Budget 2023 Expectations: ಸುಲಭವಾಗಿ ಸಿಗ್ತೀವಿ ಅಂತ ಇನ್ನಷ್ಟು ಹೊರೆ ಬೇಡ ಮೇಡಂ, ನಿರ್ಮಲಾ ಬಜೆಟ್‌ನಿಂದ ಸಂಬಳದಾರರ ನಿರೀಕ್ಷೆಗಳಿವು
ಸಂಬಳದಾರರ ಕೈಲಿ ಹಣ ಉಳಿದರೆ ಅದು ಆರ್ಥಿಕ ಚಕ್ರ ತಿರುಗಲು ನೆರವಾಗುತ್ತದೆ. ಇದು ಸರ್ಕಾರ ಮತ್ತು ತೆರಿಗೆದಾರರಿಗೆ ಏಕಕಾಲಕ್ಕೆ ಅನುಕೂಲ ಕಲ್ಪಿಸುವ ಕ್ರಮವಾಗಲಿದೆ
ಪ್ರತಿವರ್ಷ ಬಜೆಟ್ ಚರ್ಚೆಗಳು ಆರಂಭವಾದಾಗ ತಪ್ಪದೆ ಕೇಳಿಬರುವ ಮಾತು ‘ಸಂಬಳದಾರರ ನಿರೀಕ್ಷೆಗಳು’ (Budget Expectations of Salaried Class). ಭಾರತ ಸರ್ಕಾರದ ಅತಿದೊಡ್ಡ ಮತ್ತು ಖಾತ್ರಿಪಡಿಸಿದ ಆದಾಯದ ಮೂಲವಾಗಿರುವ ಆದಾಯ ತೆರಿಗೆಯನ್ನು (Income Tax) ಶ್ರದ್ಧೆಯಿಂದ ತುಂಬುವ, ತುಂಬದಿದ್ದರೆ ಉಳಿಗಾಲವೇ ಇಲ್ಲದ ವರ್ಗ ಇದು. ಸಂಬಳ ಪಡೆಯುವವರಿಗಿಂತಲೂ ಹಲವು ಪಟ್ಟು ಆದಾಯ ಇರುವ ಹಲವು ರೀತಿಯ ಉದ್ಯೋಗ, ವೃತ್ತಿ, ಉದ್ಯಮಗಳಿದ್ದರೂ ಅದರಲ್ಲಿ ತೊಡಗಿರುವವರು ನಿಷ್ಠೆಯಿಂದ ತೆರಿಗೆ ತುಂಬುತ್ತಾರೆ ಎಂದೇನೂ ಇಲ್ಲ. ತೆರಿಗೆ ಉಳಿಸಿಕೊಳ್ಳಲು ಅಂಥವರಿಗೆ ಮಾರ್ಗಗಳೂ ಸಾಕಷ್ಟಿವೆ. ಆದರೆ ಜೀವನಕ್ಕಾಗಿ ವೇತನವನ್ನೇ ನೆಚ್ಚಿಕೊಂಡವರ ಪರಿಸ್ಥಿತಿ ಹಾಗಲ್ಲ. ಅವರಿಗೆ ಬರುವ ಪ್ರತಿ ಪೈಸೆಯೂ ಲೆಕ್ಕಕ್ಕೆ ಸಿಗುವುದರಿಂದ ಆದಾಯ ತೆರಿಗೆ ಪಾವತಿಯಲ್ಲಿ ಒಂದು ರೂಪಾಯಿ ಹೆಚ್ಚಾಗಬಹುದೇ ಹೊರತು, ಕಡಿಮೆಯಾಗುವುದು ಅಪರೂಪ. ಪ್ರತಿ ವರ್ಷ ಬಜೆಟ್ ಕಾಲದಲ್ಲಿ (Budget 2023) ತೆರಿಗೆ ರಿಯಾಯ್ತಿ ಮತ್ತು ಇತರ ಕೆಲ ಸೌಲಭ್ಯಗಳಿಗಾಗಿ ಸರ್ಕಾರದತ್ತ ಆಸೆಗಣ್ಣಿನಿಂದ ನೋಡುವುದು ವಾಡಿಕೆ.
ಇಡೀ ಜಗತ್ತು ಆರ್ಥಿಕ ಬಿಕ್ಕಟ್ಟಿನ ಸುಳಿಗೆ ಸಿಲುಕಿದ್ದರೂ ಭಾರತದ ಪ್ರಗತಿ ದರವು ಯಥಾಸ್ಥಿತಿಯಲ್ಲಿದೆ. ಇದು ಭಾರತಕ್ಕಿರುವ ಅದಮ್ಯ ಅವಕಾಶಗಳನ್ನು ಮತ್ತು ಅಭಿವೃದ್ಧಿಯ ಅವಕಾಶಗಳನ್ನು ಬಿಂಬಿಸುತ್ತದೆ. ಇಂಥ ಬೃಹತ್ ಆರ್ಥಿಕತೆಯ ಪ್ರಗತಿ ದರ ಕಾಪಾಡಲು ಸರ್ಕಾರಕ್ಕೆ ಸಂಪನ್ಮೂಲಗಳೂ ಬೇಕೇಬೇಕು. ಹೀಗಾಗಿ ಬಜೆಟ್ ಎನ್ನುವುದು ಆದಾಯ ಮತ್ತು ಖರ್ಚಿನ ನಡುವಣ ಸಮತೋಲನದ ನಡಿಗೆ ಆಗುತ್ತದೆ. ಕಡಿಮೆ ಖರ್ಚಿನಲ್ಲಿ ದೀರ್ಘಾವಧಿಗೆ ಒದಗಿ ಬರುವ ಹಣ ಒಗ್ಗೂಡಿಸಲು ತೆರಿಗೆ ರಿಯಾಯ್ತಿಯ ಆಸೆ ಹುಟ್ಟಿಸುವ ಉಳಿತಾಯ ಯೋಜನೆಗಳು ನೆರವಾಗುತ್ತವೆ. ಸಂಬಳದಾರರ ಕೈಲಿ ಹಣ ಉಳಿದರೆ ಅದು ಆರ್ಥಿಕ ಚಕ್ರ ತಿರುಗಲು ನೆರವಾಗುತ್ತದೆ. ಇದು ಸರ್ಕಾರ ಮತ್ತು ತೆರಿಗೆದಾರರಿಗೆ ಏಕಕಾಲಕ್ಕೆ ಅನುಕೂಲ ಕಲ್ಪಿಸುವ ಕ್ರಮವಾಗಲಿದೆ.
ಈ ವರ್ಷದ ಬಜೆಟ್‌ನಿಂದ ವೇತನದಾರರು ನಿರೀಕ್ಷಿಸುತ್ತಿರುವ ರಿಯಾಯ್ತಿಗಳಿವು.
ತೆರಿಗೆ ಮಿತಿ
ಕಳೆದ ಹಲವು ವರ್ಷಗಳಿಂದ ಸಂಬಳದಾರರು ತೆರಿಗೆ ಪಾವತಿಗೆ ಇರುವ ಕನಿಷ್ಠ ಮಿತಿಯನ್ನು 5 ಲಕ್ಷ ರೂಪಾಯಿಗೆ ಹೆಚ್ಚಿಸಲು ಕೋರುತ್ತಿದ್ದಾರೆ. ವರ್ಷಕ್ಕೆ 5 ಲಕ್ಷಕ್ಕೂ ಹೆಚ್ಚು ಸಂಬಳ ಪಡೆಯುವವರು 15,000 ರೂಪಾಯಿಯನ್ನು ಮಧ್ಯಮ ಅವಧಿಯ (ಕನಿಷ್ಠ 3 ವರ್ಷ) ಉಳಿತಾಯ ಯೋಜನೆಯಲ್ಲಿ ಕಡ್ಡಾಯವಾಗಿ ತೊಡಗಿಸಬೇಕೆನ್ನುವ ನಿಯಮ ಜಾರಿಗೆ ಬರಬಹುದು. ತೆರಿಗೆ ವಿಧಿಸುವಲ್ಲಿ ಈಗಿರುವಂತೆ ಶೇ 10, ಶೇ 20, ಶೇ 30 ಎನ್ನುವ ಮೂರು ಹಂತಗಳನ್ನು (ಸ್ಲ್ಯಾಬ್) ಉಳಿಸಿಕೊಳ್ಳಬಹುದು. ಆದರೆ ಹೆಚ್ಚುವರಿ ಸರ್‌ಚಾರ್ಜ್ ಮತ್ತು ಸೆಸ್‌ಗಳನ್ನು ರದ್ದುಪಡಿಸಬೇಕು. ಹಳೆಯ ಮತ್ತು ಹೊಸ ತೆರಿಗೆ ಪದ್ಧತಿಗಳಿಗೆ (old & new tax regime) ಬದಲಾಗಿ ಒಂದೇ ಮಾದರಿಯ ತೆರಿಗೆ ಪದ್ಧತಿ ಉಳಿಸಿಕೊಳ್ಳಬೇಕು ಎಂಬ ನಿರೀಕ್ಷೆಗಳನ್ನು ಸಂಬಳದಾರರು ಹೊಂದಿದ್ದಾರೆ.
ವಿನಾಯ್ತಿಗಳು
ಹೂಡಿಕೆಯ ಮೇಲೆ ತೆರಿಗೆ ವಿನಾಯ್ತಿ ನೀಡುವ ಆದಾಯ ತೆರಿಗೆಯ 80 ಸಿ ನಿಯಮಗಳು ತೆರಿಗೆದಾರರ ಹಣಕಾಸು ಪರಿಸ್ಥಿತಿಯ ಮೇಲೆ ನೇರ ಪರಿಣಾಮ ಬೀರುತ್ತವೆ. ’80 ಸಿ’ ನಿಯಮಗಳ ಮಿತಿಯನ್ನು ಕನಿಷ್ಠ 15 ಲಕ್ಷಕ್ಕೆ ಹೆಚ್ಚಿಸಬೇಕು. ಹೂಡಿಕೆಯ ವೇಳೆ ಅಸಲಿಗೆ ಮತ್ತು ಹಿಂಪಡೆಯುವ ವೇಳೆ ಬಡ್ಡಿಗೆ ತೆರಿಗೆ ವಿನಾಯ್ತಿ ಇರುವ ಮಧ್ಯಮ ಮತ್ತು ದೀರ್ಘಾವಧಿ ಹೂಡಿಕೆಗೆ ಆಯ್ಕೆಗಳು ಸಿಗಬೇಕು ಎನ್ನುವ ಬೇಡಿಕೆ ವೇತನದಾರರಿಂದ ಕೇಳಿಬರುತ್ತಿದೆ. ಇಂಥ ಹೂಡಿಕೆಗೆ ಸಿಗುವ ಪ್ರತಿಫಲ ಅಥವಾ ಬಡ್ಡಿಯು ಬ್ಯಾಂಕುಗಳು ಕೊಡುವ ಬಡ್ಡಿಗಿಂತಲೂ ಕಡಿಮೆಯಿದ್ದರೂ ಪರವಾಗಿಲ್ಲ ಎನ್ನುವ ಬೇಡಿಕೆ ವೇತನದಾರರಿಂದ ಕೇಳಿಬರುತ್ತಿದೆ.
ಗೃಹ, ನಿವೇಶನ ಸಾಲ
ಅಸಂಘಟಿತ ಕಾರ್ಮಿಕರಿಗೆ ದೊಡ್ಡಮಟ್ಟದಲ್ಲಿ ಉದ್ಯೋಗಾವಕಾಶ ಕಲ್ಪಿಸುವ ರಿಯಲ್ ಎಸ್ಟೇಟ್‌ಗೆ ಹೊಸ ವೇಗ ನೀಡುವ ಬಗ್ಗೆಯೂ ಈ ಬಾರಿಯ ಬಜೆಟ್‌ನಲ್ಲಿ ಕೇಂದ್ರ ಹಣಕಾಸು ಇಲಾಖೆ ಚಿಂತನೆ ನಡೆಸಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಗೃಹಸಾಲದ ಮೇಲಿನ ತೆರಿಗೆ ವಿನಾಯ್ತಿಯನ್ನು ಇನ್ನಷ್ಟು ಹೆಚ್ಚಿಸಬೇಕು. ನಿವೇಶನಗಳ ಖರೀದಿಗೆ ಮಾಡಿದ ಸಾಲವನ್ನು ತೀರಿಸುವ ಇಎಂಐಗಳಿಗೆ ತೆರಿಗೆ ವಿನಾಯ್ತಿ ಕೊಡಬೇಕು ಎಂಬ ಬೇಡಿಕೆ ಇದೆ.
ಎಲ್‌ಟಿಎ, ಮೆಡಿಕಲ್
ಉದ್ಯೋಗಿಗಳ ಪ್ರವಾಸಕ್ಕಾಗಿ ನೀಡುವ ಎಲ್‌ಟಿಎ ಗೆ (Leave Travel Allowance – LTA) ನಾಲ್ಕು ವರ್ಷಗಳಲ್ಲಿ ಎರಡು ಬಾರಿ ಎಂಬ ಮಿತಿ ವಿಧಿಸಲಾಗಿದೆ. ಇದನ್ನು ಪ್ರತಿ ಹಣಕಾಸು ವರ್ಷದಲ್ಲಿ ಒಮ್ಮೆ ಎಂದು ಘೋಷಿಸಬೇಕು. ಇದರಲ್ಲಿ ಪ್ರವಾಸದ ವೆಚ್ಚ, ವಸತಿ ವೆಚ್ಚ ಮತ್ತು ಮನರಂಜನಾ ವೆಚ್ಚಗಳನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕು. ವಿದೇಶ ಪ್ರಯಾಣಕ್ಕೂ ಎಲ್‌ಟಿಎ ರಿಯಾಯ್ತಿ ಬೇಕು. ಪ್ರಸ್ತುತ ಕೇವಲ ಪ್ರಯಾಣದ ವೆಚ್ಚವನ್ನು ಪರಿಗಣಿಸಲಾಗುತ್ತಿದೆ. ಇದು ಬದಲಾಗಬೇಕು ಎಂದು ವೇತನದಾರ ವರ್ಗ ಕೋರಿದೆ.
ಭಾರತದಲ್ಲಿ ಕೊವಿಡ್ ಪಿಡುಗು ವ್ಯಾಪಿಸಿದ ನಂತರ ಆರೋಗ್ಯದ ಮೇಲಿನ ವೆಚ್ಚ ಹೆಚ್ಚಾಗಿದೆ. ಆರೋಗ್ಯ ವಿಮೆ ಕಂತುಗಳ ಮೊತ್ತವನ್ನೂ ಕಂಪನಿಗಳು ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಿಸಿವೆ. ಹೀಗಾಗಿ ಆರೋಗ್ಯ ವಿಮೆಯ ಕಂತಿನ ಮೇಲೆ ಪ್ರಸ್ತುತ ನೀಡುತ್ತಿರುವ ’80 ಡಿ’ ರಿಯಾಯ್ತಿಯನ್ನು ಕನಿಷ್ಠ 2 ಲಕ್ಷಕ್ಕೆ ಹೆಚ್ಚಿಸಬೇಕು. ಇದರಲ್ಲಿ ವಯೋಮಿತಿಯ ನಿರ್ಬಂಧ ಇರಬಾರದು ಎಂದು ಹಲವರು ಮನವಿ ಮಾಡಿದ್ದಾರೆ.
ಮಕ್ಕಳ ಶಿಕ್ಷಣ
ಭಾರತ ಮತ್ತು ವಿದೇಶಗಳಲ್ಲಿನ ಕಲಿಕೆಗಾಗಿ ಶಿಕ್ಷಣ ಸಾಲ ಸಿಗುತ್ತಿದೆ. ಶಿಕ್ಷಣ ಸಾಲದ ಮರುಪಾವತಿಗೆ ‘ಸೆಕ್ಷನ್ 80 ಇ’ ಅನ್ವಯ ತೆರಿಗೆ ವಿನಾಯ್ತಿ ಸಿಗಲಿದೆ. ಇದೇ ರೀತಿ ಮಕ್ಕಳ ಶಿಕ್ಷಣಕ್ಕೆ ಪೋಷಕರು ಮಾಡುವ ಖರ್ಚಿಗೂ (Children Education allowance – CEA) ತೆರಿಗೆ ವಿನಾಯ್ತಿ ಇದೆ. 2014ರ ನಂತರ ಶೈಕ್ಷಣಿಕ ವೆಚ್ಚದ ಮೇಲಿನ ತೆರಿಗೆ ವಿನಾಯ್ತಿ ಮಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಶಿಕ್ಷಣದ ಸ್ವರೂಪ ಮತ್ತು ವೆಚ್ಚ ಕಳೆದ 8 ವರ್ಷಗಳಲ್ಲಿ ಸಾಕಷ್ಟು ಬದಲಾಗಿರುವುದರಿಂದ ಸರ್ಕಾರ ಶಿಕ್ಷಣ ವೆಚ್ಚದ ಮೇಲಿನ ತೆರಿಗೆ ವಿನಾಯ್ತಿ ಮಿತಿಯನ್ನೂ ಹೆಚ್ಚಿಸಬೇಕು ಎಂಬ ಬೇಡಿಕೆ ಪ್ರಬಲವಾಗುತ್ತಿದೆ.
ಮೆಟ್ರೊ ನಗರಗಳ ವ್ಯಾಖ್ಯಾನ
ಸರ್ಕಾರವು ಕಾರ್ಪೊರೇಟ್ ಕಂಪನಿಗಳು ಮತ್ತು ಕಾರ್ಪೊರೇಟ್ ಉದ್ಯೋಗಗಳಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ. ಹೀಗಾಗಿ ಬೆಂಗಳೂರು, ಹೈದರಾಬಾದ್ ಮತ್ತು ಪುಣೆಯಂಥ ನಗರಗಳಲ್ಲಿ ಜೀವನವೆಚ್ಚ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಈ ಅಂಶವನ್ನು ಗಮನದಲ್ಲಿರಿಸಿಕೊಂಡು ಸರ್ಕಾರವು ಮೆಟ್ರೊ ನಗರಗಳ ವ್ಯಾಖ್ಯಾನವನ್ನು ಬದಲಿಸಬೇಕು ಎಂಬ ಬೇಡಿಕೆ ಹೆಚ್ಚಾಗಿದೆ. ಹೀಗೆ ಮಾಡುವುದರಿಂದ ಸಹಜವಾಗಿಯೇ ಸಂಬಳದಾರರಿಗೆ ಸಿಗುವ ತೆರಿಗೆ ವಿನಾಯ್ತಿ ಹೆಚ್ಚಾಗುತ್ತದೆ. ಹಲವು ಅನುಕೂಲಗಳೂ ಸಿಗುತ್ತವೆ.
ಸೌಲಭ್ಯಗಳು ಮತ್ತು ಅನುಕೂಲಗಳು
ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವವರನ್ನು ಸುಲಭವಾಗಿ ಗುರುತಿಸಲು ಅನುಕೂಲವಾಗುವಂಥ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಂಥವರು ಬ್ಯಾಂಕ್‌ಗಳಿಂದ ಪಡೆಯುವ ಸಾಲಕ್ಕೆ ರಿಯಾಯ್ತಿ ಸಿಗಬೇಕು. ಎಫ್‌ಡಿಗಳಿಗೆ ಹೆಚ್ಚು ಬಡ್ಡಿ ಕೊಡಬೇಕು. ವಿಮಾ (ಆರೋಗ್ಯ, ಜೀವ, ಸಾಮಾನ್ಯ) ಪಾಲಿಸಿಗಳು ಹಾಗೂ ಪ್ರಯಾಣಿದ ಟಿಕೆಟ್‌ಗಳ (ಬಸ್, ರೈಲು, ವಿಮಾನ) ಖರೀದಿ ವೇಳೆ ತೆರಿಗೆ ವಿನಾಯ್ತಿ ಸಿಗಬೇಕು ಎಂಬ ಬೇಡಿಕೆಗಳನ್ನು ಮಂಡಿಸಲಾಗಿದೆ.
ಮತ್ತಷ್ಟು ಬಜೆಟ್ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:40 pm, Tue, 31 January 23