ಆಹಾರದ ಮೇಲೆ ಜಿಎಸ್ಟಿ ಹೇರಿಕೆ; ನಾಳೆ ಯಶವಂತಪುರ ಎಪಿಎಂಸಿ ಬಂದ್, ಅಕ್ಕಿಗಿರಣಿ ಮಾಲೀಕರ ಸಂಘದಿಂದ ಪ್ರತಿಭಟನೆ
ಗೋಧಿ, ಅಕ್ಕಿ, ಬೇಳೆಕಾಳುಗಳಿಗೆ ಕೇಂದ್ರ ಸರ್ಕಾರವು ಶೇ 5ರ ಜಿಎಸ್ಟಿ ಹೇರಿರುವುದನ್ನು ವರ್ತಕರು ಹಾಗೂ ಕಾರ್ಮಿಕ ಸಂಘಟನೆಗಳು ಖಂಡಿಸಿವೆ.
ಬೆಂಗಳೂರು: ಕೇಂದ್ರ ಸರ್ಕಾರವು ಆಹಾರ ಧಾನ್ಯಗಳ ಮೇಲೆಯೂ ಶೇ 5ರಷ್ಟು ಸರಕು ಸೇವಾ ಸುಂಕ (Goods and Service Tax – GST) ವಿಧಿಸಿರುವುದನ್ನು ಖಂಡಿಸಿ ಕೃಷಿ ಮಾರುಕಟ್ಟೆ ವಹಿವಾಟಿನಲ್ಲಿ ತೊಡಗಿಸಿಕೊಂಡಿರುವ ಹಲವು ಸಂಘಟನೆಗಳು ಎಪಿಎಂಸಿ ಶುಕ್ರವಾರ (ಜುಲೈ 15) ಯಾರ್ಡ್ ಬಂದ್ಗೆ ಕರೆ ಕೊಟ್ಟಿವೆ. ಯಶವಂತಪುರ ಎಪಿಎಂಸಿಯ ಮಾಲೀಕರು, ವರ್ತಕರು, ಕಾರ್ಮಿಕ ಸಂಘಟನೆಗಳು ಬಂದ್ ಕರೆಗೆ ಬೆಂಬಲ ಘೋಷಿಸಿವೆ. ಗೋಧಿ, ಅಕ್ಕಿ, ಬೇಳೆಕಾಳುಗಳಿಗೆ ಕೇಂದ್ರ ಸರ್ಕಾರವು ಶೇ 5ರ ಜಿಎಸ್ಟಿ ಹೇರಿರುವುದನ್ನು ವರ್ತಕರು ಹಾಗೂ ಕಾರ್ಮಿಕ ಸಂಘಟನೆಗಳು ಖಂಡಿಸಿವೆ. ಕೇಂದ್ರದ ನಿರ್ಧಾರ ವಿರೋಧಿಸಿ ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಯಾರ್ಡ್ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಲು ಮುಂದಾಗಿದ್ದಾರೆ. ನಾನ್ ಬ್ರಾಂಡೆಡ್ ವಸ್ತುಗಳ ವರ್ತಕರಿಗೆ ಸರ್ಕಾರದ ಹೊಸ ನಡೆಯಿಂದ ಬಹಳ ದೊಡ್ಡ ನಷ್ಟವಾಗಲಿದೆ ಎಂದು ಎಪಿಎಂಸಿ ವ್ಯಾಪಾರಿಗಳು ಹೇಳಿದ್ದಾರೆ.
ಆಹಾರ ಧಾನ್ಯಗಳ ಮೇಲೆ ಶೇ 5ರ ಜಿಎಸ್ಟಿ ವಿರೋಧಿಸಿ ನಾಳೆ ರಾಜ್ಯ ಅಕ್ಕಿ ಗಿರಣಿದಾರರ ಸಂಘವು ಜುಲೈ 15ರಂದು ಧರಣಿಗೆ ನಿರ್ಧರಿಸಲಾಗಿದೆ. ರಾಜ್ಯದಾದ್ಯಂತ ಎಲ್ಲ ಚಟುವಟಿಕೆಗಳನ್ನ ನಿಲ್ಲಿಸಿ ಪ್ರತಿಭಟನೆ ನಡೆಸಲಾಗುವುದು. ಕೇಂದ್ರ ಸರ್ಕಾರವು ಕೂಡಲೇ ಈ ಪ್ರಸ್ತಾವನೆಯನ್ನು ಹಿಂಪಡೆಯಬೇಕು. ಜಿಎಸ್ಟಿ ಕೌನ್ಸಿಲ್ ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು ಎಂದು ಸಂಘಟನೆಯ ಪ್ರತಿನಿಧಿಗಳು ಮನವಿ ಮಾಡಿದ್ದಾರೆ.
ಅಕ್ಕಿ ಗಿರಣಿದಾರರ ಸಂಘದ ಪ್ರತಿಭಟನೆಗೆ ದಿ ಬೆಂಗಳೂರು ಹೋಲ್ ಸೇಲ್ ಫುಡ್ ಅಂಡ್ ಗ್ರೇನ್ಸ್ ಅಂಡ ಪಲ್ಸಸ್ (ಮರ್ಚೆಂಟ್ಸ್ ಅಸೋಸಿಯೇಷನ್), ಬೆಂಗಳೂರು ಗ್ರೈನ್ ಮರ್ಚೆಂಟ್ಸ್ ಅಸೋಸಿಯೇಷನ್, ಕರ್ನಾಟಕ ರೋಲರ್ ಫ್ಲೋರ್ ಮಿಲ್ಲರ್ಸ್ ಅಸೋಸಿಯೇಷನ್, ನ್ಯೂ ತರಗುಪೇಟೆ ಮರ್ಚೆಂಟ್ಸ್ ಅಸೋಸಿಯೇಷನ್ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಉಡುಪಿ ಜಿಲ್ಲೆಯ ಅಕ್ಕಿಗಿರಣಿದಾರರ ಸಂಘವೂ ಧರಣಿಗೆ ಬೆಂಬಲ ವ್ಯಕ್ತಪಡಿಸಿದೆ.
ಕೇಂದ್ರ ಸರ್ಕಾರದ ಅಧೀನದಲ್ಲಿರುವ ಜಿಎಸ್ಟಿ ಮಂಡಳಿಯು ಆಹಾರ ಧಾನ್ಯಗಳ ಮೇಲೆ ವಿಧಿಸಿರುವ ಶೇ 5ರ ಜಿಎಸ್ಟಿ ತೆರಿಗೆಯು ಜುಲೈ 18ರಿಂದ ಜಾರಿಗೆ ಬರಲಿದೆ. ಈ ತೆರಿಗೆಯಿಂದ ಅಕ್ಕಿ, ಜೋಳ, ರಾಗಿಯಂಥ ಆಹಾರ ಪದಾರ್ಥಗಳ ಬೆಲೆ ಹೆಚ್ಚಾಗಲಿದೆ. ಈಗಾಗಲೇ ಹಣದುಬ್ಬರದಿಂದ ಕಂಗಾಲಾಗಿರುವ ಕಾರ್ಮಿಕರು, ಬಡವರು, ಮಧ್ಯಮವರ್ಗದ ಜನರು ಹೊಸ ಹೊರೆಯನ್ನು ಸಹಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ತೆರಿಗೆ ಹೇರುವ ನಿರ್ಧಾರ ಹಿಂಪಡೆಯಬೇಕು ಎಂದು ಸಂಘವು ಆಗ್ರಹಿಸಿದರು.
ಆಹಾರ ಧಾನ್ಯಗಳ ಮೇಲಿನ ತೆರಿಗೆ ತೆಗೆಯುವಂತೆ ಹಲವು ಬಾರಿ ಮನವಿ ನೀಡಿದರೂ ಜಿಎಸ್ಟಿಯ ಕೇಂದ್ರ ಮತ್ತು ರಾಜ್ಯ ಕಚೇರಿಗಳಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಹೀಗಾಗಿ ಅನಿವಾರ್ಯವಾಗಿ ಪ್ರತಿಭಟನೆ ನಡೆಸಲು ಮುಂದಾಗಿದ್ದೇವೆ. ಜುಲೈ 15 ಮತ್ತು 16ರಂದು ಅಕ್ಕಿಗಿರಣಿಗಳಿಗೆ ಸಂಬಂಧಿಸಿದ ಎಲ್ಲ ರೀತಿಯ ವಹಿವಾಟುಗಳನ್ನು ಸಂಪೂರ್ಣ ಬಂದ್ ಮಾಡಲಾಗುವುದು. ಪ್ರತಿಭಟನೆ ನಡೆಸಿದ ನಂತರ ತೆರಿಗೆ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಅಕ್ಕಿಗಿರಣಿದಾರರ ಸಂಘದ ಮುಖಂಡರಾದ ರಮೇಶ್ ನಾಯಕ್ ಹೇಳಿದ್ದಾರೆ.
Published On - 8:00 am, Thu, 14 July 22