
ನವದೆಹಲಿ, ಸೆಪ್ಟೆಂಬರ್ 11: ಬ್ರಿಕ್ಸ್ ಗುಂಪಿನ ಸದಸ್ಯ ರಾಷ್ಟ್ರಗಳು ಪರಸ್ಪರ ಹಣಕಾಸು ಮತ್ತು ಆರ್ಥಿಕ ಸಹಕಾರ ನೀಡಬೇಕೆಂದು ಇಂಗಿತ ವ್ಯಕ್ತಪಡಿಸಿವೆ. ಬ್ರಿಕ್ಸ್ ಶೃಂಗಸಭೆಗೆ ಮುನ್ನ ಈ ಗುಂಪಿನ ಎಲ್ಲಾ ದೇಶಗಳ ಹಣಕಾಸು ಸಚಿವರು ಹಾಗೂ ಸೆಂಟ್ರಲ್ ಬ್ಯಾಂಕ್ ಗವರ್ನರ್ಗಳು ಜಂಟಿ ಹೇಳಿಕೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ. ಇವರ ಸಭೆ ನಿನ್ನೆ (ಸೆ. 10) ನಡೆದಿದ್ದು, ಅದಾದ ಬಳಿಕ ಜಂಟಿ ಹೇಳಿಕೆ ಹೊರಬಂದಿದೆ. ಜಾಗತಿಕ ಹಣಕಾಸು ಸಂಸ್ಥೆಗಳ ಸುಧಾರಣೆ, ಸ್ಥಳೀಯ ಕರೆನ್ಸಿಗಳಲ್ಲಿ ವಹಿವಾಟು ಹಾಗೂ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಜವಾಬ್ದಾರಿಯುತ ಬಳಕೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಈ ಸಭೆಯಲ್ಲಿ ಚರ್ಚಿಸಲಾಗಿದೆ.
ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಮತ್ತು ವಿಶ್ವಬ್ಯಾಂಕ್‌ನಂತಹ ಜಾಗತಿಕ ಹಣಕಾಸು ಸಂಸ್ಥೆಗಳಲ್ಲಿ ಉದಯೋನ್ಮುಖ ಮತ್ತು ಅಭಿವೃದ್ಧಿಶೀಲ ದೇಶಗಳಿಗೆ (Emerging Markets & Developing Economies) ಹೆಚ್ಚಿನ ಪ್ರಾತಿನಿಧ್ಯ ಮತ್ತು ಧ್ವನಿ ಸಿಗಬೇಕೆಂದು ಬ್ರಿಕ್ಸ್ ಒತ್ತಾಯಿಸಿದೆ. ಐಎಂಎಫ್‌ನ ಕೋಟಾ ಪರಿಶೀಲನೆ (Quota Review) ಶೀಘ್ರದಲ್ಲೇ ನ್ಯಾಯಯುತವಾಗಿ ನಡೆಯಬೇಕೆಂದು ಆಗ್ರಹಿಸಲಾಗಿದೆ.
ಇದನ್ನೂ ಓದಿ: ಬ್ರಿಕ್ಸ್ ಶೃಂಗಸಭೆ 2026: ಭಾರತೀಯ ಕಂಪನಿಗಳು, ಹೂಡಿಕೆದಾರರು, ವ್ಯಾಪಾರ, ಬಂಡವಾಳ ಹರಿವಿಗೆ ಸಿಗಲಿದೆ ಪುಷ್ಟಿ
ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ನಡುವಿನ ಗಡಿಯಾಚೆಗಿನ ವ್ಯಾಪಾರ ಮತ್ತು ಆರ್ಥಿಕ ವಹಿವಾಟುಗಳಲ್ಲಿ ಅಮೆರಿಕನ್ ಡಾಲರ್ ಬದಲಿಗೆ ಸ್ಥಳೀಯ ಕರೆನ್ಸಿಗಳನ್ನು (Local Currencies) ಬಳಸುವುದನ್ನು ಪ್ರೋತ್ಸಾಹಿಸಲು ನಿರ್ಧರಿಸಲಾಗಿದೆ. ಇದರಿಂದ ಹಣಕಾಸು ವೆಚ್ಚ ಕಡಿಮೆಯಾಗುವುದಲ್ಲದೆ, ಜಾಗತಿಕ ಆರ್ಥಿಕ ಆಘಾತಗಳಿಂದ ರಕ್ಷಣೆ ಸಿಗಲಿದೆ.
ಹಣಕಾಸು ವಲಯದಲ್ಲಿ ಕೃತಕ ಬುದ್ಧಿಮತ್ತೆ (AI) ಬಳಕೆಯ ಮಹತ್ವವನ್ನು ಒಪ್ಪಿಕೊಳ್ಳಲಾಗಿದ್ದು, ಇದರ ಸುರಕ್ಷಿತ, ಜವಾಬ್ದಾರಿಯುತ ಮತ್ತು ಸಮ್ಮಿಶ್ರ ಬಳಕೆಗೆ ಒತ್ತು ನೀಡಲಾಗಿದೆ. ತಂತ್ರಜ್ಞಾನದ ದುರ್ಬಳಕೆ ತಡೆಯಲು ಮತ್ತು ನಿಯಂತ್ರಣ ಚೌಕಟ್ಟು ರೂಪಿಸಲು ಸದಸ್ಯ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡಲಿವೆ.
ಭಾರತದ ಗುಜರಾತ್‌ನಲ್ಲಿರುವ ‘ಗಿಫ್ಟ್ ಸಿಟಿ’ಯಲ್ಲಿ (GIFT City) ‘ರಿಸ್ಕ್ ಲ್ಯಾಬ್’ (Risk Lab) ಅಥವಾ ಅಪಾಯ ನಿರ್ವಹಣಾ ಕೇಂದ್ರವನ್ನು ಬ್ರಿಕ್ಸ್ ಚೌಕಟ್ಟಿನಡಿಯಲ್ಲಿ ಬಲಪಡಿಸುವ ಕುರಿತು ಚರ್ಚಿಸಲಾಗಿದೆ. ಇದು ಹಣಕಾಸು ಅಪಾಯಗಳನ್ನು ವಿಶ್ಲೇಷಿಸಲು ಮತ್ತು ಜಾಗತಿಕ ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳಲು ನೆರವಾಗಲಿದೆ.
ಇದನ್ನೂ ಓದಿ: ಮುಕ್ತ ವ್ಯಾಪಾರ ಒಪ್ಪಂದಗಳು ಕೃಷಿ ಕ್ಷೇತ್ರಕ್ಕೆ ಹಾನಿಕರವಲ್ಲ, ಲಾಭದಾಯಕ; ಅಂಕಿ ಅಂಶಗಳು ಹೇಳುತ್ತಿವೆ ವಸ್ತುಸ್ಥಿತಿ
ಹವಾಮಾನ ವೈಪರೀತ್ಯ ಎದುರಿಸಲು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸುಲಭ ದರದಲ್ಲಿ ಹಣಕಾಸಿನ ನೆರವು (Climate Finance) ಸಿಗುವಂತಾಗಬೇಕು ಮತ್ತು ಇದು ಜಾಗತಿಕ ವ್ಯಾಪಾರಕ್ಕೆ ಅಡೆತಡೆಯಾಗಬಾರದು ಎಂದು ಬ್ರಿಕ್ಸ್ ಹಣಕಾಸು ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್ಗಳ ಜಂಟಿ ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ