ಟೆಲಿಕಾಂ ಸೇವೆ ಒದಗಿಸುವ ಭಾರ್ತಿ ಏರ್ಟೆಲ್ ನವೆಂಬರ್ 2ನೇ ತಾರೀಕಿನ ಮಂಗಳವಾರದಂದು ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕದ ಹಣಕಾಸು ಫಲಿತಾಂಶವನ್ನು ಪ್ರಕಟಿಸಿದೆ. ತೆರಿಗೆ ನಂತರದ ಲಾಭವು 1,134 ಕೋಟಿ ರೂಪಾಯಿ ಬಂದಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಭಾರ್ತಿ ಏರ್ಟೆಲ್ 763 ಕೋಟಿ ರೂಪಾಯಿ ನಷ್ಟವಾಗಿತ್ತು. ತ್ರೈಮಾಸಿಕ ಆಧಾರದಲ್ಲಿ ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ತೆರಿಗೆ ನಂತರದ ಲಾಭವು ಶೇ 300ರಷ್ಟು ಹೆಚ್ಚಾಗಿದೆ.
ಹಿಂದಿನ ತ್ರೈಮಾಸಿಕದಲ್ಲಿ ರೂ. 284 ಕೋಟಿ ಲಾಭ ವರದಿಯಾಗಿತ್ತು. ಕಂಪೆನಿಯು ವರ್ಷದಿಂದ ವರ್ಷಕ್ಕೆ ಕ್ರೋಡೀಕೃತ ಲಾಭವು ಶೇ 13ರಷ್ಟು ಹೆಚ್ಚಾಗಿ, ರೂ. 25,060 ಕೋಟಿಯಿಂದ ರೂ. 28,326 ಕೋಟಿಗೆ ತಲುಪಿದೆ. ಕಳೆದ ತ್ರೈಮಾಸಿಕಕ್ಕೆ ಹೋಲಿಸಿದಲ್ಲಿ 26,854 ಕೋಟಿ ರೂಪಾಯಿಯಿಂದ ಶೇ 5ರಷ್ಟು ಹೆಚ್ಚಳವಾಗಿದೆ.
ಪ್ರಸಕ್ತ ಹಣಕಾಸು ವರ್ಷದ ಈ ತ್ರೈಮಾಸಿಕದಲ್ಲಿ ಕ್ರೋಡೀಕೃತ ನಿವ್ವಳ ಲಾಭ 1,141 ಕೋಟಿ ರೂಪಾಯಿ ಮತ್ತು ಆದಾಯ ರೂ. 27,811 ಕೋಟಿ ರೂಪಾಯಿ ಆಗಬಹುದು ಎಂದು ಪೇಟೆಯ ನಿರೀಕ್ಷೆ ಇತ್ತು. ಕಂಪೆನಿಯು ರಿಲಯನ್ಸ್ ಜಿಯೋದಿಂದ ಒಂದು ಸಲದ ಪಾವತಿಯಾಗಿ 722 ಕೋಟಿ ರೂಪಾಯಿಯನ್ನು ಏರ್ಟೆಲ್ ಪಡೆದುಕೊಂಡಿದೆ. ಇದು ಸ್ಪೆಕ್ಟ್ರಂ ವರ್ಗಾವಣೆಯ ಮೊತ್ತವಾಗಿದ್ದು, ಇದು ಪರ್ಫಾರ್ಮೆನ್ಸ್ಗೆ ಸೇರ್ಪಡೆ ಮಾಡುತ್ತದೆ.
ಭಾರ್ತಿ ಏರ್ಟೆಲ್ ಷೇರು ಮಂಗಳವಾರದ ದಿನಾಂತ್ಯಕ್ಕೆ ಈ ಹಿಂದಿನ ಟ್ರೇಡಿಂಗ್ ಸೆಷನ್ಗಿಂತ ಶೇ 0.60ರಷ್ಟು ಏರಿಕೆಯಾಗಿ, ರೂ. 712.9ರಲ್ಲಿ ವ್ಯವಹಾರ ಮುಗಿಸಿದೆ.
ಇದನ್ನೂ ಓದಿ: ದೂರಸಂಪರ್ಕ ಇಲಾಖೆಯಿಂದ ಏರ್ಟೆಲ್, VILಗೆ ರೂ. 3050 ಕೋಟಿ ದಂಡ; ಪಾವತಿಸಲು 3 ವಾರದ ಗಡುವು