Microsoft CEO: ಇಂಥದ್ದು ವಿಶ್ವದಲ್ಲಿ ಬೇರೆಲ್ಲೂ ಇಲ್ಲ: ಭಾರತದ ಪೇಮೆಂಟ್ ವ್ಯವಸ್ಥೆಗೆ ಮೈಕ್ರೋಸಾಫ್ಟ್ ಮುಖ್ಯಸ್ಥರು ಫಿದಾ
ಇಂಡಿಯಾಸ್ಟ್ಯಾಕ್ ನೋಡಿದರೆ ಅದ್ಭುತ ಎನಿಸುತ್ತದೆ. ವಿಶ್ವದಲ್ಲಿ ಬೇರೆಲ್ಲೂ ಇಂಥದ್ದು ಇಲ್ಲ... ಸಾರ್ವಜನಿಕ ಡಿಜಿಟಲ್ ಸೌಲಭ್ಯದೆಡೆ ನಡೆದಿರುವ ಕಾರ್ಯ ಅಚ್ಚರಿ ಹುಟ್ಟಿಸುತ್ತದೆ ಎಂದು ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯ ನಾದೆಲ್ಲಾ ಹೊಗಳಿದ್ದಾರೆ.
ನಮ್ಮ ಅಕೌಂಟ್ನಲ್ಲಿ ಹಣ, ಕೈಯಲ್ಲಿ ಸ್ಮಾರ್ಟ್ ಫೋನ್ ಇದ್ದರೆ ಬೆರಳ ತುದಿಯಲ್ಲೇ ಬಹುತೇಕ ಎಲ್ಲಾ ಕೆಲಸವನ್ನೂ ಮಾಡಬಹುದು. ಹಣ ಕಳುಹಿಸುವುದು, ಬಿಲ್ ಕಟ್ಟುವುದು, ಕೆವೈಸಿ ಅರ್ಜಿ ತುಂಬುವುದು ಇತ್ಯಾದಿ ಲೆಕ್ಕವಿಲ್ಲದಷ್ಟು ಹಣಕಾಸು ಕಾರ್ಯಗಳನ್ನು ಕುಳಿತಲ್ಲೇ ಮಾಡಬಹುದು. ಸರ್ಕಾರಿ ಯೋಜನೆಗಳ ಹಣವು ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ವರ್ಗವಾಗುತ್ತದೆ. ಒಟ್ಟಾರೆ ಭಾರತದಲ್ಲಿ ಪೇಮೆಂಟ್ ವ್ಯವಸ್ಥೆಯ ಒಂದು ದೊಡ್ಡ ಕ್ರಾಂತಿಯೇ ಆಗಿದೆ. ಆಧಾರ್, ಯುಪಿಐ ಇತ್ಯಾದಿ ಇವು ಪೇಮೆಂಟ್ ವ್ಯವಸ್ಥೆಯ ಭಾಗವಾಗಿವೆ. ಅಮೆರಿಕವೂ ಒಳಗೊಂಡಂತೆ ವಿಶ್ವದಲ್ಲಿ ಬೇರೆಲ್ಲೂ ಇಷ್ಟು ಅಗಾಧವಾದ ಮತ್ತು ಸಮರ್ಪಕವಾದ ಪಾವತಿ ವ್ಯವಸ್ಥೆ ರೂಪುಗೊಂಡಿಲ್ಲ. ಭಾರತವೇ ಒನ್ ಅಂಡ್ ಓನ್ಲಿ ಎನ್ನಬಹುದು. ವಿಶ್ವದ ಅನೇಕ ತಜ್ಞರು ಭಾರತದ ತಂತ್ರಜ್ಞಾನ ನೈಪುಣ್ಯಕ್ಕೆ ಬೆರಗು ವ್ಯಕ್ತಪಡಿಸಿರುವುದುಂಟು. ಈಗ ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯ ನಾದೆಲ್ಲಾ ಕೂಡ ಇದನ್ನೇ ಪುನರುಚ್ಚರಿಸಿದ್ದಾರೆ. ಭಾರತಕ್ಕೆ ಪ್ರವಾಸ ಬಂದಿರುವ ಮೈಕ್ರೋಸಾಫ್ಟ್ ಸಿಇಒ ಇಲ್ಲಿನ ಪಾವತಿ ವ್ಯವಸ್ಥೆಯ ಬಗ್ಗೆ ಅಕ್ಷರಶಃ ಬೆರಗುಪಟ್ಟಿದ್ದಾರೆ.
“ಇಂಡಿಯಾಸ್ಟ್ಯಾಕ್ ನೋಡಿದರೆ ಅದ್ಭುತ ಎನಿಸುತ್ತದೆ. ವಿಶ್ವದಲ್ಲಿ ಬೇರೆಲ್ಲೂ ಇಂಥದ್ದು ಇಲ್ಲ… ಸಾರ್ವಜನಿಕ ಡಿಜಿಟಲ್ ಸೌಲಭ್ಯದೆಡೆ ನಡೆದಿರುವ ಕಾರ್ಯ ಅಚ್ಚರಿ ಹುಟ್ಟಿಸುತ್ತದೆ, ಜೊತೆಗೆ ಸ್ಫೂರ್ತಿದಾಯಕವೂ ಎನಿಸಿದೆ. ಡಿಜಿಟಲ್ ಕ್ರಾಂತಿ ಉಪಯೋಗಿಸಿ ನಡೆಯುತ್ತಿರುವ ಸ್ವಾವಲಂಬಿ ಆರ್ಥಿಕ ಪ್ರಗತಿಯತ್ತ ಬಹಳ ಆಳ ಇಳಿದಿರುವುದು ಪ್ರಶಂಸನೀಯ” ಎಂದು ಸತ್ಯ ನಾದೆಲ್ಲಾ ಹೊಗಳಿದ್ದಾರೆ.
ಇಲ್ಲಿ ಅವರ ಹೇಳಿಕೆ ಮೊದಲಲ್ಲಿ ಬರುವ ಇಂಡಿಯಾಸ್ಟ್ಯಾಕ್ ಎಂದರೆ ಸಂಸ್ಥೆಯ ಹೆಸರಲ್ಲ. ಆಧಾರ್, ಯುಪಿಐ ಇತ್ಯಾದಿ ಪೇಮೆಂಟ್ ವ್ಯವಸ್ಥೆಗೆ ಪೂರಕವಾಗಿ ಇರುವ ವಿವಿಧ ಅಂಗಗಳು, ತಂತ್ರಜ್ಞಾನ ಇತ್ಯಾದಿ ಎಲ್ಲವೂ ಒಳಗೊಂಡ ಒಂದು ವ್ಯವಸ್ಥೆಯಾಗಿದೆ. ಸರ್ಕಾರಿ ಟೆಕ್ ಸಂಸ್ಥೆಗಳು, ಖಾಸಗಿ ಕಂಪನಿಗಳು, ತಂತ್ರಾಂಶ ಅಭಿವೃದ್ಧಿಗಾರರು ಎಲ್ಲರಿಗೂ ತಂತ್ರಜ್ಞಾನ ಸೌಲಭ್ಯ ಒದಗಿಸುವ ವ್ಯವಸ್ಥೆ ಇದು. ವಿಶ್ವದ ಹಲವು ಟೆಕ್ಕಿಗಳು ಭಾರತದ ಈ ವಿಶೇಷ ತಂತ್ರಜ್ಞಾನ ಸಾಧನೆಯನ್ನು ಪ್ರಶಂಸಿಸಿದ್ದಾರೆ.
ಭಾರತಕ್ಕೆ ನಾಲ್ಕು ದಿನ ಭೇಟಿ ಕೊಟ್ಟಿರುವ ಮೈಕ್ರೋಸಾಫ್ಟ್ ಸಿಇಒ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಭೇಟಿಯಾಗಿ ಚರ್ಚೆ ನಡೆಸಿದರು. ಡಿಜಿಟಲ್ ವ್ಯವಸ್ಥೆಯನ್ನು ಬಳಸಿ ಆರ್ಥಿಕ ಉನ್ನತಿ ಸಾಧಿಸಲು ಸರ್ಕಾರ ಗಮನ ಹರಿಸಿರುವುದನ್ನು ಪ್ರಸ್ತಾಪಿಸಿ ಅವರು ಶ್ಲಾಘನೆ ವ್ಯಕ್ತಪಡಿಸಿ ಟ್ವೀಟ್ ಕೂಡ ಮಾಡಿದ್ದಾರೆ.
ಕ್ಲೌಡ್ ಬಹಳ ಮುಖ್ಯ
ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಈ ವೇಳೆ ಕ್ಲೌಡ್ ತಂತ್ರಜ್ಞಾನದ ಮಹತ್ವದ ಬಗ್ಗೆ ಮಾತನಾಡಿದ್ದಾರೆ. ಈ ನಿಟ್ಟಿನಲ್ಲಿ ಭಾರತ ಸಾಧಿಸುತ್ತಿರುವ ಪ್ರಗತಿ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂಡಿಗೋ, ಗೋದ್ರೇಜ್, ಟಾಟಾ ಡಿಜಿಟಲ್, ಫ್ಲಿಪ್ ಕಾರ್ಟ್ ಮೊದಲಾದ ಭಾರತೀಯ ಕಂಪನಿಗಳು ಕ್ಲೌಡ್ ಟೆಕ್ನಾಲಜಿಯತ್ತ ಗಮನ ನೆಟ್ಟಿರುವುದನ್ನು ಅವರು ಉಲ್ಲೇಖಿಸಿದ್ದಾರೆ. ಮುಂದಿನ ದಿನಗಳು ಕ್ಲೌಡ್ ತಂತ್ರಜ್ಞಾನದ ದಿನಗಳಾಗಿರುತ್ತವೆ ಎಂದೂ ಅವರು ಭವಿಷ್ಯ ನುಡಿದಿದ್ದಾರೆ.
ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ