Byju’s: ಬೈಜುಸ್ನ ಆಲ್ಫಾ ಯೂನಿಟ್ನಿಂದ ಅಮೆರಿಕದ ಕೋರ್ಟ್ನಲ್ಲಿ ದಿವಾಳಿ ತಡೆಗೆ ಅರ್ಜಿ ಸಲ್ಲಿಕೆ
Bankruptcy filing: ಬೈಜುಸ್ನ ಆಲ್ಫಾ ಘಟಕ ಅಮೆರಿಕದ ಡೆಲವೇರ್ ಕೋರ್ಟ್ವೊಂದರಲ್ಲಿ ದಿವಾಳಿ ತಡೆಗೆ ಕೋರಿ ಅರ್ಜಿ ಸಲ್ಲಿಸಿದೆ. ತನಗೆ 1 ಬಿಲಿಯನ್ನಿಂದ 10 ಬಿಲಿಯನ್ವರೆಗೂ ಸಾಲ ಇದೆ ಎಂದು ಕೋರ್ಟ್ಗೆ ಬೈಜುಸ್ ಮಾಹಿತಿ ನೀಡಿದೆ. ಹೆಚ್ಚುವರಿ ಷೇರುಗಳ ವಿತರಣೆ ಮೂಲಕ 200 ಮಿಲಿಯನ್ ಡಾಲರ್ ಬಂಡವಾಳ ಪಡೆದು ಅದನ್ನು ತುರ್ತು ಅಗತ್ಯಗಳಿಗೆ ಬಳಸಲಾಗುವುದು ಎಂದು ಹೇಳಿದೆ.
ಡೆಲವೇರ್, ಫೆ. 2: ಬೈಜುಸ್ನ ಅಮೆರಿಕದ ಘಟಕವೊಂದು ಡೆಲವೇರ್ (Delaware state) ಕೋರ್ಟ್ವೊಂದರಲ್ಲಿ ದಿವಾಳಿ ತಡೆ ಪ್ರಕ್ರಿಯೆಗೆ (Bankruptcy) ಅರ್ಜಿ ಸಲ್ಲಿಸಿದೆ. ಬೈಜುಸ್ನ ಆಲ್ಫಾ ಯೂನಿಟ್ ಸಲ್ಲಿಸಿದ ಅರ್ಜಿ ಅದು ತನ್ನ ಆಸ್ತಿಯ ಮೊತ್ತ 500 ಮಿಲಿಯನ್ನಿಂದ 1 ಬಿಲಿಯನ್ ಡಾಲರ್ವರೆಗೂ ಇರಬಹುದು ಎಂದು ಲೆಕ್ಕ ಕೊಟ್ಟಿದೆ. ಇನ್ನು, ತನಗಿರುವ ಸಾಲವು 1 ಬಿಲಿಯನ್ನಿಂದ 10 ಬಿಲಿಯನ್ವರೆಗೂ ಇದೆ ಎಂದು ಹೇಳಿದ್ದು, ಸಾಲ ಕೊಟ್ಟವರ ಸಂಖ್ಯೆ 100ರಿಂದ 199 ಎಂದು ಮಾಹಿತಿ ನೀಡಿರುವುದು ತಿಳಿದುಬಂದಿದೆ.
ಭಾರತ ಮೂಲದ ಬೈಜುಸ್ ಅತ್ಯಂತ ಯಶಸ್ವಿ ಸ್ಟಾರ್ಟಪ್ಗಳಲ್ಲಿ ಒಂದೆನಿಸಿತ್ತು. ಕೇರಳ ಮೂಲದ ಬೈಜು ರವೀಂದ್ರನ್ ಬೆಂಗಳೂರಿನಲ್ಲಿ ಸ್ಥಾಪಿಸಿದ ಈ ಸ್ಟಾರ್ಟಪ್ 2022ರಲ್ಲಿ 22 ಬಿಲಿಯನ್ ಡಾಲರ್ನಷ್ಟು ವ್ಯಾಲ್ಯುಯೇಶನ್ ಪಡೆದಿತ್ತು. ಈ ಉಚ್ಛ್ರಾಯ ಸ್ಥಿತಿಯಿಂದ ಬೈಜುಸ್ ಇದೀಗ ಗಣನೀಯವಾಗಿ ಕುಸಿದಿದೆ. ಅದರ ಕೆಲ ಹೂಡಿಕೆದಾರರು ಬೈಜುಸ್ನ ಮೌಲ್ಯವನ್ನು 1 ಬಿಲಿಯನ್ ಡಾಲರ್ಗೆ ಇಳಿಸಿದ್ದಾರೆ. ಬೈಜುಸ್ ವಿರುದ್ಧ 2022ರ ನಂತರ ಕೆಲ ಬ್ಯಾಂಕಪ್ಸಿ ಅರ್ಜಿಗಳು ಸಲ್ಲಿಕೆ ಆಗಿದ್ದವು. ಜೊತೆಗೆ ತೆರಿಗೆ ಇಲಾಖೆಗಳ ದಾಳಿ ಇತ್ಯಾದಿ ಘಟನೆಗಳಿಂದ ಬೈಜುಸ್ ವಿವಾದ ಮತ್ತು ಕಷ್ಟದ ಸುಳಿಗೆ ಸಿಲುಕುತ್ತಲೇ ಬಂದಿದೆ.
ಇದನ್ನೂ ಓದಿ: Budget Positives: ಕೇಂದ್ರ ಬಜೆಟ್ನಲ್ಲಿ ಯಾರಿಗೆ ಮಂದಹಾಸ, ಯಾರಿಗೆ ನಿರಾಸೆ, ಇಲ್ಲಿದೆ ಡೀಟೇಲ್ಸ್
ಸಾಲಗಾರರ ವಿಪರೀತ ಒತ್ತಡಕ್ಕೆ ಒಳಗಾಗಿರುವ ಬೈಜುಸ್ನ ಆಲ್ಫಾ ಘಟಕವು ಅಮೆರಿಕದ ಡೆಲವೇರ್ ರಾಜ್ಯದ ಕೋರ್ಟ್ನಲ್ಲಿ ದಿವಾಳಿ ತಡೆಗೆ ಅರ್ಜಿ ಸಲ್ಲಿಸಿ ನೆರವು ಯಾಚಿಸಿದೆ. ಹೆಚ್ಚುವರಿ ಷೇರುಗಳ ವಿತರಣೆ (rights issue of shares) ಮೂಲಕ 200 ಮಿಲಿಯನ್ ಡಾಲರ್ ಬಂಡವಾಳ ಸಂಗ್ರಹಿಸಲಾಗುವುದು. ಈ ಹಣವನ್ನು ತುರ್ತು ಸಾಲಗಳಿಗೆ ಮತ್ತು ಸಂಸ್ಥೆಯ ಕಾರ್ಯನಿರ್ವಹಣೆಗೆ ಬಳಸಲಾಗುವುದು ಎಂದು ಬೈಜುಸ್ ತನ್ನ ಅರ್ಜಿಯಲ್ಲಿ ವಿವರಿಸಿದೆ.
ಇದೇ ವೇಳೆ, ಬೈಜುಸ್ ಸಂಸ್ಥೆ ಕಳೆದ ಕೆಲ ತಿಂಗಳುಗಳಲ್ಲಿ 1.2 ಬಿಲಿಯನ್ ಡಾಲರ್ ಮೊತ್ತದ ಸಾಲದ ಮರುಪಾವತಿಯ ವಿಚಾರದಲ್ಲಿ ಸಂಧಾನ ನಡೆಸುತ್ತಿದ್ದು, ಸಾಲ ತೀರಿಸಲು ಹೆಚ್ಚಿನ ಸಮಯಾವಕಾಶ ಕೋರುತ್ತಿದೆ. ತನ್ನ ಖರ್ಚುಗಳನ್ನು ಕಡಿಮೆ ಮಾಡಲು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಅದರಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವ ಕ್ರಮವೂ ಸೇರಿದೆ.
ಒಂದು ಸಮಯದಲ್ಲಿ ಭಾರತದ ಅತ್ಯಂತ ಯಶಸ್ವಿ ಸ್ಟಾರ್ಟಪ್ಗೆ ಮಾದರಿಯಾಗಿದ್ದ ಬೈಜುಸ್ ಇವತ್ತು ಬಹಳ ದುಸ್ಥಿತಿಯಲ್ಲಿ ನಿಂತಿದೆ. ಭಾರತದ ಆರ್ಥಿಕತೆ ಗಣನೀಯವಾಗಿ ಬೆಳೆಯುತ್ತಿರುವ ಹೊತ್ತಿನಲ್ಲೇ ಇಂಥ ಕೆಲ ನಿದರ್ಶನಗಳು ಎದುರಾಗಿರುವುದು ಕುತೂಹಲ ಮೂಡಿಸುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ