ಪುಣೆ, ಮಾರ್ಚ್ 27: ವಿಶ್ವದ ಎರಡನೇ ಅತಿದೊಡ್ಡ ಫೋರ್ಜಿಂಗ್ ತಯಾರಕ ಸಂಸ್ಥೆಯಾದ ಭಾರತ್ ಫೋರ್ಜ್ನ ಛೇರ್ಮನ್ ಮತ್ತು ಎಂಡಿ ಬಾಬಾ ಕಲ್ಯಾಣಿಯ (Babasaheb Kalyani) ಆಸ್ತಿಯಲ್ಲಿ ಪಾಲು ಕೇಳಿ ಸಂಬಂಧಿಗಳು ಕೋರ್ಟ್ ಮೆಟ್ಟಿಲು ಏರಿದ್ದಾರೆ. ಕಲ್ಯಾಣಿ ಕುಟುಂಬದ ಆಸ್ತಿಗಳಲ್ಲಿ ತಮಗೆ ಪಾಲು ಬರಬೇಕಿದೆ ಎಂದು ಅವರ ಸೋದರಿ ಮಕ್ಕಳಾದ ಸಮೀರ್ ಜೈ ಹಿರೇಮಠ ಮತ್ತು ಪಲ್ಲವಿ ಅನೀಶ್ ಸ್ವಾದಿ ಅವರು ಮೊಕದ್ದಮೆ ಹಾಕಿದ್ದಾರೆ. ಕುಟುಂಬದ ಆಸ್ತಿಗಳನ್ನು ಸರಿಯಾಗಿ ಹಂಚದೆ ಬಾಬಾ ಕಲ್ಯಾಣಿ ತಾವೇ ಎಲ್ಲವನ್ನೂ ಅನುಭವಿಸುತ್ತಿದ್ದಾರೆ. ಈ ಆಸ್ತಿ ಬಗ್ಗೆ ಯಾವ ಮಾಹಿತಿಯನ್ನೂ ನೀಡದೇ ಮುಚ್ಚಿಡುತ್ತಿದ್ದಾರೆ ಎಂದು ಸಮೀರ್ ಮತ್ತು ಪಲ್ಲವಿ ಆರೋಪ ಮಾಡುತ್ತಿದ್ದಾರೆ.
ಬಾಬಾ ಕಲ್ಯಾಣಿ, ಅಮಿತ್ ಕಲ್ಯಾಣಿ, ಗೌರಿಶಂಕರ್ ಕಲ್ಯಾಣಿ, ಶೀತಲ್ ಗೌರಿಶಂಕರ್ ಕಲ್ಯಾಣಿ, ವಿರಾಜ್ ಗೌರಿಶಂಕರ್ ಕಲ್ಯಾಣಿ, ಸುಗಂಧಾ ಜೈ ಹಿರೇಮಠ ಅವರ ಬಳಿ ಇರುವ ಅವಿಭಜಿತ ಕಲ್ಯಾಣಿ ಕುಟುಂಬದ ಆಸ್ತಿಗಳಲ್ಲಿನ ಸರಿಯಾದ ಪಾಲನ್ನು ತಮಗೆ ನೀಡಬೇಕೆಂದು ನಿರ್ದೇಶಿಸಬೇಕು ಎಂದು ಸಮೀರ್ ಮತ್ತು ಪಲ್ಲವಿ ಕೋರ್ಟ್ನಲ್ಲಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಭಾರತ ಈಗ ಚಿಪ್ ತಯಾರಿಸುವುದಕ್ಕಿಂತ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕು: ರಘುರಾಮ್ ರಾಜನ್
‘ನಮಗೆ ಇನ್ನೂ ಯಾವ ನೋಟೀಸ್ ಬಂದಿಲ್ಲ. ನಮ್ಮ ಬಗ್ಗೆ ಮಾಡಲಾಗಿರುವ ಆರೋಪದ ಬಗ್ಗೆ ಈಗಲೇ ಮಾತನಾಡುವುದು ತಪ್ಪಾಗುತ್ತದೆ. ಈ ಆರೋಪ ವಾಸ್ತವಕ್ಕೆ ದೂರವಾಗಿದೆ. ದುರುದ್ದೇಶಪೂರ್ವಕವಾಗಿ ಇದನ್ನು ಮಾಡಲಾಗಿದೆ,’ ಎಂದು ಕಲ್ಯಾಣಿ ಗ್ರೂಪ್ನ ವಕ್ತಾರರು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಕಲ್ಯಾಣಿ ಗ್ರೂಪ್ ಹಾಗೂ ಭಾರತ್ ಫೋರ್ಜ್ ಸಂಸ್ಥೆಯನ್ನು 1961ರ ಜೂನ್ 19ರಂದು ನೀಲಕಂಠರಾವ್ ಕಲ್ಯಾಣಿ ಸ್ಥಾಪಿಸಿದ್ದರು. ಆಗ ಇವರ ಕೂಡು ಕುಟುಂಬದ ಮುಖ್ಯಸ್ಥರಾಗಿದ್ದವರು ಅಣ್ಣಪ್ಪ ಕಲ್ಯಾಣಿ. ಇವರ ಮಾರ್ಗದರ್ಶನದಲ್ಲಿ ವ್ಯವಹಾರ ಆರಂಭಿಸಲಾಯಿತು ಎನ್ನಲಾಗಿದೆ. ಈಗಿನ ಛೇರ್ಮನ್ ಆಗಿರುವ ಬಾಬಾ ಕಲ್ಯಾಣಿ ಅವರು ನೀಲಕಂಠರಾವ್ ಅವರ ಮಗ. ಆಗ ಜಾಯಿಂಟ್ ಫ್ಯಾಮಿಲಿಯ ಭಾಗವಾಗಿದ್ದ ಸದಸ್ಯರ ಸಂತಾನದವರು ಆಸ್ತಿಯಲ್ಲಿ ಪಾಲು ಕೇಳುತ್ತಿದ್ದಾರೆ.
ಇದನ್ನೂ ಓದಿ: ಸರ್ಕಾರದಿಂದ ಹೊಸ ವೇತನ ಕ್ರಮಕ್ಕೆ ಆಲೋಚನೆ; ಜಾರಿಯಾದರೆ ಬಹಳ ಹೆಚ್ಚಾಗಲಿದೆ ಕನಿಷ್ಠ ಸಂಬಳ
ಕಲ್ಯಾಣಿ ಕುಟುಂಬದವರು ಪುಣೆಯವರಾದರೂ ಕರ್ನಾಟಕದ ನಂಟಿರುವವರಾಗಿದ್ದಾರೆ. ಕಲ್ಯಾಣಿ ಗ್ರೂಪ್ ಅಡಿಯಲ್ಲಿ ಬಹಳಷ್ಟು ಕಂಪನಿಗಳು ನಡೆಯುತ್ತಿವೆ. ಭಾರತ್ ಫೋರ್ಜ್ ಅತಿದೊಡ್ಡ ಕಂಪನಿ. ಜರ್ಮನಿಯ ಟಿಸನ್ಕ್ರುಪ್ (ThyssenKrupp) ಬಿಟ್ಟರೆ ಫೋರ್ಜಿಂಗ್ ತಯಾರಿಕೆಯಲ್ಲಿ ಭಾರತ್ ಫೋರ್ಜ್ ಅತಿದೊಡ್ಡ ಕಂಪನಿ.
ಬಾಬಾ ಕಲ್ಯಾಣಿ ಬೆಳಗಾವಿಯ ರಾಷ್ಟ್ರೀಯ ಮಿಲಿಟರಿ ಸ್ಕೂಲ್ನಲ್ಲಿ ಓದಿದವರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ