Never Give Up: 2013ರಲ್ಲಿ ಕೆಲಸದಿಂದ ವಜಾಗೊಂಡಿದ್ದ ಎಂಜಿನಿಯರ್ ಆದಾಯವೀಗ 3.5 ಕೋಟಿ ರೂ!
2013ರಲ್ಲಿ ಕೆಲಸ ಕಳೆದುಕೊಂಡ ಬಳಿಕ ಸ್ವಂತ ಉದ್ಯೋಗ ಆರಂಭಿಸಿದ್ದ ಜಾನ್ನೆಸ್ ಟೊರೆಸ್ ಸದ್ಯ ವಾರ್ಷಿಕ ಸುಮಾರು 3.5 ಕೋಟಿ ರೂ. ಸಂಪಾದನೆ ಮಾಡುತ್ತಿದ್ದಾರೆ!
ಆರ್ಥಿಕ ಹಿಂಜರಿತ (Recession), ಮೂನ್‌ಲೈಟಿಂಗ್ (Moonlighting), ಉದ್ಯೋಗ ಕಡಿತಕ್ಕೆ (Job Cut) ಸಂಬಂಧಿಸಿದ ಸುದ್ದಿಗಳು ಇತ್ತೀಚೆಗೆ ಹೆಚ್ಚಾಗಿವೆ. ಅನೇಕ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಇಂಥ ಕಠಿಣ ಪರಿಸ್ಥಿತಿಯಲ್ಲಿ ಲ್ಯಾಟಿನ್ ಅಮೆರಿಕದ ಎಂಜಿನಿಯರ್ ಜಾನ್ನೆಸ್ ಟೊರೆಸ್ ಎಂಬವರು ಕೆಲಸ ಕಳೆದುಕೊಂಡರೂ ಧೃತಿಗೆಡದೆ ಮಹಾನ್ ಸಾಧನೆ ಮಾಡಿ ಜನ ಹುಬ್ಬೇರುವಂತೆ ಮಾಡಿರುವುದು ವರದಿಯಾಗಿದೆ. 2013ರಲ್ಲಿ ಕೆಲಸ ಕಳೆದುಕೊಂಡ ಬಳಿಕ ಸ್ವಂತ ಉದ್ಯೋಗ ಆರಂಭಿಸಿದ್ದ ಜಾನ್ನೆಸ್ ಟೊರೆಸ್ ಸದ್ಯ ವಾರ್ಷಿಕ ಸುಮಾರು 3.5 ಕೋಟಿ ರೂ. ಸಂಪಾದನೆ ಮಾಡುತ್ತಿದ್ದಾರೆ!
2013ರ ಮೊದಲು ಜಾನ್ನೆಸ್ ಟೊರೆಸ್ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಆಗ ಅವರ ಸಂಪಾದನೆ ವಾರ್ಷಿಕ ಸುಮಾರು 66 ಲಕ್ಷ ರೂ. ಆಗಿತ್ತು. ಆ ಹಂತದಲ್ಲಿ ಉದ್ಯೋಗ ಕಳೆದುಕೊಂಡ ಅವರು, ಹಣದ ಮೂಲಕ್ಕಾಗಿ ಯಾರನ್ನೂ ಅವಲಂಬಿಸುವಂತಾಗಬಾರದು ಎಂಬ ದೃಢ ನಿರ್ಧಾರಕ್ಕೆ ಬಂದರು. ಇದು ಅವರ ಜೀವನ ಬದಲಾಯಿಸುವ ನಿರ್ಧಾರಕ್ಕೆ ಕಾರಣವಾಯಿತು.
ಇದನ್ನೂ ಓದಿ: Philips Job Cut: ಮೈಕ್ರೋಸಾಫ್ಟ್ ಬೆನ್ನಲ್ಲೇ ಫಿಲಿಪ್ಸ್ನಿಂದಲೂ 4,000 ಉದ್ಯೋಗ ಕಡಿತ
ಕೆಲಸ ಕಳೆದುಕೊಂಡ ಬಳಿಕ ಮೊದಲಿಗೆ ಅವರು ಹವ್ಯಾಸವಾಗಿ ಫುಡ್ ಬ್ಲಾಗಿಂಗ್ ಆರಂಭಿಸಿದರು. ಬಳಿಕ ಅದು ಆದಾಯದ ಮೂಲವಾಯಿತು. ಜತೆಗೆ ಬೇರೊಂದು ಉದ್ಯೋಗಕ್ಕೂ ಸೇರಿಕೊಂಡ ಅವರು, ಅದರೊಂದಿಗೆ ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದ ಸಲಹೆ ಸೂಚನೆಗಳನ್ನು ನೀಡುವ ಪಾಡ್ಕಾಸ್ಟ್ ಅನ್ನೂ ಆರಂಭಿಸಿದರು. ಇದೀಗ ಅವರು ವಾರ್ಷಿಕವಾಗಿ ಸುಮಾರು 3.5 ಕೋಟಿ ರೂ.ಗೂ ಹೆಚ್ಚು ಆದಾಯ ಗಳಿಸುತ್ತಿದ್ದಾರೆ.
ಈಗ 37 ವರ್ಷ ವಯಸ್ಸಿನವರಾಗಿರುವ ಜಾನ್ನೆಸ್ ಟೊರೆಸ್ಗೆ ಸುಮಾರು 10 ಆದಾಯದ ಮೂಲಗಳಿವೆ. ಬ್ಲಾಗ್, ಪಾಡ್ಕಾಸ್ಟ್ ಜಾಹೀರಾತುಗಳು, ಮಾರ್ಕೆಟಿಂಗ್ ಸಂಸ್ಥೆ, ಡಿಜಿಟಲ್ ಕೋರ್ಸ್, ಬ್ರ್ಯಾಂಡ್ ಸಹಭಾಗಿತ್ವ ಹೀಗೆ ಹಲವು ವಹಿವಾಟುಗಳಲ್ಲಿ ತೊಡಗಿಕೊಂಡಿರುವ ಬಗ್ಗೆ ‘ಸಿಎನ್ಬಿಸಿ ಮೇಕ್ ಇಟ್’ ತಾಣದಲ್ಲಿ ಜಾನ್ನೆಸ್ ಟೊರೆಸ್ ಬರೆದುಕೊಂಡಿದ್ದಾರೆ. ಈ ಎಲ್ಲ ಉದ್ಯೋಗಗಳಿಂದ ತಿಂಗಳಿಗೆ ಸರಾಸರಿ 35,000 ಡಾಲರ್ (ಅಂದಾಜು 29 ಲಕ್ಷ ರೂ.) ಗಳಿಸುತ್ತಿರುವುದಾಗಿ ಅವರು ಹೇಳಿದ್ದಾರೆ.
ಇದನ್ನೂ ಓದಿ: Microsoft: ಆರ್ಥಿಕ ಸಂಕಷ್ಟ, ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಮೈಕ್ರೋಸಾಫ್ಟ್
ಇಂದು ಮೂನ್‌ಲೈಟಿಂಗ್ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಈ ವಿಚಾರವಾಗಿ ಕೆಲವು ಸಂಸ್ಥೆಗಳು ಕಟ್ಟುನಿಟ್ಟಿನ ನಿಲುವು ತಳೆದರೆ, ಕೆಲವು ಷರತ್ತುಬದ್ಧ ಅವಕಾಶ ಮಾಡಿಕೊಟ್ಟಿವೆ. ಆದರೆ, ಈ ಅಭ್ಯಾಸದ ಮೂಲಕ ಉದ್ಯೋಗಿಗಳು ತಮ್ಮ ಸಾಮರ್ಥ್ಯಗಳನ್ನು ಬಳಸಿಕೊಳ್ಳುವ, ಹಾಗೂ ಬೆಳೆಸಿಕೊಳ್ಳುತ್ತಿರುವುದಂತೂ ನಿಜ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
‘ನಾವು ಬೆಳೆಯಬೇಕಾದರೆ ನಮ್ಮ ಹಾಗೂ ಇತರರ ತಪ್ಪುಗಳಿಂದ ನಾವು ಪಾಠ ಕಲಿಯಬೇಕು. ನಾವು ಆರಂಭಿಸಲು ಹೊರಟಿರುವ ಉದ್ಯೋಗದ ಬಗ್ಗೆ ಸ್ಪಷ್ಟ ಕಲ್ಪನೆ ಇಲ್ಲದೇ ಹೋದರೂ ಪರವಾಗಿಲ್ಲ, ಎಂದಿಗೂ ನಮ್ಮನ್ನು ನಾವು ಬಿಟ್ಟುಕೊಡಬಾರು. ಮರಳಿ ಯತ್ನಿಸಬೇಕು. ಒಂದಲ್ಲ ಒಂದು ದಿನ ಯಶಸ್ಸು ನಮ್ಮನ್ನು ಅರಸಿಕೊಂಡು ಬಂದೇ ಬರುತ್ತದೆ. ತಂತ್ರಜ್ಞಾನದ ಸೂಕ್ತ ಬಳಕೆ ನಮ್ಮ ಸಾಧನೆಗೆ ಮೆಟ್ಟಿಲಾಗಬಲ್ಲದು’ ಎಂದು ಜಾನ್ನೆಸ್ ಟೊರೆಸ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ