ನವದೆಹಲಿ: ಡಿಜಿಟಲ್ ಚಿನ್ನದ (Digital Gold) ಮಾದರಿಯಲ್ಲಿಯೇ ಇನ್ನು ಮುಂದೆ ಫೋನ್ಪೇ, ಪೇಟಿಎಂ ಇತ್ಯಾದಿ ಆ್ಯಪ್ಗಳ ಮೂಲಕ ಡಿಜಿಟಲ್ ಬೆಳ್ಳಿಯನ್ನೂ (Digital Silver) ಖರೀದಿಸಬಹುದಾಗಿದೆ. ಎಂಎಂಟಿಸಿ-ಪಿಎಎಂಪಿ ಕಂಪನಿಯು ಡಿಜಿಟಲ್ ಬೆಳ್ಳಿಯನ್ನು ಬಿಡುಗಡೆ ಮಾಡಿದ್ದು, ಗ್ರಾಹಕರು 999.9+ ಶುದ್ಧತೆಯ ಬೆಳ್ಳಿಯನ್ನು ಕಂಪನಿಯ ವೆಬ್ಸೈಟ್ ಮತ್ತು ಸಹಭಾಗಿತ್ವ ಹೊಂದಿರುವ ಪೇಟಿಎಂ, ಫೋನ್ಪೇ ಹಾಗೂ ಇತರ ಆ್ಯಪ್ಗಳ ಮೂಲಕ ಖರೀದಿಸಬಹುದಾಗಿದೆ ಎಂದು ತಿಳಿಸಿದೆ. ಭೌತಿಕ ಬೆಳ್ಳಿಗೆ ಸಮ ಪ್ರಮಾಣದ ಡಿಜಿಟಲ್ ಬೆಳ್ಳಿ ಖರೀದಿಗೆ ಲಭ್ಯವಿರಲಿದೆ. ಡಿಜಿಟಲ್ ರೂಪದಲ್ಲಿ ಖರೀದಿಸಿದ ಬೆಳ್ಳಿಯನ್ನು ಪ್ರಮಾಣೀಕೃತ ಬ್ಯಾಂಕ್ನ ಸುರಕ್ಷಿತ ಖಜಾನೆಯಲ್ಲಿ ಇಡಲಾಗುತ್ತದೆ. ವಿಶ್ವಾಸಾರ್ಹ ಮಧ್ಯವರ್ತಿ ಸಂಸ್ಥೆ ಅದರ ಸ್ಥಿತಿಗತಿಯನ್ನು ನಿರಂತರವಾಗಿ ಪರಿಶೀಲಿಸುತ್ತಿರಲಿದೆ ಎಂದು ಕಂಪನಿ ಹೇಳಿದೆ.
ಗ್ರಾಹಕರು ಬ್ಯಾಂಕ್ನ ಖಜಾನೆಗೆ ಭೇಟಿ ನೀಡಿ ಪರಿಶೀಲನೆ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಅವರು ಆನ್ಲೈನ್ ಮೂಲಕ ತಾವು ಹೊಂದಿರುವ ಬೆಳ್ಳಿಯನ್ನು ಪರಿಶೀಲಿಸುತ್ತಿರಬಹುದು. ರಿಯಲ್ಟೈಮ್ನಲ್ಲಿ ಅದನ್ನು ಹೊಂದಬಹುದು ಎಂದು ಎಂಎಂಟಿಸಿ-ಪಿಎಎಂಪಿ ಕಂಪನಿಯ ಮುಖ್ಯ ಡಿಜಿಟಲ್ ಅಧಿಕಾರಿ ಅಮುಲ್ ಸಾಹಾ ತಿಳಿಸಿದ್ದಾರೆ.
ಡಿಜಿಟಲ್ ಚಿನ್ನದ ಮಾದರಿಯಲ್ಲಿಯೇ ಕನಿಷ್ಠ 1 ರೂ.ನಿಂದ ಡಿಜಿಟಲ್ ಬೆಳ್ಳಿ ಖರೀದಿಸಬಹುದಾಗಿದೆ. ಭೌತಿಕ ಬೆಳ್ಳಿ ಖರೀದಿಯಿಂದ ದೊರೆಯುವ ಎಲ್ಲ ಪ್ರಯೋಜನಗಳೂ ಡಿಜಿಟಲ್ ಬೆಳ್ಳಿಯಲ್ಲಿ ದೊರೆಯಲಿವೆ. 24/7 ಲಭ್ಯತೆ, ಖಾತರಿಪಡಿಸಿದ ಪರಿಶುದ್ಧತೆ, ಕಡಿಮೆ ಮೊತ್ತದಲ್ಲಿಯೂ ಬೆಳ್ಳಿಯ ಮೇಲಿನ ಹೂಡಿಕೆಗೆ ಅವಕಾಶ, ಮೇಕಿಂಗ್ ಶುಲ್ಕ ಇಲ್ಲದಿರುವುದು ಸೇರಿದಂತೆ ಹಲವು ಹೆಚ್ಚುವರಿ ಪ್ರಯೋಜನಗಳು ಡಿಜಿಟಲ್ ಬೆಳ್ಳಿಯಲ್ಲಿವೆ ಎಂದು ಕಂಪನಿ ಹೇಳಿದೆ.
ಯಾವುದೇ ಕ್ಷಣದಲ್ಲಿ ಬೇಕಿದ್ದರೂ ಡಿಜಿಟಲ್ ಬೆಳ್ಳಿಯನ್ನು ಕಂಪನಿ ನೀಡುವ ಯಾವುದೇ ಉತ್ಪನ್ನದ ರೂಪದಲ್ಲಿ ಭೌತಿಕ ರೂಪದಲ್ಲಿ ಪಡೆಯಲು ಅವಕಾಶವಿದೆ. ಆದರೆ, ಗ್ರಾಹಕರಿಗೆ ಬೇಕಾದ ರೂಪದಲ್ಲಿ ಪಡೆಯುವ (ಕಸ್ಟಮ್ ಮೇಡ್) ಆಯ್ಕೆ ಇರುವುದಿಲ್ಲ. ಡಿಜಿಟಲ್ ಬೆಳ್ಳಿಯನ್ನು ಭೌತಿಕ ಬೆಳ್ಳಿಯಾಗಿ ಖರೀದಿ ಮಾಡುವುದಿದ್ದರೆ ಆಗ ಮೇಕಿಂಗ್ ಶುಲ್ಕ ನೀಡಬೇಕಾಗುತ್ತದೆ ಎಂದು ಕಂಪನಿ ತಿಳಿಸಿದೆ.
ಇದನ್ನೂ ಓದಿ: Investment Ideas: ಷೇರು ಮಾರುಕಟ್ಟೆ ಬಿಟ್ಬಿಡಿ; ಹಣ ಮಾಡಲು ಹೂಡಿಕೆಯ ದಾರಿಗಳು ಇಲ್ಲಿವೆ
ಜನವರಿ 30ರಂದೇ ಡಿಜಿಟಲ್ ಬೆಳ್ಳಿ ಮಾರಾಟ ಆರಂಭಿಸಲಾಗಿದೆ. ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದೂ ಅಮುಲ್ ಸಾಹಾ ಹೇಳಿದ್ದಾರೆ. ಪ್ರಸ್ತುತ ಕಂಪನಿಯ ಲಾಕರ್ನಲ್ಲೇ ಉಚಿತವಾಗಿ ಬೆಳ್ಳಿ ಸಂಗ್ರಹಿಸಲು ಗ್ರಾಹಕರಿಗೆ ಅವಕಾಶ ನೀಡಲಾಗಿದೆ. ಪ್ರೊಸೆಸಿಂಗ್ ಶುಲ್ಕವೂ ಇರುವುದಿಲ್ಲ. ಆದರೆ ಶೇ 3ರ ಜಿಎಸ್ಟಿ ಪಾವತಿಸಬೇಕಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.