ಹಾಲು, ತುಪ್ಪದ ಬೆಲೆ ಏರಿಕೆ ನಂತರ ತತ್ತರಿಸಿದ ಬೆಂಗಳೂರು ಹೊಟೆಲ್, ಬೇಕರಿ ಉದ್ಯಮ
ಒಂದಲ್ಲ ಒಂದು ರೀತಿ ಆಹಾರ ಉದ್ಯಮವು ಡೇರಿ ಉದ್ಯಮವನ್ನು ಅವಲಂಬಿಸಿದೆ. ಹೀಗಾಗಿಯೇ ಡೇರಿ ಉತ್ಪನ್ನಗಳ ಬೆಲೆ ಏರಿಕೆಯು ಹೊಟೆಲ್ ಹಾಗೂ ಬೇಕರಿ ಉದ್ಯಮಗಳನ್ನು ಬಾಧಿಸುತ್ತಿವೆ.
ಬೆಂಗಳೂರು: ನಗರವೂ ಸೇರಿದಂತೆ ರಾಜ್ಯದ ಹೊಟೆಲ್ (Hotel) ಮತ್ತು ಬೇಕರಿ (Bakery) ಉದ್ಯಮ ಈಗಷ್ಟೇ ಕೊವಿಡ್ ಸಂಕಷ್ಟದಿಂದ ಚೇತರಿಸಿಕೊಳ್ಳುತ್ತಿದೆ. ಕೊವಿಡ್ ಪಿಡುಗು ಆವರಿಸಿದ್ದ ಸಂದರ್ಭದಲ್ಲಿ ಘೋಷಿಸಿದ್ದ ಲಾಕ್ಡೌನ್ ವೇಳೆ ಬಾಗಿಲು ಹಲವು ಹೊಟೆಲ್ ಮತ್ತು ಬೇಕರಿಗಳು ಮತ್ತೆ ಕಾರ್ಯಾರಂಭ ಮಾಡಿದ್ದವಾದರೂ ವ್ಯಾಪಾರ ಮೊದಲಿನ ಸ್ಥಿತಿಗೆ ಬಂದಿರಲಿಲ್ಲ. ನಿಧಾನವಾಗಿ ಕೊವಿಡ್ ಮೊದಲಿನ ಹಂತಕ್ಕೆ ಮರಳುತ್ತಿದ್ದ ಆಹಾರ ಉದ್ಯಮವನ್ನು (Food Industry) ಬೆಣ್ಣೆಯ ಕೊರತೆ ಹಾಗೂ ಹಾಲು (Milk), ತುಪ್ಪದ (Ghee) ಬೆಲೆ ಏರಿಕೆಯು ಹೊಸ ಸಮಸ್ಯೆಯಾಗಿ ಕಾಡುತ್ತಿದೆ.
ಮಸಾಲೆ ದೋಸೆ ಸೇರಿದಂತೆ ಹಲವು ಜನಪ್ರಿಯ ತಿನಿಸುಗಳ ತಯಾರಿಕೆಗೆ ಬೆಣ್ಣೆ ಬೇಕು. ಉಪ್ಪಿಟ್ಟು, ಬಿಸಿಬೇಳೆಬಾತ್, ಪೊಂಗಲ್ನಂಥ ತಿಂಡಿಗಳ ಮೇಲೆ ತುಪ್ಪ ಹಾಕಿಕೊಡುವುದು ರೂಢಿ. ಕೆಲ ಹೊಟೆಲ್ಗಳಲ್ಲಿ ಊಟ ತೆಗೆದುಕೊಂಡಾಗಲೂ ಸಾಂಬಾರ್ ಮತ್ತು ತಿಳಿಸಾರಿನ ಮೇಲೆ ತುಪ್ಪ ಹಾಕುವ ವಾಡಿಕೆಯಿದೆ. ಊಟದ ಜೊತೆಗೆ ಮಜ್ಜಿಗೆ-ಮೊಸರು ಕೊಡುವುದು ಸಾಮಾನ್ಯ ಸಂಗತಿ. ಪಾವ್ಭಾಜಿ ಸೇರಿದಂತೆ ಕೆಲ ಸಂಜೆ ಕುರುಕಲು ತಿನಿಸುಗಳಿಗೂ ಬೆಣ್ಣೆ-ತುಪ್ಪ ಬೇಕಿದೆ. ಹೊಟೆಲ್ ಉದ್ಯಮದ ಮುಖ್ಯ ಆದಾಯ ಮೂಲವಾಗಿರುವ ಕಾಫಿ-ಟೀ ಮಾರಾಟಕ್ಕೆ ಹಾಲು ಪ್ರಮುಖ ಉತ್ಪನ್ನ. ಇದೇ ರೀತಿ ಬೇಕರಿ ಉತ್ಪನ್ನಗಳಾದ ಬ್ರೆಡ್, ಬನ್, ಕೇಕ್, ಸ್ವೀಟ್ ತಯಾರಿಕೆಗೂ ಬೆಣ್ಣೆ, ಡೇರಿ ವೈಟ್ನರ್, ಹಾಲಿನ ಬಳಕೆಯಿದೆ. ಒಂದಲ್ಲ ಒಂದು ರೀತಿ ಆಹಾರ ಉದ್ಯಮವು ಡೇರಿ ಉದ್ಯಮವನ್ನು ಅವಲಂಬಿಸಿದೆ. ಹೀಗಾಗಿಯೇ ಡೇರಿ ಉತ್ಪನ್ನಗಳ ಬೆಲೆ ಏರಿಕೆಯು ಹೊಟೆಲ್ ಹಾಗೂ ಬೇಕರಿ ಉದ್ಯಮಗಳನ್ನು ಬಾಧಿಸುತ್ತಿವೆ.
‘ಈಗಿನ್ನೂ ವ್ಯಾಪಾರ ಕುದುರುತ್ತಿದೆ. ಒಂದೇ ಏರಿಯಾದಲ್ಲಿ ಹಲವು ಹೊಸ ಹೊಟೆಲ್ಗಳು ಆರಂಭವಾಗಿವೆ. ಫುಟ್ಪಾತ್ಗಳ ಮೇಲೆ ಆಹಾರ ಒದಗಿಸುವವರ ಸಂಖ್ಯೆಯೂ ದೊಡ್ಡದಾಗಿದೆ. ಹೀಗಿರುವಾಗ ಬೆಲೆ ಹೆಚ್ಚಿಸಿದರೆ ಅದು ಗ್ರಾಹಕರನ್ನು ನಮ್ಮಿಂದ ದೂರ ಮಾಡಬಹುದು’ ಎಂದು ಬೆಂಗಳೂರಿನ ನಂಜಪ್ಪ ಸರ್ಕಲ್ನಲ್ಲಿರುವ ಹೊಟೆಲ್ ಒಂದರ ಸಿಬ್ಬಂದಿ ಪ್ರತಿಕ್ರಿಯಿಸಿದರು. ‘ಸದ್ಯದ ಮಟ್ಟಿಗೆ ಬೆಲೆ ಏರಿಕೆ ಚಿಂತನೆ ನಮಗಿಲ್ಲ’ ಎಂಬ ‘ನಮ್ಮೂರ ತಿಂಡಿ’ ಹೊಟೆಲ್ನ ಮಾಲೀಕರಾದ ರವಿ ಕುಮಾರ್ ಅವರ ಹೇಳಿಕೆಯನ್ನು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.
‘ಕೊವಿಡ್ ನಂತರ ಹೊಟೆಲ್ ಉದ್ಯಮ ಚೇತರಿಸಿಕೊಂಡಷ್ಟು ಬೇಗ ಬೇಕರಿಗಳು ಚೇತರಿಸಿಕೊಳ್ಳಲಿಲ್ಲ. ಕೊವಿಡ್ ವೇಳೆ ಕೆಲಸ ಕಳೆದುಕೊಂಡು ಊರುಗಳಿಗೆ ಹೊರಟವರು ಇನ್ನೂ ಸಂಪೂರ್ಣವಾಗಿ ವಾಪಸ್ ಬಂದಿಲ್ಲ. ಮೊದಲಿನಷ್ಟೂ ಬೇಡಿಕೆಯೂ ಉಳಿದಿಲ್ಲ. ಈಗೇನೋ ರಿಸೆಷನ್ ಅಂತ ಎಲ್ರೂ ಮಾತಾಡ್ತಿದ್ದಾರೆ. ಜನ ದುಡ್ಡು ಖರ್ಚು ಮಾಡೋಕೆ ಹೆದರುವ ಪರಿಸ್ಥಿತಿ ಬಂದಿದೆ. ಸೆಲಬ್ರೇಷನ್ಗಳಿಗೆ ಜನ ದುಡ್ಡು ಖರ್ಚು ಮಾಡದಿದ್ದರೆ ನಮ್ಮಂಥವರು ಉಳಿಯುವುದಾದರೂ ಹೇಗೆ’ ಎಂದು ಸಮಸ್ಯೆಯ ಮತ್ತೊಂದು ಮುಖವನ್ನು ವಿವಿ ಪುರಂನ ಬೇಕರಿ ಮಾಲೀಕರೊಬ್ಬರು ತೆರೆದಿಡುತ್ತಾರೆ.
‘ಹೊಟೆಲ್ ಅಥವಾ ಬೇಕರಿಯ ತಿನಿಸುಗಳ ದರ ಬೆಂಗಳೂರಿನ ಎಲ್ಲ ಏರಿಯಾಗಳಲ್ಲಿ ಒಂದೇ ರೀತಿ ಇರಲು ಸಾಧ್ಯವಿಲ್ಲ. ಒಬ್ಬರೇ ಮಾಲೀಕರು ವಿವಿಧ ಸ್ಥಳಗಳಲ್ಲಿ ಹೊಟೆಲ್ ನಡೆಸಿದರೂ ಒಂದೊಂದು ಕಡೆ ಒಂದೊಂದು ರೇಟ್ ಇಟ್ಟಿರುತ್ತಾರೆ. ಹೊಟೆಲ್ ಇರುವ ಸ್ಥಳ ಮತ್ತು ಅದರ ಜನಪ್ರಿಯತೆಯೂ ತಿನಿಸುಗಳ ದರ ನಿಗದಿಯಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ತದೆ. ಆದರೆ ಕಾರ್ಮಿಕರ ಸಂಬಳ, ಬಾಡಿಗೆ, ನೀರು, ತರಕಾರಿ, ದಿನಿಸು ಸೇರಿದಂತೆ ಇತರ ಖರ್ಚುಗಳು ಹೆಚ್ಚುಕಡಿಮೆ ಒಂದೇ ರೀತಿ ಇರುತ್ತದೆ’ ಎಂದು ಹೊಟೆಲ್ ಉದ್ಯಮಿ ಶ್ರೀಪತಿ ರಾವ್ ಹೇಳುತ್ತಾರೆ.
ಉತ್ತಮ ಜನಸಂಚಾರವಿರುವ ಸ್ಥಳದಲ್ಲಿರುವ ಹೊಟೆಲ್ಗಳಿಗೆ ದಿನಕ್ಕೆ ಸರಾಸರಿ 10 ಕೆಜಿ ಬೆಣ್ಣೆ ಹಾಗೂ ಎರಡು ಲೀಟರ್ನಷ್ಟು ತುಪ್ಪ ಬೇಕಾಗುತ್ತದೆ. ಅದೇ ರೀತಿ ಹಾಲಿನ ದರವು ಕಾಫಿ-ಟೀ ವ್ಯಾಪಾರದಿಂದ ಸಿಗುವ ಲಾಭದ ಮೇಲೆ ನೇರ ಪರಿಣಾಮ ಬೀರುತ್ತದೆ. ಕೆಎಂಎಫ್ನವರು ಒಮ್ಮೆಲೆ ದರ ಹೆಚ್ಚಿಸಿರುವುದರಿಂದ ಉತ್ಪಾದನಾ ವೆಚ್ಚವೂ ಹೆಚ್ಚಾಗಿದೆ ಎಂದು ಹಲವರು ಹೇಳಿದರು. ಪರಿಸ್ಥಿತಿ ಒಂದು ಹಂತಕ್ಕೆ ಸ್ಥಿರಗೊಂಡು, ವ್ಯಾಪಾರವು ಕೊವಿಡ್ ಮೊದಲಿನ ಸ್ಥಿತಿಗೆ ಮರಳಿದ ನಂತರ ಶೇ 10ರಿಂದ 15ರಷ್ಟು ಬೆಲೆ ಹೆಚ್ಚಿಸಲು ಹಲವು ಹೊಟೆಲ್ಗಳ ಮಾಲೀಕರು ಚಿಂತನೆ ನಡೆಸಿದ್ದಾರೆ. ಆದರೆ ಬ್ರೆಡ್, ಕೇಕ್ಗಳ ಬೆಲೆ ಹೆಚ್ಚಿಸುವ ಬಗ್ಗೆ ಬೇಕರಿ ಮಾಲೀಕರಲ್ಲಿ ಹಿಂಜರಿಕೆ ಇದೆ.
ಇದನ್ನೂ ಓದಿ: ಸಣ್ಣ ಹೊಟೆಲ್ಗಳಿಗೆ ಜಿಎಸ್ಟಿ ಬರೆ: ಹೊಟೆಲ್ ಮಾಲೀಕರ ಸಂಘದ ಅಸಮಾಧಾನ
ನಂದಿನಿ ಹಾಲು, ಮೊಸರಿನ ದರ ಲೀಟರ್ಗೆ ₹ 3 ಹೆಚ್ಚಳ
ಕಳೆದ ನ 14ರಂದು ಹಾಲು ಮತ್ತು ಮೊಸರಿನ ಬೆಲೆಯನ್ನು ಕೆಎಂಎಫ್ ಹೆಚ್ಚಿಸಿತ್ತು. ಪ್ರತಿ ಲೀಟರ್ ಹಾಲು ಮತ್ತು ಮೊಸರಿನ ಬೆಲೆಯು ತಲಾ ₹ 3 ಹೆಚ್ಚಾಗಿದೆ. ಅದರಂತೆ ಟೋನ್ಡ್ ಹಾಲು 40, ಹೋಮೋಜಿನೈಸ್ಡ್ ಹಾಲು 41, ಹೊಮೊಜಿನೈಸ್ಡ್ ಹಸುವಿನ ಹಾಲು 42, ಸ್ಪೆಷಲ್ ಹಾಲು 46, ಶುಭಂ ಹಾಲು 46, ಹೊಮೊಜಿನೈಸ್ಡ್ ಸ್ಟ್ಯಾಂಡಡೈಸ್ಡರ್ ಹಾಲು 47, ಸಮೃದ್ಧಿ ಹಾಲು 51, ಸಂತೃಪ್ತಿ ಹಾಲು 53, ಡಬಲ್ ಟೋನ್ಡ್ ಹಾಲು 39, ಮೊಸರು 48 ರೂಪಾಯಿ ಮುಟ್ಟಿದೆ.
ಮತ್ತಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:01 am, Fri, 2 December 22