ಭೂಷಣ್ ಪವರ್ ಹಗರಣ; 38,000 ಕೋಟಿ ರೂ ಸಾಲ ಕೊಟ್ಟು ಬೆಪ್ಪಾದ ಬ್ಯಾಂಕುಗಳು; ಖರೀದಿಸಿ ಕೈಸುಟ್ಟುಕೊಂಡ ಜೆಎಸ್​​​ಡಬ್ಲ್ಯು ಸ್ಟೀಲ್

Bhushan Power and Steel Ltd scam explained: ಭಾರತದ ಅತಿದೊಡ್ಡ ಕಾರ್ಪೊರೇಟ್ ಮತ್ತು ಬ್ಯಾಂಕಿಂಗ್ ಹಗರಣಗಳಲ್ಲೊಂದಾದ ಭೂಷಣ್ ಪವರ್ ಅಂಡ್ ಸ್ಟೀಲ್ ಲಿಮಿಟೆಡ್ ಈಗ ಮತ್ತೆ ಸುದ್ದಿಯಲ್ಲಿದೆ. ಜೆಎಸ್​​​ಡಬ್ಲ್ಯುಗೆ ಬಿಪಿಎಸ್​​ಎಲ್​​ನ ಮಾರಾಟವನ್ನು ಸುಪ್ರೀಂಕೋರ್ಟ್ ಅಸಿಂಧುಗೊಳಿಸಿದೆ. ಬಿಪಿಎಸ್​​ಎಲ್ ಅನ್ನು ಖರೀದಿಸಿ ಸಾಕಷ್ಟು ವೆಚ್ಚ ಮಾಡಿದ್ದ ಜೆಎಸ್​​ಡಬ್ಲ್ಯುಗೆ ಈಗ ಪ್ರಮುಖ ಆದಾಯ ಮೂಲವೊಂದೂ ಕೈತಪ್ಪಿ ಹೋದಂತಾಗಿದೆ.

ಭೂಷಣ್ ಪವರ್ ಹಗರಣ; 38,000 ಕೋಟಿ ರೂ ಸಾಲ ಕೊಟ್ಟು ಬೆಪ್ಪಾದ ಬ್ಯಾಂಕುಗಳು; ಖರೀದಿಸಿ ಕೈಸುಟ್ಟುಕೊಂಡ ಜೆಎಸ್​​​ಡಬ್ಲ್ಯು ಸ್ಟೀಲ್
ಸುಪ್ರೀಂಕೋರ್ಟ್

Updated on: May 05, 2025 | 1:01 PM

ನವದೆಹಲಿ, ಮೇ 5: ಭಾರತದ ಕಾರ್ಪೊರೇಟ್ ಜಗತ್ತಿನ ದೊಡ್ಡ ಹಗರಣ ಸದ್ದು ಮಾಡುತ್ತಿದೆ. ಭೂಷಣ್ ಪವರ್ ಅಂಡ್ ಸ್ಟೀಲ್ ಲಿಮಿಟೆಡ್ (BPSL- Bhushan Power and Steel Ltd) ಕಂಪನಿಯ ಸಾಲ ತೀರಿಸುವಿಕೆ ಯೋಜನೆಯನ್ನು (Insolvency measure) ಸುಪ್ರೀಂಕೋರ್ಟ್ ರದ್ದು ಮಾಡಿದೆ. ಇದರೊಂದಿಗೆ ಜೆಎಸ್​​ಡಬ್ಲ್ಯು ಸ್ಟೀಲ್ ಸಂಸ್ಥೆಗೆ ನೀರಲ್ಲಿ ಹೋಮ ಮಾಡಿದಂತಾದ ಪರಿಸ್ಥಿತಿ ಉದ್ಭವಿಸಬಹುದು. ಸಜ್ಜನ್ ಜಿಂದಾಲ್ ಮಾಲಕತ್ವದ ಜೆಎಸ್​​​ಡಬ್ಲ್ಯು ಸ್ಟೀಲ್ ಸಂಸ್ಥೆ 2021ರಲ್ಲಿ ಬಿಪಿಎಸ್​​​ಎಲ್ ಅನ್ನು 19,350 ಕೋಟಿ ರೂಗೆ ಖರೀದಿ ಮಾಡಿತ್ತು. ಬಳಿಕ ಸಾವಿರಾರು ಕೋಟಿ ರೂ ಹೂಡಿಕೆ ಮಾಡಿ ಬಿಪಿಎಸ್​​ಎಲ್​​ನ ಇನ್​​ಫ್ರಾಸ್ಟ್ರಕ್ಚರ್ ಅನ್ನು ಅಭಿವೃದ್ಧಿಪಡಿಸಿತು. ಈಗ ಒಮ್ಮೆಲೇ ಈ ಒಪ್ಪಂದವನ್ನು ಅಸಿಂಧುಗೊಳಿಸಿರುವುದು ಜಿಂದಾಲ್​ಗೆ 5,000 ಕೋಟಿ ರೂಗೂ ಅಧಿಕ ಮೊತ್ತದ ನಷ್ಟದ ಅಪಾಯ ತೆರೆದಿಟ್ಟಿದೆ.

ಬಿಪಿಎಸ್​​ಎಲ್ ಪ್ರಕರಣದಲ್ಲಿ ಸುಪ್ರೀಂ ತಗಾದೆ ಏನು?

ಭೂಷಣ್ ಪವರ್ ಅಂಡ್ ಸ್ಟೀಲ್ ಲಿಮಿಟೆಡ್ ಸಂಸ್ಥೆ ವಿವಿಧ ವಂಚನೆ ಮೂಲಕ ದಿವಾಳಿಯಾಗುವ ಹಂತದಲ್ಲಿತ್ತು. 40,000-50,000 ಕೋಟಿ ರೂ ಸಾಲದ ಸುಳಿಯಲ್ಲಿದ್ದ ಬಿಪಿಎಸ್​​ಎಲ್ ವಿರುದ್ಧ ತನಿಖೆ ನಡೆಯುತ್ತಿದೆ. ಅದರ ಮಧ್ಯೆ ಐಬಿಸಿ ಅಥವಾ ದಿವಾಳಿ ತಡೆ ಪ್ರಕ್ರಿಯೆ ನಡೆಸಲಾಗಿದೆ. ವಂಚನೆಯ ಆರೋಪ ಸಂಬಂಧ ತನಿಖೆ ನಡೆಯುತ್ತಿರುವ ಮಧ್ಯೆ ಈ ಮಾರಾಟ ಮಾಡಲಾಗಿದ್ದಕ್ಕೆ ಸರ್ವೋಚ್ಚ ನ್ಯಾಯಾಲಯ ಪ್ರಮುಖವಾಗಿ ತಗಾದೆ ತೆಗೆದಿದೆ.

ಬಿಪಿಎಸ್​​ಎಲ್ ಮಾರಾಟ ವಿಚಾರದಲ್ಲಿ ಇನ್ಸಾಲ್ವೆನ್ಸಿ ಅಡ್ಮಿನಿಸ್ಟ್ರೇಟರ್ ಮತ್ತು ಕಮಿಟಿ ಆಫ್ ಕ್ರೆಡಿಟರ್ಸ್ ಅವರು ನ್ಯಾಯಸಮ್ಮತವಾಗಿ ನಡೆದುಕೊಂಡಿಲ್ಲ. ಅಕ್ರಮವಾಗಿ ಈ ಮಾರಾಟ ನಡೆದಿದೆ ಎಂದು ಸುಪ್ರೀಂಕೋರ್ಟ್ ಮೇ 2ರಂದು ನೀಡಿದ ತೀರ್ಪಿನಲ್ಲಿ ಝಾಡಿಸಿತ್ತು.

ಇದನ್ನೂ ಓದಿ
ಯುದ್ಧಕ್ಕೆ ನಿಂತ್ರೆ ಪಾಕಿಸ್ತಾನ ಬದುಕೋದು 4 ದಿನ ಮಾತ್ರ?
ಬರ್ಕ್​​ಶೈರ್ ಹಾಥವೇ ಸಿಇಒ ಸ್ಥಾನ ತ್ಯಜಿಸಲು ವಾರನ್ ಬಫೆಟ್ ನಿರ್ಧಾರ
ಪಾಕಿಸ್ತಾನ ವಿರುದ್ಧ ಒಂದೇ ದಿನ 3 ಅಸ್ತ್ರ ಬಿಟ್ಟ ಭಾರತ
2024-25ರಲ್ಲಿ ಭಾರತದ ಹೊಸ ರಫ್ತು ದಾಖಲೆ

ಇದನ್ನೂ ಓದಿ: ಪೂರ್ಣಪ್ರಮಾಣದ ಯುದ್ಧವಾದ್ರೆ ಪಾಕಿಸ್ತಾನದ ಬಳಿ ಇರೋ ಮದ್ದುಗುಂಡು 4ನೇ ದಿನದಲ್ಲಿ ಖತಂ

ಬಿಪಿಎಸ್​​ಎಲ್ ಹಗರಣ: ಮಾಲೀಕರ ವಂಚನೆಯ ಆಟ

ಸಂಜಯ್ ಸಿಂಘಲ್ ಮಾಲಕತ್ವದ ಭೂಷಣ್ ಪವರ್ ಅಂಡ್ ಸ್ಟೀಲ್ ಸಂಸ್ಥೆ ಮಾಡಿರುವ ಹಗರಣದ ಮೊತ್ತ 40,000 ಕೋಟಿ ರೂಗೂ ಅಧಿಕದ್ದು ಎನ್ನಲಾಗಿದೆ. ವಿವಿಧ ಬ್ಯಾಂಕುಗಳಿಂದ ಭಾರೀ ಮೊತ್ತದ ಸಾಲ ಪಡೆದು, ಅದನ್ನು ಮಾಲೀಕರು ತಮ್ಮ ವೈಯಕ್ತಿಕಕ್ಕೆ ಬಳಸಿಕೊಂಡಿರುವ ಆರೋಪ ಇದೆ. ಆ ಹಣವನ್ನು ಅಕ್ರಮವಾಗಿ ತಮ್ಮ ಶೆಲ್ ಕಂಪನಿಗಳಿಗೆ ಹಾಗೂ ವೈಯಕ್ತಿಕ ಬಳಕೆಗೆ ವರ್ಗಾಯಿಸಿಕೊಂಡಿದ್ದಾರೆ.

ಆಸ್ತಿ ಮೌಲ್ಯವನ್ನು ವಾಸ್ತವಕ್ಕಿಂತ ಹೆಚ್ಚು ತೋರಿಸಿಯೋ, ಅಥವಾ ನಕಲಿ ಇನ್ವಾಯ್ಸ್​​​ಗಳ ಮೂಲಕವೋ ಬ್ಯಾಂಕುಗಳಿಂದ ಅಪಾರ ಪ್ರಮಾಣದ ಸಾಲ ಪಡೆಯಲಾಗಿದೆ. ಹಾಗೆಯೇ, ಡಮ್ಮಿ ಕಂಪನಿಗಳ ಮೂಲಕ ಆ ಸಾಲದ ಹಣವನ್ನು ಹೊರಸಾಗಿಸಲಾಗಿದೆ.

ಸಿಬಿಐ, ಇಡಿ ಏಜೆನ್ಸಿಗಳಿಂದ ತನಿಖೆ ನಡೆಯುತ್ತಿದೆ. ಪಿಎಂಎಲ್​​ಎ ಕಾಯ್ದೆ ಅಡಿ ಜಾರಿ ನಿರ್ದೇಶನಲಾಯವು ಬಿಪಿಎಸ್​​ಎಲ್​​​ನ 4,025 ಕೋಟಿ ರೂ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿದೆ. ಬಿಪಿಎಸ್​​ಎಲ್​​ನ ಮಾಲೀಕ ಹಾಗೂ ಎಂಡಿಯಾಗಿದ್ದ ಸಂಜಯ್ ಸಿಂಘಲ್ ಹಾಗೂ ಕಂಪನಿಯ ಇತರ ಎಕ್ಸಿಕ್ಯೂಟಿವ್​​ಗಳು ತನಿಖೆ ಎದುರಿಸುತ್ತಿದ್ದಾರೆ.

ಇದನ್ನೂ ಓದಿ: ಹೂಡಿಕೆ ಮಾಂತ್ರಿಕ ವಾರನ್ ಬಫೆಟ್ ನಿವೃತ್ತಿ ನಿರ್ಧಾರ; ಬರ್ಕ್​​ಶೈರ್ ಹಾಥವೇ ಚುಕ್ಕಾಣಿ ಗ್ರೆಗ್ ಆಬೆಲ್ ಕೈಸೇರುವ ಸಾಧ್ಯತೆ

ಬಿಪಿಎಸ್​​ಎಲ್ ಪ್ರಕರಣದಲ್ಲಿ ಜೆಎಸ್​​ಡಬ್ಲ್ಯು ಪಾತ್ರ ಏನು?

2017ರಲ್ಲಿ ಬಿಪಿಎಸ್​​ಎಲ್ ಇನ್ಸಾಲ್ವೆನ್ಸಿ ಹಾಗೂ ಬ್ಯಾಂಕ್ರಪ್ಸಿ ಕೋಡ್ ಕಾನೂನು ಅಡಿ ಅರ್ಜಿ ಹಾಕಿತ್ತು. ಅದಾಗಲೇ ತನಿಖಾ ಸಂಸ್ಥೆಗಳಿಂದ ಭರಪೂರ ತನಿಖೆ ನಡೆಯುತ್ತಿತ್ತು. ಆದರೂ ಕೂಡ ಐಬಿಸಿ ಮೂಲಕ ಜೆಎಸ್​​ಡಬ್ಲ್ಯುಗೆ ಬಿಪಿಎಸ್​​ಎಲ್ ಮಾರಾಟ ಮಾಡಲಾಯಿತು.

ಬಿಪಿಎಸ್​​ಎಲ್ ಖರೀದಿಸಿದ ಬಳಿಕ ಆ ಘಟಕಗಳ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಜೆಎಸ್​​​ಡಬ್ಲ್ಯು ಸ್ಟೀಲ್ ಸಾಕಷ್ಟು ಹೂಡಿಕೆ ಮಾಡಿತ್ತು. ಇದರ ಪರಿಣಾಮವಾಗಿ ಭೂಷಣ್ ಪವರ್ ಸಂಸ್ಥೆ 2023-24ರಲ್ಲಿ 21,800 ಕೋಟಿ ರೂ ಆದಾಯ, 671 ಕೋಟಿ ರೂ ಲಾಭ ಮಾಡಿತು. ಹಿಂದಿನ ವರ್ಷದಕ್ಕಿಂತ ಲಾಭ ಮೂರ್ನಾಲ್ಕು ಪಟ್ಟು ಹೆಚ್ಚಿತ್ತು. 2024-25ರ ಮೊದಲ ಒಂಬತ್ತು ತಿಂಗಳಲ್ಲಿ ಬಿಪಿಎಸ್​​​ಎಲ್​​ನ ಆದಾಯ 15,800 ಕೋಟಿ ರೂ ಇತ್ತು.

ಬಿಪಿಎಸ್​​ಎಲ್ ಅನ್ನು ಲಾಭ ಹಳಿಗೆ ತಂದಿದ್ದ ಜೆಎಸ್​​ಡಬ್ಲ್ಯು ಸ್ಟೀಲ್ ಸಂಸ್ಥೆಗೆ ಈಗ ಸುಪ್ರೀಂಕೋರ್ಟ್ ತೀರ್ಪು ಬರೆ ಹಾಕಿದಂತಾಗಿದೆ. ತಾನು ಈವರೆಗೆ ಮಾಡಿರುವ ವೆಚ್ಚವನ್ನು ಮರಳಿ ಪಡೆಯುವುದು ಹೇಗೆ ಎಂಬುದು ಸದ್ಯಕ್ಕೆ ಅದರ ಬಳಿ ಇರುವ ಪ್ರಮುಖ ಚಿಂತೆಯಾಗಿದೆ. ಹಾಗೆಯೇ, ನೂರಾರು ಕೋಟಿ ರೂ ಲಾಭ ಕೊಡಬಲ್ಲ ಸಂಸ್ಥೆ ಕೈತಪ್ಪುತ್ತಿರುವುದೂ ಕೂಡ ಅದಕ್ಕೆ ಚಿಂತೆಯ ಸಂಗತಿ.

ಇದನ್ನೂ ಓದಿ: ಪಾಕಿಸ್ತಾನಕ್ಕೆ ಸಾಲ ಕೊಡಬೇಡಿ: ಐಎಂಎಫ್​​​ಗೆ ಭಾರತ ಮನವಿ; ಈ ಸಾಲ ತಪ್ಪಿದರೆ ಪಾಕಿಸ್ತಾನಕ್ಕೆ ಏನು ಸಮಸ್ಯೆ?

ಭೂಷಣ್ ಪವರ್ ಅಂಡ್ ಸ್ಟೀಲ್ ಕಂಪನಿಯ ಮುಂದಿನ ಕಥೆ?

ಎಸ್​​​ಬಿಐ, ಬ್ಯಾಂಕ್ ಆಫ್ ಬರೋಡಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಕೆನರಾ ಬ್ಯಾಂಕ್ ಇತ್ಯಾದಿ ವಿವಿಧ ಬ್ಯಾಂಕುಗಳು ಒಟ್ಟು 38,000 ಕೋಟಿ ರೂಗೂ ಅಧಿಕ ಸಾಲ ನೀಡಿರುವುದಾಗಿ ಕ್ಲೇಮ್ ಮಾಡಿವೆ. ಇದನ್ನು ವಸೂಲಿ ಮಾಡುವುದು ಮೊದಲ ಆದ್ಯತೆ ಆಗಿರುತ್ತದೆ.

ಬಿಪಿಎಸ್​​ಎಲ್​​​ನ ತನಿಖೆ ಪೂರ್ಣಗೊಳಿಸಿದ ಬಳಿಕ ಅದನ್ನು ಮಾರಲು ಮತ್ತೊಮ್ಮೆ ಬಿಡ್​​ಗೆ ಕರೆಯುವ ಸಾಧ್ಯತೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ