ಬೆಂಗಳೂರು, ಜುಲೈ 28: ವರ್ಕ್ ಫ್ರಂ ಹೋಂಗೆ ನಿರ್ಬಂಧಗಳು ಹೆಚ್ಚಾದಂತೆ ಊರು ಪಾರು ಸೇರಿಕೊಂಡಿದ್ದ ಉದ್ಯೋಗಿಗಳೆಲ್ಲಾ ಅನಿವಾರ್ಯವಾಗಿ ಕಚೇರಿಗಳಿಗೆ (Work From Office) ಬರತೊಡಗಿದ್ದಾರೆ. ಇದರ ಪರಿಣಾಮವಾಗಿ ನಗರಗಳಲ್ಲಿ ಮನೆಗಳಿಗೆ ಬೇಡಿಕೆ ಶುರುವಾಗಿದೆ. ಇದು ಬೆಂಗಳೂರಿನ ವಿಚಾರದಲ್ಲಿ ನೂರಕ್ಕೆ ನೂರು ನಿಜ. ಸಿಲಿಕಾನ್ ಸಿಟಿಯಲ್ಲಿ ಬಾಡಿಗೆಗೆ ಮನೆ (House Rentals) ಸಿಗುವುದೇ ಕಷ್ಟವಾಗಿದೆ. ಅದರಲ್ಲೂ ಒಳ್ಳೆಯ ಸೌಲಭ್ಯ ಇರುವ ಮನೆಗಳಿಗೆ ಭರ್ಜರಿ ಡಿಮ್ಯಾಂಡ್ ಇದೆ. ಬ್ರೋಕರ್ಗಳಿಗಂತೂ ಈಗ ಕೈತುಂಬಾ ಕೆಲಸ ಸಿಕ್ಕಿದೆ. ಅದರಲ್ಲೂ ಕೋರಮಂಗಲ, ವೈಟ್ಫೀಲ್ಡ್ ಇತ್ಯಾದಿ ಕಡೆ ಬಾಡಿಗೆ ಮನೆಗಳು ಸಿಗುವುದೇ ದುಸ್ತರವಾಗಿದೆಯಂತೆ. ಇಂಥ ಸಂದರ್ಭದಲ್ಲಿ ಬ್ರೋಕರ್ಗಳು ಪ್ಯಾಕೇಜ್ ಟೂರ್ಗಳ ರೀತಿಯಲ್ಲಿ ಬಾಡಿಗೆ ಮನೆ ಆಕಾಂಕ್ಷಿಗಳನ್ನು ಹೌಸ್ ಹಂಟ್ಗೆ ಕರೆದೊಯ್ಯುತ್ತಿರುವ ಟ್ರೆಂಡ್ ಬೆಂಗಳೂರಿನಲ್ಲಿ ಶುರುವಾಗಿದೆ.
ಮೊದಲಿದ್ದ ಮನೆ ಖಾಲಿ ಮಾಡಿದ ಹೋದ ಜನರು ಮತ್ತೆ ಬೆಂಗಳೂರಿಗೆ ಬರಬೇಕೆಂದರೆ ಮುಂಚಿತವಾಗಿ ಮನೆ ಹುಡುಕುವುದು ಕಷ್ಟ. ನೆಂಟರ ಮನೆಯಲ್ಲೋ, ಸ್ನೇಹಿತರ ಜೊತೆಯಲ್ಲೋ ಕೆಲ ಕಾಲ ಇದ್ದು ಮನೆ ಹುಡುಕಿ ಹೋಗುವ ಇರಾದೆಯಲ್ಲಿರುತ್ತಾರೆ. ಸ್ವಂತವಾಗಿ ಈ ಮನೆ ಹುಡುಕುವುದು ಬಹಳ ಕಷ್ಟ. ಈ ವೇಳೆ ಬ್ರೋಕರ್ಗಳನ್ನು ಸಂಪರ್ಕಿಸುವುದು ಅನಿವಾರ್ಯ. ಮನಿಕಂಟ್ರೋಲ್ ವೆಬ್ಸೈಟ್ನಲ್ಲಿ ಈ ಬಗ್ಗೆ ವಿಶೇಷ ವರದಿಯೊಂದು ಪ್ರಕಟವಾಗಿದ್ದು, ಅದರ ಪ್ರಕಾರ ಬೆಂಗಳೂರಿನಲ್ಲಿ ಬ್ರೋಕರ್ಗಳು ಪ್ಯಾಕೇಜ್ ಟೂರ್ ನಡೆಸುತ್ತಿದ್ದಾರಂತೆ.
ಒಂದು ರೈಡ್ನಲ್ಲಿ ಐದಾರು ಮನೆಗಳಿಗೆ ಕರೆದೊಯ್ಯಲಾಗುತ್ತದೆ. ಇದಕ್ಕೆ 1,000 ರೂನಿಂದ 2,000 ರೂವರೆಗೂ ಹಣ ಪಡೆಯುತ್ತಾರೆ ಎಂದು ಕೀರ್ತಿ ಗೌಡ ಎಂಬಾಕೆ ಹೇಳುತ್ತಾರೆಂದು ಮನಿಕಂಟ್ರೋಲ್ ವರದಿ ಮಾಡಿದೆ.
ಇನ್ನು, ಬೆಂಗಳೂರಿನ ರಿಯಾಲ್ಟಿ ಕಾರ್ಪ್ಸ್ ಎಂಬ ಸಂಸ್ಥೆಯಂತೂ ಬಾಡಿಗೆದಾರರಿಗೆಂದು ಓರಿಯಂಟೇಶನ್ ಪ್ರೋಗ್ರಾಮ್ ನಡೆಸುತ್ತದೆ. ಇದಕ್ಕೆ ಶುಲ್ಕ ಬರೋಬ್ಬರಿ 10,000 ರೂನಿಂದ ಆರಂಭವಾಗುತ್ತದೆ. ಇದು ಒಂದು ರೀತಿಯಲ್ಲಿ ಪ್ಯಾಕೇಜ್ ಆಗಿದ್ದು, ಬಾಡಿಗೆ ಮನೆ ಆಕಾಂಕ್ಷಿಗಳಿಗೆ ಒಂದಷ್ಟು ಜಾಗೃತಿ ನೀಡಲಾಗುತ್ತದೆ. ಜೊತೆಗೆ ಐದರಿಂದ ಆರು ಫ್ಲಾಟ್ ಅಥವಾ ಅಪಾರ್ಟ್ಮೆಂಟ್ಗಳಿಗೆ ಪಿಕ್ ಅಪ್ ಮತ್ತು ಡ್ರಾಪ್ ಮಾಡಲಾಗುತ್ತದೆ. ಮಾಲ್, ರೆಸ್ಟೋರೆಂಟ್, ಶಾಲೆ ಇತ್ಯಾದಿ ಇತರ ಕೌಟುಂಬಿಕ ಅಗತ್ಯತೆಯ ಸ್ಥಳಗಳನ್ನೂ ತೋರಿಸಲಾಗುತ್ತದೆ.
ಬೆಂಗಳೂರಿನಲ್ಲಿ ಬ್ರೋಕರ್ಗಳಿಗೆ ಕೆಲಸ ಹೆಚ್ಚಾಗಿದೆ. ಖಾಲಿ ಮನೆಗಳನ್ನು ಹುಡುಕುವುದು ಬ್ರೋಕರ್ಗಳಿಗೂ ಕಷ್ಟದ ಕೆಲಸವಾಗಿದೆ. ಅದಕ್ಕಾಗಿ ಫೀಲ್ಡ್ ಏಜೆಂಟ್ಗಳನ್ನು ನೇಮಕ ಮಾಡಿಕೊಂಡಿದ್ದಾರೆ. ನಿರ್ದಿಷ್ಟ ರಸ್ತೆ ಅಥವಾ ಪ್ರದೇಶಗಳಲ್ಲಿ ಖಾಲಿ ಇರುವ ಮನೆಗಳ ವಿವರ ಪಡೆದು ಪಟ್ಟಿ ಮಾಡುವುದು ಈ ಫೀಲ್ಡ್ ಏಜೆಂಟ್ಗಳ ಕೆಲಸ. ಬಳಿಕ ಈ ಖಾಲಿ ಇರುವ ಮನೆಗಳನ್ನು ಗ್ರಾಹಕರಿಗೆ ತೋರಿಸಲು ಪ್ಯಾಕೇಜ್ ಟೂರ್ ನಿಗದಿ ಮಾಡಲಾಗುತ್ತದೆ.
ಬೆಂಗಳೂರಿನಲ್ಲಿ ಈಗ ಪ್ರಮುಖ ವಸತಿ ಪ್ರದೇಶಗಳಲ್ಲಿ ಮನೆ ಬಾಡಿಗೆ ಬಹಳ ಹೆಚ್ಚಾಗಿದೆ. ಕೆಲ ಕಡೆ ಶೇ. 40ರಷ್ಟು ಬೆಲೆ ಹೆಚ್ಚಾಗಿದೆ. ಕೋರಮಂಗಲದಲ್ಲಿ ಹಿಂದೆ 14,000 ರೂಗೆ ಸಿಗುತ್ತಿದ್ದ ಸಿಂಗಲ್ ಬೆಡ್ರೂಮ್ನ ಮನೆ ಬಾಡಿಗೆ ಈಗ 20,000 ರೂಗೂ ಹೆಚ್ಚು ಆಗಿಹೋಗಿದೆ.
ಇದನ್ನೂ ಓದಿ: Star Notes: ಸ್ಟಾರ್ ಚಿಹ್ನೆ ಇರುವ ನೋಟುಗಳು ಅಮಾನ್ಯವಾ? ನೋಟುಗಳಿಗೆ ಸ್ಟಾರ್ ಯಾಕಿರುತ್ತದೆ? ಇಲ್ಲಿದೆ ಆರ್ಬಿಐ ಸ್ಪಷ್ಟನೆ
ವೈಟ್ಫೀಲ್ಡ್ನಲ್ಲಿ ಸಿಂಗಲ್ ಬ್ಯುಲ್ಡಿಂಗ್ನಲ್ಲಿರುವ ಡಬಲ್ ಬೆಡ್ರೂಮ್ ಮನೆ ಬಾಡಿಗೆ 25,000 ರೂ ಇದ್ದದ್ದು ಈಗ 38,000 ರೂವರೆಗೂ ಹೋಗಿದೆ. ಇಲ್ಲಿಯ ಕೆಲ ಅಪಾರ್ಟ್ಮೆಂಟ್ಗಳಲ್ಲಿ ಮನೆಬಾಡಿಗೆ ಕನಿಷ್ಠ 50,000 ರೂ ಇದೆ. ಇನ್ನು ಸರ್ಜಾಪುರದಂಥ ಪ್ರದೇಶಗಳಲ್ಲಿ ಟ್ರಿಪಲ್ ಬೆಡ್ರೂಮ್ನ ಮನೆ ಬಾಡಿಗೆ 80,000 ರೂಗೂ ಹೆಚ್ಚಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:09 pm, Fri, 28 July 23