ಬಂದಿದೆ.
ಇದನ್ನೂ ಓದಿ: ಕಸ ಗುಡಿಸುವ ಕಾಯಕ; ಸಾಯುವಾಗ ಹೊಂದಿದ್ದ ಆಸ್ತಿ 60 ಕೋಟಿ ರೂ; ಮಾದರಿಯಾಗುವ ರೊನಾಲ್ಡ್ ರೀಡ್ ಕಥೆ
2018ರವರೆಗೆ ಚೀನಾದಲ್ಲಿ ಹೊಸ ಹೊಸ ಬಿಲಿಯನೇರ್ಗಳು ಹುಟ್ಟಿಕೊಳ್ಳುತ್ತಿದ್ದರು. ಸರ್ಕಾರಕ್ಕೆ ಟಾರ್ಗೆಟ್ ಆದ ಬಳಿಕ ಚೀನೀ ಶ್ರೀಮಂತರು ಬೇರೆ ದೇಶಗಳಿಗೆ ಹೋಗಿ ನೆಲಸುತ್ತಿರುವುದು ಹೆಚ್ಚಾಗುತ್ತಿದೆ. ವಿಶ್ವಸಂಸ್ಥೆಯ ವರದಿಯೊಂದರ ಪ್ರಕಾರ 2021ರಿಂದೀಚೆ ಚೀನಾದ 12 ಲಕ್ಷಕ್ಕೂ ಹೆಚ್ಚು ಜನರು, ಅದರಲ್ಲೂ ಹೆಚ್ಚಾಗಿ ಶ್ರೀಮಂತರು ದೇಶ ಬಿಟ್ಟು ಬೇರೆಡೆ ವಲಸೆ ಹೋಗಿದ್ದಾರೆ. ಒಂದು ಅಂದಾಜು ಪ್ರಕಾರ, ಚೀನಾ ಬಳಿ 24 ಟ್ರಿಲಿಯನ್ ಡಾಲರ್ನಷ್ಟು ವ್ಯಕ್ತಿಗತ ಸಂಪತ್ತು ಇದೆ. ಇದರಲ್ಲಿ 1 ಟ್ರಿಲಿಯನ್ ಡಾಲರ್ನಷ್ಟು ವೈಯಕ್ತಿಕ ಸಂಪತ್ತು ವಿದೇಶಗಳಲ್ಲಿ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ