ಕನ್ಸಲ್ಟಿಂಗ್ ಮತ್ತು ಕಸ್ಟಮರ್ ಹಾಗೂ ಪಾರ್ಟನರ್ ಸಲ್ಯೂಷನ್ಸ್ ಸೇರಿದಂತೆ ವಿವಿಧ ಗುಂಪುಗಳಲ್ಲಿ ಕಾರ್ಯ ನಿರ್ವಹಿಸುವ ಉದ್ಯೋಗಿಗಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮಾರುಕಟ್ಟೆ ಮೌಲ್ಯದ ದೃಷ್ಟಿಯಿಂದ ವಿಶ್ವದ ಮೂರನೇ ಅತಿ ದೊಡ್ಡ ಕಂಪೆನಿ ಮೈಕ್ರೋಸಾಫ್ಟ್ (Microsoft) ಮುಂದಾಗಿದೆ. ಇದು ಎಲ್ಲ ಭೌಗೋಳಿಕ ಭಾಗದಲ್ಲೂ ಹಬ್ಬಿದೆ. ಕಂಪೆನಿಯ ಒಟ್ಟು ಉದ್ಯೋಗಿಗಳ ಸಂಖ್ಯೆಯ ಪೈಕಿ ಶೇ 1ಕ್ಕಿಂತ ಕಡಿಮೆ ಉದ್ಯೋಗಿಗಳ ಮೇಲೆ ಇದರ ಪರಿಣಾಮ ಆಗಲಿದೆ ಎಂದು ಬ್ಲೂಮ್ಬರ್ಗ್ ವರದಿ ಮಾಡಿದೆ. ಜೂನ್ 30, 2022ಕ್ಕೆ ಕಂಪೆನಿಯ ಹಣಕಾಸು ವರ್ಷ ಕೊನೆಯಾದ ನಂತರದಲ್ಲಿ ಉದ್ಯಮ ಗುಂಪಿನ ಮರುಹೊಂದಿಕೆ ಹಾಗೂ ಜವಾಬ್ದಾರಿಗಳಲ್ಲಿನ ಬದಲಾವಣೆ ಮಾಡಿದ ಮೇಲೆ ಈ ನಡೆಯನ್ನು ಇಡಲಾಗಿದೆ. ವರದಿಯ ಪ್ರಕಾರ, ಮೈಕ್ರೋಸಾಫ್ಟ್ನಿಂದ ಇತರ ಜವಾಬ್ದಾರಿಗಳಿಗೆ ನೇಮಕಾತಿ ಮಾಡಿಕೊಳ್ಳುವ ಯೋಜನೆ ಇದೆ. ಆದರೆ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳೊಂದಿಗೆ ಸದ್ಯದ ಹಣಕಾಸು ವರ್ಷ ಪೂರ್ಣಗೊಳಿಸಲಿದೆ.
“ನಾವು ಇಂದು ಸಣ್ಣ ಪ್ರಮಾಣದ ಹುದ್ದೆಗಳ ತೆಗೆದುಹಾಕಿದ್ದೇವೆ. ಎಲ್ಲ ಕಂಪೆನಿಗಳಂತೆಯೇ ನಮ್ಮ ಉದ್ಯಮದ ಆದ್ಯತೆಯನ್ನು ನಿಯಮಿತವಾಗಿ ಮೌಲ್ಯಮಾಪನ ಮಾಡುತ್ತೇವೆ. ಅಗತ್ಯಕ್ಕೆ ಅನುಗುಣವಾಗಿ ರಚನಾತ್ಮಕ ಹೊಂದಾಣಿಕೆಯನ್ನು ಮಾಡುತ್ತೇವೆ. ನಮ್ಮ ಉದ್ಯಮದಲ್ಲಿನ ಹೂಡಿಕೆ ಮುಂದುವರಿಸುತ್ತೇವೆ ಮತ್ತು ಮುಂಬರುವ ವರ್ಷದಲ್ಲಿ ಉದ್ಯೋಗಿಗಳ ಸಂಖ್ಯೆ ಹೆಚ್ಚಳವಾಗುತ್ತದೆ,” ಎಂದು ಮೈಕ್ರೋಸಾಫ್ಟ್ನ ಇಮೇಲ್ ಹೇಳಿಕೆ ಉದಾಹರಿಸಿ, ಬ್ಲೂಮ್ಬರ್ಗ್ ವರದಿ ಮಾಡಿದೆ.
ಮತ್ತೊಂದು ವರದಿ ಪ್ರಕಾರ, ಆಲ್ಫಾಬೆಟ್ ಇಂಕ್ನ ಗೂಗಲ್ ವರ್ಷದ ಬಾಕಿ ಅವಧಿಗೆ ನೇಮಕಾತಿಯನ್ನು ನಿಧಾನ ಮಾಡುವುದಕ್ಕೆ ಯೋಜಿಸುತ್ತಿದೆ. ಸಂಭವನೀಯ ಆರ್ಥಿಕ ಹಿಂಜರಿತದ ಹಿನ್ನೆಲೆಯಲ್ಲಿ ಈ ನಿರ್ಧಾರ ಮಾಡಿದೆ, ಎಂದು ಸಿಇಒ ಸುಂದರ್ ಪಿಚೈ ಈಚೆಗೆ ಇಮೇಲ್ನಲ್ಲಿ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಅವರೇ ತಿಳಿಸಿರುವಂತೆ, ಎಂಜಿನಿಯರಿಂಗ್, ತಾಂತ್ರಿಕ ಮತ್ತು ಇತರ ಮುಖ್ಯ ಹುದ್ದೆಗಳ ನೇಮಕಾತಿಗೆ ಕಂಪೆನಿಯು 2022 ಮತ್ತು 2023ರಲ್ಲಿ ಕಂಪೆನಿಯು ಗಮನ ನೀಡುವುದು.