Budget 2023: ಎಲೆಕ್ಟ್ರಿಕ್ ವಾಹನಗಳಿಗೆ ಈ ಬಾರಿಯ ಬಜೆಟ್​​ನಲ್ಲಿ ಸಿಗಲಿದೆಯೇ ಪುಷ್ಟಿ? ನಿರೀಕ್ಷೆಗಳು ಹಲವು

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 05, 2023 | 3:26 PM

ಮುಂದಿನ ತಿಂಗಳು ಮಂಡನೆಯಾಗುವ ಕೇಂದ್ರ ಬಜೆಟ್ ನಲ್ಲಿ ಎಲೆಕ್ಟ್ರಿಕ್ ವಾಹನ ಉದ್ಯಮ ಕೆಲವಿಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಎಲೆಕ್ಟ್ರಿಕ್ ವಾಹನ ತಯಾರಕ ಸಂಸ್ಥೆ ಎಸ್ಎಂಇವಿ ನೀಡಿರುವ ಕೆಲ ಸಲಹೆಗಳು ಮತ್ತು ಬಜೆಟ್ ನಿರೀಕ್ಷೆಗಳು ಇಲ್ಲಿವೆ.

Budget 2023: ಎಲೆಕ್ಟ್ರಿಕ್ ವಾಹನಗಳಿಗೆ ಈ ಬಾರಿಯ ಬಜೆಟ್​​ನಲ್ಲಿ ಸಿಗಲಿದೆಯೇ ಪುಷ್ಟಿ? ನಿರೀಕ್ಷೆಗಳು ಹಲವು
ಸಾಮದರ್ಭಿಕ ಚಿತ್ರ
Image Credit source: google image
Follow us on

ಭಾರತದಲ್ಲಿ ಈಗ ಎಲೆಕ್ಟ್ರಿಕ್ ವಾಹನ (Electric Vehicle) ಇತ್ಯಾದಿ ಹಸಿರು ಇಂಧನ ಚಾಲಿತ ವಾಹನಗಳಿಗೆ (Green Energy) ಆದ್ಯತೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳುವ ಸನಿಹದಲ್ಲಿ ಸರ್ಕಾರ ಇದೆ. ಅದಕ್ಕೆ ಪೂರಕವಾಗಿ ಹಲವು ಕ್ರಮಗಳನ್ನು ಕೈಗೊಂಡಿದೆ. ಪರಿಣಾಮವಾಗಿ 2022ರಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ 10 ಲಕ್ಷದ ಗಡಿ ದಾಟಿದೆ. ಸರ್ಕಾರದ ದತ್ತಾಂಶದ ಪ್ರಕಾರ ದೇಶಾದ್ಯಂತ ಪ್ರತೀ ತಿಂಗಳೂ ನೊಂದಣಿಯಾಗುವ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಸರಾಸರಿ 83 ಸಾವಿರಕ್ಕೂ ಹೆಚ್ಚು ಎಂದೆನ್ನಲಾಗಿದೆ.

ಆದರೆ ಪೆಟ್ರೋಲ್, ಡೀಸೆಲ್ ಇತ್ಯಾದಿ ಪಳೆಯುಳಿಕೆ ಇಂಧನ (Fossil fuel) ಬಳಸುವ ವಾಹನಗಳಿಂದ ಸಂಪೂರ್ಣ ದೂರವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಪೂರ್ಣವಾಗಿ ಅಪ್ಪಿಕೊಳ್ಳುವ ಸ್ಥಿತಿ ತಲುಪುವ ಹಾದಿ ಬಹಳ ಸುದೀರ್ಘ ಇದೆ. ಈ ಗುರಿಯನ್ನು ಬೇಗ ತಲುಪಲು ಸರ್ಕಾರ ಕೆಲವೊಂದಿಷ್ಟು ಕ್ರಮಗಳನ್ನು ಕೈಗೊಳ್ಳಬೇಕೆಂದು ಎಲೆಕ್ಟ್ರಿಕ್ ವಾಹನ ಉದ್ಯಮ ಒತ್ತಾಯಿಸುತ್ತಿದೆ. ಮುಂದಿನ ತಿಂಗಳು ಮಂಡನೆಯಾಗುವ ಕೇಂದ್ರ ಬಜೆಟ್​ನಲ್ಲಿ (Central Budget 2023) ಎಲೆಕ್ಟ್ರಿಕ್ ವಾಹನ ಉದ್ಯಮ ಕೆಲವಿಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಎಲೆಕ್ಟ್ರಿಕ್ ವಾಹನ ತಯಾರಕ ಸಂಸ್ಥೆ ಎಸ್ಎಂಇವಿ (SMEV) ನೀಡಿರುವ ಕೆಲ ಸಲಹೆಗಳು ಮತ್ತು ಬಜೆಟ್ ನಿರೀಕ್ಷೆಗಳು ಇಲ್ಲಿವೆ.

1) ತೆರಿಗೆ ಕಡಿತ

ಜನರು ಎಲೆಕ್ಟ್ರಿಕ್ ವಾಹನಗಳತ್ತ ನಿರೀಕ್ಷಿತ ರೀತಿಯಲ್ಲಿ ಆಕರ್ಷಿತವಾಗದೇ ಇರುವುದಕ್ಕೆ ಪ್ರಮುಖ ಕಾರಣಗಳೆಂದರೆ ದುಬಾರಿ ಬೆಲೆ ಮತ್ತು ಅಗತ್ಯ ಸೌಕರ್ಯದ ಕೊರತೆ. ಈ ನಿಟ್ಟಿನಲ್ಲಿ ಸರಕಾರ ತ್ವರಿತ ಕ್ರಮ ಕೈಗೊಳ್ಳಬೇಕೆಂಬ ಅಭಿಪ್ರಾಯ ಇದೆ.

ಎಲೆಕ್ಟ್ರಿಕ್ ವಾಹನಕ್ಕೆ ಸದ್ಯ ಶೇ. 5ರಷ್ಟು ಜಿಎಸ್ಟಿ ಇದೆ. ಆದರೆ, ಬ್ಯಾಟರಿ ಹೊರತುಪಡಿಸಿ ಬಹುತೇಕ ಇತರ ಬಿಡಿಭಾಗಗಳಿಗೆ ಹೆಚ್ಚಿನ ತೆರಿಗೆ ಇದೆ. ಆದರೆ ಎಲ್ಲಾ ಬಿಡಿಭಾಗಗಳಿಗೂ ಏಕರೀತಿಯಲ್ಲಿ ಶೇ. 5ರಷ್ಟು ಮಾತ್ರ ತೆರಿಗೆ ವಿಧಿಸಬೇಕೆಂದು ಎಲೆಕ್ಟ್ರಿಕ್ ವಾಹನ ಉದ್ಯಮ ಬೇಡಿಕೊಂಡಿದೆ.

ಇನ್ನು, ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗೆ ಅಗತ್ಯವಾಗಿರುವ ಲಿಥಿಯಮ್ ಅಯಾನ್ ಸೆಲ್ ಗಳ ಉತ್ಪಾದನೆ ಭಾರತದಲ್ಲಿ ಆರಂಭವಾಗಿದೆಯಾದರೂ ಅದಿನ್ನೂ ಸಾಗಬೇಕಾದ ದಾರಿ ದೂರ ಇದೆ. ಸದ್ಯ ಆ ಸೆಲ್ ಗಳ ಆಮದು ಅನಿವಾರ್ಯವಾಗಿದೆ. ಸರ್ಕಾರ ಲಿಥಿಯಮ್ ಅಯಾನ್ ಸೆಲ್​​ಗಳ ಮೇಲೆ ಹೇರುತ್ತಿರುವ ಕಸ್ಟಮ್ಸ್ ಡ್ಯೂಟಿಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಲಾಗಿದೆ.

ಇದನ್ನು ಓದಿ:Budget 2023: ಕೇಂದ್ರ ಬಜೆಟ್​​ನಲ್ಲಿ ತೆರಿಗೆದಾರರು ನಿರೀಕ್ಷಿಸಬಹುದಾದ್ದು ಏನು? ಇಲ್ಲಿದೆ ವಿವರ

2) ಫೇಮ್ ಸಬ್ಸಿಡಿ

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಫೇಮ್ ಸ್ಕೀಮ್ ಅನ್ನು ಜಾರಿಗೆ ತಂದಿದೆ. ಫೇಮ್ ಎಂದರೆ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳ ತ್ವರಿತ ತಯಾರಿಕೆ ಮತ್ತು ಅಳವಡಿಕೆಯ ಯೋಜನೆಯಾಗಿದೆ. ಇದರ ಎರಡನೇ ಹಂತದ ಯೋಜನೆ 2024 ಮಾರ್ಚ್ 31ರವರೆಗೆ ಇದೆ. ಈ ಯೋಜನೆಯಲ್ಲಿ ದ್ವಿಚಕ್ರದ ಎಲೆಕ್ಟ್ರಿಕ್ ವಾಹನ ಖರೀದಿಸುವ ಗ್ರಾಹಕರಿಗೆ ಸಬ್ಸಿಡಿ ಕೊಡಲಾಗುತ್ತದೆ. ಎಲೆಕ್ಟ್ರಿಕ್ ವಾಹನ ಹೆಚ್ಚು ಮಟ್ಟ ತಲುಪುವವರೆಗೂ ಈ ಯೋಜನೆಯನ್ನು ಮುಂದುವರಿಸಬೇಕು ಎಂದು ಕೇಳಿಕೊಳ್ಳಲಾಗಿದೆ.

ಅಂದರೆ, ಕಾಲಮಿತಿ ಹಾಕುವ ಬದಲು ಗುರಿ ತಲುಪುವವರೆಗೂ ಈ ಸ್ಕೀಮ್ ಮುಂದುವರಿಯಲಿ. ಗ್ರಾಹಕರಿಗೆ ನೇರವಾಗಿ ಸಬ್ಸಿಡಿ ಹಣ ರವಾನೆಯಾಗುವಂತೆ ವ್ಯವಸ್ಥೆ ಆಗಲಿ. ಆ ನಿಟ್ಟಿನಲ್ಲಿ ಬಜೆಟ್​​ನಲ್ಲಿ ಘೋಷಣೆ ಆಗಲಿ ಎಂಬುದು ಎಲೆಕ್ಟ್ರಿಕ್ ವಾಹನಗಳ ಸಂಘಟನೆ ಮನವಿ ಮಾಡಿದೆ.

3) ಕಮರ್ಷಿಯಲ್ ವಾಹನಗಳಿಗೂ ಫೇಮ್

ಭಾರತದಲ್ಲಿ ಅತಿ ಹೆಚ್ಚು ಇಂಧನ ವ್ಯಯಿಸುವ ವರ್ಗದ ವಾಹನಗಳಲ್ಲಿ ಟ್ರಕ್ ಮೊದಲ ಸ್ಥಾನ ಪಡೆಯುತ್ತದೆ. ಶೇ. 40ರಷ್ಟು ಇಂಧನ ಟ್ರಕ್​​ಗಳಿಂದಲೇ ಬಳಕೆಯಾಗುತ್ತದೆ. ಶೇ. 40ರಷ್ಟು ಹಸಿರುಮನೆ ಅನಿಲಗಳು ಟ್ರಕ್​ಗಳಿಂದಲೇ ಹೊರಹೊಮ್ಮುತ್ತವೆ. ಹೀಗಾಗಿ, ಎಲೆಕ್ಟ್ರಿಕ್ ಟ್ರಕ್ ವಾಹನಗಳಿಗೆ ಹೆಚ್ಚು ಉತ್ತೇಜನ ಕೊಡುವ ಕೆಲಸವಾಗಬೇಕು. ಈ ಕಮರ್ಷಿಯಲ್ ವಾಹನಗಳಿಗೂ ಫೇಮ್ ಯೋಜನೆ ವಿಸ್ತಾರವಾಗಬೇಕು. ಎಲೆಕ್ಟ್ರಿಕ್ ಟ್ರಾಕ್ಟರ್​​ಗಳಿಗೂ ಸಬ್ಸಿಡಿ ಕೊಡಬೇಕು ಎಂಬ ಆಗ್ರಹ ಕೇಳಿಬಂದಿದೆ.

ಇವುಗಳ ಜೊತೆಗೆ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಸಂಗ್ರಹಣೆಗೆ ಅಗತ್ಯವಾದ ಆರ್ ಅಂಡ್ ಡಿ ಘಟಕಗಳಿಗೆ ಉತ್ತೇಜನ ಕೊಡಬೇಕು. ಎಲೆಟ್ರಿಕ್ ವಾಹನಗಳ ತಯಾರಕಾ ಘಟಕಗಳನ್ನು ಸ್ಥಾಪಿಸುವ ಕಂಪನಿಗಳು ತೆಗೆದುಕೊಳ್ಳುವ ಸಾಲಕ್ಕೆ ಬಡ್ಡಿ ದರ ಕಡಿಮೆ ಮಾಡಬೇಕು. ಪಿಎಲ್ಐ ಸ್ಕೀಮ್ ಅನ್ನು ದೊಡ್ಡ ಕಾರ್ಪೊರೇಟ್ ಕಂಪನಿಗಳಿಗಷ್ಟೇ ಅಲ್ಲ, ಸ್ಟಾರ್ಟಪ್​​ಗಳು ಮತ್ತು ಎಂಎಸ್ಎಂಇ ಸಂಸ್ಥೆಗಳಿಗೂ ವಿಸ್ತರಣೆಯಾಗಬೇಕು. ಇವಿ ಚಾರ್ಜಿಂಗ್ ಸ್ಟೇಷನ್ ನಲ್ಲಿ ಆಗುವ ಪ್ರತಿಯೊಂದು ವಹಿವಾಟಿಗು ಶೇ. 18ರಷ್ಟು ಜಿಎಸ್ಟಿ ಹಾಕಲಾಗುತ್ತದೆ. ಅದು ಕಡಿಮೆಗೊಳ್ಳಬೇಕು. ಕಳೆದ ವರ್ಷದ ಬಜೆಟ್ ನಲ್ಲಿ ಪ್ರಕಟಿಸಲಾಗಿದ್ದ ಬ್ಯಾಟರಿ ಸ್ವ್ಯಾಪಿಂಗ್ ನೀತಿಯನ್ನು ಅನುಷ್ಠಾನಕ್ಕೆ ತರಬೇಕು. ಇವೇ ಮುಂತಾದ ಹಲವು ಪ್ರಮುಖ ಬೇಡಿಕೆಗಳನ್ನು ಎಲೆಕ್ಟ್ರಿಕ್ ವಾಹನ ಉದ್ಯಮ ಸರ್ಕಾರದ ಮುಂದಿಟ್ಟಿದೆ.

ಫೆಬ್ರುವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದು ಈ ಕೆಲ ಅಂಶಗಳನ್ನು ಪರಿಗಣಿಸುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರದ ಕೊನೆಯ ಪೂರ್ಣಪ್ರಮಾಣದ ಬಜೆಟ್ ಅದಾಗಿರಲಿದ್ದು, ಹಲವು ಮಹತ್ವದ ಕ್ರಮಗಳು ಘೋಷಣೆಯಾಗುವ ನಿರೀಕ್ಷೆ ಇದೆ.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:26 pm, Thu, 5 January 23