ನೀವು ಐಟಿ, ಮಾರ್ಕೆಟಿಂಗ್ ಇತ್ಯಾದಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರೆ ಮೀಟಿಂಗ್ (Meeting) ಕರ್ಮಕಾಂಡ ಏನೆಂದು ಗೊತ್ತಿದ್ದೀತು. ಹಲವು ಕಂಪನಿಗಳಲ್ಲಿ ದಿನಕ್ಕೆ ಏಳೆಂಟು ಮೀಟಿಂಗುಗಳೇ ನಡೆದುಹೋಗುತ್ತವೆ. ಒಂದೆಡೆ ಕೆಲಸದ ಟಾರ್ಗೆಟ್ಟು, ಮತ್ತೊಂದೆಡೆ ಸಮಯ ಕೊಲ್ಲುವ ಮೀಟಿಂಗು. ಎಂಥವರಿಗೂ ತಲೆಬೇನೆ ತರುವ ಸಂಗತಿ ಅದು. ಬಹಳಷ್ಟು ಉದ್ಯೋಗಿಗಳಿಗೆ ಮೀಟಿಂಗು ಹಗಲಿನಲ್ಲೂ ಕಾಡುವ ದುಸ್ವಪ್ನ. ಹಲವು ಕಂಪನಿಗಳಲ್ಲಿ ಮೀಟಿಂಗ್ ಸಂಖ್ಯೆ ಕಡಿಮೆ ಮಾಡುವ ಆಲೋಚನ ನಡೆದಿದೆ. ಆದರೆ, ಶಾಪಿಫೈ (Shopify) ಎಂಬ ಕಂಪನಿ ಬಹುತೇಕ ಎಲ್ಲಾ ರೀತಿಯ ಮೀಟಿಂಗುಗಳನ್ನು ಇನ್ಮುಂದೆ ನಡೆಸದಿರುವ ನಿರ್ಧಾರಕ್ಕೆ ಬಂದಿದೆ. ಉದ್ಯೋಗಿಗಳಿಗೆ ಕೆಲಸದ ಒತ್ತಡ ತಗ್ಗಿಸುವ ಉದ್ದೇಶದಿಂದ ಶಾಪಿಫೈ ಈ ಕ್ರಮ ಕೈಗೊಂಡಿದೆ.
ಇಬ್ಬರಿಗಿಂತ ಹೆಚ್ಚು ಮಂದಿ ಇರುವ ಎಲ್ಲಾ ನಿಯಮಿತ ಸಭೆಗಳನ್ನು ರದ್ದು ಮಾಡುತ್ತಿರುವುದಾಗಿ ಶಾಪಿಫೈ ಘೋಷಿಸಿದೆ. ಪ್ರತೀ ಬುಧವಾರ ಮೀಟಿಂಗ್ ರಹಿತ ದಿನವಾಗಿ ನಿಯಮ ರೂಪಿಸಿದೆ. 50ಕ್ಕಿಂತ ಹೆಚ್ಚು ಮಂದಿ ಇರುವ ದೊಡ್ಡ ಮೀಟಿಂಗನ್ನು ಗುರುವಾರದಂದು ಕೆಲಸದ 6 ಗಂಟೆ ಅವಧಿ ವೇಳೆ ಮಾತ್ರ ಮಾಡತಕ್ಕದ್ದು ಎಂದು ಶಾಪಿಫೈನ ಹೊಸ ನಿಯಮಗಳಲ್ಲಿ ಸೂಚಿಸಲಾಗಿದೆ.
ಕಂಪನಿ ಇರುವುದು ಮ್ಯಾನೇಜರುಗಳಿಗಾಗಿ ಅಲ್ಲ, ನಿರ್ಮಿಸುವವರಿಗಾಗಿ. ಮೀಟಿಂಗುಗಳು ಕ್ರಿಮಿಗಳಂತಾಗಿವೆ ಎಂಬುದು ಶಾಪಿಫೈನ ಸಿಒಒ ಕಾಝ್ ನೆಜಾಟಿಯನ್ ಹೇಳಿದ್ದಾರೆ.
‘ಮೀಟಿಂಗು ಒಂದು ಕ್ರಿಮಿ. ಶಾಪಿಫೈನಲ್ಲಿ ಈ ಕ್ರಿಮಿ ನಾಶ ಮಾಡಲು ಉಪಾಯ ಹುಡುಕಿದ್ದೇವೆ. 2023ರಲ್ಲಿ ನಾವು ಇಬ್ಬರಿಗಿಂತ ಹೆಚ್ಚು ಮಂದಿ ಇರುವ ಎಲ್ಲಾ ಶಾಪಿಫೈ ಮೀಟಿಂಗುಗಳನ್ನು ರದ್ದು ಮಾಡುತ್ತಿದ್ದೇವೆ. ಜನರಿಗೆ ಅವರ ಕೆಲಸದ ಸಮಯವನ್ನು ಮರಳಿಸೋಣ. ಕಂಪನಿಗಳಿರುವುದು ಕಟ್ಟುವವರಿಗಾಗಿಯೇ ಹೊರತು ಮ್ಯಾನೇಜರುಗಳಿಗಾಗಿ ಅಲ್ಲ’ ಎಂದು ಕಾಝ್ ನೆಜಾಟಿಯನ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Dream 11: ಎಚ್ಚರ, ರಜೆಯಲ್ಲಿರುವ ಸಹೋದ್ಯೋಗಿಗೆ ತೊಂದರೆ ಕೊಟ್ಟರೆ 1 ಲಕ್ಷ ರೂ. ದಂಡ; ಭಾರತದ ಟೆಕ್ ಕಂಪನಿಯಲ್ಲಿ ಹೀಗೊಂದು ನಿಯಮ!
‘ದಿನ ಕಳೆದಂತೆ ನಮ್ಮ ನಿತ್ಯದ ವ್ಯವಹಾರದಲ್ಲಿ ತೀರಾ ಹೆಚ್ಚು ಸಭೆಗಳು ಹೊಕ್ಕಿ ಹೋಗಿವೆ. ಮೀಟಿಂಗ್ ಅಟೆಂಡ್ ಮಾಡಲು ಉದ್ಯೋಗಿಗಳು ಶಾಪಿಫೈನಲ್ಲಿ ಕೆಲಸಕ್ಕೆ ಸೇರಿಲ್ಲ ಎಂಬುದು ನಮಗೆ ಗೊತ್ತು’ ಎಂದೂ ಕಂಪನಿಯ ಸಿಒಒ ಅಭಿಪ್ರಾಯಪಟ್ಟಿದ್ದಾರೆ.
ಮೀಟಿಂಗುಗಳು ಅನಾವಶ್ಯಕ ಎನಿಸಿದರೆ ಉದ್ಯೋಗಿಗಳು ಅದರಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಬಹುದು. ತಾವು ಭಾಗವಹಿಸುವ ಸಭೆಯ ಅಗತ್ಯತೆ ಬಗ್ಗೆ ಉದ್ಯೋಗಿಗಳು ಸೂಕ್ಷ್ಮವಾಗಿ ಅವಲೋಕಿಸಬೇಕು. ಅಂಥದ್ದಕ್ಕೆ ಶಾಪಿಫೈನ ಮ್ಯಾನೇಜ್ಮೆಂಟ್ ಉತ್ತೇಜನ ನೀಡುತ್ತಿದೆ. ಹಾಗೆಯೇ, ಅನವಶ್ಯಕ ಎನಿಸಿರುವ ದೊಡ್ಡ ಇಂಟರ್ನಲ್ ಚಾಟ್ ಗ್ರೂಪ್ ಗಳಿಂದಲೂ ಉದ್ಯೋಗಿಗಳು ಹೊರಗುಳಿಯುವ ಸ್ವಾತಂತ್ರ್ಯ ಹೊಂದಿದ್ದಾರೆ.
ಸದ್ಯ ಶಾಪಿಫೈನಲ್ಲಿ ಆಂತರಿಕ ಸಂವಾದಕ್ಕಾಗಿ ಸ್ಲ್ಯಾಕ್ ಪ್ಲಾಟ್ ಫಾರ್ಮ್ ಅನ್ನು ಉಪಯೋಗಿಸಲಾಗುತ್ತಿದೆ. ಆದರೆ, ಇದು ತೀರಾ ಕಿರಿಕಿರಿ ಎನಿಸುತ್ತಿರುವುದರಿಂದ ಮೆಟಾ ಕಂಪನಿಯ ವರ್ಕ್ ಪ್ಲೇಸ್ ಪ್ಲಾಟ್ ಫಾರ್ಮ್ ಅನ್ನೂ ಅಳವಡಿಸಲಾಗುತ್ತಿದೆ.
ಕೋವಿಡ್ ಸಂದರ್ಭದಲ್ಲಿ ಬಹುತೇಕ ಎಲ್ಲಾ ಉದ್ಯೋಗಿಗಳು ವರ್ಕ್ ಫ್ರಂ ಹೋಂನಲ್ಲಿದ್ದಾಗ ಆನ್ಲೈನ್ ಮೀಟುಂಗುಗಳ ಭರಾಟೆ ಬಹಳ ಜೋರಾಗಿತ್ತು. ಕೆಲಸದ ನಿರ್ವಹಣೆಗೆ ಮೀಟಿಂಗು ಅಗತ್ಯವೇ ಆದರೂ ದಿನದ ಬಹಳ ಹೊತ್ತು ಮೀಟಿಂಗ್ನಲ್ಲೇ ಕಳೆದುಹೋದರೆ ಉದ್ಯೋಗಿಗಳು ಕೆಲಸ ಮಾಡುವ ಅವಧಿ ಕಡಿಮೆ ಆಗುತ್ತದೆ. ಪರಿಣಾಮವಾಗಿ ಕಂಪನಿಗಳ ಉತ್ಪನ್ನಶೀಲತೆ ಕುಂಠಿತಗೊಳ್ಳುತ್ತದೆ. ಇದರ ಅರಿವಾಗಿಯೇ ಹಲವು ಕಂಪನಿಗಳು ಈಗೀಗ ಮೀಟಿಂಗುಗಳ ಸಂಖ್ಯೆ ಕಡಿಮೆ ಮಾಡುವತ್ತ ಗಮನ ಕೊಡುತ್ತಿವೆ. ಶಾಪಿಫೈ ಈಗ ಒಂದು ಹೆಜ್ಜೆ ಮುಂದಿಟ್ಟಿದೆ.