ನವದೆಹಲಿ: ಏಷ್ಯಾದ ಅತ್ಯಂತ ಶ್ರೀಮಂತ ಮತ್ತು ವಿಶ್ವದ ಶ್ರೀಮಂತ ವ್ಯಕ್ತಿ ಎಂದೇ ಪರಿಗಣಿಸಲ್ಪಟ್ಟಿದ್ದ ಉದ್ಯಮಿ ಗೌತಮ್ ಅದಾನಿ (Gautam Adani) ಅವರ ಸಂಪತ್ತಿನಲ್ಲಿ ಕಳೆದ ಕೆಲವು ದಿನಗಳಲ್ಲಿ ಭಾರೀ ಕುಸಿತವಾಗಿದೆ. ಪರಿಣಾಮವಾಗಿ ಅವರು ‘ಬ್ಲೂಮ್ಬರ್ಗ್ ಕೋಟ್ಯಧಿಪತಿಗಳ ಸೂಚ್ಯಂಕ (Bloomberg Billionaires Index)’ದ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಅಗ್ರ 10ರಿಂದ ಹೊರಬಿದ್ದಿದ್ದಾರೆ. ಪಟ್ಟಿಯಲ್ಲಿ ಅದಾನಿ 11ನೇ ಸ್ಥಾನಕ್ಕೆ ಕುಸಿದಿದ್ದಾರೆ. ಜನವರಿ 24ರಂದು ಅದಾನಿ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದರು. ಅಮೆಜಾನ್ ಸ್ಥಾಪಕ ಜೆಫ್ ಬೆಜೋಸ್ ಮೂರನೇ ಸ್ಥಾನಕ್ಕೇರಿದ್ದರು. ಇದರ ಬೆನ್ನಲ್ಲೇ ಅದಾನಿ ಸಮೂಹದ ವಿರುದ್ಧ ಅಮೆರಿಕದ ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆ ಮಾಡಿರುವ ಆರೋಪ ಅದಾನಿ ಸಂಪತ್ತು ಕರಗಲು ಕಾರಣವಾಗಿದೆ.
ಗೌತಮ್ ಅದಾನಿ ಅವರ ಸಂಪತ್ತು ಈಗ 84.4 ಶತಕೋಟಿ ಡಾಲರ್ ಆಗಿದ್ದರೆ, ಜೆಫ್ ಬೆಜೋಸ್ ಸಂಪತ್ತು 124 ಶತಕೋಟಿ ಡಾಲರ್ ಆಗಿದೆ. 189 ಶತಕೋಟಿ ಡಾಲರ್ ಸಂಪತ್ತಿನೊಂದಿಗೆ ಬರ್ನಾರ್ಡ್ ಅರ್ನಾಲ್ಟ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಗೌತಮ್ ಅದಾನಿ ಅವರ ಸಂಪತ್ತಿನಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 8.21 ಶತಕೋಟಿ ಡಾಲರ್ ಕುಸಿತವಾಗಿದೆ. ಒಟ್ಟಾರೆಯಾಗಿ ವಾರ್ಷಿಕ 36.1 ಶತಕೋಟಿ ಡಾಲರ್ ಕುಸಿತವಾಗಿದೆ ಎಂದು ಬ್ಲೂಮ್ಬರ್ಗ್ ಸೂಚ್ಯಂಕದಿಂದ ತಿಳಿದುಬಂದಿದೆ.
ಇದನ್ನೂ ಓದಿ: LIC: ಅದಾನಿ ಸಮೂಹದಲ್ಲಿ ಮಾಡಿರುವ ಹೂಡಿಕೆ ಎಷ್ಟು? ಕೊನೆಗೂ ಸ್ಪಷ್ಟನೆ ನೀಡಿದ ಎಲ್ಐಸಿ
ಬ್ಲೂಮ್ಬರ್ಗ್ ಕೋಟ್ಯಧಿಪತಿಗಳ ಸೂಚ್ಯಂಕ ಪ್ರತಿ ದಿನದ ರ್ಯಾಂಕಿಂಗ್ ಆಗಿದೆ. ಜಗತ್ತಿನ ಅತ್ಯಂತ ಶ್ರೀಮಂತ 500 ಮಂದಿಯ ಹೆಸರು ಒಳಗೊಂಡ ಪಟ್ಟಿ ಇದಾಗಿದೆ. 2012ರಲ್ಲಿ ಮೊದಲು ಈ ಪಟ್ಟಿ ಪ್ರಕಟಗೊಂಡಿತ್ತು. ಆಗ ಅತ್ಯಂತ ಶ್ರೀಮಂತರ 20 ಹೆಸರುಗಳನ್ನು ಪಟ್ಟಿ ಒಳಗೊಂಡಿತ್ತು. ಕ್ರಮೇಣ ಸಂಖ್ಯೆಯನ್ನು 100, 200 ಹೀಗೆ ಹೆಚ್ಚಿಸುತ್ತಾ 2016ರಲ್ಲಿ 500ಕ್ಕೆ ನಿಗದಿಪಡಿಸಲಾಗಿದೆ.
ಲೆಕ್ಕಪತ್ರ ವಂಚನೆ ಮತ್ತು ಷೇರು ಬೆಲೆ ತಿರುಚಿದ ವಿಷಯಕ್ಕೆ ಸಂಬಂಧಿಸಿ ಅದಾನಿ ಸಮೂಹದ ವಿರುದ್ಧ ಹಿಂಡನ್ಬರ್ಗ್ ರಿಸರ್ಚ್ ಕಳೆದ ವಾರ ಮಾಡಿದ್ದ ಆರೋಪವು ಕಂಪನಿಯ ಷೇರು ವಹಿವಾಟಿನ ಮೇಲೆ ಭಾರೀ ಪ್ರಭಾವ ಬೀರಿದೆ. ಜನವರಿ 27ರ ನಂತರ ಈವರೆಗೆ ಒಟ್ಟಾರೆಯಾಗಿ ಅದಾನಿ ಸಮೂಹದ ಕಂಪನಿಗಳು 5.56 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿವೆ. ಪರಿಣಾಮವಾಗಿ ಅದಾನಿ ಸಂಪತ್ತಿನಲ್ಲಿ ಕುಸಿತವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ