ಬೆಂಗಳೂರು, ಏಪ್ರಿಲ್ 19: ಭಾರತದ ಐಟಿ ರಾಜಧಾನಿ ಎನಿಸಿದ ಬೆಂಗಳೂರು ನಗರದಲ್ಲಿ ಭೂಮಿ ಬೆಲೆ ಯದ್ವಾತದ್ವ ಜಾಸ್ತಿ ಇದೆ. ಇಲ್ಲಿ ಸ್ವಂತ ಮನೆ ಪಡೆಯುವುದೆಂದರೆ ಜೀವಮಾನದ ಸಂಪಾದನೆ ವ್ಯಯಿಸಬೇಕಾಗುತ್ತದೆ. ಅದರಲ್ಲೂ ಕೆಲ ಪ್ರತಿಷ್ಠಿತ ಪ್ರದೇಶಗಳಲ್ಲಿ ಮಧ್ಯವವರ್ಗದವರು ಕಣ್ಣಿಂದ ನೋಡಿ ಖುಷಿ ಪಡಬೇಕು ಎನ್ನುವಷ್ಟರ ಮಟ್ಟಿಗೆ ದುಬಾರಿಯಾಗಿದೆ. ಬೆಂಗಳೂರಿನ ಅತ್ಯಂತ ದುಬಾರಿ ಏರಿಯಾಗಳಲ್ಲಿ ಕೋರಮಂಗಲದ ಮೂರನೇ ಬ್ಲಾಕ್ ಕೂಡ ಒಂದು. ಇದನ್ನು ಬಿಲಿಯನೇರ್ ಸ್ಟ್ರೀಟ್ ಎಂದೂ ಹೇಳುವುದುಂಟು. ಸಾವಿರಾರು ಕೋಟಿ ರೂ ಒಡೆಯರಿರುವ ಈ ಏರಿಯಾದಲ್ಲಿ ಇತ್ತೀಚೆಗೆ 10,000 ಚದರಡಿಯ ಒಂದು ನಿವೇಶನ ದಾಖಲೆ ಬೆಲೆಗೆ ಮಾರಾಟವಾಗಿದೆ. ಕ್ವೆಸ್ ಕಾರ್ಪ್ ಕಂಪನಿಯ ಸಂಸ್ಥಾಪಕ ಅಜಿತ್ ಅಬ್ರಹಾಂ ಐಸಾಕ್ ಎಂಬುವವರು 67.5 ಕೋಟಿ ರೂಗೆ ಈ ಪ್ರಾಪರ್ಟಿ ಖರೀದಿಸಿದ್ದಾರೆ.
ಅರವಿಂದ್ ಮತ್ತು ಗೀತಾ ರೆಡ್ಡಿ ಅವರಿಂದ ಐಸಾಕ್ ಈ ಆಸ್ತಿ ಖರೀದಿಸಿದ್ದಾರೆ. ಚದರಡಿಗೆ 70,300 ರೂನಂತೆ ಬೆಲೆಗೆ ಈ 10,000 ಚದರಡಿ ನಿವೇಶನ ಮಾರಾಟವಾಗಿದೆ. ಬೆಂಗಳೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಇದು ಅತ್ಯಂತ ದುಬಾರಿ ಆಸ್ತಿ ಎನಿಸಿದೆ. ಇದು ಕೋರಮಂಗಲದ ಮೂರನೇ ಬ್ಲಾಕ್ನಲ್ಲಿರುವ ಪ್ರಾಪರ್ಟಿ. ಕುತೂಹಲ ಎಂದರೆ ಟಿವಿಎಸ್ ಮೋಟಾರ್ಸ್ ಸಂಸ್ಥೆ ಇದೇ ಏರಿಯಾದಲ್ಲಿ 65 ಕೋಟಿ ರುಪಾಯಿಗೆ ಒಂದು ನಿವೇಶನವನ್ನು ಖರೀದಿ ಮಾಡಿತ್ತು. ಆ ದಾಖಲೆಯನ್ನು ಅಜಿತ್ ಅಬ್ರಹಾಂ ಐಸಾಕ್ ಮುರಿದಿದ್ದಾರೆ.
ಟಿಇಎಸ್ ಮೋಟಾರ್ಸ್ 65 ಕೋಟಿ ರೂ ಕೊಟ್ಟು ಖರೀದಿಸಿದ ನಿವೇಶನ 9,488 ಚದರಡಿ ವಿಸ್ತೀರ್ಣದ್ದಾಗಿದೆ. ಚದರಡಿಗೆ 68,508 ರೂನಂತೆ ಇದು ಬೆಲೆ ಪಡೆದಿದೆ. ಈ ಏರಿಯಾದಲ್ಲಿ ಭೂಮಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ದೊಡ್ಡ ದೊಡ್ಡ ಉದ್ಯಮಿಗಳು ಇಲ್ಲಿ ಪ್ರಾಪರ್ಟಿ ಪಡೆಯಲು ಹಾತೊರೆಯುವುದಿದೆ.
ಇದನ್ನೂ ಓದಿ: ಬೆಂಗಳೂರಿನ ಟೈಲರ್ ಇವತ್ತು ಬಿಲಿಯನೇರ್; ಸಾವಿರಾರು ಕೋಟಿ ರೂ ಕುಬೇರನಾದರೂ ಮೂಲ ಕಸುಬು ಮರೆತಿಲ್ಲ ರಜಾಕ್
ಅಜಿತ್ ಅಬ್ರಹಾಂ ಐಸಾಕ್ ಅವರು ಮೂರು ವರ್ಷದ ಹಿಂದೆ ಇದೇ ಏರಿಯಾದಲ್ಲಿ ಮತ್ತೊಂದು ಪ್ರಾಪರ್ಟಿ ಖರೀದಿಸಿದ್ದರು. ಅದೂ 52 ಕೋಟಿ ರೂಗೆ. 9,507 ಚದರಡಿ ವಿಸ್ತೀರ್ಣದ ಬಂಗಲೆ ಅದು. ಸಿಂಗಾಪುರದಲ್ಲಿರುವ ಎನ್ಆರ್ಐ ಬ್ರಿಜೇಶ್ ಆರ್ ವಾಹಿ ಎಂಬುವವರಿಂದ ಅಜಿತ್ ಈ ಬಂಗಲೆ ಪಡೆದಿದ್ದರು. ಚದರಡಿಗೆ 58,000 ರೂ ಬೆಲೆಯಂತೆ ಇದರ ಸೇಲ್ ಆಗಿತ್ತು.
ಬೆಂಗಳೂರಿನಲ್ಲಿ ಯಾವುದೇ ಏರಿಯಾಗೆ ಹೋದರೆ ನಿವೇಶನದ ಅಳತೆ ಸಾಮಾನ್ಯವಾಗಿ 30X40ಯದ್ದಾಗಿರುತ್ತದೆ. ಕೆಲವೆಡೆ ಅದು 40X60 ಇರಬಹುದು. ಆದರೆ, ಕೋರಮಂಗಲದ ಮೂರನೇ ಬ್ಲಾಕ್ನಲ್ಲಿ ವಿಶೇಷತೆ ಎಂದರೆ ಇಲ್ಲಿ ದೊಡ್ಡ ದೊಡ್ಡ ನಿವೇಶನಗಳು ಲಭ್ಯ ಇರುತ್ತವೆ. ದೊಡ್ಡದೊಡ್ಡ ಬಂಗಲೆ ಕಟ್ಟಿಸಬೇಕೆನ್ನುವವರಿಗೆ ಇದು ಅನುಕೂಲ.
ಇದನ್ನೂ ಓದಿ: ನಟಿ ಶಿಲ್ಪಾ ಶೆಟ್ಟಿ ಮನೆ ಸೀಜ್ ಮಾಡಲು ಕಾರಣವಾದ ಬಿಟ್ಕಾಯಿನ್ ಹಗರಣ ಏನದು? ರಾಜ್ ಕುಂದ್ರಾ ಪಾತ್ರವೇನು, ಇಲ್ಲಿದೆ ಡೀಟೇಲ್ಸ್
ಇನ್ಫೋಸಿಸ್ನ ಸಹ-ಸಂಸ್ಥಾಪಕರಾದ ನಂದನ್ ನಿಲೇಕಣಿ ಮತ್ತು ಕ್ರಿಸ್ ಗೋಪಾಲಕೃಷ್ಣನ್, ಫ್ಲಿಪ್ಕಾರ್ಟ್ನ ಸಹ-ಸಂಸ್ಥಾಪಕರಾದ ಬಿನ್ನಿ ಬನ್ಸಾಲ್, ನಾರಾಯಣ ಹೃದಯಾಲಯದ ದೇವಿ ಶೆಟ್ಟಿ, ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಮೊದಲಾದವರು ಈ ಏರಿಯಾದಲ್ಲಿ ಪ್ರಾಪರ್ಟಿ ಹೊಂದಿದ್ದಾರೆ. ಹಲವರು ಇಲ್ಲಿಯೇ ಮನೆ ಕಟ್ಟಿಕೊಂಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ