ಭಾರತವನ್ನು ಪ್ರಯೋಗಶಾಲೆ ಎಂದ ಬಿಲ್ ಗೇಟ್ಸ್; ಸೋಷಿಯಲ್ ಮೀಡಿಯಾದಲ್ಲಿ ಟೀಕೆಗಳ ಸುರಿಮಳೆ

|

Updated on: Dec 03, 2024 | 12:32 PM

Bill Gates calls India as laboratory: ಭಾರತ ತಮ್ಮ ಪಾಲಿಗೆ ಒಂದು ಪ್ರಯೋಗಶಾಲೆಯಾಗಿದ್ದು, ಇಲ್ಲಿ ಯಶಸ್ವಿಯಾದಲ್ಲಿ ಬೇರೆಡೆ ಅದನ್ನು ಜಾರಿ ಮಾಡಬಹುದು ಎಂದು ಬಿಲ್ ಗೇಟ್ಸ್ ಹೇಳಿದ್ದಾರೆ. ರೀಡ್ ಹಾಫ್​​ಮ್ಯಾನ್ ಎನ್ನುವವರ ಜೊತೆ ಪೋಡ್​ಕ್ಯಾಸ್ಟ್​ನಲ್ಲಿ ಮಾತನಾಡುತ್ತಾ ಅವರು ಈ ವಿವಾದಾತ್ಮಕ ಹೇಳಿಕೆ ನೀಡಿದ್ಧಾರೆ. ಬಿಲ್ ಗೇಟ್ಸ್ ಅವರ ಈ ಮಾತಿಗೆ ಸೋಷಿಯಲ್ ಮೀಡಿಯಾದಲ್ಲಿ ಖಾರದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಭಾರತವನ್ನು ಪ್ರಯೋಗಶಾಲೆ ಎಂದ ಬಿಲ್ ಗೇಟ್ಸ್; ಸೋಷಿಯಲ್ ಮೀಡಿಯಾದಲ್ಲಿ ಟೀಕೆಗಳ ಸುರಿಮಳೆ
ಬಿಲ್ ಗೇಟ್ಸ್
Follow us on

ನವದೆಹಲಿ, ಡಿಸೆಂಬರ್ 3: ವಿಶ್ವಾದ್ಯಂತ, ಅದರಲ್ಲೂ ಭಾರತ, ಆಫ್ರಿಕಾದಂತಹ ಪ್ರದೇಶಗಳಲ್ಲಿ ಸಾಮಾಜಿಕ ಕಾರ್ಯಗಳನ್ನು ಮಾಡಲು ಯಶಸ್ವಿಯಾಗಿರುವ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಇತ್ತೀಚೆಗೆ ಪೋಡ್​ಕ್ಯಾಸ್ಟ್​ವೊಂದರಲ್ಲಿ ಭಾರತದ ಬಗ್ಗೆ ಆಡಿರುವ ಮಾತುಗಳು ವಿವಾದಕ್ಕೆ ಕಾರಣವಾಗಿವೆ. ರೀಡ್ ಹಾಫ್​ಮ್ಯಾನ್ ಜೊತೆಗೆ ಸಂವಾದ ನಡೆಸುವ ವೇಳೆ ಅವರು ಭಾರತವನ್ನು ಪ್ರಯೋಗಶಾಲೆಯಂತೆ ಪರಿಗಣಿಸಿರುವುದಾಗಿ ಹೇಳಿದ್ದು ನೆಟ್ಟಿಗರನ್ನು ರೊಚ್ಚಿಗೆಬ್ಬಿಸಿದೆ.

‘ಭಾರತದಲ್ಲಿ ಬಹಳಷ್ಟು ಕ್ಲಿಷ್ಟಕರ ಸಂಗತಿಗಳೆನಿಸಿದ್ದ ಆರೋಗ್ಯ, ಶಿಕ್ಷಣ, ಪೌಷ್ಟಿಕತೆಯ ಪರಿಸ್ಥಿತಿ ಈಗ ಅಲ್ಲಿ ಉತ್ತಮಗೊಳ್ಳುತ್ತಿದೆ. ಸಾಕಷ್ಟು ಸ್ಥಿರತೆ ಸಾಧಿಸಲಾಗಿದೆ. ಸರ್ಕಾರಕ್ಕೂ ಆದಾಯ ತಂದುಕೊಡುತ್ತಿದೆ. ಮುಂದಿನ 20 ವರ್ಷದಲ್ಲಿ ಅಲ್ಲಿನ ಜನರು ಇನ್ನೂ ಉತ್ತಮ ಸ್ಥಿತಿ ಪಡೆಯಬಹುದು. ಭಾರತದಂತಹ ದೇಶವು ಪ್ರಯೋಗಶಾಲೆಯಂತಿದ್ದು, ಹೊಸ ಪ್ರಯೋಗಗಳನ್ನು ಮಾಡಬಹುದು. ಅವು ಅಲ್ಲಿ ಯಶಸ್ವಿಯಾದಲ್ಲಿ ಬೇರೆಡೆ ಅದನ್ನು ಜಾರಿಗೆ ತರಬಹುದು’ ಎಂದು ಪೋಡ್​ಕ್ಯಾಸ್ಟ್​ನಲ್ಲಿ ಬಿಲ್ ಗೇಟ್ಸ್ ಹೇಳಿದ್ದಾರೆ.

ಇದನ್ನೂ ಓದಿ: ಇನ್​ಫ್ರಾಸ್ಟ್ರಕ್ಚರ್ ಯೋಜನೆಗಳ ಪರಿಣಾಮಕಾರಿ ಜಾರಿ: ಪ್ರಧಾನಿ ಮೋದಿ, ‘ಪ್ರಗತಿ’ ಪರಿಣಾಮ ಗುರುತಿಸಿದ ಆಕ್ಸ್​ಫರ್ಡ್ ಅಧ್ಯಯನ

‘ಅಮೆರಿಕದ ಹೊರಗೆ ನಮ್ಮ ಅತಿದೊಡ್ಡ ಕಛೇರಿ ಇರುವುದು ಭಾರತದಲ್ಲೇ. ಅತಿ ಹೆಚ್ಚು ಹೊಸ ಪ್ರಯೋಗಗಳನ್ನು ನಾವು ಭಾರತದಲ್ಲಿನ ಸಹಭಾಗಿದಾರರ ಜೊತೆಗೂಡಿ ಮಾಡುತ್ತಿದ್ದೇವೆ’ ಎಂದು ಅವರು ಮಾತನಾಡಿದ್ದಾರೆ. ಅವರ ಈ ಸಂದರ್ಶನದ ತುಣಕು ಸೋಷಿಯಲ್ ಮೀಡಿಯಾದಲ್ಲಿ ತೀಕ್ಷ್ಣ ಪ್ರತಿಕ್ರಿಯೆಗಳನ್ನು ಆಹ್ವಾನಿಸಿದೆ.

ಬಹಳಷ್ಟು ಜನರು ಬಿಲ್ ಗೇಟ್ಸ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಲ್ ಗೇಟ್ಸ್ ಅವರು ಮನುಷ್ಯರನ್ನು ಪ್ರಯೋಗ ವಸ್ತುಗಳನ್ನಾಗಿ ಮಾಡಿಕೊಂಡಿರುವ ಪೈಶಾಚಿಕ ವ್ಯಕ್ತಿ ಎಂದು ಬಹಳ ಜನರು ಟೀಕಿಸಿದ್ದಾರೆ.

‘ಭಾರತದಲ್ಲಿರುವ ಮನುಷ್ಯರು ಬಿಲ್ ಗೇಟ್ಸ್​ನ ಲ್ಯಾಬೊರೇಟರಿಯಲ್ಲಿ ಪ್ರಯೋಗ ಮಾಡಲು ಬಳಕೆಯಾಗುವ ಸ್ಯಾಂಪಲ್​ಗಳಾಗಿದ್ದಾರೆ. ಇಲ್ಲಿ ಪರಿಣಾಮಕಾರಿ ಎನಿಸಿದರೆ ಅದನ್ನು ಅಮೆರಿಕದಲ್ಲಿ ಜಾರಿ ಮಾಡಲಾಗುತ್ತದೆ. ನೀವು ಯಾವುದೇ ಹಿನ್ನೆಲೆಯಲ್ಲಿ ಈ ಮಾತುಗಳನ್ನು ಕೇಳಿದರೂ ಅಪಥ್ಯ ಎನಿಸುತ್ತದೆ. ಸರ್ಕಾರಗಳ ಬೆಂಬಲದಲ್ಲಿ ನಡೆಯುವ ಸಂಶೋಧನೆಗಳು ಬೇರಾವುದೋ ಹಿತಾಸಕ್ತಿಗಳನ್ನು ಹೊಂದಿರಬಹುದೆಂದು ಅನಿಸುತ್ತದೆ,’ ಎಂದು ಎಕ್ಸ್ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಪಂಚಾಯತಿ ಸ್ತರದಲ್ಲಿ ಪರಿವರ್ತನೆ ತರುತ್ತಿರುವ ಕೃತಕ ಬುದ್ಧಿಮತ್ತೆಯ ಭಾಷಿಣಿ ಆ್ಯಪ್

ಬಿಲ್ ಗೇಟ್ಸ್ ಭಾರತಕ್ಕೆ ಬಂದರೆ ಅವರನ್ನು ಬಂಧಿಸುವ ಕೆಲಸ ಮಾಡಿ ಎಂದು ಮತ್ತೊಬ್ಬ ಬಳಕೆದಾರ ಆಗ್ರಹಿಸಿದ್ದಾರೆ.

ಮೈಕ್ರೋಸಾಫ್ಟ್ ಸಂಸ್ಥಾಪಕರಾದ ಬಿಲ್ ಗೇಟ್ಸ್ ಈಗ ಕಂಪನಿಯಲ್ಲಿ ಕ್ರಿಯಾಶೀಲರಾಗಿ ಉಳಿದಿಲ್ಲ. ಕೇವಲ ಷೇರುದಾರ ಮಾತ್ರ ಆಗಿದ್ದಾರೆ. ಅದುವೇ ಅವರ ಈಗಿನ ಪ್ರಮುಖ ಆದಾಯ ಮೂಲ. ಗೇಟ್ಸ್ ಫೌಂಡೇಶನ್ ಮೂಲಕ ಅವರು ಸಾಮಾಜಿಕ ಕಾರ್ಯಗಳಿಗೆ ನೆರವಾಗುತ್ತಿದ್ದಾರೆ. ಲಸಿಕೆ, ಶಿಕ್ಷಣ ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಗೇಟ್ಸ್ ಫೌಂಡೇಶನ್ ಸಕ್ರಿಯವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:31 pm, Tue, 3 December 24